ಅಮೆರಿಕನ್ ಓಪನ್ ಟೆನಿಸ್: ಜೊಕೊವಿಚ್, ಫೆಡರರ್ ಗೆಲುವಿನ ಓಟ

ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಆದ ಅಮೆರಿಕನ್ ಓಪನ್ ಟೆನಿಸ್‌ನಲ್ಲಿ ಪ್ರಶಸ್ತಿ ಫೇವರಿಟ್‌ಗಳಾದ ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಗೆಲುವಿನ ಓಟ ಮುಂದುವರೆಸಿದ್ದಾರೆ. ಇಬ್ಬರೂ ತೃತೀಯ ಸುತ್ತಿಗೆ ಮುನ್ನಡೆದಿದ್ದು, ವನಿತೆಯರ ವಿಭಾಗದಲ್ಲಿ ಯುಜೇನಿ ಬೌಚರ್ಡ್ ಹೋರಾಟಕ್ಕೆ ತೆರೆಬಿದ್ದಿದೆ

ಎರಡು ಬಾರಿಯ ಯುಎಸ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಚ್ ತೃತೀಯ ಸುತ್ತಿಗೆ ಮುನ್ನಡೆದಿದ್ದಾರೆ. ೩೧ರ ಹರೆಯದ ಜೊಕೊವಿಚ್, ಸ್ಥಳೀಯ ಆಟಗಾರ ಟೆನಿಸ್ ಸ್ಯಾಂಡ್‌ಗ್ರೆನ್ ವಿರುದ್ಧ ನಡೆದ ದ್ವಿತೀಯ ಸುತ್ತಿನ ಹಣಾಹಣಿಯಲ್ಲಿ ೬-೧, ೬-೩, ೬-೭ (೨-೭), ೬-೨ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಆರನೇ ಶ್ರೇಯಾಂಕಿತ ಜೊಕೊವಿಚ್, ೧೪ನೇ ಗ್ರಾಂಡ್‌ಸ್ಲಾಮ್‌ಗಾಗಿ ಸೆಣಸುತ್ತಿದ್ದು, ಮುಂದಿನ ಸುತ್ತಿನಲ್ಲಿ ಫ್ರಾನ್ಸ್ ಆಟಗಾರ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಕಾದಾಡಲಿದ್ದಾರೆ.

“ಮೊದಲ ಎರಡು ಸೆಟ್‌ಗಳಲ್ಲಿ ನಾನು ಚೆನ್ನಾಗಿಯೇ ಆಡಿದೆ. ಆದರೆ, ಕ್ರಮೇಣ ನಾನು ಮಾನಸಿಕವಾಗಿ ಕೊಂಚ ಗಲಿಬಿಲಿಗೊಂಡೆ. ಈ ಹಂತದಲ್ಲಿ ಮಾನಸಿಕ ಸಮತೋಲನ ಕಳೆದುಕೊಂಡದ್ದು ಬೇಸರ ನೀಡಿತು. ಹೀಗಾಗಿಯೇ ನಾನು ಟೈಬ್ರೇಕರ್‌ನಲ್ಲಿ ಸೆಟ್ ಸೋತೆ. ಆದರೆ, ನಾಲ್ಕನೇ ಸೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದೆ. ಸ್ಯಾಂಡ್‌ಗ್ರೆನ್ ಅಂತೂ ಅದ್ಭುತ ರೀತಿಯಲ್ಲಿ ಕಾದಾಡಿದರು. ಅವರ ಹೋರಾಟ ನನಗೆ ಮೆಚ್ಚುಗೆಯಾಯಿತು,’’ ಎಂದು ಗೆಲುವಿನ ಬಳಿಕ ನೊವಾಕ್ ತಿಳಿಸಿದರು.

ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕ್ರೊವೇಷ್ಯಾ ಆಟಗಾರ ಹಾಗೂ ೨೦೧೪ರ ಚಾಂಪಿಯನ್ ಮರಿನ್ ಸಿಲಿಕ್ ಪೋಲೆಂಡ್ ಆಟಗಾರ ಹ್ಯೂಬರ್ಟ್ ಹರ್ಕಾಜ್ ವಿರುದ್ಧ ೬-೨, ೬-೦, ೬-೦ ನೇರ ಸೆಟ್‌ಗಳ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಧಾವಿಸಿದರು. ಅಂತೆಯೇ, ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ ಅಲೆಕ್ಸಾಂಡರ್ ಜ್ವರೆವ್ ಫ್ರಾನ್ಸ್‌ನ ನಿಕೊಲಾಸ್ ಮಾಹುಟ್ ವಿರುದ್ಧ ಜಯಿಸಿದರು. ೨೧ರ ಹರೆಯದ ಜರ್ಮನ್ ಆಟಗಾರ ೬-೪, ೬-೪, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಮತ್ತೊಂದು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜಪಾನ್ ಆಟಗಾರ ಕೀ ನಿಶಿಕೊರಿ ಫ್ರಾನ್ಸ್ ಆಟಗಾರ ಗೇಲ್ ಮಾಂಫಿಲ್ಸ್ ವಿರುದ್ಧ ೬-೨, ೫-೪ ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾಗ ಮಾಂಫಿಲ್ಸ್ ಗಾಯಗೊಂಡು ನಿವೃತ್ತರಾದರು.

ಫೆಡರರ್ ತೃತೀಯ ಸುತ್ತಿಗೆ

ಫ್ರಾನ್ಸ್ ಆಟಗಾರ ಬಿನೋಯಿಟ್ ಪೈರಿ ವಿರುದ್ಧ ಫೆಡರರ್ ಸುಲಭ ಗೆಲುವು ಸಾಧಿಸಿದರು. ೩೭ರ ಹರೆಯದ ಸ್ವಿಸ್ ಆಟಗಾರ ಕೇವಲ ಒಂದು ತಾಸು, ೫೬ ನಿಮಿಷಗಳ ಕಾದಾಟದಲ್ಲಿ ೭-೫, ೬-೪, ೬-೪ ನೇರ ಸೆಟ್‌ಗಳಲ್ಲಿ ಫ್ರಾನ್ಸ್ ಆಟಗಾರನ ವಿರುದ್ಧ ಪ್ರಭುತ್ವ ಮೆರೆದರು. ೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಫೆಡರರ್ ಎದುರು ಕಳೆದ ಆರು ಮುಖಾಮುಖಿಯಲ್ಲಿ ಒಮ್ಮೆಯೂ ಗೆಲುವು ಸಾಧಿಸಲು ವಿಫಲವಾಗಿದ್ದ ಪೈರಿ ಮತ್ತೊಮ್ಮೆ ಅವರೆದುರು ಸೋಲೊಪ್ಪಿಕೊಂಡರು.

ಎರಡನೇ ಶ್ರೇಯಾಂಕಿತ ಆಟಗಾರ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ ತೃತೀಯ ಸುತ್ತಿನಲ್ಲಿ ಕಾದಾಡಲಿದ್ದಾರೆ. ಫ್ರಾನ್ಸ್ ಆಟಗಾರ ಪಿಯೆರಿ ಹ್ಯೂಸ್ ಹರ್ಬರ್ಟ್ ಒಡ್ಡಿದ ಕಠಿಣ ಪ್ರತಿರೋಧವನ್ನು ಕಿರ್ಗಿಯೋಸ್ ೪-೬, ೭-೬ (೮/೬), ೬-೩, ೬-೦ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ ಆಸೀಸ್ ಆಟಗಾರ, ಇದೀಗ ಫೆಡರರ್ ವಿರುದ್ಧದ ಕಾದಾಟಕ್ಕೆ ಅಣಿಯಾಗಿದ್ದಾರೆ. ಫ್ಲಶಿಂಗ್ ಮೆಡೋಸ್‌ನಲ್ಲಿ ೨೦೦೪ರಿಂದ ೨೦೦೮ರವರೆಗೆ ಐದು ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್, ಸತತ ೪೧ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More