ಟೆನಿಸ್‌ನಲ್ಲಿ ಪದಕ ಖಚಿತಪಡಿಸಿದ ಯುವ ಆಟಗಾರ್ತಿ ಅಂಕಿತಾ ರೈನಾ

ಯುವ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಚೊಚ್ಚಲ ಏಷ್ಯಾಡ್ ಪದಕವನ್ನು ಖಚಿತಪಡಿಸಿದ್ದಾರೆ. ಇದೇ ವೇಳೆ ಪುರುಷರ ಈಜು ತಂಡ ಫೈನಲ್‌ಗೆ ಅರ್ಹತೆ ಗಳಿಸುವ ಮೂಲಕ ಪದಕ ಗೆಲ್ಲುವ ತನ್ನ ಆಸೆಯನ್ನು ಜೀವಂತವಾಗಿಟ್ಟಿದೆ

ಮುಂದಿನ ತಿಂಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಅನುಪಸ್ಥಿತಿಯಲ್ಲಿ ಭಾರತದ ಪದಕ ಬೇಟೆಗೆ ಬಾಧಕವಾಗದಂತೆ ನೋಡಿಕೊಂಡಿದ್ದಾರೆ ಅಂಕಿತಾ ರೈನಾ. ಬುಧವಾರ (ಆ.೨೨) ವನಿತೆಯರ ಸಿಂಗಲ್ಸ್‌ನಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವುದರೊಂದಿಗೆ ಅಂಕಿತಾ ರೈನಾ ಕನಿಷ್ಠ ಕಂಚಿನ ಪದಕವನ್ನಾದರೂ ಖಚಿತಪಡಿಸಿದರು.

ಒಂದು ಹಂತದಲ್ಲಿ ೧-೪ರ ಹಿನ್ನಡೆಯಲ್ಲಿದ್ದ ಹೊರತಾಗಿಯೂ, ಪುಟಿದೆದ್ದ ಅಂಕಿತಾ, ಹಾಂಕಾಂಗ್ ಆಟಗಾರ್ತಿ ಯುಡಿಸಿ ಚಾಂಗ್ ವಿರುದ್ಧ ಅಂತಿಮವಾಗಿ ೬-೪, ೬-೧ ಎರಡು ನೇರ ಸೆಟ್‌ಗಳ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಗಳಿಸಿದರು. ಭಾರತ ವನಿತಾ ಸಿಂಗಲ್ಸ್‌ನಲ್ಲಿ ಸದ್ಯ ಅಗ್ರ ಕ್ರಮಾಂಕಿತ ಆಟಗಾರ್ತಿ ಎನಿಸಿರುವ ಅಂಕಿತಾ ರೈನಾ, ಆಕರ್ಷಕ ಪ್ರದರ್ಶನ ನೀಡುತ್ತಾ ಸಾಗಿದ್ದು, ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ತೀವ್ರತರ ಪ್ರತಿರೋಧ ಎದುರಿಸಿದ ಅಂಕಿತಾ, ಸರಿಸುಮಾರು ೫೪ ನಿಮಿಷಗಳ ಕಾಲ ಸೆಣಸಾಡಿ ಸೆಟ್ ಅನ್ನು ವಶಕ್ಕೆ ಪಡೆದರು. ಆದರೆ, ಎರಡನೇ ಸೆಟ್‌ನಲ್ಲಿ ಅಂಕಿತಾ ಅಷ್ಟೇನೂ ಪ್ರಯಾಸ ಪಡದೆ ಸುಲಭ ಗೆಲುವು ದಾಖಲಿಸಿದರು. ಕೇವಲ ಒಂದೇ ಒಂದು ಗೇಮ್ ಮಾತ್ರ ಹಾಂಕಾಂಗ್ ಆಟಗಾರ್ತಿಗೆ ಬಿಟ್ಟುಕೊಟ್ಟ ಅಂಕಿತಾ, ಕೇವಲ ೨೭ ನಿಮಿಷಗಳಲ್ಲೇ ಸೆಟ್ ಗೆದ್ದು ಬೀಗಿದರು.

ಇದನ್ನೂ ಓದಿ : ಕುಸ್ತಿಯಲ್ಲಿ ದಿವ್ಯಾಗೆ ಕಂಚು; ೦.೦೧ ಸೆ. ಅಂತರದಲ್ಲಿ ಪದಕ ತಪ್ಪಿಸಿಕೊಂಡ ಖಾಡೆ!

ಫೈನಲ್‌ಗೆ ಅರ್ಹತೆ ಗಳಿಸಿದ ಈಜು ತಂಡ

ಏಷ್ಯಾಡ್‌ ಈಜಿನಲ್ಲಿ ಪದಕ ಗೆಲ್ಲುವ ಭಾರತದ ಆಸೆಯನ್ನು ಪುರುಷರ ತಂಡ ಜೀವಂತವಾಗಿಟ್ಟಿದೆ. 4/100 ರಿಲೇ ವಿಭಾಗದ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ಭಾರತದ ಪುರುಷರ ಈಜು ತಂಡ ಯಶಸ್ವಿಯಾಯಿತು. ಪದಕ ಸುತ್ತಿನ ಸ್ಪರ್ಧೆ ಸಂಜೆ ಭಾರತೀಯ ಕಾಲಮಾನ ೫.೦೦ ಗಂಟೆಗೆ ಶುರುವಾಗುವ ಸಾಧ್ಯತೆ ಇತ್ತು. ಹೀಟ್ ಸ್ಪರ್ಧೆಯಲ್ಲಿ ಏರಾನ್ ಡಿಸೋಜಾ, ಅನ್ಶುಲ್, ವರ್ಧವಾಳ್ ಖಾಡೆ ಮತ್ತು ಸಾಜನ್ ಪ್ರಕಾಶ್ ಅವರಿದ್ದ ಭಾರತ ತಂಡ ೩ ನಿಮಿಷ ೨೫.೧೭ ಸೆ.ಗಳಲ್ಲಿ ಗುರಿ ತಲುಪಿ ಎಂಟನೇ ತಂಡವಾಗಿ ಫೈನಲ್‌ಗೆ ಅರ್ಹತೆ ಪಡೆಯಿತು.

ಇದಕ್ಕೂ ಮುನ್ನ ನಡೆದ ಪುರುಷರ ೧೦೦ ಮೀಟರ್ ಬಟರ್‌ಫ್ಲೈ ಫೈನಲ್ಸ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಈಜುಗಾರರು ವಿಫಲವಾದರು. ಸಾಜನ್ ಪ್ರಕಾಶ್ (೫೪.೦೬ ಸೆ.), ಅವಿನಾಶ್ ಮಣಿ (೫೬.೯೮ ಸೆ.) ಹಾಗೂ ಸಂದೀಪ್ ಸೆಜ್ವಾಲ್ ೬೨.೦೭ ಸೆ.ಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More