ಬುಮ್ರಾ ದಾಳಿಗೆ ಇಂಗ್ಲೆಂಡ್ ಮಂಕು; ಟೆಸ್ಟ್‌ ಗೆಲುವಿಗೆ ಇನ್ನೊಂದೇ ಹೆಜ್ಜೆ

ಮೊದಲ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿ ತತ್ತರಿಸಿದ್ದ ಭಾರತ ತಂಡ, ಟ್ರೆಂಟ್‌ಬ್ರಿಡ್ಜ್ ಟೆಸ್ಟ್‌ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ (೨೮ಕ್ಕೆ ೫) ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ (೮೫ಕ್ಕೆ ೫) ನಡೆಸಿದ ಜಂಟಿ ದಾಳಿಗೆ ಇಂಗ್ಲೆಂಡ್ ಕನಲಿಹೋಗಿದೆ

ಎಂಬತ್ತು ಓವರ್‌ಗಳಾಗುತ್ತಿದ್ದಂತೆ ಹೊಸ ಚೆಂಡನ್ನು ಪಡೆದ ಭಾರತ, ಅದುವರೆಗೆ ಹಿಡಿತ ಕಳೆದುಕೊಂಡಿದ್ದ ಪಂದ್ಯದಲ್ಲಿ ಪುಟಿದೆದ್ದು ನಿಂತಿತು. ಜಸ್ಪ್ರೀತ್ ಬುಮ್ರಾ (೮೫ಕ್ಕೆ ೫), ಇಂಗ್ಲೆಂಡ್‌ಗೆ ಆಸರೆಯಾಗಿ ನಿಂತಿದ್ದ ಜೋಸ್ ಬಟ್ಲರ್ (೧೦೬: ೧೭೬ ಎಸೆತ, ೨೧ ಬೌಂಡರಿ) ಸೇರಿದಂತೆ ಜಾನಿ ಬೇರ್‌ಸ್ಟೋ (೦) ವಿಕೆಟ್ ಪಡೆದದ್ದಲ್ಲದೆ, ನಂತರದ ಓವರ್‌ನಲ್ಲಿ ಕ್ರಿಸ್ ವೋಕ್ಸ್‌ಗೂ (೪) ಪೆವಿಲಿಯನ್ ದಾರಿ ತೋರಿದರು. ಬಳಿಕ ಅದಿಲ್ ರಶೀದ್ ಅವರನ್ನು ಔಟ್ ಮಾಡಿದರಾದರೂ, ನೋಬಾಲ್‌ನಿಂದಾಗಿ ಅವರಿಗೆ ಜೀವದಾನ ನೀಡಿದರು.

ಇದರ ಲಾಭ ಪಡೆದ ರಶೀದ್, ಸ್ಟುವರ್ಟ್ ಬ್ರಾಡ್ ಜತೆಗೆ ಅರ್ಧಶತಕದ ಜತೆಯಾಟ ಆಡಿದ್ದಲ್ಲದೆ, ದಿನಾಂತ್ಯಕ್ಕೆ ಜೇಮ್ಸ್ ಆ್ಯಂಡರ್ಸನ್ ಜತೆಗೂಡಿ ಔಟಾಗದೆ ಉಳಿದರು. ಆನಂತರದಲ್ಲಿ ಬ್ರಾಡ್ (೨೦: ೨೯ ಎಸೆತ, ೩ ಬೌಂಡರಿ) ವಿಕೆಟ್ ಪಡೆಯುವುದರೊಂದಿಗೆ ಬುಮ್ರಾ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಸಾಧನೆ ಮೆರೆದರು. ನಾಲ್ಕನೇ ದಿನದಾಟ ನಿಂತಾಗ ಜಿಮ್ಮಿ (೮) ಮತ್ತು ಅದಿಲ್ ರಶೀದ್ ೩೦ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಆಟದ ಕೊನೆಯ ದಿನವಾದ ಬುಧವಾರದಂದು (ಆ.೨೨) ಭಾರತದ ಗೆಲುವಿಗೆ ೧ ವಿಕೆಟ್ ಅಗತ್ಯವಿದ್ದರೆ, ಇಂಗ್ಲೆಂಡ್ ಗೆಲುವಿಗೆ ಬೇಕಿರುವುದು ೨೧೦ ರನ್‌ಗಳು!

