ಹದಿನೆಂಟನೇ ಏಷ್ಯಾಡ್‌ಗೆ ಭಾವನಾತ್ಮಕ ವಿದಾಯ ಹೇಳಿದ ಇಂಡೋನೇಷ್ಯಾ

ಕಳೆದ ಹದಿನೈದು ದಿನಗಳಿಂದ ನಡೆದ ಹದಿನೆಂಟನೇ ಏಷ್ಯಾ ಕ್ರೀಡಾಕೂಟಕ್ಕೆ ಭಾನುವಾರ (ಸೆ.೨) ಅಧಿಕೃತವಾಗಿ ತೆರೆಬಿದ್ದಿತು. ಕೂಟಕ್ಕೆ ಇಂಡೋನೇಷ್ಯಾ ಭಾವನಾತ್ಮಕ ವಿದಾಯ ಹೇಳಿತು. ಭಾರತದ ಪಾಲಿಗೆ ಈ ಕೂಟ ಏಷ್ಯಾಡ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆಯಾದದ್ದು ವಿಶೇಷ

೭೬ ಸಹಸ್ರ ಪ್ರೇಕ್ಷಕ ಸಾಮರ್ಥ್ಯದ ಗಿಲೊರಾ ಬಂಗ್ ಕರ್ನೋ ಕ್ರೀಡಾಂಗಣ ಟ್ರ್ಯಾಕ್ ಹಾಗೂ ಫೀಲ್ಡ್ ಸ್ಪರ್ಧೆಗಳು ನಡೆಯುವಾಗ ಭಾರೀ ಪ್ರಮಾಣದಲ್ಲಿ ಜನತೆಯನ್ನು ಸೆಳೆದಿರಲಿಲ್ಲವಾದರೂ, ಸಮಾರೋಪ ಸಮಾರಂಭಕ್ಕಂತೂ ಕಿಕ್ಕಿರಿದಿತ್ತು. ಉದ್ಘಾಟನಾ ಕಾರ್ಯಕ್ರಮದಂತೆ ಸಮಾರಂಭವು ವೈಭವೋಪೇತ ಹಾಗೂ ವರ್ಣರಂಜಿತವಾಗಿರದೆ ಹೋದಾಗ್ಯೂ, ಸಮಾರೋಪ ಸಮಾರಂಭ ಸಂಪೂರ್ಣವಾಗಿ ಸಪ್ಪೆಯಾಗಿರಲಿಲ್ಲ.

ಸರಿಸುಮಾರು ಎರಡು ತಾಸು ಸುದೀರ್ಘ ಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಸಿದ್ಧಾರ್ಥ್ ಸ್ಲಾಥಿಯಾ ಹಾಗೂ ಡಿನಾಡ ಕಂಠಸಿರಿಯಲ್ಲಿ ಮೂಡಿಬಂದ ‘ಕೊಯಿ ಮಿಲ್‌ ಗಯಾ’, ‘ಕುಚ್ ಕುಚ್ ಹೋತಾ ಹೈ’ ಮತ್ತು ‘ಜೈ ಹೋ’, ಹಾಡಿನ ಮಾರ್ದನಿಯಲ್ಲಿ ಇಂಡೋನೇಷ್ಯಾದ ಬಾಲಿವುಡ್ ಪ್ರೇಮವನ್ನು ಅನಾವರಣಗೊಳಿಸಿತು. ಸಮಾರೋಪ ಸಮಾರಂಭದಲ್ಲಿ ಭಾರತ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ತಂಡವನ್ನು ಮುನ್ನಡೆಸಿದರು.

ಉದ್ಘಾಟನಾ ಸಮಾರಂಭದಂದು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡುಡೊ ಮೋಟಾರ್ ಸೈಕಲ್‌ ಮೇಲೆ ಸಾಹಸಮಯವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಿ ಮಿಂಚು ಹರಿಸಿದ್ದರು. ಆದರೆ, ಈ ಬಾರಿ ಅವರಿಂದ ವಿಡಿಯೋ ಸಂದೇಶ ಮಾತ್ರ ಕ್ರೀಡಾಂಗಣದಲ್ಲಿದ್ದವರನ್ನು ಸ್ಪರ್ಶಿಸಿತು. ಹಾಡು, ನೃತ್ಯ ಮತ್ತು ಬಾಣಬಿರುಸುಗಳು ಕ್ರೀಡಾಂಗಣದಲ್ಲಿದ್ದವರನ್ನು ಮುದಗೊಳಿಸಿತು.

