ಪಾಕ್ ಜೊತೆಗೆ ಬಂಗಾರದ ಬೆಸುಗೆ ಹಾಕಿದ ಗೋಲ್ಡನ್ ಬಾಯ್ ಚೋಪ್ರಾ

ಕೆಲವು ದುರುಳರ ಕಾರಣಕ್ಕೆ ದ್ವೇಷ-ರೋಷಗಳ ವೈಷಮ್ಯ ಬಿಟ್ಟೂಬಿಡದೆ ಕಾಡುತ್ತಿರುವ ಇಂಡೋ-ಪಾಕ್ ಮತ್ತೊಮ್ಮೆ ಗೆಳೆತನದಲ್ಲಿ ನಲಿಯಲು ಕ್ರೀಡೆ ಬಹುಮುಖ್ಯ ಎಂಬುದು ಇನ್ನೊಮ್ಮೆ ಮಾರ್ದನಿಸಿದೆ. ಏಷ್ಯಾಡ್‌ ಜಾವೆಲಿನ್ ಎಸೆತದಲ್ಲಿ ಬಂಗಾರ-ಕಂಚಿನ ಜೋಡಿ ಕಾಣಿಸಿಕೊಂಡ ಕ್ಷಣವಿದು

ಈಚೆಗೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಇಮ್ರಾನ್ ಖಾನ್ ತಮ್ಮ ಕ್ರಿಕೆಟ್ ಕಾಲದ ಭಾರತೀಯ ಗೆಳೆಯ ನವಜೋತ್ ಸಿಂಗ್ ಸಿಧುವನ್ನು ಆಮಂತ್ರಿಸಿದ್ದರು. ಆಮಂತ್ರಣ ಸ್ವೀಕರಿಸಿದ ಸಿಧು, ಇಮ್ರಾನ್ ಪದಗ್ರಹಣಕ್ಕೆ ಖುದ್ದು ಸಾಕ್ಷಿಯಾದದ್ದು ಮಾತ್ರವಲ್ಲ, ಆ ದೇಶದ ಸೇನಾ ಮುಖ್ಯಸ್ಥರನ್ನು ಅಪ್ಪಿದ್ದಕ್ಕೆ ಬಹುದೊಡ್ಡ ಆಕ್ಷೇಪ ಕೇಳಿಬಂದಿತ್ತು. ಕೆಲವರು ಅವರ ತಲೆಗೂ ಇಂತಿಷ್ಟು ಮೊತ್ತ ಎಂದು ಘೋಷಿಸಿಯೂಬಿಟ್ಟರು!

ಇಮ್ರಾನ್ ಹಾಗೂ ಸಿಧು ರಾಜಕೀಯಕ್ಕೆ ಇಳಿಯುವ ಮುನ್ನ ಅಪ್ಪಟ ಕ್ರಿಕೆಟಿಗರಾಗಿದ್ದವರು. ಇಬ್ಬರಲ್ಲೂ ತಂತಮ್ಮ ತಂಡಗಳನ್ನು, ಅದಕ್ಕೂ ಮಿಗಿಲಾಗಿ ತಮ್ಮ ದೇಶಗಳನ್ನು ಗೆಲ್ಲಿಸಬೇಕೆಂಬ ಹಂಬಲ ಇದ್ದುದು ಸಾಮಾನ್ಯವಾಗಿತ್ತು. ಕ್ರಿಕೆಟ್ ಬದುಕಿನ ನಂತರದಲ್ಲಿ ಇಬ್ಬರ ಹಾದಿ ರಾಜಕೀಯವಾಗಿ ಕವಲೊಡೆದಿತ್ತು. ಹೇಳಿಕೇಳಿ ಇಮ್ರಾನ್ ಎಂಬ ಅಸಾಮಾನ್ಯ ಮಹತ್ವಾಕಾಂಕ್ಷಿ ಹಿಡಿದ ಪಟ್ಟನ್ನು ಸಡಿಲಿಸದೆ ಅಂದುಕೊಂಡದ್ದನ್ನು ಸಾಧಿಸಿ ಪ್ರಧಾನಿ ಗದ್ದುಗೆಗೇರಿದ್ದಾರೆ.

