ನೂತನ ರಾಷ್ಟ್ರೀಯ ದಾಖಲೆ ಬರೆದ ಶ್ರೀಹರಿ ನಟರಾಜ್, ವೀರ್‌ಧವಳ್ ಖಾಡೆ

ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಈಜುಗಾರರಾದ ಶ್ರೀಹರಿ ನಟರಾಜ್ ಹಾಗೂ ವೀರ್‌ಧವಳ್ ಖಾಡೆ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ೫೦ ಮೀಟರ್ ಬಟರ್‌ಫ್ಲೈನಲ್ಲಿ ಶ್ರೀಹರಿ ನಟರಾಜ್ ಮತ್ತು ೨೦೦ ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಖಾಡೆ ದಾಖಲೆಯೊಂದಿಗೆ ಫೈನಲ್ ತಲುಪಿದರು

ಏಷ್ಯಾಡ್‌ ಕೂಟದಲ್ಲಿ ಪದಕ ಗೆಲ್ಲುವ ದಾಹವನ್ನು ತಣಿಸಿಕೊಳ್ಳಲು ಬಿಟ್ಟೂಬಿಡದೆ ಶ್ರಮಿಸುತ್ತಿರುವ ಭಾರತದ ಈಜುಗಾರರು ಗುರುವಾರ (ಆ.೨೩) ಮತ್ತೊಂದು ದಾಖಲೆಯೊಂದಿಗೆ ಪದಕ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಪುರುಷರ ೫೦ ಮೀಟರ್ ಬಟರ್‌ಫ್ಲೈ ವಿಭಾಗದ ಹೀಟ್ ಎರಡರಲ್ಲಿ ಖಾಡೆ ನಿಗದಿತ ಗುರಿಯನ್ನು ೨೪.೦೯ ಸೆ.ಗಳಲ್ಲಿ ಕ್ರಮಿಸಿದರು. ಇದರೊಂದಿಗೆ, ಒಂಬತ್ತು ವರ್ಷಗಳ ಹಿಂದೆ ತಾನೇ ನಿರ್ಮಿಸಿದ್ದ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು.

೨೦೦೯ರಲ್ಲಿ ಚೀನಾದ ಫೋಶನ್‌ನಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ೨೪.೧೪ ಸೆ.ಗಳಲ್ಲಿ ಖಾಡೆ ಗುರಿ ಮುಟ್ಟಿದ್ದರು. ಆದರೆ, ಈ ಬಾರಿ ತಮ್ಮ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡ ಅವರು, ಹೀಟ್‌ನಲ್ಲಿ ಸ್ಪರ್ಧಿಸಿದ್ದವರ ಪೈಕಿ ಐದನೇ ಸ್ಥಾನ ಗಳಿಸಿದರು. ಪ್ರಸ್ತುತ ನಡೆಯುತ್ತಿರುವ ಕೂಟದಲ್ಲಿ ಖಾಡೆ, ಎರಡು ದಿನಗಳ ಹಿಂದಷ್ಟೇ ೫೦ ಮೀಟರ್ ಫ್ರೀಸ್ಟೈಲ್‌ನಲ್ಲೂ ರಾಷ್ಟ್ರೀಯ ದಾಖಲೆ ಬರೆದಿದ್ದಲ್ಲದೆ, ೦.೦೧ ಸೆ.ಗಳ ಅಂತರದಿಂದ ಕಂಚು ಪದಕದಿಂದ ವಂಚಿತವಾಗಿದ್ದರು.

ಇನ್ನು, ೨೦೦ ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ನಟರಾಜ್ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. ೨:೦೨.೯೭ ಸೆ.ಗಳಲ್ಲಿ ಗುರಿ ಮುಟ್ಟಿದ ಅವರು, ಏಳನೇ ಸ್ಥಾನ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದರು. ಏಪ್ರಿಲ್‌ನಲ್ಲಿ ನಡೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕೂಟದಲ್ಲಿ ೨:೦೪.೭೫ ಸೆ.ಗಳಲ್ಲಿ ಇದೇ ದೂರವನ್ನು ಕ್ರಮಿಸಿದ್ದರು. ಇದಕ್ಕೂ ಮುಂಚಿನ ಅವರ ಶ್ರೇಷ್ಠ ಸಾಧನೆ ೨:೦೩.೧೭ ಸೆ.ಗಳು.

ಇದನ್ನೂ ಓದಿ : ಕುಸ್ತಿಯಲ್ಲಿ ದಿವ್ಯಾಗೆ ಕಂಚು; ೦.೦೧ ಸೆ. ಅಂತರದಲ್ಲಿ ಪದಕ ತಪ್ಪಿಸಿಕೊಂಡ ಖಾಡೆ!

ಇತ್ತ, ಪುರುಷರ ೫೦ ಮೀಟರ್ ಬಟರ್‌ಫ್ಲೈನಲ್ಲಿ ಸ್ಪರ್ಧಿಸಿದ್ದ ಅನ್ಶುಲ್ ಕೊಥಾರಿ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾದರು. ಮೂವರು ಸ್ಪರ್ಧಿಗಳಿದ್ದ ಹೀಟ್‌ನಲ್ಲಿ ೨೫.೪೫ ಸೆ.ಗಳಲ್ಲಿ ಗುರಿ ಮುಟ್ಟಿ ಅಗ್ರಸ್ಥಾನ ಗಳಿಸಿದ ಕೊಥಾರಿ, ೪೦ ಈಜುಗಾರರ ಪೈಕಿ ೨೮ನೇ ಸ್ಥಾನ ಗಳಿಸಿದರು. ಇದಕ್ಕೂ ಮುನ್ನ, ೫೦ ಮೀಟರ್ ಫ್ರೀಸ್ಟೈಲ್‌ ಸ್ಪರ್ಧೆಯಿಂದಲೂ ಕೊಥಾರಿ ಹೊರಬಿದ್ದಿದ್ದರು.

ಏತನ್ಮಧ್ಯೆ, ೧೦೦ ಮೀಟರ್ ಫ್ರೀಸ್ಟೈಲ್‌ನಲ್ಲಿ ಖಾಡೆ ನಿರಾಸೆ ಅನುಭವಿಸಿದರು. ೫೯.೧೧ ಸೆ.ಗಳಲ್ಲಿ ಗುರಿ ಮುಟ್ಟಿದ ಅವರು, ೪೩ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾದರು. ಇನ್ನು, ಏರಾನ್ ಡಿಸೋಜಾ ೫೧.೫೦ ಸೆ.ಗಳಲ್ಲಿ ಗುರಿ ಮುಟ್ಟಿ ಉತ್ತಮ ಪ್ರದರ್ಶನ ನೀಡಿದರಾದರೂ, ೨೭ನೇ ಸ್ಥಾನದೊಂದಿಗೆ ಪದಕ ರೇಸ್‌ನಿಂದ ಹೊರಬಿದ್ದರು. ಇನ್ನುಳಿದಂತೆ, ಅದ್ವೈತ್ ಪೇಜ್ ೨೦೦ ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ೨:೦೬.೮೫ ಸೆ.ಗಳಲ್ಲಿ ಗುರಿ ತಲುಪಿ ೧೨ನೇ ಸ್ಥಾನ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More