ಸರಣಿ ಸಮಬಲದ ಛಲದಲ್ಲಿರುವ ಭಾರತಕ್ಕೆ ಇಂಗ್ಲೆಂಡ್ ತಿರುಗೇಟು ನೀಡುವ ತವಕ

ಆಲ್ರೌಂಡ್ ಪ್ರದರ್ಶನದಿಂದ ನಾಟಿಂಗ್‌ಹ್ಯಾಮ್‌ನಲ್ಲಿ ಗಳಿಸಿದ ಭರ್ಜರಿ ಗೆಲುವು ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ಹುರುಪಿನಲ್ಲಿ ಸರಣಿಯಲ್ಲಿ ಸಮಬಲ ಸಾಧಿಸುವ ಛಲದಲ್ಲಿರುವ ವಿರಾಟ್ ಪಡೆಗೆ ತಿರುಗೇಟು ನೀಡುವ ಸಂಕಲ್ಪದಲ್ಲಿದೆ ಇಂಗ್ಲೆಂಡ್. ೪ನೇ ಪಂದ್ಯ ಸಹಜವಾಗಿಯೇ ಕೌತುಕ ಕೆರಳಿಸಿದೆ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ನಾಯಕ ವಿರಾಟ್ ಕೊಹ್ಲಿಯ ಮನೋಜ್ಞ ಆಟದ ನೆರವಿನಲ್ಲಿ ಮೂರನೇ ಪಂದ್ಯದಲ್ಲಿ ೨೦೩ ರನ್ ಅಮೋಘ ಗೆಲುವು ಸಾಧಿಸಿದ ಭಾರತ ತಂಡ, ಗುರುವಾರದಿಂದ (ಆ.೩೦) ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲೂ ಗೆಲುವು ಸಾಧಿಸಿ ಆ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ೨-೨ ಸಮಬಲ ಸಾಧಿಸುವ ತುಡಿತದಲ್ಲಿದೆ.

ಆದರೆ, ಆತಿಥೇಯ ಇಂಗ್ಲೆಂಡ್ ಪ್ರಸ್ತುತ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಛಲದಲ್ಲಿದೆ. ಭಾರತ ಈ ಸರಣಿಯನ್ನು ಗೆಲ್ಲಬೇಕಾದರೆ, ಪ್ರಸ್ತುತ ಪಂದ್ಯವನ್ನೂ ಒಳಗೊಂಡಂತೆ ಕೊನೆಯ ಪಂದ್ಯವನ್ನೂ ಗೆಲ್ಲಲೇಬೇಕಾಗಿದೆ. ಹೀಗಾಗಿ, ಭಾರತ ತಂಡದ ಮೇಲೆ ಆತಿಥೇಯರಿಗಿಂತಲೂ ಹೆಚ್ಚಿನ ಒತ್ತಡ ಇದೆ. 1936ರ ಆ್ಯಶಸ್ ಸರಣಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಸಾರಥ್ಯದ ಆಸ್ಟ್ರೇಲಿಯಾ ತಂಡವು 0–2ರಿಂದ ಹಿನ್ನಡೆಯಲ್ಲಿತ್ತಾದರೂ, ನಂತರ ತಿರುಗೇಟು ನೀಡಿದ್ದ ಬ್ರಾಡ್ಮನ್ ಬಳಗ ಸರಣಿಯನ್ನು ಗೆದ್ದಿತ್ತು. ಇಂಥದ್ದೇ ಐತಿಹಾಸಿಕ ಸಾಧನೆಗಾಗಿ ವಿರಾಟ್ ಪಡೆ ಸಂಕಲ್ಪ ತೊಟ್ಟಿದೆ.

ಕಳೆದ ಮೂರು ಪಂದ್ಯಗಳಲ್ಲಿಯೂ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಆದ್ದರಿಂದ ಮುರಳಿ ವಿಜಯ್ ಅವರನ್ನು ಕೈಬಿಟ್ಟಿರುವ ತಂಡ, ಅಸ್ಥಿರ ಆಟದ ಮಧ್ಯೆಯೂ ಕರ್ನಾಟಕದ ಕೆ.ಎಲ್. ರಾಹುಲ್‌ ಮತ್ತು ಶಿಖರ್ ಧವನ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಏತನ್ಮಧ್ಯೆ, ಸ್ಯಾಮ್‌ ಕರನ್‌ನಂಥ ಯುವ ಆಟಗಾರನಿಗೆ ಇಂಗ್ಲೆಂಡ್ ಅವಕಾಶ ಕಲ್ಪಿಸಿದ್ದನ್ನೇ ಸ್ಫೂರ್ತಿಯಾಗಿಸಿಕೊಂಡಿರುವ ಭಾರತ, ಯುವ ಭಾರತ ತಂಡದ ನಾಯಕ ಪೃಥ್ವಿ ಶಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದು, ಟೀಂ ಮ್ಯಾನೇಜ್‌ಮೆಂಟ್ ಅವರನ್ನು ಕಣಕ್ಕಿಳಿಸಲಿದೆಯೇ ಎಂಬ ಕುತೂಹಲವೂ ಮೂಡಿದೆ.

