ಪಾಕ್ ಮಣಿಸಿ ಕಂಚು ಗೆದ್ದು ಏಷ್ಯಾಡ್‌ ಇತಿಹಾಸದಲ್ಲೇ ದಾಖಲೆ ಪದಕ ಗೆದ್ದ ಭಾರತ

ದುರದೃಷ್ಟವಶಾತ್ ಕಂಚಿನ ಪದಕದಿಂದ ವಂಚಿತವಾದ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ, ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ತಂಡವನ್ನು ೨-೧ ಗೋಲುಗಳಿಂದ ಮಣಿಸಿದ ಪಿ ಆರ್ ಶ್ರೀಜೇಶ್ ಪಡೆ ೧೮ನೇ ಏಷ್ಯಾಡ್‌ನಲ್ಲಿ ಕಂಚು ಗೆದ್ದಿತು. ಇದರೊಂದಿಗೆ ಕೂಟದಲ್ಲಿ ಭಾರತ ೬೯ನೇ ಪದಕ ಗಳಿಸಿತು

ಕೂಟಕ್ಕೂ ಮುನ್ನ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ಭಾರತ ತಂಡ, ಅದಕ್ಕೆ ತಕ್ಕಂತೆ ಗುಂಪು ಹಂತದಲ್ಲಿ ವೈಭವೋಪೇತ ಗೆಲುವು ಸಾಧಿಸಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಮಲೇಷ್ಯಾ ತಂಡದ ಎದುರಿನ ಪಂದ್ಯ ೨-೨ ಗೋಲುಗಳಿಂದ ಸಮಬಲ ಸಾಧಿಸಿದ ಅದು, ಪೆನಾಲ್ಟಿ ಶೂಟೌಟ್‌ನಲ್ಲಿಯೂ ಪಟ್ಟು ಸಡಿಲಿಸದೆ ಸಮಬಲ ಸಾಧಿಸಿತ್ತು. ಆದರೆ, ಸಡನ್ ಡೆತ್‌ನಲ್ಲಿ ಬಂದೆರಗಿದ ಹೃದಯವಿದ್ರಾವಕ ಸೋಲಿನಿಂದಾಗಿ ಚಿನ್ನ ಕೈತಪ್ಪಿತಾದರೂ, ಕಡೆಗೆ ಕಂಚಿನ ಪದಕವನ್ನು ಗೆದ್ದು ನಿಟ್ಟುಸಿರುಬಿಟ್ಟಿದೆ.

ಶನಿವಾರ (ಸೆ.೧) ನಡೆದ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿನ ಕಾದಾಟದಲ್ಲಿ ಭಾರತ ತಂಡ, ಎಚ್ಚರಿಕೆಯಿಂದ ಕಾದಾಡಿತು. ಪಂದ್ಯ ಶುರುವಾದ ಮೊದಲ ಮೂರು ನಿಮಿಷಗಳಲ್ಲೇ ಆಕಾಶ್‌ದೀಪ್ ಸಿಂಗ್ ಗಳಿಸಿದ ಗೋಲಿನಿಂದ ಭಾರತ ೧-೦ ಮುನ್ನಡೆ ಪಡೆಯಿತು. ಆಕರ್ಷಕ ಫೀಲ್ಡ್ ಗೋಲು ಬಾರಿಸಿದ ಆಕಾಶ್‌ದೀಪ್ ಪಾಕ್ ಪಾಳೆಯದಲ್ಲಿ ತಳಮಳ ಸೃಷ್ಟಿಸಿದರು.

ಪ್ರಥಮಾರ್ಧದಲ್ಲಿ ೧-೦ ಗೋಲಿನ ಮುನ್ನಡೆ ಪಡೆದ ಭಾರತಕ್ಕೆ ವಿರಾಮದ ಬಳಿಕ ಮುಹಮದ್ ಆತಿಕ್ ಗೋಲು ಹೊಡೆದು ೧-೧ ಸಮಬಲ ಸಾಧಿಸಿದರು. ಆದರೆ, ಪಂದ್ಯದ ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (೫೦ನೇ ನಿ.) ದಾಖಲಿಸಿದ ಗೋಲು ಭಾರತಕ್ಕೆ ೨-೧ ಮುನ್ನಡೆ ತಂದಿತು. ಇದಕ್ಕೆ ಪ್ರತಿಯಾಗಿ ೨ ನಿಮಿಷಗಳ ಅಂತರದಲ್ಲೇ ಮುಹಮದ್ ಪ್ರತಿಗೋಲು ಹೊಡೆದು, ಆತಂಕ ಎಬ್ಬಿಸಿದರು. ಆದರೆ, ಆ ಬಳಿಕ ಕೊನೆಯ ಎಂಟು ನಿಮಿಷಗಳಲ್ಲಿ ಪಾಕ್ ಭಾರತದ ರಕ್ಷಣಾ ವ್ಯೂಹವನ್ನು ಭೇದಿಸಲು ವಿಫಲವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ : ಹಾಲಿ ಚಾಂಪಿಯನ್ ಭಾರತದ ಕೈಯಿಂದ ಬಂಗಾರ ಕಿತ್ತುಕೊಂಡ ಮಲೇಷ್ಯಾ!

