ಮತ್ತೆ ಅಲಿ ಸ್ಪಿನ್ ಸುಳಿಗೆ ಸಿಲುಕಿದ ಭಾರತದ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್

ಮೊದಲ ಇನ್ನಿಂಗ್ಸ್‌ನಲ್ಲಿ ೫ ವಿಕೆಟ್ ಪಡೆದು ಮಿಂಚಿದ್ದ ಸ್ಪಿನ್ನರ್ ಮೊಯೀನ್ ಅಲಿ, ಎರಡನೇ ಇನ್ನಿಂಗ್ಸ್‌ನಲ್ಲೂ ಭಾರತದ ಇನ್ನಿಂಗ್ಸ್‌ಗೆ ಎರವಾದರು. ಸೌಥಾಂಪ್ಟನ್ ಟೆಸ್ಟ್ ಸರಣಿ ಸಮಬಲದ ಹಿನ್ನೆಲೆಯಲ್ಲಿ ನಿರ್ಣಾಯಕವಾಗಿತ್ತಾದರೂ, ಅಲಿಯ ಚಮತ್ಕಾರಿ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ೬೦ ರನ್ ಗೆಲುವು ಕಂಡಿತು

೨೪೫ ರನ್ ಗೆಲುವಿನ ಗುರಿ ಬೆನ್ನುಹತ್ತಿದ ಭಾರತ ತಂಡ ಭೋಜನ ವಿರಾಮದ ಹೊತ್ತಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಾಗಲೇ ಪಂದ್ಯದ ಚಿತ್ರಣ ಏನಾಗಲಿದೆ ಎಂಬ ಸುಳಿವು ಸಿಕ್ಕಿತ್ತು. ಆದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ (೫೮: ೧೩೦ ಎಸೆತ, ೪ ಬೌಂಡರಿ) ಮತ್ತು ಅಜಿಂಕ್ಯ ರಹಾನೆ (೫೧) ಜತೆಯಾಟ ಕೊಂಚ ಭರವಸೆ ಮೂಡಿಸಿತ್ತು. ಆದರೆ, ಈ ಇಬ್ಬರನ್ನೂ ನಿರ್ಣಾಯಕ ಘಟ್ಟದಲ್ಲಿ ಮೊಯೀನ್ ಅಲಿ ಪೆವಿಲಿಯನ್‌ಗೆ ಅಟ್ಟಿ ಇಂಗ್ಲೆಂಡ್ ಗೆಲುವಿಗಿದ್ದ ಅಡೆತಡೆಗಳನ್ನೆಲ್ಲಾ ದೂರೀಕರಿಸಿದರು.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ (ಸೆ.೨) ಇಂಗ್ಲೆಂಡ್‌ನ ಸಂಘಟಿತ ಬೌಲಿಂಗ್‌ನೊಂದಿಗೆ ಪರಿಣಾಮಕಾರಿ ಬೌಲಿಂಗ್‌ನಿಂದ ಭಾರತ ತಂಡ 69.4 ಓವರ್‌ಗಳಲ್ಲಿ 184 ರನ್‌ ಗಳಿಸಿ 60 ರನ್‌ಗಳಿಂದ ನಿರ್ಗಮಿಸಿತು. ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 233 ರನ್‌ಗಳ ಮುನ್ನಡೆ ಗಳಿಸಿತ್ತು. ಭಾನುವಾರ 12 ರನ್‌ ಸೇರಿಸಿದ ಇಂಗ್ಲೆಂಡ್ ಅಂತಿಮವಾಗಿ ೯೬.೧ ಓವರ್‌ಗಳಲ್ಲಿ ೨೭೧ ರನ್‌ಗಳಿಗೆ ಆಲೌಟ್ ಆಯಿತು.

ಬಳಿಕ ಜಯದ ಗುರಿ ಬೆನ್ನತ್ತಿದ ಭಾರತಕ್ಕೆ ಆತಿಥೇಯ ತಂಡದ ಸ್ಟಾರ್ ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್ (೩೩ಕ್ಕೆ ೨) ಮತ್ತು ಸ್ಟುವರ್ಟ್‌ ಬ್ರಾಡ್ (೨೩ಕ್ಕೆ ೧) ಬಲವಾದ ಪೆಟ್ಟು ನೀಡಿದರು. ಭಾರತದ ಆರಂಭಿಕ ಜೋಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ನಾಲ್ಕನೇ ಓವರ್‌ನಲ್ಲಿ ಕೆ.ಎಲ್. ರಾಹುಲ್ ಅವರನ್ನು ಸ್ಟುವರ್ಟ್ ಬ್ರಾಡ್ ಬೌಲ್ಡ್ ಮಾಡಿ ಮೊದಲ ಹೊಡೆತ ನೀಡಿದರು. ಏಳು ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯದೆಯೇ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ : ನಿರ್ಣಾಯಕ ಘಟ್ಟದಲ್ಲಿ ಇಂಗ್ಲೆಂಡ್‌ಗೆ ಆಸರೆಯಾದ ಜೋಸ್ ಬಟ್ಲರ್ ಅರ್ಧಶತಕ

