ಮತ್ತೊಮ್ಮೆ ಫೈನಲ್ ಸವಾಲನ್ನು ಮೆಟ್ಟಿನಿಲ್ಲದ ಸಿಂಧುಗೆ ಚಾರಿತ್ರಿಕ ರಜತ

ಮಹತ್ವದ ಪಂದ್ಯಾವಳಿಗಳಲ್ಲಿ ಪ್ರತೀ ಬಾರಿ ಅಂತಿಮ ಸುತ್ತಿನಲ್ಲಿ ಎಡವುವ ಚಾಳಿ ಸಿಂಧುವನ್ನು ಸದ್ಯಕ್ಕೆ ಬಿಟ್ಟಂತೆ ಕಾಣುತ್ತಿಲ್ಲ. ತಾಯ್ ಟ್ಸು ಯಿಂಗ್‌ಳಂಥ ವಿಶ್ವದ ನಂ ೧ ಆಟಗಾರ್ತಿಯ ಎದುರು ಸಿಂಧು ತಡಬಡಾಯಿಸಿದ್ದು ಸಹ ಅತಿಶಯ ಎನಿಸದು. ಆಕ್ರಮಣಕಾರಿ ತಾಯ್ ಏಷ್ಯಾಡ್‌ನಲ್ಲೂ ಚಿನ್ನದ ನಗೆಬೀರಿದ್ದಾರೆ

ತಾಯ್ ಟ್ಸು ಯಿಂಗ್ ವಿರುದ್ಧದ ಒಟ್ಟಾರೆ ೧೨ ಪಂದ್ಯಗಳ ಮುಖಾಮುಖಿಯಲ್ಲಿ ಸಿಂಧು ಗೆದ್ದಿದ್ದು ಕೇವಲ ೩ರಲ್ಲಾದರೆ, ಉಳಿದ ಒಂಬತ್ತು ಪಂದ್ಯಗಳಲ್ಲಿ ತಾಯ್ ಪಾರಮ್ಯ ಮೆರೆದಿದ್ದರು. ಇಷ್ಟಕ್ಕೂ ಕಡೆಯ ಐದು ಪಂದ್ಯಗಳಲ್ಲಿ ಸಿಂಧುವಿನ ವಿರುದ್ಧ ತಾಯ್ ಆಕ್ರಮಣಕಾರಿ ಆಟದೊಂದಿಗೆ ಜಯಭೇರಿ ಬಾರಿಸಿದ್ದರು. ಮಂಗಳವಾರ (ಆ.೨೮) ನಡೆದ ಏಷ್ಯಾಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಯಿಂಗ್ ಜಯಭೇರಿ ಭಾರತೀಯ ಆಟಗಾರ್ತಿಯನ್ನು ೨೧-೧೩, ೨೧-೧೬ ನೇರ ಗೇಮ್‌ಗಳಲ್ಲಿ ಹಣಿಯುವುದರೊಂದಿಗೆ ಏಷ್ಯಾಡ್‌ನಲ್ಲಿ ಚಾಂಪಿಯನ್ ಆಗಿ ಮೆರೆದಾಡಿದರು.

ವಿಶ್ವದ ನಂ ೧ ಆಟಗಾರ್ತಿ ತಾಯ್ ಟ್ಸು ಯಿಂಗ್ ವಿರುದ್ಧದ ಕಾದಾಟಕ್ಕೂ ಮುನ್ನ ಸಿಂಧು, ಪ್ರಸ್ತುತ ಏಷ್ಯಾ ಕ್ರೀಡಾಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದರು. ಮೊದಲ ಸುತ್ತಿನಲ್ಲಿ ವಿಯೆಟ್ನಾಂ ಆಟಗಾರ್ತಿ ವು ಥಿ ಟ್ರಾಂಗ್ ವಿರುದ್ದ ೨೧-೧೦, ೧೨-೨೧, ೨೩-೨೧ರಿಂದ ಗೆದ್ದ ಸಿಂಧು, ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಥಾಯ್ಲೆಂಡ್ ಆಟಗಾರ್ತಿ ನಿಚಾವೊನ್ ಜಿಂದಾಪೊಲ್ ವಿರುದ್ಧ ೨೧-೧೧, ೧೬-೨೧, ೨೧-೧೪ರಿಂದ ಜಯ ಪಡೆದರು. ಇನ್ನು ದಿನದ ಹಿಂದಷ್ಟೇ ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ೨೧-೯, ೨೧-೧೪ರಿಂದ ವಿಜೃಂಭಿಸಿ ಫೈನಲ್‌ ತಲುಪಿದ್ದರು.