೨೦೩೨ರ ಒಲಿಂಪಿಕ್ಸ್‌ಗೆ ಸ್ಫೂರ್ತಿ ನೀಡಿದ ಆತಿಥ್ಯ

“ಪ್ರತಿಯೊಬ್ಬರೂ ನೀಡಿದ ಬೆಂಬಲದಿಂದ ಇದು ಸಾಧ್ಯವಾಯಿತು. ಇಡೀ ಇಂಡೋನೇಷ್ಯಾ ಒಂದು ಶಕ್ತಿಯಾಗಿ ಒಗ್ಗಟ್ಟಿನಿಂದ ಸ್ಪಂದಿಸಿದ್ದರಿಂದ ಹದಿನೆಂಟನೇ ಏಷ್ಯಾಡ್ ಅನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಮುಗಿಸುವಂತಾಯಿತು. ೨೦೧೬ರ ಮಾರ್ಚ್‌ನಲ್ಲಿ ಕೂಟದ ಆಯೋಜನೆಗೆ ರೂಪುರೇಷೆ ಸಿದ್ಧಗೊಳಿಸಲಾಯಿತು. ಸಂಘಟನಾ ಸಂಸ್ಥೆಯಾಗಿ ನಾವು ನಮ್ಮ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದೆವು. ಇಂಡೋನೇಷ್ಯಾದ ಅತ್ಯುತ್ತಮ ಪ್ರತಿಭಾನ್ವಿತರನ್ನು ಕೂಟದ ಯಶಸ್ಸಿಗಾಗಿ ಬಳಸಿಕೊಂಡೆವು. ಇವೆಲ್ಲ ಯೋಜನೆಗಳು ಶೇ.೧೦೦ರಷ್ಟು ಕೈಗೂಡಲಿಲ್ಲ. ಆದರೆ, ಸಮಸ್ಯೆ ಇದ್ದೆಡೆ ಸುನಾಯಾಸವಾಗಿ ಅದನ್ನು ಬಗೆಹರಿಸಲಾಯಿತು. ನಾವು ಸಮಸ್ಯೆಗೆ ಬೆನ್ನು ತೋರಲಿಲ್ಲ,’’ ಎಂದು ಐಎನ್‌ಎಎಸ್‌ಜಿಒಸಿಯ ಮುಖ್ಯ ಸಂಘಟನಾ ಸಮಿತಿ ಮುಖ್ಯಸ್ಥ ಎರಿಕ್ ತೋಹಿರ್ ಕ್ರೀಡಾಂಗಣದಲ್ಲಿದ್ದವರಿಗೆ ಅರುಹಿದರು.

೧೯೬೨ರ ನಂತರ ಅತ್ಯಂತ ಯಶಸ್ವಿಯುತವಾಗಿ ಏಷ್ಯಾಡ್ ಸಂಘಟಿಸಿದ ಇಂಡೋನೇಷ್ಯಾ, ಆ ಮೂಲಕ ೨೦೩೨ರ ಒಲಿಂಪಿಕ್ಸ್‌ ಆತಿಥ್ಯದ ಹಕ್ಕು ಕೇಳಲು ಆತ್ಮವಿಶ್ವಾಸ ಪಡೆಯಿತು. ವಿಐಪಿ ಸಾಲಿನಲ್ಲಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬ್ಯಾಚ್, ಒಸಿಎ ಮುಖ್ಯಸ್ಥ ಅಹಮದ್ ಅಲ್ ಫಹಾದ್ ಅಲ್ ಸಾಬಾಹ್ ಮತ್ತು ಇಂಡೋನೇಷ್ಯಾ ಉಪಾಧ್ಯಕ್ಷರು ಕೂಡ ಒಲಿಂಪಿಕ್ಸ್ ಬಿಡ್‌ ಕುರಿತ ಪ್ರಸ್ತಾವಕ್ಕೆ ಹೆಬ್ಬೆರಳು ತೋರಿ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ : ಉದ್ಘಾಟನಾ ಬೆರಗಿನಲ್ಲಿ ಏಷ್ಯಾಕೂಟಕ್ಕೆ ಇಂಡೋನೇಷ್ಯಾದ ಸಂಮೋಹಕ ಸ್ಪರ್ಶ

ಸಮಾರೋಪಕ್ಕೆ ಆಧುನಿಕ ಸ್ಪರ್ಶ

ಉದ್ಘಾಟನಾ ಸಮಾರಂಭವು ಇಂಡೋನೇಷ್ಯಾದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಿದರೆ, ಸಮಾರೋಪ ಸಮಾರಂಭವು ಆಧುನಿಕತೆಯಿಂದ ಮೇಳೈಸಿತ್ತು. ಭಾರತ, ಚೀನಾ, ಕೊರಿಯಾದ ಕಲಾವಿದರು ಕ್ರೀಡಾಪಟುಗಳನ್ನು ಹಾಗೂ ಪ್ರೇಕ್ಷಕರನ್ನು ಬಹುವಾಗಿ ರಂಜಿಸಿದರು. ಕಳೆದ ಹದಿನೈದು ದಿನಗಳಲ್ಲಿ ಪದಕಕ್ಕಾಗಿ ಒಬ್ಬರಿಗೊಬ್ಬರು ಪರಸ್ಪರ ಸೆಣಸಿದರೂ, ಸಮಾರೋಪದಲ್ಲಿ ಮತ್ತೆ ಸ್ನೇಹ, ಸೌಹಾರ್ದ ಮತ್ತು ಗೆಳೆತನದೊಂದಿಗೆ ಪರಸ್ಪರ ಅಪ್ಪಿ ಬೀಳ್ಕೊಟ್ಟರು.

