ವಿರಾಟ್ ಆಟಕ್ಕೆ ಬಸವಳಿದ ಆತಿಥೇಯ ಇಂಗ್ಲೆಂಡ್ ಎದುರು ಕಠಿಣ ಸವಾಲು

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ೩ ರನ್‌ಗಳಿಂದ ಶತಕ ವಂಚಿತವಾದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ವೃತ್ತಿಬದುಕಿನ ೨೩ನೇ ಟೆಸ್ಟ್ ಶತಕ ಪೂರೈಸಿದ ವಿರಾಟ್ ಕೊಹ್ಲಿ ಆಟಕ್ಕೆ ಇಂಗ್ಲೆಂಡ್ ಬಸವಳಿದಿದೆ. ಟ್ರೆಂಟ್‌ಬ್ರಿಡ್ಜ್ ಸವಾಲು ಗೆಲ್ಲಲು ೫೨೧ ರನ್ ಪೇರಿಸಬೇಕಿರುವ ಆತಿಥೇಯರಿಗೆ ದೊಡ್ಡ ಸವಾಲೇ ಎದುರಾಗಿದೆ

ತವರಿನಾಚೆಗಿನ ಅದರಲ್ಲೂ ವಿದೇಶಿ ಪ್ರವಾಸಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ತಿಣುಕುತ್ತಿದ್ದ ಭಾರತ ತಂಡದ ಆತ್ಮವಿಶ್ವಾಸವನ್ನು ವಿರಾಟ್ ಕೊಹ್ಲಿ (೧೦೩: ೧೯೭ ಎಸೆತ, ೧೦ ಬೌಂಡರಿ) ಗರಿಗೆದರಿಸಿದ್ದಾರೆ. ೨೦೧೪ರಲ್ಲಿ ಇದೇ ಇಂಗ್ಲೆಂಡ್ ಪ್ರವಾಸದಲ್ಲಿ ೨೦ರ ಸರಾಸರಿಯನ್ನೂ ಮುಟ್ಟದ ವಿರಾಟ್, ಈ ಬಾರಿಯ ಪ್ರವಾಸದಲ್ಲಿ ಎರಡು ಶತಕಗಳನ್ನು ಒಳಗೊಂಡ ೨೦೦ಕ್ಕೂ ಹೆಚ್ಚು ರನ್ ಪೇರಿಸಿ ಮುನ್ನುಗ್ಗುತ್ತಿರುವುದು ಅವರ ಬ್ಯಾಟಿಂಗ್ ಬಲವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ.

ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಮೂರನೇ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಹಿಡಿತ ಸಾಧಿಸಿದೆ ಎಂದರೆ, ಅದು ವಿರಾಟ್ ಕೊಹ್ಲಿಯ ಪ್ರಚಂಡ ಆಟದೊಂದಿಗೆ ಅವರ ದಕ್ಷ ನಾಯಕತ್ವ ಕೂಡ ಕಾರಣವಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ೯ ಓವರ್‌ಗಳಲ್ಲಿ ೨೩ ರನ್ ಗಳಿಸಿರುವ ಇಂಗ್ಲೆಂಡ್, ಪಂದ್ಯದಲ್ಲಿ ಗೆಲುವು ಸಾಧಿಸಲು ೪೯೮ ರನ್ ಪೇರಿಸಬೇಕಿದೆ. ಆದರೆ, ಸದ್ಯ, ಭಾರತದ ಕೈಯಿಂದ ಸೋಲು ತಪ್ಪಿಸಿಕೊಂಡರೆ ಸಾಕೆನ್ನುವಂತಾಗಿದೆ ಅದರ ಸದ್ಯದ ಸ್ಥಿತಿ.

ಕಳೆದೆರಡು ಪಂದ್ಯಗಳ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ಅಸ್ಥಿರ ಬ್ಯಾಟಿಂಗ್‌ನಿಂದ ಕಂಗೆಟ್ಟಿರುವ ಅಲೆಸ್ಟೈರ್ ಕುಕ್ ಮತ್ತು ಯುವ ಆಟಗಾರ ಕೀಟನ್ ಜೆನ್ನಿಂಗ್ಸ್ ಕ್ರಮವಾಗಿ ೧೩ ಮತ್ತು ೯ ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಸಹಜವಾಗಿಯೇ ನಾಲ್ಕನೇ ದಿನದಾಟ ಆತಿಥೇಯರಿಗೆ ನಿರ್ಣಾಯಕವೆನಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (೨೮ಕ್ಕೆ ೫) ಬಿರುದಾಳಿಗೆ ಸಿಲುಕಿ ೧೬೧ ರನ್‌ಗಳಿಗೆ ಹೋರಾಟ ಮುಗಿಸಿದ ಆಂಗ್ಲರು, ಭಾರತ ಒಡ್ಡಿರುವ ಈ ಭಾರೀ ಸವಾಲನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ತಲೆ ಮೇಲೆ ಕೈ ಹೊತ್ತ ರೂಟ್!

