ಹಾಲಿ ಚಾಂಪಿಯನ್ ಭಾರತದ ಕೈಯಿಂದ ಬಂಗಾರ ಕಿತ್ತುಕೊಂಡ ಮಲೇಷ್ಯಾ!

ಅಭೂತಪೂರ್ವ ಪ್ರದರ್ಶನದೊಂದಿಗೆ ಏಷ್ಯಾಡ್ ಫೈನಲ್ ತಲುಪುವ ಫೇವರಿಟ್ ಆಗಿದ್ದ ಭಾರತ ಪುರುಷರ ಹಾಕಿ ತಂಡ ಇಂಡೋನೇಷ್ಯಾ ಕೂಟದಲ್ಲಿ ಆಘಾತ ಅನುಭವಿಸಿದೆ. ಗುರುವಾರ (ಆ.೩೦) ನಡೆದ ಸೆಮಿಫೈನಲ್ ಸೆಣಸಾಟದ ಶೂಟೌಟ್‌ನಲ್ಲಿ ೬-೭ರಿಂದ ಸೋತ ಟೀಂ ಇಂಡಿಯಾ ಕನಲಿಹೋಯಿತು

ಚಿನ್ನ ಗೆಲ್ಲುವ ನೆಚ್ಚಿನ ತಂಡ ಭಾರತ ಹದಿನೆಂಟನೇ ಏಷ್ಯಾಡ್‌ನಲ್ಲಿ ಭ್ರಮನಿರಸನಗೊಂಡಿದೆ. ಗುಂಪು ಹಂತದಲ್ಲಿ ಹಲವು ದಾಖಲೆಗಳ ಗೆಲುವು ಕಂಡು ಅಜೇಯ ತಂಡವಾಗಿ ಫೈನಲ್ ತಲುಪುವ ಕನಸು ಕಂಡಿದ್ದ ಪಿ ಆರ್ ಶ್ರೀಜೇಶ್ ಬಳಗಕ್ಕೆ ಮಲೇಷ್ಯಾ ಮರೆಯಲಾಗದ ಸೋಲುಣಿಸಿತು. ಇತ್ತ, ಜಪಾನ್ ವಿರುದ್ಧದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಕೂಡ ಸೋಲನುಭವಿಸಿದ್ದು, ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿನ ಪ್ಲೇಆಫ್‌ನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳು ಕಾದಾಡುವಂತಾಗಿದೆ.

ಗುರುವಾರ (ಆ.೩೦) ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ಮತ್ತು ಮಲೇಷ್ಯಾ ೨-೨ ಗೋಲುಗಳ ಸಮಬಲ ಸಾಧಿಸಿದ ಬಳಿಕ ಸಡನ್ ಡೆತ್‌ನಲ್ಲಿ ೬-೭ ಗೋಲುಗಳ ಹೃದಯವಿದ್ರಾವಕ ಸೋಲನುಭವಿಸಿದ ಭಾರತ, ಇದೀಗ ಕಂಚಿನ ಪದಕಕ್ಕಾಗಿ ಪಾಕಿಸ್ತಾನ ವಿರುದ್ಧ ಸೆಣಸಬೇಕಿದೆ. ಅಂದಹಾಗೆ, ಭಾರತದ ಈ ದಯನೀಯ ಸೋಲಿಗೆ ಕನ್ನಡಿಗ ಎಸ್ ವಿ ಸುನಿಲ್ ಮಿಸ್ ಮಾಡಿದ ಗೋಲು ಪ್ರಮುಖ ಕಾರಣವಾಯಿತು ಎಂಬುದು ಕೂಡಾ ದುರದೃಷ್ಟಕರ.

ನಿರ್ಣಾಯಕ ಘಟ್ಟದಲ್ಲಿ ಭಾರತ ಎಸಗಿದ ಕೆಲವೊಂದು ಪ್ರಮಾದಗಳನ್ನೇ ಲಾಭವಾಗಿ ಪರಿವರ್ತಿಸಿಕೊಂಡ ಮಲೇಷ್ಯಾ, ಫೈನಲ್‌ಗೆ ಧಾವಿಸಿತು. ಎಂಟು ವರ್ಷಗಳ ಗುವಾಂಗ್‌ಜೌ ಕೂಟದಲ್ಲಿಯೂ ಮಲೇಷ್ಯಾ ಇದೇ ಅಂತಿಮ ನಾಲ್ಕರ ಘಟ್ಟದಲ್ಲಿ ಭಾರತವನ್ನು ಹಣಿದಿತ್ತು. ಗುಂಪು ಹಂತದಲ್ಲಿ ೭೬ ಗೋಲುಗಳನ್ನು ದಾಖಲಿಸಿದ್ದ ಪಿ ಆರ್ ಶ್ರೀಜೇಶ್ ಬಳಗ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.

ಇದನ್ನೂ ಓದಿ : 86 ವರ್ಷಗಳ ದಾಖಲೆ ಅಳಿಸಿದ ಭಾರತ ಹಾಕಿ ತಂಡಕ್ಕೆ ಮತ್ತೊಂದು ಬೃಹತ್ ಗೆಲುವು

ಸುನೀಲ್ ವೈಫಲ್ಯ!