ಬಳಿಕ ಬಂದ ಚೇತೇಶ್ವರ ಪೂಜಾರ (೫) ಎರಡಂಕಿಯನ್ನೂ ದಾಟದೆ ಹೋದದ್ದು ಭಾರತದ ಪಾಳೆಯದಲ್ಲಿ ತಳಮಳ ಸೃಷ್ಟಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕದೊಂದಿಗೆ ಮಿಂಚಿದ್ದ ಈ ಸೌರಾಷ್ಟ್ರ ಬ್ಯಾಟ್ಸ್‌ಮನ್, ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ತದನಂತರದಲ್ಲಿ ಶಿಖರ್ ಧವನ್ (17) ಕೂಡ ಇದೇ ಆ್ಯಂಡರ್ಸನ್‌ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ (58: 130 ಎಸೆತ, 4 ಬೌಂಡರಿ) ಮತ್ತು ಅಜಿಂಕ್ಯ ರಹಾನೆ (51: 159 ಎಸೆತ, 1 ಬೌಂಡರಿ) ಇಂಗ್ಲೆಂಡ್ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದರು. ಈ ಮಧ್ಯೆ ಒಂದು ಬಾರಿ ‘ಜೀವದಾನ’ ಪಡೆದಿದ್ದ ಕೊಹ್ಲಿ, ತಂಡವನ್ನು ಜಯದತ್ತ ಮುನ್ನಡೆಸುವ ಭರವಸೆ ಮೂಡಿಸಿದ್ದರು. ಇಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 101 ರನ್‌ ಸೇರಿಸಿದಾಗ, ಇಂಗ್ಲೆಂಡ್ ಚಡಪಡಿಕೆ ತೀವ್ರವಾಯಿತು.

ಆದರೆ, ಅಪಾಯಕಾರಿಯಾಗಿದ್ದ ಈ ಜೋಡಿಯನ್ನು ಮೋಯಿನ್ ಅಲಿ ಪೆವಿಲಿಯನ್‌ಗೆ ಅಟ್ಟಿ ಇಂಗ್ಲೆಂಡ್ ಹಾದಿಯನ್ನು ಸುಗಮಗೊಳಿಸಿದರು. ಅವರ ಕೆಳಮಟ್ಟದ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ವಿರಾಟ್ ಕೊಹ್ಲಿ ಅವರ ಕೈಗವಸುಗಳಿಗೆ ತಾಕಿದ ಚೆಂಡು ಅಲೆಸ್ಟೇರ್ ಕುಕ್ ಕೈಸೇರಿತು. ಈ ಬಾರಿ ವಿರಾಟ್ ತೆಗೆದುಕೊಂಡ ಡಿಆರ್‌ಎಸ್‌ ಫಲ ನೀಡಲಿಲ್ಲ. ನಂತರ ಬಂದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು..

ಬಳಿಕ ರಿಷಭ್ ಪಂತ್ (18‌) ಮತ್ತು ಆರ್. ಅಶ್ವಿನ್ (25 ರನ್) ಅವರಿಬ್ಬರನ್ನು ಬಿಟ್ಟರೆ ಮಿಕ್ಕವರಾರೂ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಲಾಗಲಿಲ್ಲ. ಕೆಳ ಕ್ರಮಾಂಕಿತ ಆಟಗಾರರಾದ ಇಶಾಂತ್ ಶರ್ಮಾ (೦), ಮೊಹಮದ್ ಶಮಿ (೮) ಮತ್ತು ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೭೬.೪ ಓವರ್‌ಗಳಲ್ಲಿ ೨೪೬/೧೦ (ಮೊಯೀನ್ ಅಲಿ ೪೦, ಸ್ಯಾಮ್ ಕರನ್ ೭೮; ಜಸ್ಪ್ರೀತ್ ಬುಮ್ರಾ ೪೬ಕ್ಕೆ ೩, ಇಶಾಂತ್ ಶರ್ಮಾ ೨೬ಕ್ಕೆ ೨, ಮೊಹಮದ್ ಶಮಿ ೫೧ಕ್ಕೆ ೨, ಆರ್ ಅಶ್ವಿನ್ ೪೦ಕ್ಕೆ ೨) ಭಾರತ ಮೊದಲ ಇನ್ನಿಂಗ್ಸ್: ೮೪.೫ ಓವರ್‌ಗಳಲ್ಲಿ ೨೭೩/೧೦ (ಚೇತೇಶ್ವರ ಪೂಜಾರ ೧೩೨*, ವಿರಾಟ್ ಕೊಹ್ಲಿ ೪೬; ಮೊಯೀನ್ ಅಲಿ ೬೩ಕ್ಕೆ ೫, ಸ್ಟುವರ್ಟ್ ಬ್ರಾಡ್ ೬೩ಕ್ಕೆ ೩); ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ೯೬.೧ ಓವರ್‌ಗಳಲ್ಲಿ ೨೭೧/೧೦ (ಜೋಸ್ ಬಟ್ಲರ್ ೬೯, ಜೋ ರೂಟ್ ೪೮, ಸ್ಯಾಮ್ ಕರನ್ ೪೬; ಮೊಹಮದ್ ಶಮಿ ೫೩ಕ್ಕೆ ೩, ಇಶಾಂತ್ ಶರ್ಮಾ ೩೬ಕ್ಕೆ ೨); ಭಾರತ ಎರಡನೇ ಇನ್ನಿಂಗ್ಸ್: ೬೯.೪ ಓವರ್‌ಗಳಲ್ಲಿ ೧೮೪/೧೦ (ವಿರಾಟ್ ಕೊಹ್ಲಿ ೫೮, ಅಜಿಂಕ್ಯ ರಹಾನೆ ೫೧; ಮೊಯೀನ್ ಅಲಿ ೭೧ಕ್ಕೆ ೪); ಫಲಿತಾಂಶ: ಇಂಗ್ಲೆಂಡ್‌ಗೆ ೬೦ ರನ್ ಗೆಲುವು; ಪಂದ್ಯಶ್ರೇಷ್ಠ: ಮೊಯೀನ್ ಅಲಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More