ಅಮೆರಿಕ ಓಪನ್: ಪ್ರೀಕ್ವಾರ್ಟರ್‌ಫೈನಲ್ ತಲುಪಿದ ಕ್ವಿಟೋವಾ, ಶರಪೋವಾ

ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಪೆಟ್ರಾ ಕ್ವಿಟೋವಾ ಹಾಗೂ ಮರಿಯಾ ಶರಪೋವಾ ಅಂತಿಮ ಹದಿನಾರರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜೊಕೊವಿಚ್ ಮತ್ತು ರೋಜರ್ ಫೆಡರರ್ ಜಯದ ಓಟ ಮುಂದುವರಿಸಿದ್ದಾರೆ

ಐದು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಮರಿಯಾ ಶರಪೋವಾ, ವರ್ಷದ ಕಡೇ ಗ್ರಾಂಡ್‌ಸ್ಲಾಮ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದ್ದಾರೆ. ವನಿತೆಯರ ಸಿಂಗಲ್ಸ್ ವಿಭಾಗದ ತೃತೀಯ ಸುತ್ತಿನ ಹಣಾಹಣಿಯಲ್ಲಿ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ಎದುರು ೨೦೦೬ರ ಯುಎಸ್ ಓಪನ್ ಚಾಂಪಿಯನ್ ಶರಪೋವಾ ೬-೩, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

೩೧ರ ಹರೆಯದ ಶರಪೋವಾ ಫ್ಲಶಿಂಗ್ ಮೆಡೋಸ್‌ನಲ್ಲಿ ೨೩ನೇ ಗೆಲುವಿನೊಂದಿಗೆ ಅಂತಿಮ ಹದಿನಾರರ ಹಂತಕ್ಕೆ ಧಾವಿಸಿದರು. ೧೦ನೇ ಶ್ರೇಯಾಂಕಿತೆ ಒಸ್ಟಾಪೆಂಕೊ ಎದುರು ಅಬ್ಬರದ ಆಟವಾಡಿದ ಶರಪೋವಾ, ಇದೀಗ ಮುಂದಿನ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲಾ ನವ್ವಾರೊ ಎದುರು ಕಾದಾಡಲಿದ್ದಾರೆ.

೨೦೧೭ರಲ್ಲಿ ಡೋಪಿಂಗ್ ಪ್ರಕರಣದಿಂದಾಗಿ ೧೫ ತಿಂಗಳ ಅಮಾನತು ಶಿಕ್ಷೆ ಅನುಭವಿಸಿದ ನಂತರದಲ್ಲಿ ಯಾವುದೇ ಗ್ರಾಂಡ್‌ಸ್ಲಾಮ್ ಗೆಲ್ಲಲು ವಿಫಲವಾಗಿದ್ದಾರೆ. ಕಳೆದ ಬಾರಿಯ ಯುಎಸ್ ಓಪನ್‌ನಲ್ಲಿ ಹದಿನಾರರ ಘಟ್ಟಕ್ಕೆ ತಲುಪಿದ್ದೇ ಡೋಪಿಂಗ್‌ ನಂತರದಲ್ಲಿನ ಶರಪೋವಾ ಶ್ರೇಷ್ಠ ಸಾಧನೆ. ಈಗಾಗಲೇ ಸಿಮೋನಾ ಹ್ಯಾಲೆಪ್ ಮತ್ತು ಕೆರೋಲಿನ್ ವೋಜ್ನಿಯಾಕಿ ಟೂರ್ನಿಯಿಂದ ನಿರ್ಗಮಿಸಿದ್ದು, ವಿಂಬಲ್ಡನ್ ಚಾಂಪಿಯನ್ ಕೆರ್ಬರ್ ಕೂಡಾ ಸೋತು ಹೊರಬಿದ್ದಿದ್ದಾರೆ. ಹೀಗಾಗಿ ಶರಪೋವಾ ಗ್ರಾಂಡ್‌ಸ್ಲಾಮ್ ಗೆಲುವಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಉಳಿದಿರುವುದು ಸೆರೆನಾ ವಿಲಿಯಮ್ಸ್ ಮಾತ್ರ.