ಸಿಧು ಜೊತೆಗೆ ಭಾರತ ತಂಡದ ಆಗಿನ ನಾಯಕ ಸುನೀಲ್ ಗವಾಸ್ಕರ್ ಅವರನ್ನೂ ಇಮ್ರಾನ್ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದರು. ಆದರೆ, ಗವಾಸ್ಕರ್ ಈ ಆಹ್ವಾನವನ್ನು ತಿರಸ್ಕರಿಸಿದರೆ, ಸಿಧು ಮಾತ್ರ ಪಾಕ್‌ಗೆ ತೆರಳಿದ್ದರು. ಇಲ್ಲಿ, ಗವಾಸ್ಕರ್ ಪಾಕ್ ತಂಡದ ಮಾಜಿ ನಾಯಕನ ಆಹ್ವಾನವನ್ನು ತಿರಸ್ಕರಿಸಲು ಅವರದೇ ಆದ ಕಾರಣಗಳಿವೆ. ಆ ಕಾರಣಗಳನ್ನು ನಾನಾ ಬಗೆಯಲ್ಲಿಯೂ ಅರ್ಥೈಸಲೂಬಹುದು. ಅದೇನೇ ಇರಲಿ, ಸಿಧು ಪಾಕ್‌ಗೆ ತೆರಳಿದ್ದಕ್ಕಿಂತಲೂ ಅವರು ಅಲ್ಲಿ ನಡೆದುಕೊಂಡ ನಡೆ ಕೆಲವರನ್ನು ಕೆರಳಿಸಿದೆ. ತಮ್ಮನ್ನು ವಿರೋಧಿಸುತ್ತಿರುವವರಿಗೆ ಸೂಕ್ತ ಸಂದರ್ಭದಲ್ಲಿ ಉತ್ತರಿಸುವುದಾಗಿ ಸಿಧು ಹೇಳಿದ್ದಾರೆ ಕೂಡ.

ಮೇಲಿನ ಇಷ್ಟೆಲ್ಲ ಪೀಠಿಕೆಗೆ ಆಸ್ಪದ ಕಲ್ಪಿಸಿದ್ದು ಮೂರು ದಿನಗಳ ಹಿಂದಷ್ಟೇ ಹದಿನೆಂಟನೇ ಏಷ್ಯಾಡ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ನಡೆದುಕೊಂಡ ಬಗೆ. ಕೇವಲ ೨೦ರ ಹರೆಯದ ಚೋಪ್ರಾ, ತನ್ನ ಅಸಾಮಾನ್ಯ ಕ್ರೀಡಾ ಸಾಧನೆಯಿಂದ ಭಾರತೀಯ ಅಥ್ಲೆಟಿಕ್ಸ್‌ ಅನ್ನು ಬೆಳಗಿಸುವುದರ ಜೊತೆಗೆ ದೇಶ-ದೇಶಗಳ ನಡುವೆ ಪ್ರೀತಿಯ ಪಸೆಯನ್ನೂ ಪಸರಿಸಿದ್ದು ಇಂಡೋ-ಪಾಕ್ ಗೆಳೆತನಕ್ಕಾಗಿ ಹಂಬಲಿಸುವ ಮನಗಳಲ್ಲಿ ತಂಪೆರೆದಿದೆ.

ಏಷ್ಯಾ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಏಕೈಕ ಜಾವೆಲಿನ್ ಪಟು ಎನಿಸಿರುವ ನೀರಜ್, ಸೋಮವಾರ (ಆ.೨೭) ನಡೆದ ಜಾವೆಲಿನ್ ಎಸೆತದಲ್ಲಿ ಕಂಚು ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರೊಂದಿಗೆ ಪದಕ ವೇದಿಕೆಯಲ್ಲಿ ಸ್ನೇಹ ಸೌರಭ ಬೀರಿದ್ದು ಎಲ್ಲರಿಂದಲೂ ಅಭಿನಂದನೆಗೆ ಪಾತ್ರವಾಗಿದೆ. ೮೮.೦೬ ಮೀಟರ್ ಸಾಧನೆಯಿಂದ ತನ್ನದೇ ದಾಖಲೆಯನ್ನು ಅಳಿಸಿದ್ದ ನೀರಜ್, ಕಿರಿಯ ವಯಸ್ಸಿನಲ್ಲೇ ತೋರಿರುವ ಈ ಪ್ರಬುದ್ಧ ನಡೆಯಿಂದ ನಮ್ಮಗಳ ಪಾಲಿಗೆ ‘ಹೀರೋ’ಗಳಾಗಿಯೇ ಹೋಗಿರುವ ಕ್ರಿಕೆಟಿಗರು ಪಾಠ ಕಲಿಯುವಂತೆ ಮಾಡಿದ್ದಾರೆ.

