ಅಥ್ಲೆಟಿಕ್ಸ್‌ನಲ್ಲಿ ಮತ್ತೆ ಬಂಗಾರದ ಮಿನುಗು ಮೂಡಿಸಿದ ಮಂಜಿತ್ ಸಿಂಗ್

ಈ ಬಾರಿಯ ಏಷ್ಯಾಡ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತ ನಿರೀಕ್ಷೆಗೂ ಮೀರಿದ ಸಾಧನೆ ಮೆರೆದಿದ್ದು, ಜಾವೆಲಿನ್ ಪಟು ನೀರಜ್ ಚೋಪ್ರಾ ಬಳಿಕ ಮಂಜಿತ್ ಸಿಂಗ್ ಕೂಡ ಚಿನ್ನದ ಸಾಧನೆ ಮೆರೆದರು. ವಿಶೇಷ ಎಂದರೆ, ೮೦೦ ಮೀಟರ್ ಓಟದ ಸ್ಪರ್ಧೆಯ ಮೊದಲ ಎರಡೂ ಸ್ಥಾನಗಳು ಭಾರತದ ವಶವಾದವು

ಭಾರತೀಯ ಅಥ್ಲೆಟಿಕ್ಸ್ ಪಾಲಿಗೆ ಒಲಿಂಪಿಕ್ಸ್ ಬಲು ದುಬಾರಿಯಾದರೆ, ಕಾಮನ್ವೆಲ್ತ್ ಕ್ರೀಡಾಕೂಟ ಕೂಡ ದುಬಾರಿಯೇ. ಆದರೆ, ಏಷ್ಯಾಡ್‌ನಲ್ಲಿ ತಾನೂ ಸರಿಸಾಟಿ ಪ್ರದರ್ಶನ ನೀಡಬಲ್ಲೆ ಎಂಬುದನ್ನು ನೀರಜ್ ಚೋಪ್ರಾ, ಮಂಜಿತ್ ಸಿಂಗ್‌ರಂಥವರು ಸಾಬೀತುಪಡಿಸಿದ್ದಾರೆ. ಮಂಗಳವಾರ (ಆ.೨೮) ನಡೆದ ಪುರುಷರ ೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಸಿಂಗ್ ಮೊದಲ ಸ್ಥಾನ ಪಡೆದರೆ, ಜಿನ್ಸನ್ ಜಾನ್ಸನ್ ರಜತ ಪದಕ ಜಯಿಸಿದರು.

ಒಂದೇ ಕ್ರೀಡೆಯಲ್ಲಿ ಎರಡು ಪದಕಗಳನ್ನು ಜಯಿಸಿದ ಭಾರತ, ಪದಕ ಪಟ್ಟಿಯಲ್ಲಿ ಅರ್ಧಶತಕದ ಸಮೀಪ ಸಾಗಿದ್ದು ವಿಶೇಷ. ಅಥ್ಲೆಟಿಕ್ಸ್‌ನಲ್ಲಿನ ಈ ಇಬ್ಬರ ಪದಕಗಳೊಂದಿಗೆ ಭಾರತ ೪೯ನೇ ಪದಕ ಜಯಿಸಿದಂತಾಯಿತು. ದಿನದ ಆರಂಭದಲ್ಲಿ ಭಾರತ ಪುರುಷರ ಮತ್ತು ವನಿತೆಯರ ಬಿಲ್ಲುಗಾರಿಕೆ ಸ್ಪರ್ಧೆಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ರೋಚಕ ಸೋಲನುಭವಿಸಿ ರಜತ ಪದಕ ಗೆದ್ದರೆ, ವನಿತಾ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್‌ನಲ್ಲಿ ಪಿ ವಿ ಸಿಂಧು ಕೂಡ ಎರಡನೇ ಸ್ಥಾನಕ್ಕೆ ತೃಪ್ತರಾದರು.

ಇನ್ನು, ವನಿತೆಯರ ೫೨ ಕೆಜಿ ವಿಭಾಗದ ಕುರಶ್ ಸ್ಪರ್ಧೆಯಲ್ಲಿ ಪಿಂಕಿ ಬಲ್ಹಾರ ಕೂಡ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಏತನ್ಮಧ್ಯೆ, ಪುರುಷರ ಟೇಬಲ್ ಟೆನಿಸ್‌ನಲ್ಲಿ ಪುರುಷರ ತಂಡ ಕಂಚು ಗೆದ್ದರೆ, ವನಿತೆಯರ ೫೨ ಕೆಜಿ ವಿಭಾಗದಲ್ಲಿ ಮಲಪ್ರಭ ಜಾಧವ್ ಕೂಡ ಕಂಚು ಜಯಿಸಿದರು. ಇದರೊಂದಿಗೆ ಭಾರತ ೯ ಸ್ವರ್ಣ, ೧೮ ಬೆಳ್ಳಿ ಹಾಗೂ ೨೨ ಕಂಚು ಪದಕಗಳನ್ನು ಒಳಗೊಂಡಂತೆ ೪೯ ಪದಕಗಳನ್ನು ಜಯಿಸಿತು.