ಭಾರತದ ಐತಿಹಾಸಿಕ ಸಾಧನೆ

ಏಷ್ಯಾ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತ ಈ ಬಾರಿಯ ಕೂಟದಲ್ಲಿ ಐತಿಹಾಸಿಕ ಸಾಧನೆ ಮೆರೆಯಿತು. ನಿರೀಕ್ಷೆಯಂತೆಯೇ ಚೀನಾ (132 ಚಿನ್ನ, ೯೨ ಬೆಳ್ಳಿ, ೬೫ ಕಂಚು) ೨೮೯ ಪದಕಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಜಪಾನ್ (೭೫ ಚಿನ್ನ, ೫೬ ಬೆಳ್ಳಿ, ೭೪ ಕಂಚು) ೨೦೫ ಪದಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯಿತು. ನಾಲ್ಕು ವರ್ಷಗಳ ಹಿಂದೆ ೨೦ ಅಗ್ರ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿದ್ದ ಆತಿಥೇಯ ಇಂಡೋನೇಷ್ಯಾ (೩೧ ಚಿನ್ನ, ೨೪ ಬೆಳ್ಳಿ, ೪೩ ಕಂಚು) ಒಟ್ಟು ೯೮ ಪದಕಗಳನ್ನು ಪಡೆದು ನಾಲ್ಕನೇ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮೆರೆಯಿತು.

ಆದರೆ, ಭಾರತದ ಪಾಲಿಗಂತೂ ಈ ಕ್ರೀಡಾಕೂಟ ಸಾರ್ವಕಾಲಿಕ ದಾಖಲೆ ಬರೆಯಿತು. ೧೫ ಚಿನ್ನ, ೨೪ ಬೆಳ್ಳಿ ಹಾಗೂ ೩೦ ಕಂಚು ಸೇರಿದ ಒಟ್ಟು ೬೯ ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್‌ಗಳು ಅಭೂತಪೂರ್ವ ಸಾಧನೆ ಮೆರೆದರು. ಅಥ್ಲೆಟಿಕ್ಸ್‌ನಲ್ಲಂತೂ ಭಾರತ ಈ ಏಷ್ಯಾಡ್‌ನಲ್ಲಿ ಮಿಂಚಿತು. ಇಷ್ಟಾದರೂ, ಪುರುಷರ ಹಾಕಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಕಂಚಿಗೆ ಕುಸಿದದ್ದು ಪ್ರಮುಖ ವೈಫಲ್ಯವಾಗಿ ಕಾಡಿತು.

ಅಂದಹಾಗೆ, ಮುಂದಿನ ಏಷ್ಯಾಡ್ ಕೂಟ ಚೀನಾದ ಹ್ಯಾಂಗ್‌ಜೌನಲ್ಲಿ ಸೆಪ್ಟೆಂಬರ್ ೧೦ರಿಂದ ೨೫ರವರೆಗೆ ನಡೆಯಲಿದ್ದು, ಕಿರು ಸಾಂಸ್ಕೃತಿಕ ಪ್ರದರ್ಶನವನ್ನು ಒಳಗೊಂಡ ಸಣ್ಣ ದೃಶ್ಯಾವಳಿಯನ್ನು ದೊಡ್ಡ ಪರದೆಯಲ್ಲಿ ಬಿತ್ತರಿಸಲಾಯಿತು. ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಅಧ್ಯಕ್ಷ ಶೇಖ್ ಅಹಮದ್ ಅಲ್ ಫಹಾದ್ ಸಾಬಾಹ್ ‘ಇದೊಂದು ಐತಿಹಾಸಿಕ ಕೂಟ’ ಎಂದು ಘೋಷಿಸಿದರು. ಇಂಡೋನೇಷ್ಯಾ ಕೂಟಕ್ಕೆ ೧೩ ಸಹಸ್ರ ಸ್ವಯಂಸೇವಕರು ದುಡಿದ ಫಲವಾಗಿ ಇಂಡೋನೇಷ್ಯಾ ಕೂಟಕ್ಕೆ ಏಷ್ಯಾ ವಿದಾಯ ಹೇಳಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More