ದೇವ್‌ದತ್ ಅರ್ಧಶತಕ ವ್ಯರ್ಥ; ಮೈಸೂರು ವಾರಿಯರ್ಸ್‌ಗೆ ಸುಲಭ ಗೆಲುವು

ದೇವ್‌ದತ್ ಪಡಿಕ್ಕಲ್ ೪೨ ಎಸೆತಗಳಲ್ಲಿ ೭ ಬೌಂಡರಿ, ೨ ಸಿಕ್ಸರ್ ಸೇರಿದ ೬೦ ರನ್ ಬಳ್ಳಾರಿ ಟಸ್ಕರ್ಸ್ ತಂಡದ ಕೈಹಿಡಿಯಲಿಲ್ಲ. ಅನುಭವಿ ಆಟಗಾರ ಅಮಿತ್ ವರ್ಮಾ (೫೯) ಅರ್ಧಶತಕದೊಂದಿಗೆ ಮೈಸೂರು ವಾರಿಯರ್ಸ್, ಟಸ್ಕರ್ಸ್ ವಿರುದ್ಧ ೭ ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು

ಮಧ್ಯಮ ಮತ್ತು ಕೆಳ ಕ್ರಮಾಂಕಿತ ಬ್ಯಾಟ್ಸ್‌ಮನ್‌ಗಳ ನಿಷ್ಕ್ರಿಯ ಆಟದಿಂದಾಗಿ ಬಳ್ಳಾರಿ ಟಸ್ಕರ್ಸ್ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌) ಏಳನೇ ಆವೃತ್ತಿಯಲ್ಲಿ ಮತ್ತೊಂದು ಸೋಲು ಕಂಡಿತು. ಗೆಲ್ಲಲು ಬೇಕಿದ್ದ ೧೪೬ ರನ್ ಗುರಿಯನ್ನು ಮೈಸೂರು ವಾರಿಯರ್ಸ್, ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಅಂದರೆ, ೧೮.೫ ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಮುಟ್ಟಿತು.

ಹುಬ್ಬಳ್ಳಿಯ ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ (ಆ.೨೦) ನಡೆದ ಟೂರ್ನಿಯ ಐದನೇ ಪಂದ್ಯದಲ್ಲಿ ಆರಂಭಿಕ ಅರ್ಜುನ್ ಹೊಯ್ಸಳ (೧) ಎಸ್ ಎಲ್ ಅಕ್ಷಯ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಗೌತಮ್‌ಗೆ ಕ್ಯಾಚಿತ್ತು ನಿರ್ಗಮಿಸಿದ ನಂತರ ಜತೆಯಾದ ರಾಜು ಭಟ್ಕಳ್ (೪೮: ೩೮ ಎಸೆತ, ೪ ಬೌಂಡರಿ, ೨ ಸಿಕ್ಸರ್) ಹಾಗೂ ಅಮಿತ್ ವರ್ಮಾ (೫೯: ೪೬ ಎಸೆತ, ೭ ಬೌಂಡರಿ, ೨ ಸಿಕ್ಸರ್) ಎರಡನೇ ವಿಕೆಟ್‌ಗೆ ೯೧ ರನ್‌ಗಳ ಅಮೋಘ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಅನುಭವಿ ಆಟಗಾರರಾದ ಈ ಇಬ್ಬರೂ, ಟಸ್ಕರ್ಸ್ ಕೈಯಿಂದ ಪಂದ್ಯವನ್ನು ಕಸಿದುಕೊಂಡರು. ಆದಾಗ್ಯೂ, ಹದಿನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಬ್ರಾರ್ ಕಾಜಿ, ರಾಜು ಭಟ್ಕಳ್ ಅವರನ್ನು ಎಲ್‌ಬಿ ಬಲೆಗೆ ಸಿಲುಕಿಸಿ ಈ ಜೋಡಿಯನ್ನು ಬೇರ್ಪಡಿಸಿದಾಗ ಟಸ್ಕರ್ ಪಾಳೆಯದಲ್ಲಿ ಗೆಲುವಿನ ಆಸೆ ಚಿಮ್ಮಿತು. ಕೇವಲ ಎರಡು ರನ್ ಅಂತರದಲ್ಲಿ ಅರ್ಧಶತಕದಿಂದ ವಂಚಿತವಾದ ರಾಜು ಭಟ್ಕಳ್ ಬಳಿಕ ಅಮಿತ್ ವರ್ಮಾ ಹೋರಾಟ ಮುಂದುವರೆಸಿದರು.

ಎಚ್ಚರಿಕೆಯ ಆಟದೊಂದಿಗೆ ಅರ್ಧಶತಕ ದಾಖಲಿಸಿದ ಅಮಿತ್ ವರ್ಮಾ, ವಾರಿಯರ್ಸ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಮತ್ತೆ ೧೬ನೇ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಕಾಜಿ, ಅಮಿತ್ ವರ್ಮಾ ಅವರನ್ನು ಹೊರಗಟ್ಟಿದಾಗಲೂ ಟಸ್ಕರ್ಸ್ ಜಯದ ಕನಸು ಕಾಣತೊಡಗಿತು. ಆದರೆ, ಆನಂತರದಲ್ಲಿ ಶೋಯೆಬ್ ಮ್ಯಾನೇಜರ್ (೧೨) ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ (೭) ಅಜೇಯ ಆಟದೊಂದಿಗೆ ತಂಡಕ್ಕೆ ಗೆಲುವು ತಂದಿತ್ತರು.