ಬಹುತೇಕ ನಾಲ್ಕನೇ ದಿನದಂದೇ ಪಂದ್ಯಕ್ಕೆ ತೆರೆಬೀಳುವ ಸಾಧ್ಯತೆ ಇತ್ತಾದರೂ, ಬೆನ್ ಸ್ಟೋಕ್ಸ್ ವಿಕೆಟ್ ಪಡೆದ ನಂತರದಲ್ಲಿ ಹಾಗೂ ಅದಿಲ್ ರಶೀದ್‌ಗೆ ಬುಮ್ರಾ ಜೀವದಾನ ಮಾಡಿದ್ದು ಪಂದ್ಯ ಐದನೇ ದಿನಕ್ಕೆ ವಿಸ್ತರಿಸಲು ಕಾರಣವಾಯಿತು. ಸದ್ಯ, ಗೆಲುವಿಗೆ ತಡೆಯಾಗಿರುವ ಒಂದು ವಿಕೆಟ್ ಅನ್ನು ಅತಿಶೀಘ್ರಗತಿಯಲ್ಲೇ ಎಗರಿಸಿ ಐದು ಪಂದ್ಯಗಳ ಸರಣಿಯಲ್ಲಿ ೧-೨ ಅಂತರ ಕಾಯ್ದುಕೊಳ್ಳಲು ಕೊಹ್ಲಿ ಪಡೆ ಸನ್ನದ್ಧವಾಗಿದೆ.

ಇದನ್ನೂ ಓದಿ : ವಿರಾಟ್ ಆಟಕ್ಕೆ ಬಸವಳಿದ ಆತಿಥೇಯ ಇಂಗ್ಲೆಂಡ್ ಎದುರು ಕಠಿಣ ಸವಾಲು

ಇಶಾಂತ್ ಮುನ್ನುಡಿ

ಮೂರನೇ ದಿನದಾಂತ್ಯಕ್ಕೆ ೫೨೧ ರನ್ ಗೆಲುವಿನ ಗುರಿ ಪಡೆದು ವಿಕೆಟ್ ನಷ್ಟವಿಲ್ಲದೆ ೨೩ ರನ್ ಗಳಿಸಿದ್ದ ಇಂಗ್ಲೆಂಡ್ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತಾದರೂ, ನಾಲ್ಕನೇ ದಿನದಾಟದ ಆರಂಭದಲ್ಲೇ ಇಶಾಂತ್ ಶರ್ಮಾ ನಡೆಸಿದ ಡಬಲ್ ದಾಳಿಯಲ್ಲಿ ಬೆಚ್ಚಿಬಿದ್ದಿತು. ಅಲೆಸ್ಟೈರ್ ಕುಕ್ (೧೭) ಮತ್ತು ಕೀಟನ್ ಜೆನ್ನಿಂಗ್ಸ್ (೧೩) ಇಶಾಂತ್ ದಾಳಿಯಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಬಳಿಕ ಬಂದ ನಾಯಕ ಜೋ ರೂಟ್ (೧೩) ಮತ್ತು ಓಲಿವರ್ ಪೋಪ್ (೧೬) ಮೂರನೇ ವಿಕೆಟ್ ಜತೆಯಾಟಕ್ಕೆ ಕಲೆಹಾಕಿದ್ದು ಕೇವಲ ೩೦ ರನ್‌ಗಳನ್ನಷ್ಟೆ. ೨೫ನೇ ಓವರ್‌ನ ಮೂರನೇ ಎಸೆತದಲ್ಲಿ ರೂಟ್, ಸ್ಲಿಪ್‌ನಲ್ಲಿದ್ದ ಕೆ ಎಲ್ ರಾಹುಲ್‌ಗೆ ಕ್ಯಾಚಿತ್ತು ಕ್ರೀಸ್ ತೊರೆಯುವಂತೆ ಮಾಡುವಲ್ಲಿ ಬುಮ್ರಾ ಯಶಸ್ವಿಯಾದರು. ಇತ್ತ, ಪೋಪ್ (೧೬), ಮೊಹಮದ್ ಶಮಿ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಕ್ರೀಸ್ ತೊರೆದರು.