ಇನ್ನು, ತೈವಾನ್ ಮೂಲದ ಚೈನೀತೈಪೆ ಆಟಗಾರ್ತಿ ತಾಯ್ ಟ್ಸು ಯಿಂಗ್ ಪ್ರೀಕ್ವಾರ್ಟರ್‌ಫೈನಲ್‌ನೊಂದಿಗೆ ಅಭಿಯಾನ ಆರಂಭಿಸಿದ್ದರು. ಮೊದಲ ಸುತ್ತಿನಿಂದ ಬೈ ಪಡೆದಿದ್ದ ಈ ಪ್ರಚಂಡ ಆಟಗಾರ್ತಿ ಮೂರು ಗೇಮ್‌ಗಳಲ್ಲಿಯೂ ನೇರ ಗೇಮ್‌ ಗೆಲುವು ಕಂಡದ್ದು ವಿಶೇಷ. ಅಂತಿಮ ಹದಿನಾರರ ಹಂತದಲ್ಲಿ ಹಾಂಕಾಂಗ್‌ನ ಚೆಯುಂಗ್ ನ್ಯಾನ್ ಎದುರು ೨೧-೯, ೨೧-೧೪ರಿಂದ ಗೆದ್ದಿದ್ದ ತಾಯ್, ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ ೨೧-೧೫, ೨೧-೧೦ರಿಂದ ಮತ್ತು ಸೆಮಿಫೈನಲ್‌ನಲ್ಲಿ ಸೈನಾ ನೆಹ್ವಾಲ್ ಎದುರು ೨೧-೧೭, ೨೧-೧೪ರಿಂದ ಜಯಭೇರಿ ಬಾರಿಸಿದ್ದರು.

ಸಿಂಧು ಬೆಳ್ಳಿ ಪದಕ ಜಯಿಸುವುದಕ್ಕೂ ಮುನ್ನ ಕೂಟದ ೧೦ನೇ ದಿನದ ಆರಂಭದಲ್ಲಿ ಪುರುಷ ಮತ್ತು ಮಹಿಳಾ ಆರ್ಚರಿ ತಂಡ ಬೆಳ್ಳಿ ಪದಕ ಗೆದ್ದರೆ, ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತದ ಪುರುಷರ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಎದುರು ಸೋತು ಕಂಚು ಗೆದ್ದಿತು. ಮಧ್ಯಾಹ್ನದ ಹೊತ್ತಿಗೇ ಬಂದ ಈ ನಾಲ್ಕು ಪದಕಗಳೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ೮ ಸ್ವರ್ಣ, ೧೬ ಬೆಳ್ಳಿ ಹಾಗೂ ೨೧ ಕಂಚು ಸೇರಿದ ಒಟ್ಟಾರೆ ೪೫ ಪದಕಗಳನ್ನು ಗೆದ್ದಿತ್ತು.

ಇದನ್ನೂ ಓದಿ : ಕಂಚಿಗೆ ಹೋರಾಟ ಮುಗಿಸಿದ ಸೈನಾ ನೆಹ್ವಾಲ್, ಬೆಳ್ಳಿ ಖಚಿತಪಡಿಸಿದ ಸಿಂಧು 

ಬೆಳ್ಳಿ ಬೆಡಗಿ!