ಒಲಿಂಪಿಕ್ಸ್ ಬೇಗುದಿ!

ಪಾಕಿಸ್ತಾನ ವಿರುದ್ಧದ ೨-೧ ಗೋಲುಗಳಿಂದ ಗೆಲುವು ಸಾಧಿಸಿದ ಹೊರತಾಗಿಯೂ ಐದನೇ ಶ್ರೇಯಾಂಕಿತ ಭಾರತ ಹಾಕಿ ತಂಡ ಏಷ್ಯಾಡ್‌ನಲ್ಲಿ ಚಿನ್ನ ಗೆಲ್ಲಲಾಗದ್ದಕ್ಕಿಂತಲೂ ಮುಂದಿನ ೨೦೨೦ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಲಾಗಲಿಲ್ಲ ಎಂಬ ಬೇಗುದಿಯೇ ದೊಡ್ಡದಾಗಿದೆ. ಕೇವಲ ಭಾರತಕ್ಕಷ್ಟೇ ಅಲ್ಲ, ಮೂರನೇ ಸ್ಥಾನಕ್ಕಾಗಿನ ಕಾದಾಟದಲ್ಲಿ ಭಾರತದ ಎದುರು ಸೋತ ೧೩ನೇ ಶ್ರೇಯಾಂಕಿತ ಪಾಕ್ ಕೂಡಾ ಒಲಿಂಪಿಕ್ಸ್ ಗೆ ನೇರ ಪ್ರವೇಶ ಪಡೆಯಲಾಗಲಿಲ್ಲ.

ಇದೀಗ ಏಷ್ಯಾದ ಎರಡು ಪ್ರಬಲ ಹಾಕಿ ರಾಷ್ಟ್ರಗಳು ಅರ್ಹತಾ ಟೂರ್ನಿಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಬೇಕಾಗಿದೆ. ಅಂದಹಾಗೆ, ಪಾಕ್ ವಿರುದ್ಧ ಇಂದು ಭಾರತ ೨-೧ ಗೋಲುಗಳ ಗೆಲುವು ಸಾಧಿಸುವ ಅವಕಾಶ ಇತ್ತಾದರೂ, ೬೦ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಗೋಲು ಗಳಿಸುವ ಅಪೂರ್ವ ಅವಕಾಶವನ್ನು ಕೈಚೆಲ್ಲಿದ್ದರಿಂದ ಅದು ಕೈಗೂಡಲಿಲ್ಲ.

ಸ್ವರ್ಣ ಗಳಿಕೆಯಲ್ಲಿ ದಾಖಲೆ ಬರೆದ ಭಾರತ

ಹಾಕಿಯಲ್ಲಿ ದೊರೆತ ಕಂಚಿನ ಪದಕದೊಂದಿಗೆ ಭಾರತ ತಂಡ ಇಂಡೋನೇಷ್ಯಾ ಏಷ್ಯಾಡ್‌ನಲ್ಲಿ ೧೯೫೧ರಲ್ಲಿ ಗಳಿಸಿದ್ದ ಸ್ವರ್ಣ ಪದಕದ ದಾಖಲೆಯನ್ನು ಸರಿಗಟ್ಟಿತು. ೧೯೫೧ರಲ್ಲಿ ೧೫ ಸ್ವರ್ಣ, ೧೬ ಬೆಳ್ಳಿ ಹಾಗೂ ೨೦ ಕಂಚು ಸೇರಿದ ೫೧ ಪದಕಗಳನ್ನು ಗೆದ್ದ ಭಾರತ, ೨೦೧೦ರ ಗುವಾಂಗ್‌ಜೌ ಕೂಟದಲ್ಲಿ ೧೪ ಚಿನ್ನ, ೧೭ ಬೆಳ್ಳಿ ೩೪ ಕಂಚು ಸೇರಿದ ೬೫ ಪದಕ ಜಯಿಸಿತ್ತು. ಈ ಬಾರಿ ೧೫ ಸ್ವರ್ಣ, ೨೪ ಬೆಳ್ಳಿ, 30 ಕಂಚು ಸೇರಿದ ೬9 ಪದಕಗಳನ್ನು ಗೆಲ್ಲುವುದರೊಂದಿಗೆ ಸಾರ್ಥಕ್ಯ ಮರೆಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More