ಆತಿಥೇಯರ ವಿರುದ್ಧ ಮೊದಲ ದಿನವೇ ನಿಯಂತ್ರಣ ಸಾಧಿಸಿದ ವಿರಾಟ್ ಬಳಗ

ನಾಟಿಂಗ್‌ಹ್ಯಾಮ್‌ನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಗೆಲುವು ಸಾಧಿಸಿದ ವಿರಾಟ್ ಪಡೆ, ಇದೀಗ ಸೌಥಾಂಪ್ಟನ್‌ನಲ್ಲೂ ಅದೇ ಸುಳಿವು ನೀಡಿದೆ. ಮೊದಲ ದಿನವೇ ಪರಿಣಾಮಕಾರಿ ಬೌಲಿಂಗ್‌ನಿಂದ ಆತಿಥೇಯರನ್ನು 246 ರನ್‌ಗಳಿಗೆ ಕಟ್ಟಿಹಾಕಿದ ಭಾರತ ತಂಡ, ಇನ್ನಿಂಗ್ಸ್ ಆರಂಭಿಸಿದ್ದು, ಕುತೂಹಲ ಕೆರಳಿಸಿದೆ

ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಸ್ಮಯಕಾರಿ ಬೌಲಿಂಗ್ ನಡೆಸಿದ್ದ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ, ಆತಿಥೇಯರ ಮೊದಲೆರಡು ಪಂದ್ಯಗಳ ಸತತ ಗೆಲುವಿನ ಓಟಕ್ಕೆ ತಡೆಹಾಕಿದ್ದರು. ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿ ಆತಿಥೇಯರ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಹಾರ್ದಿಕ್ ಪಾಂಡ್ಯಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬುಮ್ರಾ ಸಾಥ್ ನೀಡಿದ್ದರು. ಪರಿಣಾಮ ಭಾರತ ತಂಡ, ಆತಿಥೇಯರನ್ನು ೨೦೦ ರನ್‌ಗಳಿಗೂ ಹೆಚ್ಚು ಅಂತರದಿಂದ ಮಣಿಸಿತ್ತು.

ದಿ ರೋಸ್ ಬೌಲ್‌ನಲ್ಲಿ ನಡೆಯುತ್ತಿರುವ ಉಭಯರ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದೇ ಭಾರತ ಆತಿಥೇಯರಿಗೆ ಚುರುಕು ಮುಟ್ಟಿಸಿದೆ. ಇನ್ನಿಂಗ್ಸ್ ಆರಂಭದಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ನಡೆಸಿದ ಮಾರಕ ದಾಳಿ ಆಂಗ್ಲರ ಪತನಕ್ಕೆ ಮುನ್ನುಡಿ ಬರೆಯಿತು. ಒಂದೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಮೊಯೀನ್ ಅಲಿ (೪೦: ೮೫ ಎಸೆತ, ೨ ಬೌಂಡರಿ, ೨ ಸಿಕ್ಸರ್) ಮತ್ತು ಸ್ಯಾಮ್ ಕರನ್ (೭೮: ೧೩೬ ಎಸೆತ, ೮ ಬೌಂಡರಿ, ೧ ಸಿಕ್ಸರ್) ಅರ್ಧಶತಕದ ಹೋರಾಟ ನಡೆಸದೆ ಹೋಗಿದ್ದರೆ ಇಂಗ್ಲೆಂಡ್ ಇನ್ನಷ್ಟು ಕುಸಿತ ಕಾಣುತ್ತಿತ್ತು ಎಂಬುದರಲ್ಲಿ ಯಾವ ಸಂದೇಹವೂ ಇರಲಿಲ್ಲ.

ಸದ್ಯ, ಮೊದಲ ದಿನದಾಟದಲ್ಲಿ ಸಂಪೂರ್ಣವಾಗಿ ಹಿಡಿತ ಸಾಧಿಸಿರುವ ಭಾರತ ತಂಡ, ದಿನಾಂತ್ಯಕ್ಕೆ ೪ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೯ ರನ್ ಗಳಿಸಿತ್ತು. ಕನ್ನಡಿಗ ಕೆ ಎಲ್ ರಾಹುಲ್ (೧೧) ಮತ್ತು ಶಿಖರ್ ಧವನ್ (೩) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬೌಲಿಂಗ್‌ನಲ್ಲಿ ವಿಜೃಂಭಿಸಿದ ಬಳಿಕ ಬ್ಯಾಟಿಂಗ್‌ನಲ್ಲಿ ಎಚ್ಚರ ವಹಿಸಲು ಭಾರತ ತಂಡ ನಿರ್ಧರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಇಂಗ್ಲೆಂಡ್ ಆರಂಭದಲ್ಲೇ ತಡವರಿಸಿತು. ಭಾರತದ ವೇಗಿಗಳು ಇಂಗ್ಲೆಂಡ್‌ನ ಅಗ್ರ ಕ್ರಮಾಂಕವನ್ನು ಅಸ್ಥಿರಗೊಳಿಸಿದರು. ಜಸ್ಪ್ರೀತ್ ಬುಮ್ರಾ (೨೧ಕ್ಕೆ ೨), ಇಶಾಂತ್ ಶರ್ಮಾ (೭ಕ್ಕೆ ೧) ಮತ್ತು ಹಾರ್ದಿಕ್ ಪಾಂಡ್ಯ (೧೬ಕ್ಕೆ ೧) ದಾಳಿಗೆ ಸಿಲುಕಿದ ಇಂಗ್ಲೆಂಡ್, ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೇ ಕೇವಲ ೫೭ ರನ್‌ಗಳಿಗೆ ೪ ವಿಕೆಟ್ ಕಳೆದುಕೊಂಡು ತತ್ತರಿಸುವಂತಾಯಿತು.