ಇನ್ನು, ೨೦೧೭ರ ಫ್ರೆಂಚ್ ಓಪನ್ ಚಾಂಪಿಯನ್, ೨೧ರ ಹರೆಯದ ಒಸ್ಟಾಪೆಂಕೊ ರಷ್ಯನ್ ಆಟಗಾರ್ತಿಯ ಎದುರು ಒತ್ತಡಕ್ಕೆ ಒಳಗಾಗಿ ಸೋಲನುಭವಿಸಿದರು. ಅನಗತ್ಯ ತಪ್ಪು ಹೊಡೆತಗಳಿಂದಲೇ ಬೆಲೆ ತೆತ್ತ ಒಸ್ಟಾಪೆಂಕೊ, ಮೊದಲ ಸೆಟ್‌ಗಿಂತಲೂ ಎರಡನೇ ಸೆಟ್‌ನಲ್ಲಿ ಇನ್ನಷ್ಟು ಕುಸಿತ ಕಂಡು ಕೇವಲ ೨ ಗೇಮ್‌ಗಳನ್ನಷ್ಟೇ ಗೆದ್ದು ಶರಪೋವಾ ಸುಲಭ ಗೆಲುವು ಕಾಣುವಂತೆ ಮಾಡಿದರು.

ಕೆರ್ಬರ್ ನಿರ್ಗಮನ

https://www.instagram.com/p/BnMq_49l_08/?tagged=dominikacibulkova

ಈ ಬಾರಿಯ ಯುಎಸ್ ಓಪನ್‌ ಪಂದ್ಯಾವಳಿಯ ಮತ್ತೊಂದು ಅಚ್ಚರಿ ಎಂದರೆ, ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ ತೃತೀಯ ಸುತ್ತಿನ ಪಂದ್ಯದಲ್ಲೇ ಸೋತು ನಿರ್ಗಮಿಸಿದ್ದು. ೨೦೦೮ರಲ್ಲಿ ಅಮೆರಿಕನ್ ಓಪನ್ ಜಯಿಸಿದ್ದ ಕೆರ್ಬರ್, ಸ್ಲೊವೇಕಿಯಾದ ೨೯ನೇ ಶ್ರೇಯಾಂಕಿತೆ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ೬-೩, ೩-೬, ೩-೬ ಸೆಟ್‌ಗಳಲ್ಲಿ ಸೋತು ಹಿನ್ನಡೆ ಅನುಭವಿಸಿದರು.

ಮೊದಲ ಸೆಟ್‌ನಲ್ಲೇ ಮೂರು ಬಾರಿ ಸಿಬುಲ್ಕೋವಾ ಸರ್ವ್ ಮುರಿದ ಕೆರ್ಬರ್, ಅಂದುಕೊಂಡಿದ್ದಂತೆಯೇ ಸೆಟ್ ಗೆದ್ದು ೧-೦ ಮುನ್ನಡೆ ಪಡೆದರು. ಆದರೆ, ಸ್ಲೊವೇಕಿಯಾ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಇದೇ ರೀತಿ ಕೆರ್ಬರ್ ಸರ್ವ್ ಮುರಿದು ತಿರುಗೇಟು ನೀಡಿದರಲ್ಲದೆ, ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು. ಇನ್ನು, ಮೂರನೇ ಸೆಟ್‌ನಲ್ಲಿ ಮತ್ತೆ ಎರಡು ಬಾರಿ ಸಿಬುಲ್ಕೋವಾ ಸರ್ವ್ ಮುರಿದರಲ್ಲದೆ, ಕೇವಲ ಮೂರು ಗೇಮ್‌ಗಳನ್ನಷ್ಟೇ ಬಿಟ್ಟುಕೊಟ್ಟು ಹದಿನಾರರ ಹಂತಕ್ಕೆ ಧಾವಿಸಿದರು. ಕೆರ್ಬರ್ ನಿರ್ಗಮನದೊಂದಿಗೆ ಈ ಋತುವಿನ ಮೊದಲ ಮೂರು ಗ್ರಾಂಡ್‌ಸ್ಲಾಮ್ ಗೆದ್ದ ಯಾವ ಆಟಗಾರ್ತಿಯೂ ಅಮೆರಿಕನ್ ಓಪನ್‌ನಲ್ಲಿ ಉಳಿದಿಲ್ಲದಂತಾಗಿದೆ.

ಇದನ್ನೂ ಓದಿ : ವಿಂಬಲ್ಡನ್ | ಕ್ವಿಟೋವಾ, ಶರಪೋವಾಗೆ ವಿಂಬಲ್ಡನ್ ಶಾಕ್! ಮೊದಲ ಸುತ್ತಲ್ಲೇ ನಿರ್ಗಮನ

ಕ್ವಿಟೋವಾ ಜಯದ ಓಟ

ವನಿತೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ತೃತೀಯ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಎಡಗೈ ಆಟಗಾರ್ತಿ ಪೆಟ್ರಾ ಕ್ವಿಟೋವಾ ಪ್ರೀಕ್ವಾರ್ಟರ್‌ಗೆ ಲಗ್ಗೆ ಹಾಕಿದರು. 2011, 2014ರ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ, ತಮ್ಮ ದೇಶದವರೇ ಆದ ಅರಿನಾ ಸಬಾಲೆಂಕಾ ವಿರುದ್ಧ ೭-೫, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ನಡೆದರು.

