ಹಲವು ದಾಖಲೆಗಳ ಪುಡಿಗಟ್ಟಿ ಬಂಗಾರ ಬಾಚಿದ ಸ್ಪ್ರಿಂಟರ್ ಜಿನ್ಸನ್ ಜಾನ್ಸನ್

೮೦೦ ಮೀಟರ್ ಓಟದಲ್ಲಿಯೇ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ಜಿನ್ಸನ್ ಜಾನ್ಸನ್ ೧೫೦೦ ಮೀಟರ್ ಓಟದಲ್ಲಿ ಬಂಗಾರ ಬಾಚಿದರು. ಹದಿನೆಂಟನೇ ಏಷ್ಯಾಡ್‌ನ ಹನ್ನೆರಡನೇ ದಿನದಂದು ಜಿನ್ಸನ್ ಬಂಗಾರ ಗೆದ್ದರೆ, ಸೀಮಾ ಪುನಿಯಾ ಮತ್ತು ಚಿತ್ರಾ ಉನ್ನಿಕೃಷ್ಣನ್ ಕಂಚಿನ ಪದಕ ಜಯಿಸಿದರು

ಭಾರತದ ಅಥ್ಲೆಟಿಕ್ಸ್ ಮತ್ತೆ ಮಿನುಗಿತು. ಜಿನ್ಸನ್ ಜಾನ್ಸನ್ ಗಳಿಸಿದ ಚಿನ್ನದ ಪದಕದೊಂದಿಗೆ ಪ್ರಸ್ತುತ ಏಷ್ಯಾಡ್‌ನಲ್ಲಿ ಭಾರತಕ್ಕೆ ಸಿಕ್ಕ ಆರನೇ ಚಿನ್ನದ ಪದಕವಿದು. ೮೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತವಾಗಿದ್ದ ಜಿನ್ಸನ್ ಜಾನ್ಸನ್, ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು. ವಾಸ್ತವವಾಗಿ, ೮೦೦ ಮೀಟರ್ ಓಟದಲ್ಲೇ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ಜಾನ್ಸನ್, ಕೊನೇ ಕ್ಷಣದಲ್ಲಿ ಸಹ ಓಟಗಾರ ಮಂಜಿತ್ ಸಿಂಗ್ ಅವರಿಂದ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಇದೀಗ 1,500 ಮೀಟರ್ ಗುರಿಯನ್ನು ೩:೪೪.೭೨ ಸೆ.ಗಳಲ್ಲಿ ಕ್ರಮಿಸಿದ ಜಾನ್ಸನ್, ಬಂಗಾರದ ನಗೆಬೀರಿದರು. ಇತ್ತ, ಇದೇ ವಿಭಾಗದಲ್ಲಿ ಕಣದಲ್ಲಿದ್ದ ಮಂಜಿತ್ ಸಿಂಗ್ ೩:೪೬.೫೭ ಸೆ.ಗಳಲ್ಲಿ ಗುರಿ ಮುಟ್ಟಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ೮೦೦ ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಮಂಜಿತ್, ಗುರುವಾರದ ಓಟದ ಸ್ಪರ್ಧೆಯಲ್ಲಿ ವೈಫಲ್ಯ ಅನುಭವಿಸಿದರು.

ಇನ್ನುಳಿದಂತೆ ಈ ವಿಭಾಗದಲ್ಲಿ ಅಮೀರ್ ಮೊರಾಡಿ ೩:೪೫.೬೨ ಸೆ.ಗಳಲ್ಲಿ ನಿಗದಿತ ದೂರ ಕ್ರಮಿಸಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಸಂಪಾದಿಸಿದರು. ಈ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದದ್ದು ಬಹ್ರೇನ್‌ನ ಮೊಹಮದ್ ಟಿಯೌಲಿ. ೩:೪೫.೮೮ ಸೆ.ಗಳಲ್ಲಿ ಗಮ್ಯ ಸ್ಥಾನ ತಲುಪಿದ ಬಹ್ರೇನ್‌ನ ಓಟಗಾರ ಕಂಚಿನ ಪದಕ ಜಯಿಸಿದರು.