ಬಟ್ಲರ್ ಚೊಚ್ಚಲ ಶತಕ

ಒಂದು ಹಂತದಲ್ಲಿ ಏಕಪಕ್ಷೀಯವಾಗಿದ್ದ ಪಂದ್ಯಕ್ಕೆ ತಿರುವು ನೀಡಿದ್ದು ಇಂಗ್ಲೆಂಡ್‌ ವಿಕೆಟ್‌ಕೀಪರ್ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಜೋಡಿ. ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿಯ ಅತ್ಯದ್ಭುತ ಬ್ಯಾಟಿಂಗ್‌ ಭಾರತವನ್ನು ಇನ್ನಿಲ್ಲದಂತೆ ಬಸವಳಿಯುವಂತೆ ಮಾಡಿತು. ೬೨ ರನ್‌ಗಳಿಗೆ ೪ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಪತನದ ಹಾದಿ ಸನ್ನಿಹಿತವಾಯಿತು ಎಂದುಕೊಳ್ಳುವಾಗಲೇ, ಭೋಜನ ವಿರಾಮದ ನಂತರ ಮನಮೋಹಕ ಬ್ಯಾಟಿಂಗ್ ನಡೆಸಿದ ಈ ಜೋಡಿ ಇಂಗ್ಲೆಂಡ್ ಹೋರಾಟವನ್ನು ಜೀವಂತವಾಗಿಟ್ಟಿತು.

ಆದರೆ, ಮೊದಲೇ ಹೇಳಿದಂತೆ ೮೦ ಓವರ್‌ಗಳಾಗಿ ಹೊಸ ಚೆಂಡು ಕೈಗೆ ಸಿಕ್ಕುತ್ತಿದ್ದಂತೆ ಬುಮ್ರಾ ಬಿರುದಾಳಿಗೆ ಇಂಗ್ಲೆಂಡ್ ನಡುಗಿಹೋಯಿತು. ೮೩ನೇ ಓವರ್‌ನ ಮೂರನೇ ಎಸೆತದಲ್ಲಿ ಬಟ್ಲರ್ ಅವರನ್ನು ಎಲ್‌ಬಿ ಬಲೆಗೆ ಸಿಲುಕಿಸಿದ ಬುಮ್ರಾ, 57.2 ಓವರ್‌ಗಳಲ್ಲಿ ಐದನೇ ವಿಕೆಟ್‌ಗೆ ೧೬೯ ರನ್‌ಗಳ ಜತೆಯಾಟವನ್ನು ಮುರಿದರು. ಇತ್ತ, ಮರು ಎಸೆತದಲ್ಲೇ ಜಾನಿ ಬೇರ್‌ಸ್ಟೋ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದರು. ಇನ್ನು, ೮೫ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್‌ಗೂ ಪೆವಿಲಿಯನ್ ದಾರಿ ತೋರಿದ ಬುಮ್ರಾ, ಇಂಗ್ಲೆಂಡ್‌ನ ಎಲ್ಲ ಭರವಸೆಗಳನ್ನೂ ನುಚ್ಚುನೂರುಗೊಳಿಸಿದರು. ಆನಂತರದಲ್ಲಿ ಹಾರ್ದಿಕ್ ಪಾಂಡ್ಯ, ಬೆನ್ ಸ್ಟೋಕ್ಸ್ ಅವರನ್ನು ಕ್ರೀಸ್‌ ತೊರೆಯುವಂತೆ ಮಾಡಿದ ನಂತರದಲ್ಲಿ ಇಂಗ್ಲೆಂಡ್ ಪತನದ ಹಾದಿ ನಿಶ್ಚಿತವಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More