86 ವರ್ಷಗಳ ದಾಖಲೆ ಅಳಿಸಿದ ಭಾರತ ಹಾಕಿ ತಂಡಕ್ಕೆ ಮತ್ತೊಂದು ಬೃಹತ್ ಗೆಲುವು

ಅಮೆರಿಕ ವಿರುದ್ಧ ೧೯೩೨ರಲ್ಲಿ, ೨೪-೧ ಗೋಲುಗಳಿಂದ ಗೆದ್ದು ಬೀಗಿದ್ದ ಭಾರತ ತಂಡ, ಪ್ರಸಕ್ತ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ೧೮ನೇ ಏಷ್ಯಾಡ್‌ನಲ್ಲಿ ಹಾಂಕಾಂಗ್ ವಿರುದ್ಧ ೨೬-೧ ಗೋಲುಗಳ ಬೃಹತ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾವನ್ನು ೧೭-೦ ಅಂತರದಿಂದ ಭಾರತ ಮಣಿಸಿತ್ತು

ಅನನುಭವಿ ಹಾಗೂ ದುರ್ಬಲ ತಂಡವಾದ ಹಾಂಕಾಂಗ್ ಚೀನಾ ವಿರುದ್ಧ ಆಕ್ರಮಣಕಾರಿ ಆಟವಾಡಿದ ಭಾರತ ಹಾಕಿ ತಂಡ, ಇತಿಹಾಸದಲ್ಲೇ ಬಹುದೊಡ್ಡ ಗೆಲುವಿನ ದಾಖಲೆ ಬರೆಯಿತು. ಬುಧವಾರ (ಆ.೨೨) ನಡೆದ ಬಿ ಗುಂಪಿನ ಪಂದ್ಯದಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿದ ಭಾರತ ತಂಡ, ೨೬-೦ ಗೋಲುಗಳಿಂದ ವಿಜೃಂಭಿಸಿತು.

೧೯೩೨ರ ಒಲಿಂಪಿಕ್ಸ್ ಕೂಟದಲ್ಲಿ ಅಮೆರಿಕವನ್ನು ೨೪-೧ ಗೋಲುಗಳಿಂದ ಹಣಿದಿದ್ದ ಭಾರತ ತಂಡ, ತನ್ನ ಹಾಕಿ ಇತಿಹಾಸದಲ್ಲೇ ಅತಿದೊಡ್ಡ ಗೆಲುವು ದಾಖಲಿಸಿತ್ತು. ಆಗ ಅಮೆರಿಕಗೆ ಒಂದು ಗೋಲನ್ನು ಬಿಟ್ಟುಕೊಟ್ಟಿದ್ದ ಭಾರತ ತಂಡ, ಈ ಬಾರಿ ಹಾಂಕಾಂಗ್ ಚೀನಾ ವಿರುದ್ಧ ಒಂದು ಗೋಲನ್ನೂ ಬಿಟ್ಟುಕೊಡದೆ ಗೆಲುವು ಸಾಧಿಸಿದ್ದು ಗಮನಾರ್ಹ.

ಅಂದಹಾಗೆ, ಅಂತಾರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಅತಿಹೆಚ್ಚು ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಖ್ಯಾತಿ ನ್ಯೂಜಿಲೆಂಡ್ ತಂಡದ್ದು. ೧೯೯೪ರಲ್ಲಿ ನಡೆದಿದ್ದ ಪಂದ್ಯದಲ್ಲಿ ಸಮೋವಾ ತಂಡವನ್ನು ಕಿವೀಸ್ ಪಡೆ ೩೬-೧ ಗೋಲುಗಳಿಂದ ಹಣಿದಿತ್ತು. ವಿಶ್ವದ ಐದನೇ ಶ್ರೇಯಾಂಕಿತ ತಂಡ ಭಾರತ, ೪೫ನೇ ಶ್ರೇಯಾಂಕಿತ ಹಾಂಕಾಂಗ್ ಚೀನಾ ವಿರುದ್ಧ ಗೆಲ್ಲುವ ಫೇವರಿಟ್ ಎನಿಸಿತ್ತು. ಅದಕ್ಕೆ ತಕ್ಕಂತೆ ಪಿ ಆರ್ ಶ್ರೀಜೇಶ್ ಪಡೆ ಬಹುದೊಡ್ಡ ಗೆಲುವಿನೊಂದಿಗೆ ನಗೆಬೀರಿದೆ.