ಸಾನಿಯಾ ಸಾರಿದ ಸಂದೇಶ

ಪದಕ ವೇದಿಕೆಯಲ್ಲಿ ಅರ್ಷದ್ ಜೊತೆಗೆ ಸ್ನೇಹದ ಮಾತುಗಳನ್ನಾಡುತ್ತಿದ್ದ ನೀರಜ್ ಅವರ ಈ ಅಪರೂಪದ ನಡೆಯನ್ನು ಮೊದಲಿಗೆ ಗಮನಿಸಿದ್ದು ಟೆನಿಸ್ ತಾರೆ ಸಾನಿಯಾ ಮಿರ್ಜಾ. ಒಡನೆಯೇ ಆಕೆ ಈ ಅನುಕರಣೀಯ ನಡೆಗೆ ಮಾರುಹೋಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಜಗತ್ತಿಗೆ ಸಾರಿದರು. “ನಿಮ್ಮ ಮಕ್ಕಳಿಗೆ ನೀವು ಕೊಡಬಹುದಾದ ಅತ್ಯುತ್ತಮ ಶಿಕ್ಷಣ ಎಂದರೆ ಅದು ಕ್ರೀಡೆ ಎಂದು ನಾನು ಪದೇಪದೇ ಹೇಳಲು ಕಾರಣವೇನು ಎಂಬುದು ಈಗ ನಿಮಗೆ ಮನದಟ್ಟಾಗಿರಬಹುದು. ಕ್ರೀಡಾ ಮನೋಭಾವವು ಸಮಾನತೆ, ಪರಸ್ಪರ ಗೌರವ, ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಮಾನವೀಯ ಮೌಲ್ಯಗಳಿಗೆ ರಹದಾರಿಯಾಗಿದೆ. ನಾವುಗಳು ಹೇಗಿರಬೇಕೆಂದು ಈ ಚಾಂಪಿಯನ್ನರು ತಿಳಿಸಿಕೊಟ್ಟಿದ್ದಾರೆ. ಭಾರತಕ್ಕೆ ಚಿನ್ನ ತಂದಿತ್ತ ನೀರಜ್ ಚೋಪ್ರಾ ವೆಲ್‌ಡನ್!’’ ಎಂದು ಸಾನಿಯಾ ಟ್ವೀಟ್ ಮಾಡಿದ್ದರು.

ಪಾಕ್ ಪರ ಜಾವೆಲಿನ್ ಎಸೆತದಲ್ಲಿ ೮೦.೭೫ ಮೀಟರ್ ಸಾಧನೆಯಿಂದ ಕಂಚು ಗೆದ್ದ ನದೀಮ್ ಕೂಡ ತಮ್ಮ ಗೆಳೆಯ ನೀರಜ್ ಅವರನ್ನು ಕೊಂಡಾಡಿದರು. “ನೀರಜ್ ಒಬ್ಬ ಅಪ್ರತಿಮ ಮತ್ತು ಅಸಾಮಾನ್ಯ ಅಥ್ಲೀಟ್. ಭಾರತದಲ್ಲಿ ಸ್ಯಾಫ್ ಚಾಂಪಿಯನ್‌ಶಿಪ್ ಮತ್ತು ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್ ಸೇರಿ ಅವರೊಂದಿಗೆ ನಾನು ಎಂಟು ಬಾರಿ ಪ್ರಮುಖ ಕೂಟಗಳಲ್ಲಿ ಸ್ಪರ್ಧಿಸಿದ್ದೇನೆ. ನೀರಜ್‌ಗೆ ವಿದೇಶಿ ಕೋಚ್ ಇದ್ದರೆ, ನನಗೆ ಆ ಭಾಗ್ಯ ಇಲ್ಲ. ಇಷ್ಟಾದರೂ ನೀರಜ್ ಅವರೇ ನನಗೆ ಸ್ಫೂರ್ತಿಯಾಗಿದ್ದಾರೆ. ಒಂದಲ್ಲ ಒಂದು ದಿನ ಅವರ ಸಾಧನೆಯನ್ನು ನಾನು ಮೀರಿ ನಿಲ್ಲಬೇಕು ಎನಿಸುವಷ್ಟರಮಟ್ಟಿಗೆ ಅವರು ನನ್ನನ್ನು ಆವರಿಸಿದ್ದಾರೆ,’’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ನದೀಮ್ ಹೇಳಿಕೊಂಡಿದ್ದಾರೆ.

