ಅಮೆರಿಕನ್ ಓಪನ್: ಕ್ವಾರ್ಟರ್‌ಫೈನಲ್‌ಗೆ ನಡಾಲ್ ಹಾಗೂ ಡೆಲ್ ಪೊಟ್ರೊ

ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.೧ ಆಟಗಾರ ಹಾಗೂ ಹದಿನೆಂಟು ಗ್ರಾಂಡ್‌ಸ್ಲಾಮ್ ವಿಜೇತ ರಾಫೆಲ್ ನಡಾಲ್ ಹಾಗೂ ಡೆಲ್ ಪೊಟ್ರೊ ಕ್ವಾರ್ಟರ್‌ಫೈನಲ್‌ಗೆ ಧಾವಿಸಿದ್ದಾರೆ. ಹಾಲಿ ಚಾಂಪಿಯನ್ ನಡಾಲ್ ಥೀಮ್ ವಿರುದ್ಧ ಸೆಣಸಲಿದ್ದಾರೆ

ಸ್ಪೇನ್ ಆಟಗಾರ ನಡಾಲ್ ಗೆಲುವಿನ ಓಟ ಅಮೆರಿಕನ್ ಓಪನ್‌ನಲ್ಲಿ ಮುಂದುವರೆದಿದೆ. ಸೋಮವಾರ (ಸೆ. ೩) ನಡೆದ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜಾರ್ಜಿಯಾದ ನಿಕೊಲಸ್ ಬಸಿಲಾಶ್ವಿಲ್ಲಿ ವಿರುದ್ಧ ೬-೩, ೬-೩, ೬-೭ (೬/೮) ಹಾಗೂ ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಅಂತಿಮ ಎಂಟರ ಘಟ್ಟಕ್ಕೆ ಕಾಲಿಟ್ಟರು.

“ಇದು ನನಗೆ ಬಹುದೊಡ್ಡ ಗೆಲುವು. ಆತ ಚೆಂಡನ್ನು ಅತಿ ರಭಸವಾಗಿ ದಂಡಿಸುತ್ತಿದ್ದರು. ನಾನು ಪಾಯಿಂಟ್ಸ್ ಗಳಿಕೆಯಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸಿದ್ದೇನೆ ಎಂದುಕೊಳ್ಳುತ್ತಿದ್ದಾಗಲೇ ಶಕ್ತಿಶಾಲಿ ಶಾಟ್‌ಗಳಿಂದ ನನ್ನನ್ನು ನಿಕೊಲಸ್ ಜಾಗೃತಿಗೊಳಿಸುತ್ತಿದ್ದರು,’’ ಎಂದು ೩೨ರ ಹರೆಯದ ಹಾಗೂ ೨೦೧೦, ೨೦೧೩ ಹಾಗೂ ೨೦೧೭ರ ಯುಎಸ್ ಓಪನ್ ಚಾಂಪಿಯನ್ ನಡಾಲ್ ಪಂದ್ಯದ ಬಳಿಕ ತಿಳಿಸಿದರು.

ಸದ್ಯ, ಮುಂದಿನ ಸುತ್ತಿನಲ್ಲಿ ನಡಾಲ್, ಡಾಮಿನಿಕ್ ಥೀಮ್ ವಿರುದ್ಧ ಕಾದಾಡಲಿದ್ದಾರೆ. ಮ್ಯಾಡ್ರಿಡ್ ಓಪನ್ ಹಾಗೂ ರೊಲ್ಯಾಂಡ್ ಗ್ಯಾರೋಸ್ ಪಂದ್ಯಾವಳಿಯಲ್ಲಿ ಇದೇ ಥೀಮ್ ವಿರುದ್ಧ ಗೆಲುವು ಸಾಧಿಸಿದ್ದ ನಡಾಲ್, ಎಂಟರ ಘಟ್ಟದಲ್ಲಿ ಮತ್ತೊಮ್ಮೆ ಥೀಮ್ ಸವಾಲನ್ನು ಮೆಟ್ಟಿನಿಲ್ಲಬೇಕಿದೆ. ಅಂದಹಾಗೆ, ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಥೀಮ್, ೨೦೧೭ರ ರನ್ನರ್‌ಅಪ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ೭-೫, ೬-೨, ೭-೬ (೭/೨) ಸೆಟ್‌ಗಳಿಂದ ಗೆಲುವು ಪಡೆದರು.

ಇದನ್ನೂ ಓದಿ : ಅಮೆರಿಕನ್ ಓಪನ್ ಟೆನಿಸ್: ಜೊಕೊವಿಚ್, ಫೆಡರರ್ ಗೆಲುವಿನ ಓಟ

ಪೊಟ್ರೊ, ಇಸ್ನೆರ್‌ಗೆ ಗೆಲುವು

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ಜುವಾನ್ ಡೆಲ್ ಪೊಟ್ರೊ ಕೂಡಾ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು. ಕ್ರೊವೇಷ್ಯಾ ಆಟಗಾರ ಬೊರ್ನಾ ಕೊರಿಕ್ ವಿರುದ್ಧ ೬-೪, ೬-೩, ೬-೧ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

೨೦೦೯ರ ಚಾಂಪಿಯನ್ ಪೊಟ್ರೊ ಯುಎಸ್ ಓಪನ್‌ನಲ್ಲಿ ಅಮೋಘ ಇತಿಹಾಸ ಹೊಂದಿದ್ದು, ಮತ್ತೊಮ್ಮೆ ಅಮೆರಿಕನ್ ಓಪನ್ ಗೆಲ್ಲುವ ಗುರಿ ಹೊತ್ತಿದ್ದಾರೆ. ಶ್ರೇಷ್ಠ ಪ್ರದರ್ಶನ ನೀಡುತ್ತಾ ಸಾಗಿರುವ ಪೊಟ್ರೊ, ಅಪಾಯಕಾರಿ ಆಟಗಾರರಲ್ಲಿ ಒಬ್ಬರಾಗಿದ್ದು, ಗೆಲುವು ಮುಂದಿನ ಸುತ್ತಿನಲ್ಲಿ ಅಮೆರಿಕ ಆಟಗಾರ ಜಾನ್ ಇಸ್ನೆರ್ ವಿರುದ್ಧ ಕಾದಾಡಲಿದ್ದಾರೆ.

ಅಂದಹಾಗೆ, ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕೆನಡಾದ ಮಿಲಾಸ್ ರಾನಿಕ್ ವಿರುದ್ಧ ಗೆಲುವು ಸಾಧಿಸಿದರು. ಭರ್ತಿ ಐದು ಸೆಟ್‌ಗಳಿಂದ ಕೂಡಿದ್ದ ಪಂದ್ಯದಲ್ಲಿ ಜಾನ್ ಇಸ್ನೆರ್, ೩-೬, ೬-೩, ೬-೪, ೩-೬, ೬-೨ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಅಮೆರಿಕನ್ ಓಪನ್‌ನಲ್ಲಿ ಏಳು ವರ್ಷಗಳ ನಂತರ ಅಂತಿಮ ಎಂಟರ ಘಟ್ಟಕ್ಕೆ ಧಾವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More