ರಾಹಿ ಸರ್ನೋಬತ್‌ಗೆ ಚಿನ್ನದ ಸಿರಿ; ನಿರಾಸೆ ಅನುಭವಿಸಿದ ಮನುಭಾಕರ್

ಅತೀವ ರೋಚಕತೆಯಿಂದ ಕೂಡಿದ್ದ ಪದಕ ಸುತ್ತಿನಲ್ಲಿ ಒತ್ತಡದಾಯಕ ಸನ್ನಿವೇಶವನ್ನು ಮೆಟ್ಟಿನಿಂತ ಅನುಭವಿ ರಾಹಿ ಸರ್ನೋಬತ್ ಚಿನ್ನಕ್ಕೆ ಗುರಿ ಇಟ್ಟು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಶೂಟರ್ ಎನಿಸಿದರು. ಆದರೆ, ಯುವ ಶೂಟರ್ ಮನುಭಾಕರ್ ನಿರಾಸೆ ಅನುಭವಿಸಿದರು

ರಾಹಿ ಸರ್ನೋಬತ್‌ ಐತಿಹಾಸಿಕ ಸಾಧನೆಯೊಂದಿಗೆ ಚಿನ್ನದ ನಗೆಬೀರಿದ್ದಾರೆ. ಬುಧವಾರ (ಆ.೨೨) ನಡೆದ ವನಿತೆಯರ ೨೫ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಥಾಯ್ಲೆಂಡ್ ಗುರಿಕಾರ್ತಿ ಎನ್ ಯಾಂಗ್ಪಯಿಬೂನ್ ಒಡ್ಡಿದ ಪ್ರಬಲ ಪ್ರತಿರೋಧವನ್ನು ಶಾಂತ ಮನಸ್ಥಿತಿಯಿಂದಲೇ ಹತ್ತಿಕ್ಕಿದ ರಾಹಿ, ಚಿನ್ನದ ಪದಕ ಜಯಿಸಿ ಸಂಭ್ರಮಿಸಿದರು. ಅಂದಹಾಗೆ, ಏಷ್ಯಾ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊಟ್ಟಮೊದಲ ಮಹಿಳಾ ಶೂಟರ್ ಎಂಬ ದಾಖಲೆಯನ್ನೂ ರಾಹಿ ಬರೆದರು.

ಅತ್ಯಂತ ನಿಖರ ಗುರಿ ಕಾಯ್ದುಕೊಂಡ ಸರ್ನೋಬತ್‌, ಏಷ್ಯಾ ಕ್ರೀಡಾಕೂಟದಲ್ಲೇ ದಾಖಲೆಯ ೩೪ ಸ್ಕೋರ್‌ಗಳಿಂದ ಮಿಂಚು ಹರಿಸಿದರು. ಥಾಯ್ ಶೂಟರ್, ಸರ್ನೋಬತ್‌ಗೆ ಪ್ರಬಲ ಪೈಪೋಟಿ ಒಡ್ಡಿದರಾದರೂ, ಎರಡು ಸುತ್ತಿನ ಶೂಟ್‌ ನಂತರದಲ್ಲಿ ರಾಹಿ ವಿಜಯಶಾಲಿಯಾದರು.

ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಶೂಟರ್ ಹದಿನಾರರ ಹರೆಯದ ಮನು ಭಾಕರ್ ಫೈನಲ್‌ನಲ್ಲಿ ಆರನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು. ಅರ್ಹತಾ ಸುತ್ತಿನಲ್ಲಿ ಏಷ್ಯಾಡ್ ದಾಖಲೆಯ ೫೯೩ ಸ್ಕೋರ್ ಮಾಡಿದ ಮನು ಭಾಕರ್, ಫೈನಲ್‌ನಲ್ಲಿ ಮಾತ್ರ ಪದಕ ಗೆಲ್ಲುವಲ್ಲಿ ಎಡವಿದರು. ಅರ್ಹತಾ ಸುತ್ತಿನಲ್ಲಿ ಆಕೆ ನೀಡಿದ ಪ್ರದರ್ಶನದಿಂದಾಗಿ ಫೈನಲ್‌ನಲ್ಲಿಯೂ ದಾಖಲೆಯೊಂದಿಗೆ ಪದಕ ಗೆಲ್ಲುತ್ತಾರೆ ಎಂಬ ಊಹೆ ತಲೆಕೆಳಗಾಯಿತು.