ಬುಮ್ರಾ ಮುನ್ನುಡಿ

ಇನ್ನಿಂಗ್ಸ್‌ನ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಕೀಟನ್ ಜೆನ್ನಿಂಗ್ಸ್ (೦) ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದ ಬುಮ್ರಾ, ಇಂಗ್ಲೆಂಡ್‌ಗೆ ಮೊದಲ ಹೊಡೆತ ನೀಡಿದರು. ಬಳಿಕ ಬಂದ ನಾಯಕ ಜೋ ರೂಟ್ (೪) ಅವರನ್ನು ಇಶಾಂತ್ ಶರ್ಮಾ ಎಲ್‌ಬಿ ಬಲೆಗೆ ಕೆಡವಿದರೆ, ನಂತರದಲ್ಲಿ ಜಾನಿ ಬೇರ್‌ಸ್ಟೋ ಸರದಿ. ಹದಿನಾರು ಎಸೆತಗಳನ್ನು ಎದುರಿಸಿದ ಜಾನಿ, ೬ ರನ್ ಗಳಿಸಿದ್ದಾಗ ಬುಮ್ರಾ ದಾಳಿಯಲ್ಲಿ ರಿಷಭ್ ಪಂತ್‌ಗೆ ಕ್ಯಾಚಿತ್ತು ಹೊರನಡೆದರು.

ಒಂದೆಡೆ ವಿಕೆಟ್‌ಗಳು ಪಟಪಟನೆ ಉರುಳುತ್ತಿದ್ದರೂ, ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಲು ಮುಂದಾಗಿದ್ದ ಅನುಭವಿ ಆಟಗಾರ ಹಾಗೂ ಮಾಜಿ ನಾಯಕ ಅಲೆಸ್ಟೈರ್ ಕುಕ್ ಕೂಡ ಎಡವಿದರು. ೫೫ ಎಸೆತಗಳಿಂದ ೩ ರನ್ ಗಳಿಸಿದ್ದ ಕುಕ್, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಹೊರನಡೆಯುತ್ತಿದ್ದಂತೆ ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್ ಇನ್ನಿಂಗ್ಸ್ ತಳ ಕಚ್ಚಿತು.

ಸ್ಯಾಮ್ ದಿಟ್ಟ ಆಟ

ಇದನ್ನೂ ಓದಿ : ವಿರಾಟ್ ಕೊಹ್ಲಿ ನಂತರ ಬಾಲಿವುಡ್ ಬೆಡಗಿ‌ಗೆ ಮಾರುಹೋದರೇ ಕೆ ಎಲ್ ರಾಹುಲ್?

ಭೋಜನ ವಿರಾಮದ ನಂತರದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ತುಸು ಚೇತರಿಕೆ ನೀಡಿದ್ದು ಯುವ ಆಟಗಾರ ಸ್ಯಾಮ್ ಕರನ್. ಕೇವಲ ೩೬ ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ ಪುಟಿದೇಳುವ ವಿಶ್ವಾಸ ಮೂಡಿಸಿದ್ದು ಈ ಯುವ ಆಟಗಾರ. ಬೆನ್ ಸ್ಟೋಕ್ಸ್ (೨೩) ಸ್ಯಾಮ್‌ಗೆ ಕೊಂಚ ನೆರವು ನೀಡಿದರಾದರೂ, ಇಂಗ್ಲೆಂಡ್‌ಗೆ ನಿರ್ಣಾಯಕವಾಗದ ಜೊತೆಯಾಟ ಸಿಕ್ಕಿದ್ದು ಮೊಯೀನ್ ಅಲಿ ಮತ್ತು ಸ್ಯಾಮ್ ಕರನ್ ಅವರಿಂದಲೇ.

