ಕೈಕೊಟ್ಟ ಫಿಟ್ನೆಸ್; ಕಂಚು ಗೆದ್ದು ಹ್ಯಾಟ್ರಿಕ್ ಸಾಧನೆ ಮೆರೆದ ವಿಕಾಸ್ ಕೃಷ್ಣನ್

ಕೈಕೊಟ್ಟ ದೈಹಿಕ ಕ್ಷಮತೆಯಿಂದಾಗಿ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲು ವಿಫಲವಾದ ವಿಕಾಸ್ ಕೃಷ್ಣನ್, ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತರಾದರು. ಇದರೊಂದಿಗೆ ಏಷ್ಯಾ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್ ಪದಕ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಂಡರು

ಭಾರತದ ಪ್ರತಿಭಾನ್ವಿತ ಬಾಕ್ಸರ್ ವಿಕಾಸ್ ಕೃಷ್ಣನ್ (೭೫ ಕೆಜಿ) ದುರದೃಷ್ಟವಶಾತ್ ಸೆಮಿಫೈನಲ್‌ಗೆ ಅನರ್ಹರೆನಿಸಿದರು. ದೈಹಿಕ ಕ್ಷಮತೆಯಿಲ್ಲದೆ ವೈದ್ಯಕೀಯವಾಗಿ ಅನರ್ಹವೆನಿಸಿದ ವಿಕಾಸ್ ಕೃಷ್ಣನ್, ಸೆಮಿಫೈನಲ್ ಬೌಟ್‌ನಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಿಲ್ಲ. ಇದಕ್ಕೂ ಮುಂಚಿನ ಕ್ವಾರ್ಟರ್‌ಫೈನಲ್‌ನಲ್ಲಿ ವಿಕಾಸ್ ಎಡಗಣ್ಣಿಗೆ ಗಾಯ ಮಾಡಿಕೊಂಡಿದ್ದರು.

ಈ ಮಧ್ಯೆ ೨೬ರ ಹರೆಯದ ಕಜಕ್‌ಸ್ತಾನ ಮೂಲದ ಅಮನ್ಕುಲ್ ಅಬಿಲ್ಖಾನ್ ನಾಲ್ಕರ ಘಟ್ಟದ ಬೌಟ್‌ನಲ್ಲಿ ಶುಕ್ರವಾರ ಸೆಣಸಬೇಕಿದ್ದ ಅವರು ಕೂಡಾ ಗಾಯದಿಂದಾಗಿ ಹೊರಗುಳಿಯುವಂತಾಯಿತು. ‘’ವಿಕಾಸ್ ಎಡಗಣ್ಣಿನ ರೆಟಿನಾಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರಿನ್ನೂ ಉರಿಯೂತದಿಂದ ಬಾಧೆ ಪಡುತ್ತಿದ್ದಾರೆ. ಈ ಹಂತದಲ್ಲಿ ಅವರನ್ನು ಹೋರಾಟಕ್ಕಿಳಿಸುವುದು ಅಪಾಯಕಾರಿ. ಅವರಿಗೆ ಇನ್ನೂ ಕೆಲವು ವಾರಗಳ ವಿಶ್ರಾಂತಿಯ ಅಗತ್ಯವಿದೆ,’’ ಎಂದು ಭಾರತೀಯ ಬಾಕ್ಸಿಂಗ್‌ನ ಅಧಿಕೃತ ಸುದ್ದಿಮೂಲಗಳು ತಿಳಿಸಿವೆ.

ಸೆಮಿಫೈನಲ್‌ನಲ್ಲಿ ಸೆಣಸಲಾಗದೆ ಹೋದರೂ, ವಿಕಾಸ್ ಕೂಟದಲ್ಲಿ ಹ್ಯಾಟ್ರಿಕ್ ಪದಕದೊಂದಿಗೆ ಚಾರಿತ್ರಿಕ ಸಾಧನೆ ಮಾಡುವಲ್ಲಿ ಫಲಪ್ರದರಾಗಿದ್ದಾರೆ. ೬೦ ಕೆಜಿ ಲೈಟ್‌ವೇಟ್ ವಿಭಾಗದಲ್ಲಿ ೨೦೧೦ರ ಗುವಾಂಗ್‌ಜೌ ಕೂಟದಲ್ಲಿ ಚಿನ್ನ ಗೆದ್ದಿದ್ದ ವಿಕಾಸ್, ೨೦೧೪ರ ಇಂಚಾನ್‌ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.

ಇದನ್ನೂ ಓದಿ : ಪಾಕ್ ಬಾಕ್ಸರ್‌ ತನ್ವೀರ್‌ಗೆ ಸೋಲಿನ ಪಂಚ್ ನೀಡಿದ ವಿಕಾಸ್ ಕ್ವಾರ್ಟರ್‌ಗೆ

ಹರ್ಯಾಣ ಮೂಲದ ವಿಕಾಸ್ ಪ್ರೀಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿಯೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಬಳಿಕ ನಡೆದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಚೀನಾದ ಟೌಹೆಟಾ ಎರ್ಬಿಕೆ ಟಂಗ್ಲಾಟಿಹನ್ ವಿರುದ್ಧದ ಹಣಾಹಣಿಯಲ್ಲಿ ಎಡಗಣ್ಣಿಗೆ ಬಲವಾಗಿ ಪೆಟ್ಟು ತಿಂದಿದ್ದರಾದರೂ, ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಫಲಪ್ರದರಾದರು.

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ವಿಕಾಸ್, ಇದೇ ಏಪ್ರಿಲ್‌ನಲ್ಲಿ ನಡೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಜಯಿಸಿದ್ದರು. ಪ್ರಸ್ತುತ ಏಷ್ಯಾಡ್‌ನಲ್ಲಿಯೂ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ವಿಕಾಸ್, ದುರದೃಷ್ಟವಶಾತ್ ಫೈನಲ್‌ನಲ್ಲಿ ಸ್ಪರ್ಧಿಸಲಾಗಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More