೬೦ ನಿಮಿಷಗಳ ಪೂರ್ಣಾವಧಿಯ ಆಟ ೨-೨ ಗೋಲುಗಳಿಂದ ಸಮಬಲ ಸಾಧಿಸಿದ ಬಳಿಕ ಸಡನ್ ಡೆತ್‌ನಲ್ಲಿ ಅನುಭವಿ ಆಟಗಾರ ಸುನೀಲ್ ಮಿಸ್ ಮಾಡಿದ ಗೋಲಿನಿಂದ ಭಾರತ ತತ್ತರಿಸಿತು. ಶೂಟ್ ಆಫ್‌ನಲ್ಲಿ ಭಾರತದ ಪರ ಆಕಾಶ್‌ದೀಪ್, ಹರ್ಮನ್‌ಪ್ರೀತ್ ಮೊದಲ ಐದು ಶಾಟ್‌ಗಳಲ್ಲಿ ಸ್ಕೋರ್ ಮಾಡಿದರೆ, ಮನ್ಪ್ರೀತ್ ಸಿಂಗ್, ದಿಲ್ಪ್ರೀತ್ ಸಿಂಗ್ ಹಾಗೂ ಸುನೀಲ್ ವಿಫಲವಾದರು.

ಗೋಲ್‌ಕೀಪರ್ ಪಿ ಆರ್ ಶ್ರೀಜೇಶ್ ಮನೋಜ್ಞ ಆಟದೊಂದಿಗೆ ತಂಡವನ್ನು ಪಂದ್ಯದಲ್ಲಿ ಜೀವಂತವಾಗಿಟ್ಟಿದ್ದರು. ಶ್ರೀಜೇಶ್ ಅವರ ಪ್ರಚಂಡ ಕಾಯುವಿಕೆಯಲ್ಲಿ ಮುಹಮದ್ ಅಶಾರಿ ಹಾಗೂ ಫಿಟ್ರಿ ಸಾರಿ ಇಬ್ಬರಷ್ಟೇ ಗೋಲು ಗಳಿಸಲು ಸಾಧ್ಯವಾಯಿತು. ಟೆಂಕು ಅಹಮದ್, ಫೈಜಲ್ ಸಾರಿ ಮತ್ತು ಮುಹಮದ್ ಅಜುವಾನ್ ಗುರಿಯನ್ನು ಶ್ರೀಜೇಶ್ ವಿಫಲಗೊಳಿಸಿದರು. ಆದರೆ, ಸಡನ್ ಡೆತ್‌ನಲ್ಲಿ ಮಲೇಷ್ಯಾದ ಎಲ್ಲ ಐದು ಗೋಲಿನ ಯತ್ನಗಳೂ ಯಶಸ್ವಿಯಾದರೆ, ಭಾರತ ಮೊದಲ ನಾಲ್ಕರಲ್ಲಿ ಯಶಸ್ವಿಯಾದರೂ, ತೀವ್ರ ಒತ್ತಡಕ್ಕೆ ಸಿಲುಕಿದ್ದ ಸುನೀಲ್ ಗುರಿಮುಟ್ಟಿಸುವಲ್ಲಿ ವಿಫಲವಾದರು.

ಅವಕಾಶ ಕೈಚೆಲ್ಲಿದ ಭಾರತ

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಸಿಕ್ಕ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಭಾರತ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಇತ್ತ, ೧೩ನೇ ನಿಮಿಷದಲ್ಲಿ ಮಲೇಷಿಯಾ ಕೂಡಾ ಒಂದೆರಡು ಅವಕಾಶಗಳನ್ನು ಗಳಿಸಿತಾದರೂ, ಪಿ ಆರ್ ಶ್ರೀಜೇಶ್ ಮಲೇಷ್ಯಾದ ಗೋಲು ಹವಣಿಕೆಯನ್ನು ಹತ್ತಿಕ್ಕಿದರು. ಪಂದ್ಯದ ಮೊದಲ ನಿಮಿಷದಲ್ಲೇ ಭಾರತಕ್ಕೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಹರ್ಮನ್‌ಪ್ರೀತ್ ಕೈಚೆಲ್ಲಿದರು. ಅವರು ಫ್ಲಿಕ್ ಮಾಡಿದ ಚೆಂಡನ್ನು ಮಲೇಷ್ಯಾ ಗೋಲಿ ಕುಮಾರ್ ಸುಬ್ರಹ್ಮಣ್ಯಂ ವಿಫಲಗೊಳಿಸಿದರು.

ಇನ್ನು ದ್ವಿತೀಯಾರ್ಧದಲ್ಲಿಯೂ ಇತ್ತಂಡಗಳೂ ೨೧ನೇ ನಿಮಿಷದಲ್ಲಿ ಪೆನಾಲ್ಟಿ ಗೋಲಿನ ಅವಕಾಶ ಪಡೆದವು. ಆದರೆ, ಹರ್ಮನ್‌ಪ್ರೀತ್ ಮತ್ತೊಮ್ಮೆ ಮಲೇಷ್ಯಾ ಗೋಲಿಯಿಂದ ವಂಚಿಸಲ್ಪಟ್ಟರು. ಇತ್ತ, ಮನ್ಪ್ರೀತ್ ಕೂಡಾ ಇದೇ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಲಾಗದೆ ವೈಫಲ್ಯ ಅನುಭವಿಸಿದರು. ಆದರೆ, ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶವನ್ನು ಹರ್ಮನ್‌ಪ್ರೀತ್ ಯಶಸ್ವಿಯಾಗಿಸಿದರು. ೩೩ನೇ ನಿಮಿಷದಲ್ಲಿ ಹರ್ಮನ್ ಗೋಲು ಹೊಡೆದರೆ, ಏಳು ನಿಮಿಷಗಳ ನಂತರ ವರುಣ್ ಕುಮಾರ್ ಗೋಲು ಗಳಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More