ಕನೆಪಿ ಹೋರಾಟಕ್ಕೆ ತೆರೆ ಎಳೆದ ಸೆರೆನಾ ಅಂತಿಮ ಎಂಟರ ಘಟ್ಟಕ್ಕೆ ದಾಂಗುಡಿ

ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಗೆಲ್ಲುವ ಹಾದಿಯಲ್ಲಿ ಸೆರೆನಾ ವಿಲಿಯಮ್ಸ್ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸೋಮವಾರ (ಸೆ.೩) ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಹಂತದ ಪಂದ್ಯದಲ್ಲಿ ಸೆರೆನಾ, ಕಯಿಯಾ ಕನೆಪಿ ವಿರುದ್ಧ ೬-೦, ೪-೬, ೬-೩ ನೇರ ಸೆಟ್‌ಗಳಲ್ಲಿ ಜಯಿಸಿದರು

ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಜಯದ ಓಟ ಮುಂದುವರೆಸಿದ್ದಾರೆ. ವಿಶ್ವದ ನಂ ೧ ಆಟಗಾರ್ತಿ ಸಿಮೋನಾ ಹ್ಯಾಲೆಪ್‌ಗೆ ಮೊದಲ ಸುತ್ತಿನಲ್ಲೇ ಆಘಾತ ನೀಡಿದ್ದ ಕಯಿಯಾ ಕನೆಪಿಯನ್ನು ೬-೦, ೪-೬, ೬-೩ ಸೆಟ್‌ಗಳಲ್ಲಿ ಮಣಿಸಿ ಮುಂದಿನ ಸುತ್ತಿಗೆ ಧಾವಿಸಿದರು.

೩೬ರ ಹರೆಯದ ಸೆರೆನಾಗೆ ಕನೆಪಿ ಪ್ರಬಲ ಪೈಪೋಟಿ ಒಡ್ಡಿದ ಸಲುವಾಗಿ ಪಂದ್ಯ ಮೂರು ಸೆಟ್‌ಗಳಿಗೆ ವಿಸ್ತರಿಸಿತು. ಮೊದಲ ಸೆಟ್‌ನಲ್ಲಿ ಅಕ್ಷರಶಃ ಅಬ್ಬರಿಸಿದ ಸೆರೆನಾ, ಕೇವಲ ೧೮ ನಿಮಿಷಗಳಲ್ಲೇ ಜಯ ಸಾಧಿಸಿದರು. ಮೂರು ಬ್ರೇಕ್ ಪಾಯಿಂಟ್ಸ್‌ಗಳನ್ನೂ ಗೆಲುವಿನಲ್ಲಿ ನಿರ್ಣಾಯಕವಾಗಿಸಿದ ಸೆರೆನಾ, ಮೊದಲ ಸರ್ವ್‌ನಲ್ಲಿ ಒಂದು ಪಾಯಿಂಟ್ಸ್ ಅನ್ನೂ ಬಿಟ್ಟುಕೊಡಲಿಲ್ಲ.

ಮೊದಲ ಸೆಟ್‌ನಲ್ಲಿ ಒಂದೇ ಒಂದು ಗೇಮ್ ಗೆಲ್ಲಲು ವಿಫಲವಾದ ಕನೆಪಿ ದ್ವಿತೀಯ ಸೆಟ್‌ನಲ್ಲಿ ಪ್ರಬಲವಾಗಿ ತಿರುಗೇಟು ನೀಡಿದರು. ಪರಿಣಾಮ, ತೃತೀಯ ಸೆಟ್‌ಗೆ ವಿಸ್ತರಿಸಿದ ಪಂದ್ಯವು ನೋಡುಗರನ್ನು ಕೌತುಕದತ್ತ ದೂಡಿತು. ನಿರ್ಣಾಯಕವಾದ ಮೂರನೇ ಸೆಟ್‌ನ ಆರಂಭದಲ್ಲೇ ಕನೆಪಿಯ ಸರ್ವ್ ಮುರಿದ ಸೆರೆನಾ, ಬಳಿಕ ಇಸ್ಟೋನಿಯಾ ಆಟಗಾರ್ತಿಯ ವಿರುದ್ಧ ಜಯ ಸಾಧಿಸಿದರು.

೨೩ ಗ್ರಾಂಡ್‌ಸ್ಲಾಮ್ ಒಡತಿ ಸೆರೆನಾ ಮುಂದಿನ ಸುತ್ತಿನಲ್ಲಿ ಜೆಕ್ ಆಟಗಾರ್ತಿ ಮತ್ತು ಎಂಟನೇ ಶ್ರೇಯಾಂಕಿತೆ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ಕಾದಾಡಲಿದ್ದಾರೆ. ಆರು ಬಾರಿ ಅಮೆರಿಕನ್ ಓಪನ್ ಜಯಿಸಿರುವ ಸೆರೆನಾ, ಮತ್ತೊಮ್ಮೆ ಯುಎಸ್ ಓಪನ್ ಎತ್ತಿಹಿಡಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ : ಅಮೆರಿಕನ್ ಓಪನ್: ಕ್ವಾರ್ಟರ್‌ಫೈನಲ್‌ಗೆ ನಡಾಲ್ ಹಾಗೂ ಡೆಲ್ ಪೊಟ್ರೊ

ಪ್ಲಿಸ್ಕೋವಾ, ಸ್ಟೀಫನ್ಸ್ ಎಂಟರ ಹಂತಕ್ಕೆ

ಇನ್ನು, ವನಿತೆಯರ ಮತ್ತೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಅಮೆರಿಕನ್ ಆಟಗಾರ್ತಿ ಸ್ಲೊವಾನಿ ಸ್ಟೀಫನ್ಸ್ ಮತ್ತು ಕರೋಲಿನಾ ಪ್ಲಿಸ್ಕೋವಾ ಕೂಡಾ ಕ್ವಾರ್ಟರ್‌ಫೈನಲ್‌ಗೆ ಧಾವಿಸಿದರು. ಮೂರನೇ ಶ್ರೇಯಾಂಕಿತೆ ಸ್ಟೀಫನ್ಸ್, ಭಾನುವಾರ (ಸೆ. ೨) ತಡರಾತ್ರಿ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ೬-೩, ೬-೩ ನೇರ ಸೆಟ್‌ಗಳಲ್ಲಿ ಬೆಲ್ಜಿಯನ್ ಆಟಗಾರ್ತಿ ಎಲಿಸಿ ಮೆರ್ಟೆನ್ಸ್ ವಿರುದ್ಧ ಗೆಲುವು ಸಾಧಿಸಿದರು.

ಇನ್ನು ವನಿತೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜೆಕ್ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ ೬-೪, ೭-೬ (೭/೨) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಕೃಷ್ಣಸುಂದರಿ ಸೆರೆನಾ ವಿರುದ್ಧದ ಸೆಣಸಾಟ ಆಕೆಯ ಪಾಲಿಗೆ ಅತ್ಯಂತ ಮಹತ್ವವಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More