ರೋಚಕ ಸೆಣಸಾಟದಲ್ಲಿ ಕೊರಿಯಾಗೆ ಮಣಿದ ಭಾರತದ ಬಿಲ್ಲುಗಾರರಿಗೆ ಬೆಳ್ಳಿ

ಚಿನ್ನಕ್ಕಾಗಿ ಬಿಟ್ಟ ಕಟ್ಟಕಡೆಯ ಹೋರಾಟವು ಬೆಳ್ಳಿಗೆ ನಾಟಿತಷ್ಟೆ! ಹಿಂದೆಂದೂ ಕಾಣದಂತೆ ಆರ್ಚರಿಯಲ್ಲಿ (ಬಿಲ್ಲುಗಾರಿಕೆ) ಅನುಭವಿಸಿದ ನಿರಾಸೆಯನ್ನು ಕೊನೆಗೂ ಭಾರತ ವನಿತೆಯರು ಮೆಟ್ಟಿನಿಂತರು. ದ.ಕೊರಿಯಾ ವನಿತಾ ತಂಡದ ವಿರುದ್ಧ ಕಾಂಪೌಂಡ್‌ನಲ್ಲಿ ಭಾರತ ವನಿತಾ ತಂಡ ಬೆಳ್ಳಿ ಪಡೆಯಿತು

ಕಡೆವರೆಗೂ ಹೋರಾಡಿದ ಭಾರತದ ಬಿಲ್ಲುಗಾರರು, ಪುರುಷರ ಮತ್ತು ವನಿತೆಯರ ಎರಡೂ ವಿಭಾಗಗಳಲ್ಲಿ ದಕ್ಷಿಣ ಕೊರಿಯಾ ಎದುರು ಸೋಲುಂಡು ರಜತ ಪದಕಕ್ಕೆ ತೃಪ್ತವಾಗಬೇಕಾಯಿತು. ವನಿತಾ ತಂಡ ಫೈನಲ್‌ನಲ್ಲಿ ಎಡವಿದರೆ, ಪುರುಷರ ವಿಭಾಗದಲ್ಲಿ ಭಾರತಕ್ಕೆ ದುರದೃಷ್ಟ ಕಾಡಿದ ಫಲವಾಗಿ ಎರಡನೇ ಸ್ಥಾನಕ್ಕೆ ತೃಪ್ತವಾಗಬೇಕಾಯಿತು. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ೨೨೯-೨೨೯ರಿಂದ ಸಮಬಲ ಸಾಧಿಸಿದ ಭಾರತ ಪುರುಷರ ತಂಡ, ಶೂಟೌಟ್‌ನಲ್ಲಿ ಎಡವಿತು.

ಹಾಲಿ ಚಾಂಪಿಯನ್ ಭಾರತ ಮತ್ತು ಕೊರಿಯಾ ಶೂಟೌಟ್‌ನಲ್ಲಿಯೂ ೨೯ ಸ್ಕೋರ್ ಮಾಡಿತಾದರೂ, ಅಂತಿಮವಾಗಿ ಅಳತೆ ಮಾನದಂಡದಲ್ಲಿ ಅಂದರೆ, ಬಾಣ ೧೦ರೊಳಗಡೆ ನಾಟಿಸಿದ್ದರ ಫಲವಾಗಿ ಭಾರತ ಚಿನ್ನದ ಪದಕದಿಂದ ವಂಚಿತವಾಯಿತು. ಇದಕ್ಕೂ ಮುನ್ನ ಭಾರತ ಪುರುಷರ ತಂಡ, ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಅಭಿಷೇಕ್ ವರ್ಮಾ, ರಜತ್ ಚೌಹಾಣ್ ಮತ್ತು ಅಮನ್ ಸೈನಿ ಆರಂಭಿಕ ಸೆಟ್‌ನಲ್ಲಿ ೬೦ ಪಾಯಿಂಟ್ಸ್ ಗಳಿಸಿದರೆ, ಕೊರಿಯಾ ೫೬ ಪಾಯಿಂಟ್ಸ್ ಪಡೆಯಿತು.

