ಜೋಶ್ನಾ-ದೀಪಿಕಾ ಪಳ್ಳೀಕಲ್ ಗೆಲುವು; ಸ್ಕ್ವಾಶ್‌ನಲ್ಲಿ ಫೈನಲ್ ತಲುಪಿದ ಭಾರತ

ಭಾರತದ ಸ್ಟಾರ್ ಸ್ಕ್ವಾಶ್ ಜೋಡಿ ದೀಪಿಕಾ ಪಳ್ಳೀಕಲ್ ಮತ್ತು ಜೋಶ್ನಾ ಚಿನ್ನಪ್ಪ ಮನೋಜ್ಞ ಗೆಲುವು ಸಾಧಿಸುವುದರೊಂದಿಗೆ ಭಾರತ ಫೈನಲ್ ತಲುಪಿದೆ. ಜೋಶ್ನಾ ಅಂತೂ ಎಂಟು ಬಾರಿಯ ವಿಶ್ವ ಚಾಂಪಿಯನ್ ನಿಕೊಲ್ ಡೇವಿಡ್ ವಿರುದ್ಧ ಗೆಲುವು ಸಾಧಿಸಿ ವೃತ್ತಿಬದುಕಿನಲ್ಲೇ ಶ್ರೇಷ್ಠ ಸಾಧನೆ ಮೆರೆದರು

ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತವಾದ ದೀಪಿಕಾ ಪಳ್ಳೀಕಲ್ ಮತ್ತು ಜೋಶ್ನಾ ಚಿನ್ನಪ್ಪ ಟೀಂ ವಿಭಾಗದಲ್ಲಿ ಚಿನ್ನ ಗೆಲ್ಲುವ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಶುಕ್ರವಾರ (ಆ.೩೧) ನಡೆದ ಮಲೇಷ್ಯಾ ವಿರುದ್ಧದ ಹಣಾಹಣಿಯಲ್ಲಿ ಭಾರತ ತಂಡ ೨-೦ ಗೆಲುವು ಸಾಧಿಸಿತು.

ಜೋಶ್ನಾ ಚಿನ್ನಪ್ಪ, ದೀಪಿಕಾ ಪಳ್ಳೀಕಲ್, ಸುನಯ್ನಾ ಕುರುವಿಲ್ಲಾ ಮತ್ತು ತಾನ್ವಿ ಖನ್ನಾ ಅವರಿದ್ದ ಭಾರತ ವನಿತಾ ಸ್ಕ್ವಾಶ್ ತಂಡ ಫೈನಲ್‌ನಲ್ಲಿ ಹಾಂಕಾಂಗ್ ವಿರುದ್ಧ ಕಾದಾಡಲಿದೆ. ಫೈನಲ್ ತಲುಪಿರುವ ಹಿನ್ನೆಲೆಯಲ್ಲಿ ಕನಿಷ್ಠ ಬೆಳ್ಳಿ ಪದಕವನ್ನಂತೂ ಭಾರತ ವನಿತಾ ತಂಡ ಖಚಿತಪಡಿಸಿದೆ.

ವಿಶ್ವದ ಹದಿನಾರನೇ ಶ್ರೇಯಾಂಕಿತ ಜೋಶ್ನಾ, ಗುರುವಾರ ನಡೆದ ಗುಂಪು ಹಂತದ ಇದೇ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಅನ್ನೀ ಆವು ವಿರುದ್ಧ ಸೋಲನುಭವಿಸಿದ್ದರು. ಆದರೆ, ಇಂದು ನಿಕೊಲ್ ವಿರುದ್ಧ ೧೨-೧೦, ೧೧-೯, ೬-೧೧, ೧೦-೧೨ ಮತ್ತು ೧೧-೯ರಿಂದ ಗೆಲುವು ಸಾಧಿಸಿದರು. ಸ್ಕ್ವಾಶ್ ಕ್ರೀಡೆಯಲ್ಲೇ ಅತ್ಯಂತ ಪ್ರಬಲ ತಂಡವೆನಿಸಿರುವ ಹಾಂಕಾಂಗ್ ಎದುರು ಇದೀಗ ಫೈನಲ್‌ನಲ್ಲಿ ಭಾರತ ಗೆಲುವು ಸಾಧಿಸಲು ಶಕ್ತಿಮೀರಿ ಹೋರಾಟ ನಡೆಸಲು ಸಂಕಲ್ಪ ತೊಟ್ಟಿದೆ.

