ಅರ್ಧಶತಕದೊಂದಿಗೆ ಏಷ್ಯಾಡ್‌ನಲ್ಲಿ ಹತ್ತನೇ ದಿನದ ಹೋರಾಟ ಮುಗಿಸಿದ ಭಾರತ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಹದಿನೆಂಟನೇ ಏಷ್ಯಾ ಕ್ರೀಡಾಕೂಟದ ಹತ್ತನೇ ದಿನದ ಹೋರಾಟವನ್ನು ಭಾರತ ಬರೋಬ್ಬರಿ ೫೦ನೇ ಪದಕದೊಂದಿಗೆ ಮುಗಿಸಿತು! ಕನ್ನಡತಿ ಪೂವಮ್ಮ ಇದ್ದ ರಿಲೇ ತಂಡ ಬೆಳ್ಳಿಗೆ ಮುದ್ದಿಡುವ ಮುನ್ನ ಮಂಜಿತ್ ಸಿಂಗ್ ಚಿನ್ನ ಗೆದ್ದುಕೊಟ್ಟರು

ದಕನ್ನಡತಿ ಪೂವಮ್ಮ ಮತ್ತೊಮ್ಮೆ ಏಷ್ಯಾಡ್ ಪದಕದೊಂದಿಗೆ ನಗೆಬೀರಿದರು. ಮಂಗಳವಾರ (ಆ.೨೮) ನಡೆದ ಮಿಶ್ರ ೪/೪೦೦ ಮೀಟರ್ ಓಟದ ರಿಲೇ ವಿಭಾಗದಲ್ಲಿ ಭಾರತ ತಂಡ ಎರಡನೇ ಸ್ಥಾನ ಗಳಿಸಿತು. ಮುಹಮದ್ ಅನಾಸ್, ಎಂ ಆರ್ ಪೂವಮ್ಮ, ಹಿಮಾ ದಾಸ್ ಹಾಗೂ ರಾಜೀವ್ ಆರೋಕ್ಯ ಅವರಿದ್ದ ರಿಲೇ ತಂಡ ಬೆಳ್ಳಿ ಪದಕ ಜಯಿಸಿದರು.

ಇನ್ನುಳಿದಂತೆ ಈ ವಿಭಾಗದಲ್ಲಿ ಬಹ್ರೇನ್ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಇದೇ ಮೊದಲ ಬಾರಿಗೆ ಮಿಶ್ರ ಟೀಂ ರಿಲೇಯಲ್ಲಿ ಭಾರತ ಎರಡನೇ ಸ್ಥಾನ ಗಳಿಸಿದ್ದು ಕೂಡಾ ಗಮನಾರ್ಹ. ಪುರುಷರ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ಅಥ್ಲೆಟಿಕ್ಸ್ ವಿಭಾಗದ ಸ್ಪರ್ಧೆಗೆ ಭರ್ಜರಿ ಮುನ್ನುಡಿ ಬರೆದಿದ್ದ ಅನಾಸ್, ನಿರೀಕ್ಷೆಯಂತೆಯೇ ಮಿಂಚಿನ ಓಟ ಆರಂಭಿಸಿದರು. ಆದರೆ, ಕನ್ನಡತಿ ಎಂ ಆರ್ ಪೂವಮ್ಮ, ಮುನ್ನಡೆಯಲ್ಲಿದ್ದ ಒಲುವಾಕೇಮಿ ಅಡಿಕೊಯಾ ಅವರನ್ನು ಹಿಂದಿಕ್ಕಬೇಕಿತ್ತು. ಅದರಂತೆ ಪೂವಮ್ಮ ಮುನ್ನಡೆ ಪಡೆದರು ಕೂಡಾ.

ಇದನ್ನೂ ಓದಿ : ಏಷ್ಯಾಡ್ ಕುರಶ್‌ನಲ್ಲಿ ಬೆಳ್ಳಿ ಜೊತೆ ಕಂಚಿನ ಪದಕ ತಂದಿತ್ತ ಪಿಂಕಿ, ಯಲ್ಲಪ್ಪ

ಆದರೆ, ಬಹ್ರೇನಿ ರನ್ನರ್ ಕೊನೇ ಹಂತದಲ್ಲಿ ಪೂವಮ್ಮ ಅವರನ್ನು ಹಿಂದಿಕ್ಕಿದ್ದಲ್ಲದೆ, ೪೦೦ ಮೀಟರ್ ಚಾಂಪಿಯನ್ ಸಲ್ವಾ ನಾಸೆರ್ ಅವರ ಕೈಗೆ ಬೇಟನ್ ಇಟ್ಟರು. ಭಾರತದ ಪರ ಮೂರನೇ ಓಟಗಾರ್ತಿ ಹಿಮಾ ದಾಸ್. ಹಿಮಾ ಮತ್ತು ಸಲ್ವಾ ನಡುವಣದ ರೇಸ್ ಕೂಡಾ ಮನೋಜ್ಞವಾಗಿತ್ತು. ೪೦೦ ಮೀಟರ್ ಚಾಂಪಿಯನ್ನರ ನಡುವಿನ ಈ ಓಟ ನೋಡುಗರನ್ನು ರೋಮಾಂಚನಗೊಳಿಸಿತು.

ಕೂಟದ ಹತ್ತನೇ ದಿನದಂದು ಒಂದು ಸ್ವರ್ಣ ಸೇರಿದ ಆರು ಪದಕಗಳನ್ನು ಜಯಿಸಿದ ಭಾರತ, ಆ ಮೂಲಕ ಪದಕ ಪಟ್ಟಿಯಲ್ಲಿ ಅರ್ಧಶತಕ ಬಾರಿಸಿತು. ಹತ್ತನೇ ದಿನದಾಟ ಮುಗಿದಾಗ ಭಾರತ ೯ ಸ್ವರ್ಣ, ೧೯ ಬೆಳ್ಳಿ ಹಾಗೂ ೨೨ ಕಂಚಿನ ಪದಕಗಳನ್ನು ಸೇರಿದ ೫೦ ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ನಾಸರ್ ತಮ್ಮ ತಂಡ ಕೊನೇ ರನ್ನರ್‌ಗೆ ಬೇಟನ್ ಅನ್ನು ಹಸ್ತಾಂತರಿಸುತ್ತಿದ್ದಂತೆ, ರಾಜೀವ್ ಆರೋಕ್ಯ ಅವರತ್ತ ಹಿಮಾ ದೌಡಾಯಿಸಿದರು. ಇತ್ತ, ರಾಜೀವ್ ಕೊಂಚ ಅಂತರದಲ್ಲಿ ಬಹ್ರೇನ್ ಓಟಗಾರನನ್ನು ಹಿಂದಿಕ್ಕಲು ವಿಫಲವಾಗಿ ಎರಡನೇ ಸ್ಥಾನಕ್ಕೆ ಕುಸಿದರು. ಅಂತಿಮವಾಗಿ, ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More