ಇದನ್ನೂ ಓದಿ : ಮತ್ತೊಮ್ಮೆ ಫೈನಲ್ ಸವಾಲನ್ನು ಮೆಟ್ಟಿನಿಲ್ಲದ ಸಿಂಧುಗೆ ಚಾರಿತ್ರಿಕ ರಜತ

ಹೆಮ್ಮೆಯ ಕ್ಷಣ

ಅಂದಹಾಗೆ, ೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಸಿಂಗ್ ಮತ್ತು ಜಾನ್ಸನ್ ಮೊದಲ ಎರಡು ಪದಕಗಳನ್ನು ಗೆದ್ದರು; ಆ ಮೂಲಕ ಭಾರತ, ೧೯೮೨ರ ನಂತರ ಈ ವಿಭಾಗದಲ್ಲಿ ಪದಕ ಗೆದ್ದ ಸಾಧನೆ ಮಾಡಿತು. ನಿಗದಿತ ಗುರಿಯನ್ನು ಮಂಜಿತ್ ೧:೪೬.೧೫ ಸೆ.ಗಳಲ್ಲಿ ಕ್ರಮಿಸಿದರೆ, ಜಿನ್ಸನ್ ಜಾನ್ಸನ್ ೧:೪೬.೩೫ ಸೆ.ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಜಯಿಸಿದರು. ಸೆಮಿಫೈನಲ್‌ನಲ್ಲಿ ಇದೇ ಗುರಿಯನ್ನು ೧:೪೮.೬೪ ಸೆ.ಗಳಲ್ಲಿ ಮುಟ್ಟಿ ಎಂಟನೇ ಅಥ್ಲೀಟ್ ಆಗಿ ಮಂಜಿತ್ ಫೈನಲ್ ತಲುಪಿದ್ದರು.

೮೦೦ ಮೀಟರ್ ಓಟದಲ್ಲಿ ಭಾರತ ಚಿನ್ನ ಗೆಲ್ಲಲು ೩೬ ವರ್ಷಗಳನ್ನು ತೆಗೆದುಕೊಂಡಿದೆ. ೧೯೮೨ರಲ್ಲಿ ತವರಿನಲ್ಲಿ ನಡೆದಿದ್ದ ಏಷ್ಯಾಡ್‌ನಲ್ಲಿ ಚಾರ್ಲ್ಸ್ ಬೊರೊಮಿಯೊ ಸ್ವರ್ಣ ಸಾಧಕ ಎನಿಸಿದ್ದರು. ಇನ್ನು, ಇದೇ ೮೦೦ ಮೀಟರ್ ಓಟದಲ್ಲಿ ಭೋಗೇಶ್ವರ್ ಬರುವಾ ಮತ್ತು ರಾಮಸ್ವಾಮಿ ಸುಬ್ರಹ್ಮಣ್ಯಂ ಕೂಡ ೧೯೬೬ರ ಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು.

೮೦೦ ಮೀಟರ್‌ ಓಟದಲ್ಲಿ ಭಾರತದ ಡಬಲ್ ಸಾಧನೆ

  • ೧೯೫೧: ರಂಜಿತ್ ಸಿಂಗ್ (ಚಿನ್ನ) ಮತ್ತು ಕುಲವಂತ್ ಸಿಂಗ್ (ಬೆಳ್ಳಿ)
  • ೧೯೬೨: ದಲ್ಜೀತ್ ಸಿಂಗ್ (ಬೆಳ್ಳಿ) ಮತ್ತು ಅಮೃತ್ ಪಾಲ್ (ಕಂಚು)
  • ೨೦೧೮: ಮಂಜಿತ್ ಸಿಂಗ್ (ಚಿನ್ನ) ಮತ್ತು ಜಿನ್ಸನ್ ಜಾನ್ಸನ್ (ಬೆಳ್ಳಿ)

೮೦೦ ಮೀಟರ್ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ಭಾರತೀಯರು

  • ೧೯೫೧: ರಂಜಿತ್ ಸಿಂಗ್
  • ೧೯೬೬: ಭೋಗೇಶ್ವರ್ ಬರುವಾ
  • ೧೯೭೪: ಶ್ರೀರಾಮ್ ಸಿಂಗ್
  • ೧೯೭೮: ಶ್ರೀರಾಮ್ ಸಿಂಗ್
  • ೧೯೮೨: ಚಾಲರ್ಸ್ ಬೊರೊಮಿಯೊ
  • ೨೦೧೮: ಮಂಜಿತ್ ಸಿಂಗ್
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More