ಇದನ್ನೂ ಓದಿ : ಸ್ಕ್ವಾಶ್‌ನಲ್ಲಿ ಪದಕ ಖಚಿತಪಡಿಸಿದ ದೀಪಿಕಾ ಪಳ್ಳೀಕಲ್, ಜೋಶ್ನಾ ಚಿನ್ನಪ್ಪ

೩೧ರ ಹರೆಯದ ಜೋಶ್ನಾ, ಗುರುವಾರ ಅನುಭವಿಸಿದ ಸೋಲಿನ ಹೊರತಾಗಿಯೂ ಕೇವಲ ೨೪ ತಾಸುಗಳಲ್ಲೇ ವೃತ್ತಿಬದುಕಿನ ಬಹುದೊಡ್ಡ ಗೆಲುವು ಸಾಧಿಸಿದರು. ನಿಕೊಲ್ ಡೇವಿಡ್‌ ಅವರಂಥ ಪ್ರಚಂಡ ಆಟಗಾರ್ತಿಯನ್ನು ಮಣಿಸಿದ ಜೋಶ್ನಾ, ಭಾರತದ ಫೈನಲ್ ಹಾದಿಯನ್ನು ಸುಗಮಗೊಳಿಸಿದರು.

“ನಿನ್ನೆಯ ಸೋಲಿನಿಂದ ನಾನು ತೀರಾ ವಿಚಲಿತಳಾಗಿದ್ದೆ. ಇಷ್ಟಕ್ಕೂ ನಾನು ನಿನ್ನೆ ನನ್ನ ಸಹಜ ಆಟವಾಡಲು ವಿಫಲವಾಗಿದ್ದೆ. ಸೋಲಿನ ನಂತರ ನನ್ನ ಕೋಚ್ ಹಾಗೂ ಪೋಷಕರೊಂದಿಗೆ ಮಾತನಾಡಿ ಹಗುರವಾದ ಮೇಲೆಯೇ ನಾನು ಸಹಜ ಸ್ಥಿತಿಗೆ ಮರಳಿದೆ. ನಿಕೊಲ್ ಓರ್ವ ಚಾಂಪಿಯನ್ ಆಟಗಾರ್ತಿ. ಆಕೆ ಸದಾ ಶ್ರೇಷ್ಠ ಪ್ರದರ್ಶನ ನೀಡುವಾಕೆ. ಇಂದೇನೂ ಆಕೆಯ ಆಟದಲ್ಲಿ ವ್ಯತ್ಯಾಸವಿರಲಿಲ್ಲ. ಆದರೆ, ಅಂಥ ಆಟಗಾರ್ತಿಯನ್ನು ಮಣಿಸಿದ್ದಕ್ಕಾಗಿ ಖುಷಿಯಾಗಿದೆ,’’ ಎಂದಿದ್ದಾರೆ ಜೋಶ್ನಾ.

ಇದಕ್ಕೂ ಮುನ್ನ ನಡೆದ ಮತ್ತೊಂದು ಪಂದ್ಯದಲ್ಲಿ ದೀಪಿಕಾ ಜಯಭೇರಿ ಬಾರಿಸಿದರು. ವಿಶ್ವದ ೧೯ನೇ ಶ್ರೇಯಾಂಕಿತೆ ದೀಪಿಕಾ, ಗುರುವಾರ ಜೊಯೆ ಚಾನ್ ವಿರುದ್ಧ ಸೋತಿದ್ದರಾದರೂ, ಇಂದು ವಿಶ್ವದ ಐದನೇ ಶ್ರೇಯಾಂಕಿತೆ ಲೌ ವೀ ವೆರ್ನ್ ವಿರುದ್ಧ ೧೧-೨, ೧೧-೯, ೧೧-೭ರ ಮೂರು ನೇರ ಗೇಮ್‌ಗಳ ಆಟದಲ್ಲಿ ಗೆಲುವು ಸಾಧಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More