ಪ್ರತಿಷ್ಠಿತ ಏಷ್ಯಾಡ್‌ನಲ್ಲಿನ ಭಾರತದ ಕಬಡ್ಡಿ ಸ್ವರ್ಣಯುಗಕ್ಕೆ ತೆರೆ ಎಳೆದ ಇರಾನ್ 

ಏಳು ಬಾರಿಯ ಚಾಂಪಿಯನ್ ಭಾರತ ಇದೇ ಮೊಟ್ಟಮೊದಲ ಬಾರಿಗೆ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತವಾಗಿದೆ. ಇರಾನ್ ಎದುರು ಬುಧವಾರ (ಆ.೨೩) ನಡೆದ ಸೆಮಿಫೈನಲ್‌ನಲ್ಲಿ ಅದು ಆಘಾತಕಾರಿ ಸೋಲನುಭವಿಸಿದೆ. ಇನ್ನೊಂದೆಡೆ, ಮಹಿಳೆಯರ ಕಬಡ್ಡಿ ತಂಡ ಫೈನಲ್ ತಲುಪಿದೆ

ಏಷ್ಯಾಡ್‌ನಲ್ಲಿ ತಮ್ಮ ಚಿಂತೆಯೆಲ್ಲ ಇರಾನ್ ತಂಡದ್ದೇ ಎಂದು ಭಾರತ ಕಬಡ್ಡಿ ತಂಡ ಕಳವಳವಳ ವ್ಯಕ್ತಪಡಿಸಿದ್ದು ನಿಜವಾಗಿದೆ. ೧೯೯೦ರಲ್ಲಿ ಬೀಜಿಂಗ್‌ ಕೂಟದಲ್ಲಿ ಕಬಡ್ಡಿ ಕ್ರೀಡೆಯನ್ನು ಸೇರ್ಪಡೆಗೊಳಿಸಿದಾಗಿನಿಂದ ಇಲ್ಲಿವರೆಗೂ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಕೂಟದಲ್ಲಿ ಮೊದಲ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದೆ ಕಾಯ್ದುಕೊಂಡುಬಂದಿದ್ದ ಭಾರತಕ್ಕೆ ಇರಾನ್ ಆಘಾತ ನೀಡಿತು.

ಇರಾನ್ ಎದುರಿನ ೧೮-೨೭ ಪಾಯಿಂಟ್ಸ್‌ಗಳ ಅಂತರದ ಸೋಲು ಭಾರತ ತಂಡದ ಕೆಲವು ಸದಸ್ಯರ ಕಣ್ಣಾಲಿ ತೇವಗೊಳಿಸಿದ್ದು, ಆಟಗಾರರು ಈ ಸೋಲಿನಿಂದ ಅದೆಷ್ಟು ಕನಲಿದ್ದರೆಂಬುದಕ್ಕೆ ಸಾಕ್ಷ್ಯ ಒದಗಿಸಿತು. ಇರಾನ್ ಆಟಗಾರರ ಆಕ್ರಮಣಕಾರಿ ಆಟ ಹಾಗೂ ಗೆಲ್ಲುವ ಛಲದೊಂದಿಗೆ ಅವರು ಕಾದಾಡಿದ ಪರಿ ಏಳು ಬಾರಿಯ ಚಾಂಪಿಯನ್ ತಂಡ ಇದೇನಾ ಎಂಬ ಅನುಮಾನವನ್ನೂ ತಂದಿತ್ತಿತು.

“ಫಾರ್ವರ್ಡ್ ಪಡೆ ಇಂದು ಸಂಪೂರ್ಣ ಎಡವಿತು. ಇನ್ನು, ಟ್ಯಾಕಲ್ ತಂತ್ರಗಾರಿಕೆಯಲ್ಲಿ ಕೂಡ ನಾವು ಕಳಪೆ ಆಟವಾಡಿದೆವು,’’ ಎಂದು, ಇರಾನ್ ವಿರುದ್ಧ ಭಾರತ ಅನುಭವಿಸಿದ ಸೋಲಿಗೆ ಕಾರಣ ಏನೆಂದು ಕೋಚ್ ರಾಮ್ ಮೆಹರ್ ಸಿಂಗ್ ವ್ಯಾಖ್ಯಾನಿಸಿದರು. ವಾಸ್ತವವಾಗಿ, ೨೦೧೪ರ ಇಂಚಾನ್‌ ಕೂಟದ ಫೈನಲ್‌ನಲ್ಲೇ ಇರಾನ್, ಭಾರತವನ್ನು ಎಚ್ಚರಿಸಿತ್ತು. ಅದೃಷ್ಟವಶಾತ್ ಹೇಗೋ ಕಳೆದ ಆವೃತ್ತಿಯಲ್ಲಿ ಪಾರಾಗಿದ್ದ ಭಾರತವನ್ನು ಈ ಬಾರಿ ಇರಾನಿಗರು ಕಟ್ಟಿಹಾಕುವಲ್ಲಿ ಯಶ ಕಂಡರು.

ಇದನ್ನೂ ಓದಿ : ಇರಾನಿ ವನಿತೆಯರ ಆಟ ಕಣ್ತುಂಬಿಕೊಳ್ಳಲು ಹೆಣ್ಣಾಗಿ ಬದಲಾದ ಕಬಡ್ಡಿ ಕೋಚ್!

