ಜಪಾನ್‌ ಸವಾಲು ಹತ್ತಿಕ್ಕಲು ವಿಫಲವಾಗಿ ರಜತಕ್ಕೆ ತೃಪ್ತವಾದ ರಾಣಿ ಪಡೆ

ತನಗಿಂತ ಕೆಳ ಶ್ರೇಯಾಂಕಿತ ತಂಡ ಜಪಾನ್ ತಂಡವನ್ನು ಹಣಿದು ಐತಿಹಾಸಿಕ ಜಯದ ನಿರೀಕ್ಷೆಯಲ್ಲಿದ್ದ ಭಾರತ ವನಿತಾ ಹಾಕಿ ತಂಡದ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು. ಶುಕ್ರವಾರ (ಆ.೩೧) ನಡೆದ ಫೈನಲ್‌ನಲ್ಲಿ ೧-೨ ಗೋಲಿನಿಂದ ಸೋತ ರಾಣಿ ರಾಂಪಾಲ್ ಪಡೆ, ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿತು

೩೬ ವರ್ಷಗಳ ಚಿನ್ನದ ಬರ ನೀಗಿಸುವ ವಿಶ್ವಾಸದಲ್ಲಿದ್ದ ಭಾರತ ವನಿತಾ ಹಾಕಿ ತಂಡಕ್ಕೆ ಜಪಾನ್ ಆಟಗಾರ್ತಿಯರು ನಿರಾಸೆ ಮೂಡಿಸಿದರು. ದಿನದ ಹಿಂದಷ್ಟೇ ಪುರುಷರ ತಂಡ, ಮಲೇಷಿಯಾ ವಿರುದ್ಧ ಸಡನ್ ಡೆತ್‌ನಲ್ಲಿ ಆಘಾತಕಾರಿ ಸೋಲನುಭವಿಸಿ ತತ್ತರಿಸಿದ ಬೆನ್ನಲ್ಲೇ ವನಿತಾ ತಂಡ ಫೈನಲ್‌ನಲ್ಲಿ ಎಡವಿದ್ದು ಈ ಬಾರಿಯ ಏಷ್ಯಾಡ್‌ನಲ್ಲಿ ಭಾರತ ಚಿನ್ನದ ಪದಕದಿಂದ ವಂಚಿತವಾಯಿತು.

ವಿಜೇತ ತಂಡದ ಪರ ಮಿನಾಮಿ ಶಿಮಿಜು (೧೨ನೇ ನಿ.) ಮತ್ತು ಮೊಟೊಮಿ ಕವಾಮುರ (೪೪ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರೆ, ಭಾರತದ ಪರ ನೇಹಾ ಗೋಯಲ್ ೨೫ನೇ ನಿಮಿಷದಲ್ಲಿ ಗೋಲು ಹೊಡೆದರು. ಮೂರನೇ ಕ್ವಾರ್ಟರ್‌ನ ಕೊನೇ ಕ್ಷಣದಲ್ಲಿ ಕವಾಮುರ ಬಾರಿಸಿದ ಗೋಲಿಗೆ ಪ್ರತಿಯಾಗಿ ಭಾರತ ತಿರುಗೇಟು ನೀಡಲು ಸಾಧ್ಯವಾಗದೆ ಸೋಲಪ್ಪಿತು.

ನಿರ್ಣಾಯಕ ಘಟ್ಟದಲ್ಲಿ ಆಕ್ರಮಣಕಾರಿ ಆಟವಾಡಿದ್ದಲ್ಲದೆ, ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಸಮಬಲ ಸಾಧಿಸಲಾಗಲೀ ಇಲ್ಲವೇ ತನ್ನ ವಿರುದ್ಧ ಪ್ರಭುತ್ವ ಸಾಧಿಸಲಾಗಲೀ ಅವಕಾಶ ನೀಡಲಿಲ್ಲ. ೧೯೮೨ರ ದೆಹಲಿ ಕೂಟದಲ್ಲಿ ಚಿನ್ನ ಗೆದ್ದ ನಂತರ ಭಾರತ ವನಿತಾ ಹಾಕಿ ತಂಡ ಮತ್ತೊಮ್ಮೆ ಚಿನ್ನ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ, ಅಂತಿಮವಾಗಿ ರಜತ ಪದಕಕ್ಕೆ ರಾಣಿ ಪಡೆ ಸಮಾಧಾನಪಟ್ಟುಕೊಂಡಿತು. ೨೦೧೪ರ ಏಷ್ಯಾ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ ವನಿತಾ ತಂಡ, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದೇ ಸಾಧನೆ ಎನಿಸಿಕೊಂಡಿತು.

