ಬೆಳ್ಳಿ ಪದಕ ಖಚಿತಪಡಿಸಿದ ಬೋಪಣ್ಣ ಜೋಡಿ; ಕಂಚಿಗೆ ತೃಪ್ತಿಪಟ್ಟ ಅಂಕಿತಾ

ಆಕರ್ಷಕ ಪ್ರದರ್ಶನ ನೀಡುತ್ತ ಸಾಗಿದ್ದ ಯುವ ಆಟಗಾರ್ತಿ ಅಂಕಿತಾ ರೈನಾ, ಅಂತಿಮ ನಾಲ್ಕರ ಘಟ್ಟದ ಸವಾಲನ್ನು ಮೀರಲು ಸಾಧ್ಯವಾಗದೆ ಕಂಚಿಗೆ ತೃಪ್ತಿಪಟ್ಟಿದ್ದಾರೆ. ಆದರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿರುವ ಬೋಪಣ್ಣ-ದಿವಿಜ್ ಜೋಡಿ, ಬೆಳ್ಳಿ ಪದಕವನ್ನಂತೂ ಖಚಿತಪಡಿಸಿದೆ

ಅನುಭವಿ ಆಟಗಾರ ರೋಹನ್ ಬೋಪಣ್ಣ, ಯುವ ಆಟಗಾರ ದಿವಿಜ್ ಶರಣ್ ಜೊತೆಗೂಡಿ ಏಷ್ಯಾ ಕ್ರೀಡಾಕೂಟದ ಟೆನಿಸ್ ಪಂದ್ಯಾವಳಿಯ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಗುರುವಾರ (ಆ.೨೩) ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಬೋಪಣ್ಣ ಮತ್ತು ದಿವಿಜ್ ಜೋಡಿ ಮೊದಲ ಸೆಟ್ ಅನ್ನು ೪-೬ರಿಂದ ಸೋತರೂ, ಬಳಿಕ ಎಚ್ಚರಿಕೆ ಆಟದೊಂದಿಗೆ ಜಯಶಾಲಿಯಾಯಿತು.

ಜಪಾನ್‌ನ ಶೊ ಶಿಮಾಬುಕುರೊ ಮತ್ತು ಕೈಟೊ ಯುಸುಗಿ ವಿರುದ್ಧದ ಸ್ಪರ್ಧಾವಳಿಯಲ್ಲಿ ಮೊದಲ ಸೆಟ್‌ ಅನ್ನು ಕಳೆದುಕೊಂಡರೂ ದ್ವಿತೀಯ ಸೆಟ್‌ನಲ್ಲಿ ಆಕ್ರಮಣಕಾರಿ ಆಟವಾಡುವುದರೊಂದಿಗೆ ೬-೩ ಗೆಲುವು ಸಾಧಿಸಿದ ಬೋಪಣ್ಣ ಜೋಡಿ, ಬಳಿಕ ನಿರ್ಣಾಯಕವಾದ ಟೈಬ್ರೇಕರ್ ಸೆಟ್‌ನಲ್ಲಿ ೧೦-೮ ಮುನ್ನಡೆಯೊಂದಿಗೆ ಗೆಲುವು ಸಾಧಿಸಿ ರಜತ ಪದಕ ಖಚಿತಪಡಿಸಿತು.

ಸ್ವರ್ಣ ಪದಕ್ಕಕಾಗಿ ನಡೆಯಲಿರುವ ಅಂತಿಮ ಸುತ್ತಿನ ಹಣಾಹಣಿಯಲ್ಲಿ ಬೋಪಣ್ಣ ಮತ್ತು ದಿವಿಜ್ ಜೋಡಿ ಜಪಾನ್‌ನ ಯೊಸುಕೆ ವಟನುಕಿ ಮತ್ತು ಯುಯಾ ಇಟೊ ಎದುರು ಸೆಣಸಲಿದೆ. ಜಪಾನ್ ಜೋಡಿಯ ವಿರುದ್ದ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿರುವ ಬೋಪಣ್ಣ ಮತ್ತು ದಿವಿಜ್, ಚಿನ್ನದ ಪದಕ ಜಯಿಸುವ ಭರವಸೆಯಲ್ಲಿದೆ.

ಇದನ್ನೂ ಓದಿ : ಏಷ್ಯಾಡ್ ಬೆಳ್ಳಿ ಪದಕಕ್ಕೆ ಗುರಿ ಇಟ್ಟು ಇತಿಹಾಸ ಬರೆದ ಹದಿನೈದರ ಬಾಲಕ!

ಅಂಕಿತಾಗೆ ನಿರಾಸೆ

ಅಂದಹಾಗೆ, ಟೆನಿಸ್‌ನಲ್ಲಿ ಭಾರತ ಮತ್ತೊಂದು ಬೆಳ್ಳಿ ಪದಕ ಗೆಲ್ಲುವ ಅವಕಾಶ ಇತ್ತಾದರೂ, ಅಂಕಿತಾ ರೈನಾ, ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರಿಂದ ಅದು ಕೈಗೂಡದಾಯಿತು. ಚೀನಿ ಆಟಗಾರ್ತಿ ಝಾಂಗ್ ಶುವಾಯಿ ವಿರುದ್ಧ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ದಿಟ್ಟ ಪೈಪೋಟಿ ನೀಡಿದ ಹೊರತಾಗಿಯೂ ಅಂಕಿತಾ, ೪-೬, ೬-೭ (೬) ಅಂತರದಿಂದ ಪರಾಭವಗೊಂಡರು.

ಸರಿಸುಮಾರು ಎರಡು ತಾಸುಗಳ ಸುದೀರ್ಘ ಕಾದಾಟದಲ್ಲಿ ೨೫ರ ಹರೆಯದ ಅಂಕಿತಾ, ಚೀನಿ ಆಟಗಾರ್ತಿಯ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ. ಆದರೆ, ಸೆಮಿಫೈನಲ್ ತಲುಪುವುದರೊಂದಿಗೆ ಏಷ್ಯಾಡ್‌ನಲ್ಲಿ ಸಾನಿಯಾ ಮಿರ್ಜಾ ನಂತರ ವನಿತೆಯರ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಟೆನಿಸ್ ಆಟಗಾರ್ತಿ ಎನಿಸಿಕೊಳ್ಳುವಲ್ಲಿ ಅಂಕಿತಾ ಯಶಸ್ವಿಯಾದರು.

೨೦೦೬ರ ದೋಹಾ ಆವೃತ್ತಿಯಲ್ಲಿ ಸಾನಿಯಾ ಮಿರ್ಜಾ ಬೆಳ್ಳಿ ಗೆದ್ದರೆ, ೨೦೧೦ರ ಗುವಾಂಗ್‌ಜೌ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು. ಏಷ್ಯಾ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಏಕೈಕ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಎಂಬುದು ಗಮನಾರ್ಹ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More