ಜಿನ್ಸನ್ ಜಾನ್ಸನ್ ಮತ್ತು ಮಹಿಳಾ ರಿಲೇ ತಂಡ ಒಂದರ ಹಿಂದೊಂದರಂತೆ ಗೆದ್ದ ಎರಡು ಬಂಗಾರದ ಪದಕಗಳೊಂದಿಗೆ ಭಾರತ ಕೂಟದಲ್ಲಿ ೧೩ನೇ ಚಿನ್ನದ ಪದಕ ಜಯಿಸಿತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಒಟ್ಟು ಹದಿಮೂರು ಚಿನ್ನ, ೨೦ ಬೆಳ್ಳಿ ಹಾಗೂ ೨೫ ಕಂಚು ಸೇರಿದ ಒಟ್ಟು ೫೮ ಪದಕಗಳನ್ನು ತನ್ನದಾಗಿಸಿಕೊಂಡಿತಲ್ಲದೆ, ೮ನೇ ಸ್ಥಾನ ಕಾಯ್ದುಕೊಂಡಿತು.

ಇದನ್ನೂ ಓದಿ : ಅರ್ಪೀಂದರ್, ಸ್ವಪ್ನ ಬರ್ಮನ್ ಜೊತೆಗೆ ಕಂಚಿನಿಂದ ಚಿನ್ನಕ್ಕೆ ಜಿಗಿದ ಭಾರತ

೨೦೧೮ರಲ್ಲಿ ಜಿನ್ಸನ್ ಸಾಧನೆ

  • ಕಾಮನ್ವೆಲ್ತ್ ಕ್ರೀಡಾಕೂಟದ ೮೦೦ ಮೀಟರ್ ಓಟದಲ್ಲಿ ೧೯೭೬ರಲ್ಲಿ ಬರೆದಿದ್ದ ಶ್ರೀರಾಮ್ ಸಿಂಗ್ ರಾಷ್ಟ್ರೀಯ ದಾಖಲೆ ಹತ್ತಿಕ್ಕಿದ ಜಾನ್ಸನ್
  • ೧೫೦೦ ಮೀಟರ್ ಓಟದ ಅಂತಾರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ೧೯೯೫ರಲ್ಲಿ ಬಹಾದೂರ್ ಪ್ರಸಾದ್ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ ಪುನಾರಚನೆ
  • ಹದಿನೆಂಟನೇ ಏಷ್ಯಾಡ್‌ನಲ್ಲಿನ ೮೦೦ ಮೀಟರ್ ಓಟದಲ್ಲಿ ರಜತ
  • ೧೫೦೦ ಮೀಟರ್ ಓಟದಲ್ಲಿ ಚಿನ್ನ

ಚಿತ್ರಾಗೆ ಮೊದಲ ಏಷ್ಯಾಡ್ ಪದಕ

ಇನ್ನು, ೧,೫೦೦ ಮೀಟರ್ ಓಟದ ಮಹಿಳಾ ವಿಭಾಗದಲ್ಲಿ ಚಿತ್ರಾ ಉನ್ನಿಕೃಷ್ಣನ್ ಏಷ್ಯಾಡ್‌ನಲ್ಲಿ ಮೊಟ್ಟಮೊದಲ ಪದಕ ಪಡೆದರು. ೨೩ರ ಹರೆಯದ ಚಿತ್ರಾ, ನಿಗದಿತ ದೂರವನ್ನು ೪ ನಿಮಿಷ ೧೨.೫೬ ಸೆ.ಗಳಲ್ಲಿ ಕ್ರಮಿಸಿ ಮೂರನೇ ಸ್ಥಾನ ಗಳಿಸಿದರು. ಬಹ್ರೇನ್‌ನ ಕಲ್ಕಿದಾನ್ ಬೆಫ್ಕಡು ೪:೦೭.೮೮ ಸೆ.ಗಳಲ್ಲಿ ಚಿನ್ನದ ಪದಕ ಗೆದ್ದರೆ, ಸಹ ಓಟಗಾರ್ತಿ ಟೈಜಿಸ್ಟ್ ಬಿಲೆ ೪:೦೯.೧೨ ಸೆ.ಗಳಲ್ಲಿ ಬೆಳ್ಳಿ ಪದಕ ಜಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More