ಒಲಿಂಪಿಕ್ ಚಾಂಪಿಯನ್‌ ಹಸನ್‌ಬಾಯ್‌ಗೆ ಸೋಲುಣಿಸಿದ ಅಮಿತ್‌ಗೆ ಬಂಗಾರ

ಈ ಬಾರಿಯ ಏಷ್ಯಾಡ್‌ ಬಾಕ್ಸಿಂಗ್‌ನಲ್ಲಿ ಎಲ್ಲಿ ಬಂಗಾರ ಕೈತಪ್ಪಿಹೋಗುತ್ತದೋ ಎಂಬ ದಿಗಿಲಿನಲ್ಲಿದ್ದ ಭಾರತಕ್ಕೆ ಅಮಿತ್ ಪಂಗಲ್ ಹರ್ಷ ತಂದಿತ್ತರು. ಶನಿವಾರ (ಸೆ.೧) ನಡೆದ ೪೯ ಕೆಜಿ ವಿಭಾಗದಲ್ಲಿ ಹಾಲಿ ಒಲಿಂಪಿಕ್ ಹಾಗೂ ಏಷ್ಯಾ ಚಾಂಪಿಯನ್ ಹಸನ್‌ಬಾಯ್ ಡುಸ್ಮಾಟೊವ್ ವಿರುದ್ಧ ಅಮಿತ್ ಜಯಿಸಿದರು

ಭಾರತದ ನಂ ೧ ಮಹಿಳಾ ಬಾಕ್ಸರ್ ಮೇರಿ ಕೋಮ್ ಅನುಪಸ್ಥಿತಿಯಲ್ಲಿ ಭಾರತ ಬಾಕ್ಸಿಂಗ್ ತಂಡ ಈ ಬಾರಿ ಚಿನ್ನ ಗೆಲ್ಲುವುದು ಅಸಾಧ್ಯವೆಂಬ ಪರಿಸ್ಥಿತಿಯನ್ನು ಅಮಿತ್ ಹೋಗಲಾಡಿಸಿದರು. ದೈಹಿಕ ಫಿಟ್ನೆಸ್ ಸಮಸ್ಯೆಯಿಂದ ಸೆಮಿಫೈನಲ್ ಬೌಟ್‌ಗೆ ವಿಕಾಸ್ ಕೃಷ್ಣನ್ ಅನರ್ಹವಾದಾಗ ಭಾರತ ಚಿನ್ನದ ಪದಕಕ್ಕಾಗಿ ಅಮಿತ್ ಅವರನ್ನೇ ಆಶ್ರಯಿಸಿತ್ತು. ಕಡೆಗೂ ಅಮಿತ್ ನಿರಾಸೆಗೊಳಿಸದೆ ಚಿನ್ನದ ಪದಕ ತಂದಿತ್ತರು.

ಬಾಕ್ಸಿಂಗ್‌ನ ಉನ್ನತ ತಂತ್ರಗಾರಿಕೆಯಿಂದ ಉಜ್ಬೇಕಿಸ್ತಾನದ ಹಾಲಿ ಒಲಿಂಪಿಕ್ ಚಾಂಪಿಯನ್ ವಿರುದ್ಧ ಪ್ರಭುತ್ವ ಸಾಧಿಸಿದ ೨೨ರ ಹರೆಯದ ಸೇನಾನೌಕರ ಅಮಿತ್ ಜಯಭೇರಿ ಬಾರಿಸಿದರು. ಅಂತಾರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಸ್ಟಾರ್ ಬಾಕ್ಸರ್ ಎನಿಸಿರುವ ಡುಸ್ಮಟೊವ್ ಕಳೆದ ವರ್ಷ ನಡೆದ ವಿಶ್ವ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಫ್ಲೈವೇಟ್ ವಿಭಾಗದಲ್ಲಿ ಅಮಿತ್ ಅಮೋಘ ಸಾಧನೆ ತೋರಿದರೆ, ಪ್ರಣಬ್ ಬರ್ದಾನ್ ಹಾಗೂ ಶಿವನಾಥ್ ದೇ ಸರ್ಕಾರ್ ಬ್ರಿಡ್ಜ್ ವಿಭಾಗದಲ್ಲಿ ಚಿನ್ನ ಗೆದ್ದರು. ಇನ್ನು ಮಹಿಳಾ ತಂಡದ ಸ್ಕ್ವಾಶ್‌ನಲ್ಲಿ ಭಾರತ, ಹಾಂಕಾಂಗ್ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಹದಿನಾಲ್ಕನೇ ದಿನದಾಟದಂದು ಬಂದ ಈ ಎರಡು ಚಿನ್ನ ಮತ್ತು ಬೆಳ್ಳಿ ಪದಕದೊಂದಿಗೆ ಭಾರತ, ೧೫ ಚಿನ್ನ, ೨೪ ಬೆಳ್ಳಿ ಹಾಗೂ ೨೯ ಕಂಚು ಸೇರಿದ ಒಟ್ಟು ೬೮ ಪದಕಗಳನ್ನು ಗೆದ್ದುಕೊಂಡಿತು.

ಅಂದಹಾಗೆ, ಏಷ್ಯಾಡ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅಮಿತ್, ತಂತ್ರಗಾರಿಕೆಯಲ್ಲಿ ಅಸಾಧಾರಣ ಸಮತೋಲನ ತೋರಿದರು. ಮುಖ್ಯವಾಗಿ, ಫೈನಲ್‌ನಲ್ಲಂತೂ ರಕ್ಷಣಾತ್ಮಕ ನಡೆಯಲ್ಲಿ ಅತ್ಯುತ್ಕೃಷ್ಟತೆ ಮೆರೆದರು. ಕಳೆದ ವರ್ಷ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಅಮಿತ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಚೊಚ್ಚಲ ಏಷ್ಯಾಡ್‌ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಭಾರತದ ಎಂಟನೇ ಬಾಕ್ಸರ್ ಎನಿಸಿಕೊಂಡರು.

ಇದನ್ನೂ ಓದಿ : ಕೈಕೊಟ್ಟ ಫಿಟ್ನೆಸ್; ಕಂಚು ಗೆದ್ದು ಹ್ಯಾಟ್ರಿಕ್ ಸಾಧನೆ ಮೆರೆದ ವಿಕಾಸ್ ಕೃಷ್ಣನ್

ಇನ್ನು, ಈ ಋತುವಿನಲ್ಲಿ ಚೊಚ್ಚಲ ಇಂಡಿಯನ್ ಓಪನ್‌ನಲ್ಲಿ ಬಂಗಾರ ಗೆದ್ದಿದ್ದ ಅಮಿತ್, ಬಲ್ಗೇರಿಯಾದಲ್ಲಿ ನಡೆದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಚಾಂಪಿಯನ್ ಆಗಿದ್ದರು. ಈ ಹಿಂದೆ ವಿಜೇಂದರ್ ಸಿಂಗ್ ಮತ್ತು ವಿಕಾಶ್ ಕೃಷ್ಣನ್ ಏಷ್ಯಾಡ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದರು. ೨೦೧೦ರ ಗುವಾಂಗ್‌ಜೌ ಕೂಟದಲ್ಲಿ ವಿಕಾಸ್ (೭೫ ಕೆಜಿ) ವಿಜೇಂದರ್ ಮತ್ತು ವಿಕಾಸ್ ಚಿನ್ನ ಜಯಿಸಿದ್ದರು. ೨೦೧೪ರ ಕೂಟದಲ್ಲಿ ಮೇರಿ ಕೋಮ್ ಸ್ವರ್ಣ ಗೆದ್ದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More