ಇದನ್ನೂ ಓದಿ : ಕ್ರಿಕೆಟ್ | ಟ್ರೆಂಟ್ ಬ್ರಿಡ್ಜ್‌ನಲ್ಲಿ ಹಾರ್ದಿಕ್ ಅಬ್ಬರ; ಭಾರತಕ್ಕೆ ಮುನ್ನಡೆ

124 ರನ್‌ಗಳಿಗೆ ೨ ವಿಕೆಟ್‌ಗಳೊಂದಿಗೆ ಮೂರನೇ ದಿನದಾಟ ಮುಂದುವರಿಸಿದ ಭಾರತ, ದಿನದ ಬಹುಪಾಲು ಬ್ಯಾಟಿಂಗ್ ನಡೆಸಿ, ಕೊನೆಯಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ೩೩ ಮತ್ತು ೮ ರನ್ ಗಳೊಂದಿಗೆ ಆಟ ಮುಂದುವರಿಸಿದ ಚೇತೇಶ್ವರ ಪೂಜಾರ ಮತ್ತು ಕೊಹ್ಲಿ, ಮೂರನೇ ವಿಕೆಟ್‌ಗೆ ೧೧೩ ರನ್‌ಗಳ ಅಮೋಘ ಜೊತೆಯಾಟದಿಂದ ಆಂಗ್ಲರನ್ನು ಕಾಡಿದರು. ಈ ಜೋಡಿಯ ಶತಕದಾಟದಿಂದಾಗಿ ಇಂಗ್ಲೆಂಡ್ ಕಪ್ತಾನ ಜೋ ರೂಟ್ ಚಡಪಡಿಸಿಹೋದರಲ್ಲದೆ, ತಲೆ ಮೇಲೆ ಕೈ ಹೊತ್ತುಕೊಳ್ಳಬೇಕಾಗಿಬಂದಿತು.

ಮಧ್ಯಾಹ್ನದ ಚಹಾ ವಿರಾಮದ ನಂತರದಲ್ಲಿ ಪೂಜಾರ (೭೨: ೨೦೮ ಎಸೆತ, ೯ ಬೌಂಡರಿ) ವಿಕೆಟ್ ಕಳೆದುಕೊಂಡರು. ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಪೂಜಾರ, ಕುಕ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಈ ವೇಳೆ ೯೩ ರನ್ ಗಳಿಸಿದ್ದ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ (೫೫ಕ್ಕೆ ೧) ಬೌಲಿಂಗ್‌ನಲ್ಲಿ ಔಟಾಗಿ ಮತ್ತೊಮ್ಮೆ ಶತಕವಂಚಿತವಾಗುವ ಸನ್ನಿವೇಶವನ್ನು ಜೆನ್ನಿಂಗ್ಸ್ ಗಲ್ಲಿಯಲ್ಲಿ ಕೈಚೆಲ್ಲಿದರು. ಆ ಬಳಿಕ ೧೯೧ ಎಸೆತಗಳಲ್ಲಿ ಮೂರಂಕಿ ಗೆರೆ ದಾಟಿದ ಕೊಹ್ಲಿ ಒಮ್ಮೆ ಸಿಕ್ಕ ಈ ಜೀವದಾನವನ್ನು ಸದ್ಬಳಕೆ ಮಾಡಿಕೊಳ್ಳಲು ವಿಫಲವಾದರು. ಶೀಘ್ರಗತಿಯಲ್ಲೇ ಕ್ರಿಸ್ ವೋಕ್ಸ್ (೪೯ಕ್ಕೆ ೧) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ಆನಂತರದಲ್ಲಿಯೂ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್‌ಗೆ ಮುಂದಾಗಲಿಲ್ಲ. ಅಜಿಂಕ್ಯ ರಹಾನೆ (೨೯) ಅದಿಲ್ ರಶೀದ್‌ಗೆ ಬೌಲ್ಡ್ ಆಗಿ ಹೊರನಡೆದ ನಂತರ ಹಾರ್ದಿಕ್ ಪಾಂಡ್ಯ (೫೨: ೫೨ ಎಸೆತ, ೭ ಬೌಂಡರಿ, ೧ ಸಿಕ್ಸರ್) ಮನಮೋಹಕ ಬ್ಯಾಟಿಂಗ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ಹಾರ್ದಿಕ್ ಅರ್ಧಶತಕದ ಗೆರೆ ದಾಟಿದ್ದು ಒಂದೆಡೆಯಾದರೆ, ಭಾರತದ ಏಳನೇ ವಿಕೆಟ್ ರೂಪದಲ್ಲಿ ಮೊಹಮದ್ ಶಮಿ (೩) ಅದಿಲ್ ರಶೀದ್ ಬೌಲಿಂಗ್‌ನಲ್ಲಿ ಕುಕ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಈ ಸಂದರ್ಭದಲ್ಲಿ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಸಂಕ್ಷಿಪ್ತ ಸ್ಕೋರ್

ಭಾರತ: ೩೨೯ ಮತ್ತು ೧೧೦ ಓವರ್‌ಗಳಲ್ಲಿ ೩೫೨/೭ (ಡಿಕ್ಲೇರ್) (ಚೇತೇಶ್ವರ ಪೂಜಾರ ೭೨, ವಿರಾಟ್ ಕೊಹ್ಲಿ ೧೦೩, ಹಾರ್ದಿಕ್ ಪಾಂಡ್ಯ ೫೨*; ಅದಿಲ್ ರಶೀದ್ ೧೦೧ಕ್ಕೆ ೩, ಬೆನ್ ಸ್ಟೋಕ್ಸ್ ೬೮ಕ್ಕೆ ೨) ಇಂಗ್ಲೆಂಡ್: ೧೬೧ ಮತ್ತು ೯ ಓವರ್‌ಗಳಲ್ಲಿ ೨೩/೦ (ಅಲೆಸ್ಟೈರ್ ಕುಕ್ ೯ ಬ್ಯಾಟಿಂಗ್, ಕೀಟನ್ ಜೆನ್ನಿಂಗ್ಸ್ ೧೩ ಬ್ಯಾಟಿಂಗ್)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More