ಇದನ್ನೂ ಓದಿ : ಹಾಕಿ | ಐತಿಹಾಸಿಕ ಅವಕಾಶ ಕೈಚೆಲ್ಲಿ ರಜತ ಪದಕಕ್ಕೆ ತೃಪ್ತವಾದ ಭಾರತ

ಆಟ ಶುರುವಾದ ಮರುಕ್ಷಣದಿಂದಲೇ ನಿರ್ದಯಿ ಆಟಕ್ಕೆ ಮುಂದಾದ ಭಾರತ ತಂಡ ಮೊದಲ ಐದು ನಿಮಿಷಗಳಲ್ಲೇ ನಾಲ್ಕು ಗೋಲುಗಳನ್ನು ದಾಖಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಆರು ಗೋಲುಗಳನ್ನು ದಾಖಲಿಸಿದ ಭಾರತ, ಎರಡನೇ ಕ್ವಾರ್ಟರ್‌ ಮುಗಿಯುವ ಹೊತ್ತಿಗೆ ಅಂತರವನ್ನು ೧೪-೦ಗೆ ವಿಸ್ತರಿಸಿತು.

ಅಂದಹಾಗೆ, ಮೂರನೇ ಕ್ವಾರ್ಟರ್‌ನಲ್ಲಿ ಹಾಂಕಾಂಗ್ ಚೀನಾ ಗೋಲಿ ಮೈಕೆಲ್ ಚುಂಗ್ ಭಾರತದ ಕೆಲವಾರು ಗೋಲುಗಳನ್ನು ತಡೆಯದೆ ಹೋಗಿದ್ದರೆ, ಭಾರತದ ಗೆಲುವಿನ ಅಂತರ ಇನ್ನಷ್ಟು ದೊಡ್ಡದಾಗುತ್ತಿತ್ತು. ಅಂದಹಾಗೆ, ಭಾರತದ ಪರ ಪಿ ಆರ್ ಶ್ರೀಜೇಶ್ ಮೊದಲಾರ್ಧದಲ್ಲಿ ಗೋಲುಪೆಟ್ಟಿಗೆ ಕಾದರೆ, ದ್ವಿತೀಯಾರ್ಧದಲ್ಲಿ ಕ್ರಿಷನ್ ಬಹದ್ದೂರ್ ಪಾಠಕ್ ಕೀಪಿಂಗ್ ಕಾಯಕಕ್ಕಿಳಿದರು.

ವಿಜೇತ ತಂಡ ಭಾರತದ ಪರ ರೂಪೀಂದರ್ ಪಾಲ್ ಸಿಂಗ್ (೩, ೫, ೩೦, ೪೫, ೫೯ನೇ ನಿ.) ಐದು ಗೋಲು ಹೊಡೆದರೆ, ಹರ್ಮನ್‌ಪ್ರೀತ್ ಸಿಂಗ್ (೨೯, ೫೨, ೫೩, ೫೪ನೇ ನಿ.) ನಾಲ್ಕು ಗೋಲುಗಳನ್ನು ದಾಖಲಿಸಿದರು. ಇತ್ತ, ಆಕಾಶ್‌ದೀಪ್ ಸಿಂಗ್ (೨, ೩೨, ೩೫ನೇ ನಿ.) ಮೂರು ಗೋಲು ಹೊಡೆದರೆ, ಮನ್‌ಪ್ರೀತ್ ಸಿಂಗ್ (೩, ೧೭ನೇ ನಿ.) ಎರಡು ಗೋಲು ಬಾರಿಸಿದರು. ಲಲಿತ್ ಉಪಾಧ್ಯಾಯ್ (೧೭, ೧೯ನೇ ನಿ.) ವರುಣ್ ಕುಮಾರ್ (೨೩, ೩೦ನೇ ನಿ.) ತಲಾ ಎರಡು ಗೋಲು ಹೊಡೆದರೆ, ಎಸ್ ವಿ ಸುನೀಲ್ (೭ನೇ ನಿ.), ವಿವೇಕ್ ಸಾಗರ್ (೧೪ನೇ ನಿ.), ಮನ್‌ದೀಪ್ ಸಿಂಗ್ (೨೧ನೇ ನಿ.), ಅಮಿತ್ ರೋಹಿದಾಸ್ (೨೭ನೇ ನಿ.), ದಿಲ್ಪ್ರೀತ್ ಸಿಂಗ್ (೪೮ನೇ ನಿ.), ಚಿಂಗ್ಲೆನ್‌ಸಾನ ಸಿಂಗ್ (೫೧ನೇ ನಿ.), ಸಿಮ್ರನ್‌ಜಿತ್ ಸಿಂಗ್ (೫೩ನೇ ನಿ.) ಹಾಗೂ ಸುರೇಂದರ್ ಕುಮಾರ್ ೫೫ನೇ ನಿ.ದಲ್ಲಿ ಒಂದೊಂದು ಗೋಲು ಹೊಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More