ಮೊಹಮದ್ ಶಮಿ ಬೌಲಿಂಗ್‌ನಲ್ಲಿ ಬೆನ್ ಸ್ಟೋಕ್ಸ್ (೨೩) ಎಲ್‌ಬಿ ಬಲೆಗೆ ಬಿದ್ದರೆ, ಇದೇ ಸ್ಟೋಕ್ಸ್ ದಾಳಿಯಲ್ಲಿ ಕೊಹ್ಲಿಗೆ ಕ್ಯಾಚಿತ್ತು ಬಟ್ಲರ್ (೨೧) ಹೊರನಡೆದಾಗ ಇಂಗ್ಲೆಂಡ್‌ನ ಗಳಿಕೆ ೬ ವಿಕೆಟ್‌ಗೆ ಕೇವಲ ೮೬ ರನ್. ಈ ಹಂತದಲ್ಲಿ ಜೊತೆಯಾದ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ ಏಳನೇ ವಿಕೆಟ್‌ಗೆ ೮೧ ರನ್ ಕಲೆಹಾಕಿದರು.

Rishabh pant endured a difficult day behind the stumps ! 😮 #indiavsengland

A post shared by Cricket Universe (@cricuniverse) on

ಭೋಜನ ವಿರಾಮದ ನಂತರದಲ್ಲಿ ಈ ಜೋಡಿಯ ಅಭೂತಪೂರ್ವ ಆಟಕ್ಕೆ ಭಾರತ ಕೂಡಾ ಬೇಸ್ತುಬಿದ್ದಿತು. ಆದರೆ, ದಿನದ ಕಡೇ ಅವಧಿಯಲ್ಲಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ವೇಗಿಗಳಿಗೆ ಜಗ್ಗದೆ ನಿಂತಿದ್ದ ಈ ಜೋಡಿಯನ್ನು ಕೊಹ್ಲಿ ಸ್ಪಿನ್ ಅಸ್ತ್ರ ಬಳಸಿ ಹತ್ತಿಕ್ಕಿದರು. ಅರ್ಧಶತಕಕ್ಕೆ ಕೇವಲ ೧೦ ರನ್‌ ಅಂತರದಲ್ಲಿದ್ದ ಮೊಯೀನ್ ಅಲಿ, ಅಶ್ವಿನ್ ಬೌಲಿಂಗ್‌ನಲ್ಲಿ ಬುಮ್ರಾಗೆ ಕ್ಯಾಚಿತ್ತು ಹೊರನಡೆದರು.

ಆ ಬಳಿಕ ಸ್ಯಾಮ್‌ಗೆ ಯಾವೊಬ್ಬ ಆಟಗಾರನೂ ಹೆಚ್ಚುಕಾಲ ಜೊತೆಯಾಗಿ ನಿಲ್ಲಲಿಲ್ಲ. ಅದಿಲ್ ರಶೀದ್ (೬) ಮತ್ತು ಸ್ಟುವರ್ಟ್ ಬ್ರಾಡ್ (೧೭) ಕ್ರಮವಾಗಿ ಇಶಾಂತ್ ಹಾಗೂ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಸುಳಿಗೆ ಸಿಲುಕಿ ಹೊರನಡೆದರು. ಅಂತಿಮವಾಗಿ ವೇಗಿ ಜೇಮ್ಸ್ ಆ್ಯಂಡರ್ಸನ್ ೪ ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಅಜೇಯರಾಗುಳಿದರು. ಅಂದಹಾಗೆ, ಭಾರತೀಯ ಬೌಲರ್‌ಗಳು ಪರಿಣಾಮಕಾರಿ ದಾಳಿಯಿಂದ ಮಿಂಚಿದರೂ, ಅಶಿಸ್ತಿನ ಎಸೆತಗಳಿಂದ ೩೪ ರನ್ ನೀಡಿ ಗಮನ ಸೆಳೆದರು!

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೭೬.೪ ಓವರ್‌ಗಳಲ್ಲಿ ೨೪೬/೧೦ (ಮೊಯೀನ್ ಅಲಿ ೪೦, ಸ್ಯಾಮ್ ಕರನ್ ೭೮; ಜಸ್ಪ್ರೀತ್ ಬುಮ್ರಾ ೪೬ಕ್ಕೆ ೩, ಇಶಾಂತ್ ಶರ್ಮಾ ೨೬ಕ್ಕೆ ೨, ಮೊಹಮದ್ ಶಮಿ ೫೧ಕ್ಕೆ ೨, ಆರ್ ಅಶ್ವಿನ್ ೪೦ಕ್ಕೆ ೨) ಭಾರತ ಮೊದಲ ಇನ್ನಿಂಗ್ಸ್: ೪ ಓವರ್‌ಗಳಲ್ಲಿ ೧೯/೦ (ಶಿಖರ್ ಧವನ್ ೩ ಬ್ಯಾಟಿಂಗ್, ಕೆ ಎಲ್ ರಾಹುಲ್ ೧೧ ಬ್ಯಾಟಿಂಗ್)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More