ಇದನ್ನೂ ಓದಿ : ಅರ್ಷ ದೀಪ್ ಸಿಂಗ್ ಬ್ಯಾಟಿಂಗ್ ದರ್ಬಾರಿನಲ್ಲಿ ಟಸ್ಕರ್ಸ್ ಮಣಿಸಿದ ಬ್ಲಾಸ್ಟರ್ಸ್

ನಿರ್ಣಾಯಕ ಘಟ್ಟದಲ್ಲಿ ಎಡವಿದ ಟಸ್ಕರ್ಸ್

ಟಾಸ್ ಗೆದ್ದು ಫೀಲ್ಡಿಂಗ್‌ಗಿಳಿದ ಮೈಸೂರು ವಾರಿಯರ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೪೫ ರನ್‌ ಗಳಿಸಿ, ವಾರಿಯರ್ಸ್‌ಗೆ ಸಾಮಾನ್ಯ ಗುರಿ ನೀಡಿತು. ಸ್ವಪ್ನಿಲ್ ಯೆಲಾವೆ (೬) ನಾಯಕ ಸುಚಿತ್ ಬೌಲಿಂಗ್‌ನಲ್ಲಿ ಶೋಯೆಬ್ ಮ್ಯಾನೇಜರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ, ಬಳಿಕ ಬಂದ ದೇವದತ್ ಪಡಿಕ್ಕಲ್ ಅವರನ್ನು ಕೂಡಿಕೊಂಡ ಆರಂಭಿಕ ರೋಹನ್ ಕದಮ್ ಅಮೋಘ ಬ್ಯಾಟಿಂಗ್ ನಡೆಸಿದರು.

ಈ ಜೋಡಿ ಎರಡನೇ ವಿಕೆಟ್‌ಗೆ ೯೨ ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ಆದರೆ, ೧೫ನೇ ಓವರ್‌ನ ಎರಡನೇ ಎಸೆತದಲ್ಲಿ ಕದಮ್, ಸುಚಿತ್‌ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ೪೩ ಎಸೆತಗಳನ್ನು ಎದುರಿಸಿದ ಕದಮ್, ೬ ಬೌಂಡರಿ, ೩ ಸಿಕ್ಸರ್ ಸೇರಿದ ೫೯ ರನ್ ಕೊಡುಗೆ ನೀಡಿದರು. ಈ ಜೋಡಿ ಬೇರ್ಪಟ್ಟಿದ್ದೇ ಟಸ್ಕರ್ಸ್‌ನ ರನ್‌ಗತಿ ಕ್ಷೀಣಿಸಲು ಕಾರಣವಾಯಿತು. ಇತ್ತ, ೧೮ನೇ ಓವರ್‌ನ ಮೊದಲ ಎಸೆತದಲ್ಲಿ ದೇವ್‌ದತ್ ಕೂಡಾ ವಿಕೆಟ್ ಕೈಚೆಲ್ಲಿದ ನಂತರ ಬಾರಿಯರ್ಸ್ ಪುಟಿದೆದ್ದಿತು. ಪಡಿಕ್ಕಲ್ ಸೇರಿದಂತೆ ಮಧ್ಯಮ ಮತ್ತು ಕೆಳ ಕ್ರಮಾಂಕವನ್ನು ವೇಗಿ ವೈಶಾಕ್ ವಿಜಯ್ ಕುಮಾರ್ (೨೦ಕ್ಕೆ ೪) ಅಸ್ಥಿರಗೊಳಿಸಿದರು.

ಸಂಕ್ಷಿಪ್ತ ಸ್ಕೋರ್

ಬಳ್ಳಾರಿ ಟಸ್ಕರ್ಸ್: ೨೦ ಓವರ್‌ಗಳಲ್ಲಿ ೧೪೫/೮ (ರೋಹನ್ ಕದಮ್ ೫೯, ದೇವದತ್ ಪಡಿಕ್ಕಲ್ ೬೦; ವಿಜಯ್ ಕುಮಾರ್ ೨೦ಕ್ಕೆ ೪) ಮೈಸೂರು ವಾರಿಯರ್ಸ್: ೧೮.೫ ಓವರ್‌ಗಳಲ್ಲಿ ೧೪೭/೩ (ರಾಜು ಭಟ್ಕಳ್ ೪೮, ಅಮಿತ್ ವರ್ಮಾ ೫೯; ಅಬ್ರಾರ್ ಕಾಜಿ ೨೦ಕ್ಕೆ ೨) ಫಲಿತಾಂಶ: ವಾರಿಯರ್ಸ್‌ಗೆ ೭ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಅಮಿತ್ ವರ್ಮಾ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More