ಕಳೆದ ಸಾಲನ್ನೂ ಸೇರಿದಂತೆ ೨೦೧೫ರಲ್ಲಿಯೂ ಯುಎಸ್ ಓಪನ್ ಕ್ವಾರ್ಟರ್‌ಫೈನಲ್ ತಲುಪಿದ್ದ ಬೆಲಾರಸ್ ಆಟಗಾರ್ತಿ ಕ್ವಿಟೋವಾ, ಒಮ್ಮೆಯೂ ಅಮೆರಿಕನ್ ಓಪನ್‌ನಲ್ಲಿ ಗೆಲುವು ಸಾಧಿಸಿಲ್ಲ. ಚೊಚ್ಚಲ ಅಮೆರಿಕನ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕ್ವಿಟೋವಾ, ಸೋಮವಾರ (ಸೆ.೩) ನಡೆಯಲಿರುವ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ ಸ್ಪರ್ಧಿಸಲಿದ್ದಾರೆ.

ಜೊಕೊವಿಚ್, ಫೆಡರರ್ ಗೆಲುವು

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಗೆಲುವಿನ ಅಭಿಯಾನ ಮುಂದುವರೆಸಿದ್ದಾರೆ. ಶನಿವಾರ (ಸೆ.೧) ತಡರಾತ್ರಿ ನಡೆದ ತೃತೀಯ ಸುತ್ತಿನ ಹಣಾಹಣಿಯಲ್ಲಿ ಐದು ಬಾರಿಯ ಯುಎಸ್ ಓಪನ್ ಚಾಂಪಿಯನ್ ಫೆಡರರ್, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ ೬-೪, ೬-೧, ೭-೫ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು.

೩೭ರ ಹರೆಯದ ಫೆಡರರ್, ಒಂದು ತಾಸು ಹಾಗೂ ೪೪ ನಿಮಿಷಗಳ ಕಾದಾಟದಲ್ಲಿ ಕಿರ್ಗಿಯೋಸ್ ಎದುರು ಮೊದಲ ಮತ್ತು ಕೊನೆಯ ಸೆಟ್‌ಗಳಲ್ಲಿ ಮಾತ್ರ ಕೊಂಚ ಪ್ರಯಾಸ ಪಟ್ಟರು. ೨೦೦೮ರಿಂದ ಫ್ಲಶಿಂಗ್ ಮೆಡೋಸ್‌ನಲ್ಲಿ ಪ್ರಶಸ್ತಿ ಜಯಿಸಲು ವಿಫಲವಾಗಿರುವ ೨೦ ಗ್ರಾಂಡ್‌ಸ್ಲಾಮ್‌ಗಳ ವಿಜೇತ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಜಾನ್ ವಿಲ್ಮನ್ ಎದುರು ಸ್ಪರ್ಧಿಸಲಿದ್ದಾರೆ.

09.01.2018 Round 3 @usopen @djokernole #usopen

A post shared by Leo Bingky (@iambingky) on

ಇನ್ನು, ಭಾನುವಾರ (ಸೆ.೨) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ಆಟಗಾರ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಜಯಶಾಲಿಯಾದರು. ವಿಂಬಲ್ಡನ್ ಚಾಂಪಿಯನ್ ಜೊಕೊವಿಚ್, ೬-೨, ೬-೩, ೬-೩ ನೇರ ಸೆಟ್‌ಗಳಲ್ಲಿ ಫ್ರಾನ್ಸ್ ಆಟಗಾರನಿಗೆ ಸೋಲುಣಿಸಿ ಮುಂದಿನ ಹಂತಕ್ಕೆ ಧಾವಿಸಿದರು. ಸೋಮವಾರ (ಸೆ.೩) ನಡೆಯಲಿರುವ ಹದಿನಾರರ ಹಂತದ ಪಂದ್ಯದಲ್ಲಿ ಪೋರ್ಚುಗಲ್‌ನ ಜಾವೊ ಸೌಸಾ ವಿರುದ್ಧ ಜೊಕೊವಿಚ್ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More