ನಿಂತುಹೋದ ವಾಟ್ಸಾಪ್ ಮಾತು!

“ನನ್ನ ವಾಟ್ಸಾಪ್ ಸಂದೇಶಗಳಿಗೆ ನೀರಜ್ ಪ್ರತಿಕ್ರಿಯಿಸುತ್ತಿದ್ದರು. ಒಂದೆರಡು ಬಾರಿ ವಾಟ್ಸಪ್ ಸಂದೇಶಗಳ ವಿನಿಮಯದ ನಂತರ ಅದೂ ನಿಂತುಹೋಯಿತು. ಇದಕ್ಕೆ ಕಾರಣ ಏನೆಂಬುದು ನನಗೆ ತಿಳಿಯಲಿಲ್ಲ. ಬಹುಶಃ ಅವರಿಗೆ ಬಿಡುವಿಲ್ಲದಿರಬಹುದು ಎಂದು ನಾನು ಭಾವಿಸಿದೆ. ಆನಂತರ ಟೂರ್ನಿಗಳಲ್ಲಷ್ಟೇ ಅವರನ್ನು ಸಂಧಿಸುತ್ತಿದ್ದೆ. ಅತ್ಯುತ್ಕೃಷ್ಟ ತಾಂತ್ರಿಕ ಸವಲತ್ತು ಹಾಗೂ ತರಬೇತಿ ಪಡೆಯುತ್ತಿರುವ ನೀರಜ್ ಪ್ರದರ್ಶನ ಅಷ್ಟೇ ಚೇತೋಹಾರಿಯಾಗಿದೆ. ಭಾರತ ಸರ್ಕಾರದ ಪೂರ್ಣ ಸಹಕಾರವೂ ಅವರ ಸಾಧನೆಯಲ್ಲಿ ಮಿಳಿತವಾಗಿದೆ. ಆದರೆ, ನನ್ನ ವಿಷಯದಲ್ಲಿ ಹೇಳುವುದಾದರೆ, ವಿದೇಶದಲ್ಲಿ ನಾನೆಂದೂ ತರಬೇತಿ ಪಡೆದವನಲ್ಲ. ಬಹುಶಃ ಇದುವೇ ನೀರಜ್ ಮತ್ತು ನನ್ನ ನಡುವಿನ ಕ್ರೀಡಾಂತರಕ್ಕೆ ಬಹುದೊಡ್ಡ ಕಾರಣವಿರಬಹುದು,’’ ಎಂತಲೂ ನದೀಮ್ ತಿಳಿಸಿದ್ದರು.

“ನಿಜವಾಗಿಯೂ ಇದೊಂದು ಸ್ಮರಣೀಯ ಪ್ರವಾಸ. ಲಾಹೋರ್‌ನಿಂದ ಅಮೃತ್‌ಸರ್‌ಗೆ ರಸ್ತೆ ಮಾರ್ಗವಾಗಿಯೇ ನಾವು ಬಂದೆವು. ಆಪ್ ಲೋಗ್ ಬಡೀ ಖಾತಿರ್/ ಇಜಾತ್ ಕರ್ತೆ ಹೋ (ಅತಿಥಿ ಅಭ್ಯಾಗತರನ್ನು ಹೇಗೆ ಸತ್ಕರಿಸಬೇಕೆಂಬುದನ್ನು ನಿಮ್ಮಿಂದ ಕಲಿಯಬೇಕು) ಭಾರತದಲ್ಲಿ ಮತ್ತೊಮ್ಮೆ ಸ್ಪರ್ಧಿಸಬಯಸುತ್ತೇನೆ,’’ ಎಂದು ಸ್ಯಾಫ್ ಮತ್ತು ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ಗಾಗಿ ಭಾರತ ಪ್ರವಾಸ ಕೈಗೊಂಡದ್ದರ ಕ್ಷಣಗಳ ಕುರಿತು ಹಾಗೂ ಮತ್ತೊಮ್ಮೆ ಭಾರತ ಪ್ರವಾಸಕ್ಕೆ ತುಡಿಯುತ್ತಿರುವ ಕುರಿತು ಮನದಾಸೆ ತೋಡಿಕೊಂಡಿದ್ದಾರೆ.