ಇದನ್ನೂ ಓದಿ : ವಿಶ್ವ ಕಿರಿಯರ ಶೂಟಿಂಗ್: ಮುಂದುವರಿದ ಮನು ಭಾಕರ್ ಚಿನ್ನದ ಬೇಟೆ

ರಾಹಿಯ ಈ ಚಿನ್ನದ ಸಾಧನೆಯಿಂದಾಗಿ ಈ ಬಾರಿಯ ಏಷ್ಯಾಡ್‌ನಲ್ಲಿ ಭಾರತ, ಶೂಟಿಂಗ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದಂತಾಗಿದೆ. ಕೂಟದ ಮೊದಲ ದಿನದಂದು ಅಪೂರ್ವಿ ಚಾಂಡೀಲಾ ಮತ್ತು ರವಿಕುಮಾರ್ ೧೦ ಮೀಟರ್ ಏರ್ ರೈಫಲ್‌ನಲ್ಲಿ ಕಂಚು ಗೆಲ್ಲುವುದರೊಂದಿಗೆ ಭಾರತದ ಪದಕ ಬೇಟೆಗೆ ಮುನ್ನುಡಿ ಬರೆದಿದ್ದರು. ಆ ಬಳಿಕ ಶೂಟಿಂಗ್‌ನಲ್ಲಿ ದೀಪಕ್ ಕುಮಾರ್ ೧೦ ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಪುರುಷರ ಟ್ರ್ಯಾಪ್ ಈವೆಂಟ್‌ನಲ್ಲಿ ಲಕ್ಷಯ್ ಬೆಳ್ಳಿ ಜಯಿಸಿದ್ದರು. ಇನ್ನು, ಕೂಟದ ಮೂರನೇ ದಿನದಂದು ಸೌರಭ್ ಚೌಧರಿ ೨೪೦.೭ ಕೂಟ ದಾಖಲೆಯೊಂದಿಗೆ ಪುರುಷರ ೧೦ ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟರೆ, ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ೨೧೯.೩ ಸ್ಕೋರ್‌ನೊಂದಿಗೆ ಕಂಚು ಗೆದ್ದಿದ್ದರು.

೨೭ರ ಹರೆಯದ ರಾಹಿ, ಈ ಹಿಂದಿನ ೨೦೧೪ರ ಇಂಚಾನ್ ಏಷ್ಯಾಡ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು. ಇನ್ನು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ರಾಹಿ ಪದಕ ಗೆದ್ದಿದ್ದರು. ೨೦೧೦, ೨೦೧೪ರಲ್ಲಿ ಸ್ವರ್ಣ ಪದಕ ಜಯಿಸಿದ್ದ ರಾಹಿ, ೨೦೧೦ರ ಕೂಟದ ಇನ್ನೊಂದು ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವಾಸ್ತವವಾಗಿ, ಬುಧವಾರದಂದು ನಡೆದ ಅರ್ಹತಾ ಸುತ್ತಿನಲ್ಲಿ ರಾಹಿ, ೫೮೦ ಸ್ಕೋರ್‌ನೊಂದಿಗೆ ಏಳನೇ ಸ್ಥಾನ ಗಳಿಸಿದ್ದರು.

ಏತನ್ಮಧ್ಯೆ, ೧೦ ಮೀಟರ್ ಏರ್ ಪಿಸ್ತೂಲ್ ಮಿಶ್ರ ಟೀಂ ಈವೆಂಟ್‌ನಲ್ಲಿ ಮನು ಭಾಕರ್ ಮತ್ತು ಅಭಿಷೇಕ್ ವರ್ಮಾ ಏನೂ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಆದರೆ, ಯುವ ಶೂಟರ್ ಅಭಿಷೇಕ್, ಕೇವಲ ಒಂದು ಪಾಯಿಂಟ್ಸ್ ಅಂತರದಿಂದ ವಿಶ್ವ ದಾಖಲೆಯಿಂದ ವಂಚಿತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More