ಏಷ್ಯಾಡ್ ಟೇಬಲ್ ಟೆನಿಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಪುರುಷರ ತಂಡ

ಭಾರತದ ಟೇಬಲ್ ಟೆನಿಸ್ ಪುರುಷರ ತಂಡ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿ ಚರಿತ್ರಾರ್ಹ ಸಾಧನೆ ತೋರಿದೆ. ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧದ ಸೆಮಿಫೈನಲ್ ಹಣಾಹಣಿಯಲ್ಲಿ ೩-೦ ಅಂತರದಿಂದ ವಿಜೃಂಭಿಸಿದ ಕೊರಿಯನ್ನರ ಎದುರು ಭಾರತ ತೃತೀಯ ಸ್ಥಾನಕ್ಕೆ ತೃಪ್ತವಾಯಿತು

ಸತಿಯಾನ್ ಜ್ಞಾನಶೇಖರನ್, ಅಚಂತಾ ಕಮಲ್ ಶರತ್ ಮತ್ತು ಅಮಲ್‌ರಾಜ್ ಅವರಿದ್ದ ಭಾರತ ಟೇಬಲ್ ಟೆನಿಸ್ ತಂಡ ಜಪಾನ್ ವಿರುದ್ಧದ ಗೆಲುವಿನೊಂದಿಗೆ ನಗೆಬೀರಿದರಾದರೂ, ಕೊರಿಯನ್ನರ ಎದುರಿನ ಸೋಲು ಕಂಗೆಡಿಸಿತು. ಪ್ರಚಂಡ ಪ್ರದರ್ಶನದ ನೆರವಿನೊಂದಿಗೆ ಭಾರತ ಟೇಬಲ್ ಟೆನಿಸ್ ತಂಡ ಏಷ್ಯಾ ಕ್ರೀಡಾಕೂಟದಲ್ಲಿ ಮೊಟ್ಟಮೊದಲ ಪದಕ ಜಯಿಸಿತು. ಅನುಭವಿ ಆಟಗಾರ ಅಚಂತಾ ಶರತ್ ಕಮಲ್ ಹಾಗೂ ಅಮಲ್‌ರಾಜ್ ಶಕ್ತಿಶಾಲಿ ಕೊರಿಯಾ ಆಟಗಾರರ ಎದುರು ಸೋತು ಕಂಗೆಟ್ಟಾಗ ಜ್ಞಾನಶೇಖರನ್ ತೋರಿದ ಭವ್ಯ ಪ್ರದರ್ಶನ ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ನೆರವಾಯಿತು.

ಭಾರತ ಟೇಬಲ್ ಟೆನಿಸ್ ತಂಡದ ಸೆಮಿಫೈನಲ್ ಹೋರಾಟವನ್ನು ಭಾರತ ಆರಂಭಿಸಿದ್ದು ೩೯ನೇ ಶ್ರೇಯಾಂಕಿತ ಸತಿಯಾನ್ ಮೂಲಕ. ಆದರೆ, ೧೧-೯, ೯-೧೧, ೩-೧೧, ೩-೧೧ರಿಂದ ಲೀ ಸಾಂಗ್ಸು ವಿರುದ್ಧ ಸೋಲನುಭವಿಸಿದ ಸತಿಯಾನ್, ಭಾರತಕ್ಕೆ ನಿರಾಶೆಯ ಆರಂಭ ದೊರಕಿಸಿಕೊಟ್ಟರು. ೦-೧ ಹಿನ್ನಡೆ ಅನುಭವಿಸಿದ ಭಾರತ ಎರಡನೇ ಯತ್ನದಲ್ಲೂ ಆಘಾತ ಅನುಭವಿಸಿತು.

ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತ ಶರತ್ ಕಮಲ್ ಅನುಭವ ಸಮಬಲಕ್ಕೆ ಸಹಾಯವಾಗಬಹುದು ಎಂಬ ಆಶಯವನ್ನು ವಿಶ್ವದ ಮೂವತ್ತಮೂರನೇ ಶ್ರೇಯಾಂಕಿತ ಆಟಗಾರ ಶರತ್ ಹುಸಿಗೊಳಿಸಿದರು. ಯಂಗ್ ಸಿಕ್ ಎದುರಿನ ಸೆಣಸಾಟದಲ್ಲಿ ಶರತ್ ೯-೧೧, ೯-೧೧, ೧೧-೬, ೧೧-೭, ೮-೧೧ರಿಂದ ಸೋಲನುಭವಿಸಿ ದ.ಕೊರಿಯಾಗೆ ೦-೨ ಮುನ್ನಡೆ ತಂದುಕೊಟ್ಟರು.

ಇನ್ನು, ನಿರ್ಣಾಯಕವಾದ ಪಂದ್ಯದಲ್ಲಿ ಅಮಲ್‌ರಾಜ್ ಭಾರತದ ನೆರವಿಗೆ ಧಾವಿಸುವರೆಂಬ ಕನವರಿಕೆ ಕೂಡಾ ಕೈಕೊಟ್ಟಿತು. ಹೆಜ್ಜೆ ಹೆಜ್ಜೆಗೂ ಚಡಪಡಿಕೆಯಿಂದ ಕೂಡಿದ್ದ ಈ ಪಂದ್ಯದಲ್ಲಿಯೂ ಭಾರತ ಸೋಲನುಭವಿಸಿತು. ಈ ಬಾರಿ ವೂಜಿನ್ ಜಾಂಗ್ ಎದುರು ಅಮಲ್‌ರಾಜ್ ೫-೧೧, ೭-೧೧, ೧೧-೪, ೭-೧೧ರಿಂದ ಸೋಲನುಭವಿಸಿದರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಜಪಾನ್ ವಿರುದ್ಧ ಭಾರತ ೩-೧ರಿಂದ ಗೆಲುವು ಸಾಧಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More