ಒಲಿಂಪಿಕ್ಸ್ ಆಗಲೀ, ಕಾಮನ್ವೆಲ್ತ್ ಕ್ರೀಡಾಕೂಟವಾಗಲೀ, ಇಲ್ಲವೇ ಪ್ರಸಕ್ತ ನಡೆಯುತ್ತಿರುವ ಏಷ್ಯಾಡ್ ಆಗಲೀ, ಎಲ್ಲವೂ ಮನುಕುಲವನ್ನು ಸ್ನೇಹ ಸೇತುವಿನಲ್ಲಿ ಬೆಸೆಯುವುದಕ್ಕೆ ಹುಟ್ಟಿಕೊಂಡ ಕ್ರೀಡಾಕೂಟಗಳು. ದ್ವಿಪಕ್ಷೀಯ ಕ್ರೀಡಾ ಸರಣಿಗಳಿಗಿಂತಲೂ ಮಿಗಿಲಾಗಿ ಈ ಮಹಾನ್ ಕ್ರೀಡಾಕೂಟಗಳು ಯಾವ ಅಥ್ಲೀಟ್‌ನನ್ನೂ ದೇಶ-ದೇಶಗಳ ನಡುವಣದ ವೈಷಮ್ಯದಿಂದ ನಿರ್ಬಂಧಿಸುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಬದ್ಧವೈರಿಗಳಾಗಿದ್ದ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ, ಈ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಒಂದೇ ಧ್ವಜದಡಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದು.

ಕೊನೆಯದಾಗಿ, ಅಥ್ಲೆಟಿಕ್ಸ್, ಹಾಕಿ ಮುಂತಾದ ಯಾವುದೇ ಕ್ರೀಡೆಯಿರಲಿ, ಭಾರತ ಮತ್ತು ಪಾಕಿಸ್ತಾನವನ್ನು ಕ್ರೀಡೆಯಲ್ಲಿ ಅತ್ಯಂತ ಭಾವನಾತ್ಮಕವಾಗಿ ಬೆಸೆಯುವಲ್ಲಿ ಕ್ರಿಕೆಟ್ ವಹಿಸುವ ಪಾತ್ರ ಅತಿ ಮಹತ್ವದ್ದೆನಿಸಿಕೊಳ್ಳುತ್ತದೆ. ಸದ್ಯ, ಕ್ರಿಕೆಟ್ ವಿಶ್ವಕಪ್ ವಿಜೇತನೇ ಈಗ ಪಾಕಿಸ್ತಾನವನ್ನು ಮುನ್ನಡೆಸುತ್ತಿದ್ದು, ಗ್ರಹಣಗೊಂಡಿರುವ ಭಾರತದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಮರುಸ್ಥಾಪಿಸುವಲ್ಲಿ ಅವರು ಹೇಗೆ ಹೆಜ್ಜೆ ಇಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಇತ್ತ, ಐಪಿಎಲ್‌ನಂಥ ಲೀಗ್‌ನಲ್ಲೂ ಇಡೀ ವಿಶ್ವದ ಆಟಗಾರರನ್ನು ಕರೆತಂದು ಆಡಿಸುವ ಬಿಸಿಸಿಐ, ವೈಷಮ್ಯವನ್ನೇ ದೊಡ್ಡದು ಮಾಡಿಕೊಂಡು ಪಾಕ್ ಆಟಗಾರರನ್ನು ಮಾತ್ರ ಅಸ್ಪೃಶ್ಯರಂತೆ ದೂರ ಇಟ್ಟಿರುವುದರ ಹಿಂದೆ ಸದುದ್ದೇಶ ಇಲ್ಲವೇ ಕ್ರೀಡಾಸ್ಫೂರ್ತಿ ಇದ್ದಂತೆ ಕಾಣುವುದಿಲ್ಲ. ಇವೆಲ್ಲದರ ಮಧ್ಯೆಯೂ, ನೀರಜ್-ನದೀಮ್‌ ಗೆಳೆತನ ಮುಂದುವರಿಯಲಿ. ಜೊತೆಗೆ, ಇಂಡೋ-ಪಾಕ್ ಗೆಳೆತನ ಕೂಡ ಬಿರುಕು ಬಿಡದಂತೆ ಬೆಸೆದುಹೋಗಲಿ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More