ಪ್ರೊ ಕಬಡ್ಡಿ ಲೀಗ್‌ನಲ್ಲಿ ಫಾಜೆಲ್ ಅಟ್ರಾಚಲಿ ಹಾಗೂ ಅಬೋಜರ್ ಮಿಗ್ಹಾನಿಯಂಥ ಪ್ರಚಂಡ ಡಿಫೆಂಡರ್‌ಗಳೊಂದಿಗೆ ಕಲೆತಿದ್ದ ಭಾರತದ ಆಟಗಾರರು, ಅವರಿಗೆ ತಕ್ಕಂತೆ ಸೆಣಸುವಲ್ಲಿ ವಿಫಲವಾದರು. ಇನ್ನು, ಅಜಯ್ ಠಾಕೂರ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ, ದೀಪಕ್ ನಿವಾಸ್ ಹೂಡಾರಂಥ ಪ್ರೊ ಕಬಡ್ಡಿ ಲೀಗ್ ಆಟಗಾರರನ್ನು ಒಳಗೊಂಡಿದ್ದ ಭಾರತ ತಂಡ, ಇದೇ ಮೊದಲ ಬಾರಿಗೆ ಏಷ್ಯಾಡ್‌ನಲ್ಲಿ ಮೊದಲ ಸ್ಥಾನದಿಂದ ವಂಚಿತ ಆಗುವಂತಾಯಿತು.

ಶುರುವಿನಲ್ಲಿ ೬-೪ ಮುನ್ನಡೆಯೊಂದಿಗೆ ಭಾರತ ಸರಿದಿಸೆಯಲ್ಲಿ ಹೆಜ್ಜೆ ಇಟ್ಟಿತಾದರೂ, ಕ್ರಮೇಣ ಇರಾನ್‌ನ ತಿರುಗುಬೀಳುವಿಕೆಯಿಂದ ಕಂಗೆಟ್ಟಿತು. ಮೊದಲಿಗೆ, ಅಜಯ್ ಠಾಕೂರ್ ಅವರನ್ನು ಔಟ್ ಮಾಡಿದ ಇರಾನ್, ಬಳಿಕ ಆಕ್ರಮಣಕಾರಿ ಟ್ಯಾಕಲ್‌ನಿಂದ ಅಂತರವನ್ನು ೬-೭ಕ್ಕೆ ತಂದಿತು. ಇತ್ತ, ತೆಲುಗು ಟೈಟಾನ್ಸ್ ಪರ ಆಡಿದ ಮಿಗ್ಹಾನಿ ಮತ್ತು ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ಪರ ಆಡಿದ್ದ ಅಟ್ರಾಚಲಿ ಭಾರತದ ರೈಡರ್‌ಗಳಿಗೆ ಕಡಿವಾಣ ಹಾಕಿದರು.

ಪ್ರಥಮಾರ್ಧದಲ್ಲಿ ಇತ್ತಂಡಗಳೂ ೯-೯ ಸಮಬಲ ಸಾಧಿಸಿದಾಗ ಸಹಜವಾಗಿಯೇ ಪಂದ್ಯ ತೀವ್ರ ರೋಚಕತೆ ಪಡೆಯಿತು. ವಿರಾಮದ ಬಳಿಕ ಇರಾನ್ ಕೆಲವು ಅತ್ಯಮೋಘ ಟ್ಯಾಕಲ್‌ಗಳಿಂದ ೧೪-೧೧ರಿಂದ ಮೇಲುಗೈ ಸಾಧಿಸಿತಲ್ಲದೆ, ರಿಶಾಂಕ್ ದೇವಾಡಿಗ ಅವರನ್ನು ಔಟ್ ಮಾಡಿ ೧೯-೧೪ರಿಂದ ಮತ್ತೆ ಪ್ರಭುತ್ವ ಮೆರೆಯಿತು. ಐದು ಪಾಯಿಂಟ್ಸ್ ಹಿನ್ನಡೆ ಅನುಭವಿಸಿದ ಭಾರತದ ಮೇಲೆ ಮತ್ತಷ್ಟು ಒತ್ತಡ ಹಾಕಿದ ಇರಾನ್ ಆಟಗಾರರು, ಕಡೆಗೂ ಹಾಲಿ ಚಾಂಪಿಯನ್ನರ ದಿಗ್ವಜಯಿ ಆಟಕ್ಕೆ ತೆರೆಎಳೆದರು.

ವನಿತೆಯರ ಫೈನಲ್ ಪ್ರವೇಶ

ಪುರುಷರ ವಿಭಾಗದ ಸೆಮಿಫೈನಲ್‌ಗೂ ಮುನ್ನ ನಡೆದ ವನಿತೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಚೈನೀಸ್ ತೈಪೆಯನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಆಕ್ರಮಣಕಾರಿ ಆಟವಾಡಿದ ಭಾರತ ವನಿತಾ ತಂಡ, ಚೈನೀಸ್ ತೈಪೆಯನ್ನು ೨೭-೧೪ರಿಂದ ಮಣಿಸುವುದರೊಂದಿಗೆ ಫೈನಲ್‌ಗೆ ದಾಪುಗಾಲಿಟ್ಟಿತು. ಕಳೆದ ಎರಡೂ ಆವೃತ್ತಿಗಳಲ್ಲೂ ಚಿನ್ನದ ಪದಕ ಜಯಿಸಿರುವ ಭಾರತ ಕಬಡ್ಡಿ ವನಿತಾ ತಂಡ, ಹ್ಯಾಟ್ರಿಕ್ ಸಾಧನೆಗೆ ತುಡಿಯುತ್ತಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More