ಏಷ್ಯಾಡ್‌ನಲ್ಲಿಯೂ ಬೆಳ್ಳಿ ಗೆದ್ದ ಸಿಂಧುಗೆ ಬೆಳ್ಳಿ ಬೆಡಗಿ ಎಂಬ ವಿಶೇಷಣ ಅಕ್ಷರಶಃ ಒಪ್ಪುವಂತಿದೆ! ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಫೈನಲ್‌ನಲ್ಲಿ ಎಡವಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸಿಂಧು, ಕಳೆದ ತಿಂಗಳು ನಡೆದ ವಿಶ್ವ ಬ್ಯಾಡ್ಮಿಂಟನ್‌ನಲ್ಲೂ ರಜತ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದರು. ಇದೀಗ ಪ್ರತಿಷ್ಠಿತ ಏಷ್ಯಾಡ್‌ನಲ್ಲಿಯೂ ಸಿಂಧು ಬೆಳ್ಳಿಗೆ ತಪ್ತವಾಗಿದ್ದಾರೆ.

ಅಂದಹಾಗೆ, ಎರಡನೇ ಸ್ಥಾನಕ್ಕೆ ಸಿಂಧು ಕುಸಿದರಾದರೂ ಹೈದರಾಬಾದ್ ಆಟಗಾರ್ತಿಯ ಈ ಸಾಧನೆ ಚಾರಿತ್ರಿಕವೆನಿಸಿದೆ. ಭಾರತೀಯ ಬ್ಯಾಡ್ಮಿಂಟನ್‌ಗೆ ಇದುವರೆಗೆ ಏಷ್ಯಾಡ್‌ನಲ್ಲಿ ದಕ್ಕಿದ್ದು ಕೇವಲ ಕಂಚಿನ ಪದಕ ಮಾತ್ರವಷ್ಟೆ. ಆದರೆ, ಸಿಂಧುವಿನ ಅಮೋಘ ಆಟ ಭಾರತಕ್ಕೆ ಬೆಳ್ಳಿ ಪದಕವನ್ನು ದೊರಕಿಸಿಕೊಟ್ಟಿದೆ. ಈ ಕೂಟದವರೆಗೆ ಭಾರತ ಏಷ್ಯಾಡ್‌ನಲ್ಲಿ ೮ ಕಂಚಿನ ಪದಕಗಳನ್ನು ಗೆದ್ದಿತ್ತು. ಅವೆಲ್ಲವೂ ಟೀಂ ಈವೆಂಟ್‌ನಲ್ಲಿ ದೊರಕಿದರೆ, ದಿನದ ಹಿಂದಷ್ಟೇ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದು ೩೬ ವರ್ಷಗಳ ಬಳಿಕ ಭಾರತೀಯ ಬ್ಯಾಡ್ಮಿಂಟನ್‌ಗೆ ಸಿಂಗಲ್ಸ್‌ನಲ್ಲಿ ಪದಕ ದೊರಕಿಸಿಕೊಟ್ಟಿದ್ದರು.

ಸೈನಾ-ಸಿಂಧುಗೆ ದುಃಸ್ವಪ್ನವಾದ ತಾಯ್!

Set 1 YING - Sindhu 21-13!!!!!!!!!!!

A post shared by Tai Tzu Ying fans (戴资颖迷) (@taitzuyingfans) on

ಭಾರತದ ಅಗ್ರಕ್ರಮಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಸಿಂಧುಗೆ ತಾಯ್ ಟ್ಸು ಯಿಂಗ್ ದುಃಸ್ವಪ್ನದಂತೆ ಕಾಡುವಂತಾದರೆ ಅದು ಅಚ್ಚರಿಯಲ್ಲ. ಸೋಮವಾರ (ಆ.೨೭) ನಡೆದ ಸೆಮಿಫೈನಲ್‌ ಕಾಳಗದಲ್ಲಿ ಸೈನಾ ಮಣಿಸಿದ್ದ ಯಿಂಗ್, ಸತತ ಎರಡನೇ ದಿನದಂದು ಸಿಂಧುಗೆ ಸೋಲುಣಿಸಿ ತಾನೆಷ್ಟು ಅಪಾಯಕಾರಿ ಎಂಬುದನ್ನು ಸ್ಫುಟಪಡಿಸಿದರು.