ಎರಡನೇ ಸೆಟ್‌ನಲ್ಲಿ ಭಾರತ ೫೪ ಸ್ಕೋರ್ ಮಾಡಿದರೆ, ಪಟ್ಟುಬಿಡದ ಕೊರಿಯಾ ಬಿಲ್ಲುಗಾರರು ಕೂಡ ಸೆಟ್ ಮುಗಿಯುವುದರೊಳಗೆ ೧೧೪-೧೧೪ ಸಮಬಲ ಸಾಧಿಸಿದರು. ಮೂರನೇ ಸೆಟ್ ಕೂಡ ಭಾರತದ ಪರವಾಗಿಯೇ ಇತ್ತು. ಈ ಹಂತದಲ್ಲಿ ಭಾರತ ೫೮-೫೬ ರಿಂದ ಮುನ್ನಡೆ ಸಾಧಿಸಿತಲ್ಲದೆ, ಎರಡು ನಿರ್ಣಾಯಕ ಪಾಯಿಂಟ್ಸ್‌ಗಳೊಂದಿಗೆ ಫೈನಲ್ ತಲುಪಿತು. ಇನ್ನು, ಅಂತಿಮ ಸೆಟ್‌ನಲ್ಲಿ ಅಭಿಷೇಕ್ ವರ್ಮಾ ಎರಡು ಬಾರಿ ೧೦ ಪಾಯಿಂಟ್ಸ್ ಗಳಿಸಿದರಾದರೂ, ತೀರ್ಪುಗಾರರು ೯ ಮತ್ತು ೧೦ ಪಾಯಿಂಟ್ಸ್‌ ನೀಡಿದರು. ಇದೊಂದು ಪಾಯಿಂಟ್ಸ್ ಭಾರತಕ್ಕೆ ನಿರ್ಣಾಯಕವೆನಿಸಿತಲ್ಲದೆ, ೨೨೯-೨೨೯ ಸಮಬಲಕ್ಕೆ ಕಾರಣವಾಯಿತು.

ಇದನ್ನೂ ಓದಿ : ಮತ್ತೊಮ್ಮೆ ಫೈನಲ್ ಸವಾಲನ್ನು ಮೆಟ್ಟಿನಿಲ್ಲದ ಸಿಂಧುಗೆ ಚಾರಿತ್ರಿಕ ರಜತ

ಇನ್ನು, ಶೂಟೌಟ್‌ನಲ್ಲಿ ಭಾರತ ೯, ೧೦, ೧೦ ಪಾಯಿಂಟ್ಸ್ ಗಳಿಸಿದರೆ, ಕೊರಿಯಾ ೧೦-೯-೧೦ ಪಾಯಿಂಟ್ಸ್ ಗಳಿಸಿ ಇಲ್ಲೂ ಸಮಬಲ ಸಾಧಿಸಿತು. ಆದರೆ, ಕೊರಿಯಾ, ಭಾರತಕ್ಕಿಂತ ಎಷ್ಟು ಬಾರಿ ೧೦ ಪಾಯಿಂಟ್ಸ್ ಗಳಿಸಿತೆಂಬ ಆಧಾರದ ಮೇರೆಗೆ ಅದಕ್ಕೆ ಚಿನ್ನದ ಪದಕ ಪ್ರಾಪ್ತಿಯಾಯಿತು. ಮೂರನೇ ಸೆಟ್ ಮುಗಿಯುವವರೆಗೂ ೧೭೩-೧೭೩ ಸಮಬಲ ಸಾಧಿಸಿದ್ದ ಇತ್ತಂಡಗಳ ಪೈಕಿ ಅಂತಿಮವಾಗಿ ಕೊರಿಯಾ ಜಯದ ನಗೆಬೀರಿತು.

ಇದಕ್ಕೂ ಮುನ್ನ ಮುಸ್ಕರ್ ಕಿರಾರ್, ಮಧುಮಿತಾ ಕುಮಾರಿ ಮತ್ತು ಸುರೇಖಾ ವೆನ್ನಮ್ ಅವರಿದ್ದ ಭಾರತ ವನಿತೆಯರ ತಂಡ ಕೊನೆಯ ನಾಲ್ಕು ಸೆಟ್‌ವರೆಗೂ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದರೂ, ಮಧುಮಿತಾ ಗಳಿಸಿದ ೮ ಪಾಯಿಂಟ್ಸ್ ಭಾರತಕ್ಕೆ ಮುಳುವಾದವು. ಫೈನಲ್ ಸೆಟ್‌ನಲ್ಲಿ ಕೊರಿಯಾ ವನಿತೆಯರ ತಂಡ ೫೮-೫೫ರಿಂದ ಗೆಲುವು ಸಾಧಿಸುವುದರೊಂದಿಗೆ ಅಂತಿಮವಾಗಿ ೨೩೧-೨೨೮ರಿಂದ ಕೊರಿಯಾ ವನಿತಾ ತಂಡ ಚಾಂಪಿಯನ್ ಆಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More