ಅಮೆರಿಕನ್ ಓಪನ್: ತೃತೀಯ ಸುತ್ತಿನಲ್ಲಿ ವಿಲಿಯಮ್ಸ್ ಸೋದರಿಯರ ಸವಾಲು

ವಿಶ್ವ ಟೆನಿಸ್ ಲೋಕದ ಮತ್ತೊಂದು ಮಹತ್ವಪೂರ್ಣ ಪಂದ್ಯಕ್ಕೆ ನ್ಯೂಯಾರ್ಕ್ ಸಜ್ಜಾಗಿದೆ. ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ತೃತೀಯ ಸುತ್ತು ತಲುಪಿರುವ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಶುಕ್ರವಾರ (ಆ.೩೧) ಪರಸ್ಪರ ಕಾದಾಡಲಿದ್ದಾರೆ

ಮತ್ತೊಂದು ಆಕ್ರಮಣಕಾರಿ ಆಟದೊಂದಿಗೆ ವಿಜೃಂಭಿಸಿದ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತೃತೀಯ ಸುತ್ತಿಗೆ ಸಾಗಿದ್ದಾರೆ. ಗುರುವಾರ (ಆ.೩೦) ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಜರ್ಮನ್ ಆಟಗಾರ್ತಿ ಕರಿನಾ ವಿಟಾಫ್ಟ್ ವಿರುದ್ಧ ೬-೨, ೬-೨ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಅತ್ಯಂತ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಸೆರೆನಾ ಎದುರು ಕರಿನಾ ಕಳಪೆ ಆಟವಾಡಿದರು. ಅನುಭವಿ ಆಟಗಾರ್ತಿ ಸೆರೆನಾ ಪಂದ್ಯದಾದ್ಯಂತ ೩೦ ವಿನ್ನರ್‌ಗಳನ್ನು ಸಿಡಿಸಿದರೆ, ಕರಿನಾ ಕೈಯಲ್ಲಾದದ್ದು ಕೇವಲ ೧೦ ವಿನ್ನರ್‌ಗಳು. ಇನ್ನು, ಇಬ್ಬರೂ ಆಟಗಾರ್ತಿಯರು ತಲಾ ಹದಿನೈದು ಅನಗತ್ಯ ತಪ್ಪು ಹೊಡೆತಗಳಿಂದ ಪ್ರಮಾದವೆಸಗಿದರೂ, ಸೆರೆನಾ ಗೆಲುವಿನ ನಗೆಬೀರಿದರು. ಮಾತ್ರವಲ್ಲದೆ, ಮುಂದಿನ ಸುತ್ತಿನಲ್ಲಿ ತನ್ನ ಹಿರಿಯ ಸೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಕಾದಾಡಲು ಅರ್ಹತೆ ಗಳಿಸಿದರು.

ವೃತ್ತಿಬದುಕಿನಲ್ಲಿ ತನ್ನಕ್ಕನ ವಿರುದ್ಧ ೧೭-೨ ಪ್ರಭುತ್ವ ಮೆರೆದಿರುವ ಸೆರೆನಾ, ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ತಾಯಿಯಾದ ನಂತರ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಗೆಲ್ಲುವ ಛಲದಲ್ಲಿರುವ ಸೆರೆನಾ, ಈ ಋತುವಿನಲ್ಲಿ ಒಂದು ಪಂದ್ಯದಿಂದ ಆ ಅವಕಾಶವನ್ನು ಕೈಚೆಲ್ಲಿದರು. ಕಳೆದ ತಿಂಗಳು ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಫೈನಲ್ ತಲುಪಿದ್ದ ಸೆರೆನಾ, ಅಂತಿಮ ಸುತ್ತಿನಲ್ಲಿ ಜರ್ಮನ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ಎದುರು ಸೋತು ರನ್ನರ್ ಆದರು.