ಇದನ್ನೂ ಓದಿ : ಹಾಲಿ ಚಾಂಪಿಯನ್ ಭಾರತದ ಕೈಯಿಂದ ಬಂಗಾರ ಕಿತ್ತುಕೊಂಡ ಮಲೇಷ್ಯಾ!

ವಿಶ್ವ ಹಾಕಿ ಶ್ರೇಯಾಂಕಪಟ್ಟಿಯಲ್ಲಿ ಜಪಾನ್‌ಗಿಂತ ಐದು ಸ್ಥಾನ ಮೇಲಿರುವ ಭಾರತ ವನಿತಾ ಹಾಕಿ ತಂಡ, ಸಹಜವಾಗಿಯೇ ಚಿನ್ನ ಗೆಲ್ಲುವ ಫೇವರಿಟ್ ಎನಿಸಿತ್ತು. ಆದರೆ, ಜಪಾನ್‌ ಆಟಗಾರ್ತಿಯರು ಸೊಗಸಾಟದ ಆಟದಿಂದ ಭಾರತದ ಗೆಲುವಿನ ಬಾಗಿಲನ್ನು ಮುಚ್ಚಿಬಿಟ್ಟಿತು. ೩೯ ಗೋಲುಗಳನ್ನು ದಾಖಲಿಸಿದ್ದ ರಾಣಿ ಪಡೆ ಫೈನಲ್‌ನಲ್ಲಿ ಮಾತ್ರ ಎಡವಿತು.

ವಾಸ್ತವವಾಗಿ, ದೈಹಿಕ ಮತ್ತು ಮಾನಸಿಕವಾಗಿ ಭಾರತಕ್ಕಿಂತ ಜಪಾನ್ ಆಟಗಾರ್ತಿಯರು ಅತ್ಯಂತ ಪ್ರಬಲವಾಗಿದ್ದುದು ಪಂದ್ಯದಾದ್ಯಂತ ಕಂಡುಬಂತು. ಮುಖ್ಯವಾಗಿ, ನಾಲ್ಕನೇ ಕ್ವಾರ್ಟರ್‌ನಲ್ಲಂತೂ ಭಾರತ ಆಟಗಾರ್ತಿಯರು ಯಾವ ಹಂತದಲ್ಲೂ ಗೋಲು ಗಳಿಸದಂತೆ ನೋಡಿಕೊಳ್ಳುವಲ್ಲಿ ಜಪಾನ್ ಸಫಲವಾಯಿತು. ಜಪಾನ್ ಆಕ್ರಮಣಕ್ಕೆ ಪ್ರತಿಯಾಗಿ ಭಾರತದಿಂದ ಯಾವುದೇ ಆಕ್ರಮಣಕಾರಿ ಆಟ ಕಂಡುಬರಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ ಸಿಕ್ಕ ಬಹುಪಾಲು ಪೆನಾಲ್ಟಿ ಅವಕಾಶಗಳನ್ನು ಭಾರತ ಕೈಚೆಲ್ಲಿದ ನಂತರ ಮಿನಾಮಿ ಜಪಾನ್‌ಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಭಾರತದ ಗೋಲಿ ಸವಿತಾ ಕಣ್ತಪ್ಪಿಸಿ ಚೆಂಡನ್ನು ನೆಟ್ ಮುಟ್ಟಿಸಿದರು. ತದನಂತರ ೨೫ನೇ ನಿಮಿಷದಲ್ಲಿ ನವನೀತ್ ರಿವರ್ಸ್ ಫ್ಲಿಕ್ ಅನ್ನು ನೇಹಾ ಗೋಯಲ್ ಯಶಸ್ವಿಯಾಗಿ ಗುರಿ ಮುಟ್ಟಿಸಿದರು. ಪ್ರಥಮಾರ್ಧದಲ್ಲಿ ತಲಾ ಒಂದೊಂದು ಗೋಲಿನಿಂದ ಡ್ರಾ ಸಾಧಿಸಿದರೂ, ನಾಯಕಿ ಮೊಟೊಮಿ ಮೂರನೇ ಕ್ವಾರ್ಟರ್ ಮುಗಿಯುವ ಹಂತದಲ್ಲಿ ದಾಖಲಿಸಿದ ಗೋಲು ಭಾರತಕ್ಕೆ ಆಘಾತ ತಂದಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More