ಇದನ್ನೂ ಓದಿ : ಸರ್ವ ಟೀಕೆಗಳಿಗೂ ಶತಕವೇ ಮದ್ದು ಎಂದ ವಿರಾಟ್ ಆಟಕ್ಕೆ ಸುಸ್ತಾದ ಇಂಗ್ಲೆಂಡ್

ಮೊಲ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕೂಡ ಹೋದ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ಭಾರತ ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಿದಂತಾಗಿದೆ. ಇನ್ನು ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಶತಕಗಳನ್ನು ದಾಖಲಿಸಿ ಅಮೋಘ ಫಾರ್ಮ್‌ನಲ್ಲಿರುವುದರಿಂದ ಇಂಗ್ಲೆಂಡ್ ಬೌಲರ್‌ಗಳು ಮಿಕ್ಕೆಲ್ಲರಿಗಿಂತಲೂ ಅವರನ್ನು ಕಟ್ಟಿಹಾಕುವತ್ತಲೇ ಚಿತ್ತ ಹರಿಸಿದ್ದಾರೆ. ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್, ಸ್ಯಾಮ್ ಕರನ್, ಸ್ಟುವರ್ಟ್‌ ಬ್ರಾಡ್ ಸೇರಿದಂತೆ ಆದಿಲ್ ರಶೀದ್‌ರಂಥ ಸ್ಪಿನ್ನರ್‌ಗಳಿಗೂ ಕೊಹ್ಲಿಯೇ ಗುರಿಯಾಗಿದ್ದಾರೆ.

ಮೊದಲ ಎರಡು ಪಂದ್ಯಗಳಿಗೆ ಗಾಯದ ನಿಮಿತ್ತ ಅಲಭ್ಯವಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಜೋ ರೂಟ್ ಪಡೆಗೆ ಕಠಿಣ ಸವಾಲಾಗಿ ಪರಿಣಮಿಸಿದರೆ ಭಾರತದ ಗೆಲುವನ್ನು ತಡೆಯುವುದು ಇಂಗ್ಲೆಂಡ್‌ಗೆ ಸಾಧ್ಯವಿಲ್ಲ. ಅಂದಹಾಗೆ, ಬುಮ್ರಾ ನೋಬಾಲ್ ಪ್ರಮಾದದಿಂದ ಕೆಲವೊಮ್ಮೆ ಜೀವದಾನ ನೀಡುತ್ತಿದ್ದು, ಇದರತ್ತ ಅವರು ಹೆಚ್ಚಿನ ನಿಗಾ ವಹಿಸಬೇಕಿದೆ.

ತಿರುಗೇಟಿಗೆ ಪಣ ತೊಟ್ಟ ಇಂಗ್ಲೆಂಡ್

Predictions for the fourth Test? 🧐 #engvind #india #england #test #cricket

A post shared by We Are England Cricket (@englandcricket) on

ಮೊದಲ ಎರಡೂ ಪಂದ್ಯಗಳಲ್ಲಿ ಆಕರ್ಷಕ ಆಟವಾಡಿದ್ದ ಇಂಗ್ಲೆಂಡ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಮಾತ್ರ ಕಂಗೆಟ್ಟು ಹೋಗಿದೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅವರ ಬಿರುದಾಳಿಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಮೊತ್ತಕ್ಕೆ ಆಲೌಟ್ ಆದ ಇಂಗ್ಲೆಂಡ್, ಆನಂತರದಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಲು ನಡೆಸಿದ ಯತ್ನಗಳೆಲ್ಲಾ ಕೈಕೊಟ್ಟಿದ್ದವು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ ಮತ್ತು ವಿಕೆಟ್‌ಕೀಪರ್ ಜೋಸ್ ಬಟ್ಲರ್ ಶಕ್ತಿಮೀರಿ ಹೋರಾಟ ನಡೆಸಿದ್ದರು.

ಜೋಸ್ ಬಟ್ಲರ್ ಅಂತೂ ಚೊಚ್ಚಲ ಶತಕದಿಂದ ಭಾರತದ ಪಾಳೆಯದಲ್ಲಿ ಆತಂಕದ ಅಲೆಗಳನ್ನು ಎಬ್ಬಿಸಿದ್ದರು. ಆದರೆ, ಬುಮ್ರಾ ಬೊಂಬಾಟ್ ದಾಳಿಯಲ್ಲಿ ಅವರನ್ನೂ ಒಳಗೊಂಡಂತೆ ಸ್ಟೋಕ್ಸ್ ಗಳಿಸಿದ ಅರ್ಧಶತಕವೂ ಇಂಗ್ಲೆಂಡ್‌ನ ನೆರವಿಗೆ ಬಾರಲಿಲ್ಲ. ಬೌಲಿಂಗ್‌ಗಿಂತ ಮುಖ್ಯವಾಗಿ ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್ ಪುಟಿದೇಳಬೇಕಿದೆ. ಮುಖ್ಯವಾಗಿ, ಮಾಜಿ ನಾಯಕ ಅಲೆಸ್ಟೈರ್ ಕುಕ್ ಮತ್ತು ನಾಯಕ ಜೋ ರೂಟ್ ಸಹಜ ಫಾರ್ಮ್‌ಗೆ ಮರಳಬೇಕಿರುವುದು ಅತಿ ಮಹತ್ವವಾಗಿದೆ.

ಅಂದಹಾಗೆ, ಸೌಥಾಂಪ್ಟನ್‌ನ ಪಿಚ್‌ ಮೊದಲ ಇನಿಂಗ್ಸ್‌ ಆಡುವ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನದ ನಂತರ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಇನ್ನು, ಪಂದ್ಯದ ಮೂರನೇ ದಿನ ಸ್ಪಿನ್‌ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸಂಭವನೀಯ ಇಲೆವೆನ್

ಭಾರತ: ಶಿಖರ್ ಧವನ್ / ಪೃಥ್ವಿ ಶಾ, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್: ಅಲೆಸ್ಟೈರ್ ಕುಕ್, ಕೀಟನ್ ಜೆನ್ನಿಂಗ್ಸ್, ಜೋ ರೂಟ್ (ನಾಯಕ), ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಅದಿಲ್ ರಶೀದ್, ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ) | ನೇರಪ್ರಸಾರ: ಸೋನಿ ಟೆನ್‌ ನೆಟ್‌ವರ್ಕ್‌

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More