ವೀನಸ್ ಗೆಲುವು

ಇದನ್ನೂ ಓದಿ : ಸೆರೆನಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುದ್ದಿಟ್ಟ ಏಂಜಲಿಕ್ ಕೆರ್ಬರ್

ಈ ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಗೆಲ್ಲಲು ಹೋರಾಡುತ್ತಿರುವ ಹದಿನಾರನೇ ಶ್ರೇಯಾಂಕಿತೆ ವೀನಸ್ ಮತ್ತೊಮ್ಮೆ ತನ್ನ ತಂಗಿಯ ಎದುರು ಸೆಣಸಲು ಸಜ್ಜಾಗಿದ್ದಾರೆ. ೨೦೦೦ ಮತ್ತು ೨೦೦೧ರಲ್ಲಿ ವೀನಸ್ ಎರಡು ಬಾರಿ ಫ್ಲಶಿಂಗ್ ಮೆಡೋಸ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದರೆ, ೧೭ನೇ ಶ್ರೇಯಾಂಕಿತೆ ಸೆರೆನಾ, ಆರು ಬಾರಿ ಯುಎಸ್ ಓಪನ್ ಜಯಿಸಿದ್ದಾರೆ. ಅಂದಹಾಗೆ, ಬುಧವಾರ (ಆ.೩೦) ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಹಣಾಹಣಿಯಲ್ಲಿ ಇಟಲಿ ಆಟಗಾರ್ತಿ ಕೆಮಿಲಾ ಜಿಯೊರ್ಗಿ ವಿರುದ್ಧ ೬-೪, ೭-೫ರ ನೇರ ಸೆಟ್‌ ಗೆಲುವು ಸಾಧಿಸಿದರು.

ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸಿದ ವೀನಸ್, ಎರಡನೇ ಸೆಟ್‌ ಶುರುವಾಗುವ ಹೊತ್ತಿಗೆ ಸಾಕಷ್ಟು ಬಳಲಿದಂತೆ ಕಂಡುಬಂದರು. ಹೊಸದಾಗಿ ನಿರ್ಮಿಸಲಾಗಿರುವ ಲೂಯಿಸ್ ಆರ್ಮ್‌ಸ್ಟ್ರಾಂಗ್ ಕ್ರೀಡಾಂಗಣದ ಒಳಾಂಗಣದಲ್ಲಿಯೂ ಸುಡುಬಿಸಿಲ ತಾಪಮಾನಕ್ಕೆ ೩೮ರ ಹರೆಯದ ವೀನಸ್ ಕಂಗಾಲಾಗಿ ಹೋದರು. ಆದರೆ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಹರ್ಷೋದ್ಗಾರದ ಬೆಂಗಾವಲಿನಲ್ಲಿ ಈ ತಾಪವನ್ನು ಮೆಟ್ಟಿನಿಂತ ವೀನಸ್ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.

ಕನೆಪಿ ಗೆಲುವಿನ ಓಟ

ವನಿತೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಇಸ್ಟೋನಿಯಾದ ಕಯಿಯಾ ಕನೇಪಿ ಕೂಡಾ ತೃತೀಯ ಸುತ್ತಿಗೆ ಮುನ್ನಡೆದರು. ಸರ್ಬಿಯಾ ಮೂಲದ ಸ್ವಿಸ್ ಟೆನಿಸ್ ಆಟಗಾರ್ತಿ ಜಿಲ್ ಟಿಚ್‌ಮನ್ ವಿರುದ್ಧದ ಸೆಣಸಾಟದಲ್ಲಿ ಕನೆಪಿ ೬-೪, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ಅಂದಹಾಗೆ, ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ ೧ ಆಟಗಾರ್ತಿ ಸಿಮೋನಾ ಹ್ಯಾಲೆಪ್‌ಗೆ ಸೋಲುಣಿಸಿ ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್‌ನಲ್ಲಿ ಅಚ್ಚರಿದಾಯಕ ಫಲಿತಾಂಶ ನೀಡಿದ್ದ ಕನೇಪಿ, ಮತ್ತೊಮ್ಮೆ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಶುಕ್ರವಾರ (ಆ.೩೧) ನಡೆಯಲಿರುವ ಮೂರನೇ ಸುತ್ತಿನ ಪಂದ್ಯದಲ್ಲಿ ಕನೇಪಿ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್ ವಿರುದ್ಧ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More