ಕುಸ್ತಿಯಲ್ಲಿ ದಿವ್ಯಾಗೆ ಕಂಚು; ೦.೦೧ ಸೆ. ಅಂತರದಲ್ಲಿ ಪದಕ ತಪ್ಪಿಸಿಕೊಂಡ ಖಾಡೆ!

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಕುಸ್ತಿ ವಿಭಾಗದಲ್ಲಿ ಮತ್ತೊಂದು ಪದಕ ಜಯಿಸಿದೆ. ದಿವ್ಯಾ ಕಾಕ್ರನ್ ೬೮ ಕೆಜಿ ವಿಭಾಗದಲ್ಲಿ ಕಂಚು ಗೆದ್ದರು. ಇತ್ತ, ಈಜಿನಲ್ಲಿ ಕೂದಲೆಳೆಯ ಅಂತರದಿಂದ ವರ್ಧವಾಳ್ ಖಾಡೆ ಕಂಚಿನ ಪದಕವನ್ನು ತಪ್ಪಿಸಿಕೊಂಡರು!

ಕುಸ್ತಿಯಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದೆ. ೨೦ರ ಹರೆಯದ ದಿವ್ಯಾ, ೬೮ ಕೆಜಿ ವಿಭಾಗದಲ್ಲಿ ಚೈನೀಸ್ ತೈಪೆಯ ಚೆನ್ ವೆನ್‌ಲಿಂಗ್ ವಿರುದ್ಧ ನಡೆದ ಮೂರನೇ ಸ್ಥಾನಕ್ಕಾಗಿನ ಪ್ಲೇ-ಆಫ್‌ನಲ್ಲಿ ಗೆಲುವು ಸಾಧಿಸಿದರು. ಅಂತಿಮ ಸುತ್ತಿನಲ್ಲಿ ತಾಂತ್ರಿಕ ನೈಪುಣ್ಯತೆಯ ಆಧಾರದಲ್ಲಿ ಚೈನೀಸ್ ತೈಪೆಯ ಮಹಿಳಾ ರೆಸ್ಲರ್ ವಿರುದ್ಧ ದಿವ್ಯಾ, ೧೦-೦ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಜಯಿಸಿದರು.

ಇದಕ್ಕೂ ಮುನ್ನ, ಕೂಟದಲ್ಲಿ ಬಜರಂಗ್ ಪುನಿಯಾ (೬೫ ಕೆಜಿ), ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರೆ, ಕೂಟದ ಎರಡನೇ ದಿನವಾದ ಸೋಮವಾರದಂದು (ಆ.೨೦) ವಿನೇಶ್ ಫೋಗಟ್ (೫೦ ಕೆಜಿ) ವನಿತೆಯರ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದರು. ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ಜಕಾರ್ತ ಕೂಟದಲ್ಲಿ ದಿವ್ಯಾ ತಂದಿತ್ತರು.

ಅಂದಹಾಗೆ, ಕಳೆದ ವರ್ಷ ಕಾಮನ್ವೆಲ್ತ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ದಿವ್ಯಾ ಸ್ವರ್ಣ ಸಾಧಕಿ ಎನಿಸಿದ್ದರು. ಆದರೆ, ಏಷ್ಯಾಡ್‌ನಲ್ಲಿ ಆಕೆ ಮೂರನೇ ಸ್ಥಾನಕ್ಕೆ ಕುಸಿದರು. ಕೂಟದ ಮೂರನೇ ದಿನದಂದು ಭಾರತ ಶೂಟಿಂಗ್‌ನಲ್ಲಿ ಮೂರು ಪದಕ ಜಯಿಸಿದರೆ, ಕುಸ್ತಿಯಲ್ಲಿ ಕಂಚು ಗೆಲ್ಲುವುದರೊಂದಿಗೆ ಒಟ್ಟಾರೆ ನಾಲ್ಕು ಪದಕ ಗೆದ್ದುಕೊಂಡಿತು.

ಇದನ್ನೂ ಓದಿ : ಸುಶೀಲ್ ನಿರಾಸೆ ಹೋಗಲಾಡಿಸಿ ಬಂಗಾರದ ಭವ್ಯ ಇತಿಹಾಸ ಬರೆದ ಬಜರಂಗ್

ಖಾಡೆಗೆ ನಿರಾಸೆ

ಈಜಿನಲ್ಲಿ ಭಾರತ ಪದಕದ ಬರವನ್ನು ನೀಗಿಸುವಲ್ಲಿ ಭಾರತೀಯ ಈಜುಗಾರರು ವಿಫಲವಾಗಿದ್ದಾರೆ. ಸ್ಟಾರ್ ಸ್ವಿಮ್ಮರ್ ವರ್ಧವಳ್ ಖಾಡೆ ಪುರುಷರ ೫೦ ಮೀಟರ್ ಫ್ರೀಸ್ಟೈಲ್‌ ವಿಭಾಗದಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತವಾದರು. ನಿಗದಿತ ದೂರವನ್ನು ಖಾಡೆ ೨೨.೪೭ ಸೆ.ಗಳಲ್ಲಿ ಪೂರೈಸಿ ಕೇವಲ ೦.೦೧ ಸೆ.ಗಳಲ್ಲಿ ಮೂರನೇ ಸ್ಥಾನದಿಂದ ಹೊರಬಿದ್ದರು.

ಖಾಡೆಗೆ ಪ್ರಬಲ ಪೈಪೋಟಿ ಒಡ್ಡಿದ ಜಪಾನ್ ಈಜುಗಾರ ಶುನುಚಿ ನಕಾವೊ, ೨೨.೪೬ ಸೆ.ಗಳಲ್ಲಿ ನಿಗದಿತ ದೂರ ಕ್ರಮಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು. ಇನ್ನುಳಿದಂತೆ ಈ ವಿಭಾಗದಲ್ಲಿ ಚೀನಾದ ಯು ಹೆಕ್ಸಿನ್ ೨೨.೧೧ ಸೆ.ಗಳಲ್ಲಿ ಚಿನ್ನದ ಪದಕ ಗೆದ್ದರೆ, ಜಪಾನ್‌ನ ಕಾಟ್ಸುಮಿ ನಕಮುರ ೨೨.೨೦ ಸೆ.ಗಳ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು.

ಅಂದಹಾಗೆ, ಫೈನಲ್‌ಗೂ ಮುಂಚಿನ ಮೊದಲ ಹೀಟ್‌ನಲ್ಲಿ ವರ್ಧವಳ್ ಖಾಡೆ ನಿಗದಿತ ದೂರವನ್ನು ೨೨.೪೩ ಸೆ.ಗಳಲ್ಲಿ ಕ್ರಮಿಸಿ ನೂತನ ರಾಷ್ಟ್ರೀಯ ದಾಖಲೆ ಬರೆದರು. ಆದರೆ, ಪದಕ ಸುತ್ತಿನಲ್ಲಿ ಅವರ ವೇಗದಲ್ಲಿ ಕೊಂಚ ಬಿರುಸು ಕಡಿಮೆಯಾಗಿ ಐತಿಹಾಸಿಕ ಸಾಧನೆಯಿಂದ ವಂಚಿತವಾಗುವಂತಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More