ಇನ್ನು, ಸಿಂಧು ವಿರುದ್ಧದ ಚಿನ್ನದ ಪದಕಕ್ಕಾಗಿನ ಹೋರಾಟದಲ್ಲಿ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ತಾಯ್, ೫-೦ ಮುನ್ನಡೆ ಪಡೆದರು. ಸಿಡಿಲಬ್ಬರದ ಬಿರುಸಿನ ಆಟಕ್ಕೆ ತಡಬಡಾಯಿಸಿದ ಸಿಂಧು, ನಿಧಾನಗತಿಯಲ್ಲಿ ಸ್ಥಿಮಿತ ಪಡೆದು ಒಂದರ ಹಿಂದೊಂದರಂತೆ ಎರಡು ಪಾಯಿಂಟ್ಸ್ ಕಲೆಹಾಕಿದರು. ಪರಿಣಾಮ ೨-೫ ಅಂತರದಿಂದ ಕೂಡಿದ ಗೇಮ್, ಕ್ರಮೇಣ ೭-೧೦ಕ್ಕೆ ಏರಿತು. ಮತ್ತೊಂದು ಪಾಯಿಂಟ್ಸ್ ಹೆಕ್ಕಿದ ತಾಯ್, ಮಧ್ಯಂತರದ ಹೊತ್ತಿಗೆ ೧೧-೭ ಮುನ್ನಡೆ ಪಡೆದರು. ಒತ್ತಡಕ್ಕೆ ಸಿಲುಕಿದ ಸಿಂಧು, ಅನಗತ್ಯ ತಪ್ಪು ಹೊಡೆತಗಳಿಂದ ಪಾಯಿಂಟ್ಸ್ ಬಿಟ್ಟುಕೊಟ್ಟು ಅಂತಿಮವಾಗಿ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು.

ಇತ್ತ, ಎರಡನೇ ಗೇಮ್‌ನಲ್ಲಿಯೂ ನಿರ್ದಯಿ ಆಟಕ್ಕಿಳಿದರು. ೩-೧ರಿಂದ ಮುನ್ನಡೆ ಕಂಡ ಆಕೆಯ ಎದುರು ಹೇಗೂ ೪-೪ ಸಮಬಲ ಸಾಧಿಸಿದ ಸಿಂಧು, ಹಿಡಿತ ಸಾಧಿಸಲು ಹೆಣಗಿದರು.. ಇತ್ತ, ಸರ್ವೀಸ್‌ನಲ್ಲಿ ಎಡವಿದರೂ ೭-೫ರಿಂದ ಮತ್ತೆ ಮುನ್ನಡೆ ಕಾಯ್ದುಕೊಂಡ ತಾಯ್, ಮಧ್ಯಂತರದ ಹೊತ್ತಿಗೆ ಮತ್ತೆ ೧೧-೭ರಿಂದ ನೇರ ಗೇಮ್‌ಗಳ ಗೆಲುವನ್ನು ಖಚಿತಪಡಿಸಿದರು. ಅದ್ಭುತಕಾರಿ ಸ್ಮ್ಯಾಶ್ ಮತ್ತು ಬಿಡುಬೀಸಿನ ಕರಾರುವಾಕ್ ಸ್ಟ್ರೋಕ್‌ಗಳಿಂದ ವಿಜೃಂಭಿಸಿದ ತಾಯ್ ನಿಯಂತ್ರಿಸಲಾಗದ ಸಿಂಧು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಗಲಿಬಿಲಿಗೂ ತುತ್ತಾಗಿ ಸೋಲೊಪ್ಪಿಕೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More