ವಿಶ್ವ ಶೂಟಿಂಗ್: ಹೀನಾ, ಮನು ವೈಫಲ್ಯದಲ್ಲಿ ಚಿನ್ನಕ್ಕೆ ಗುರಿ ಇಟ್ಟ ಓಂಪ್ರಕಾಶ್ 

ಹದಿನೆಂಟನೇ ಏಷ್ಯಾ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದ ಹೀನಾ ಸಿಧು ಮತ್ತು ಯಾವುದೇ ಪದಕ ಗೆಲ್ಲಲು ವಿಫಲವಾದ ಮನು ಭಾಕರ್ ವಿಶ್ವ ಶೂಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಈ ಮಧ್ಯೆ ಗುರಿಕಾರ ಓಂ ಪ್ರಕಾಶ್ ಮಿತ್ರವಳ್ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದು ಸಂಭ್ರಮಿಸಿದರು

ಭಾರತದ ಗುರಿಕಾರರು ಮತ್ತೊಮ್ಮೆ ತಮ್ಮ ಗುರಿ ಸಾಮರ್ಥ್ಯದೊಂದಿಗೆ ಮಿಂಚು ಹರಿಸಿದ್ದಾರೆ. ಚಾಂಗ್ವೊನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಓಂಪ್ರಕಾಶ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ೫೦ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ೨೩ರ ಹರೆಯದ ಓಂಪ್ರಕಾಶ್, ೫೬೪ ಸ್ಕೋರ್‌ನೊಂದಿಗೆ ಮೊದಲ ಸ್ಥಾನ ಗಳಿಸಿದರು.

ಇದೇ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಮತ್ತು ೫೦ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚು ಗೆದ್ದಿದ್ದ ಓಂಪ್ರಕಾಶ್ ಈ ಬಾರಿ, ಚಿನ್ನಕ್ಕೆ ಗುರಿ ಇಟ್ಟರು. ಇನ್ನುಳಿದಂತೆ ಸರ್ಬಿಯಾದ ಡಮಿರ್ ಮಿಕೆಕ್ (೫೬೨) ಹಾಗೂ ಸ್ಥಳೀಯ ಶೂಟರ್ ಡಮಿಯಂಗ್ ಲೀ (೫೬೦) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

೨೦೧೪ರ ಆವೃತ್ತಿಯಲ್ಲಿ ಬೆಳ್ಳಿ ಗೆದ್ದಿದ್ದ ಅನುಭವಿ ಗುರಿಕಾರ ಜಿತು ರೈ, ಈ ಬಾರಿ ತೀವ್ರ ನಿರಾಸೆ ಮೂಡಿಸಿದರು. ೫೫೨ ಪಾಯಿಂಟ್ಸ್ ಗಳಿಸಿದ ಜಿತು ರೈ, ಹದಿನೇಳನೇ ಸ್ಥಾನಕ್ಕೆ ಕುಸಿದರು. ಪ್ರಸ್ತುತ ನಡೆಯುತ್ತಿರುವ ಈ ವಿಶ್ವ ಶೂಟಿಂಗ್ ಸ್ಪರ್ಧೆಯು ೨೦೨೦ರ ಟೋಕಿಯೊ ಒಲಿಂಪಿಕ್ಸ್‌ ಕೂಟದ ಮೊದಲ ಅರ್ಹತಾ ಸ್ಪರ್ಧೆಯಾಗಿದೆ. ಅಂದಹಾಗೆ, ೫೦ ಮೀಟರ್ ಪಿಸ್ತೂಲ್ ಶೂಟಿಂಗ್ ವಿಭಾಗವು ಒಲಿಂಪಿಕ್ಸ್ ಕೂಟದ ಅರ್ಹತಾ ಭಾಗವಾಗಿಲ್ಲ.

ಹೀನಾ-ಮನುಗೆ ನಿರಾಸೆ

ಇದನ್ನೂ ಓದಿ : ಕಂಚಿನೊಂದಿಗೆ ಏಷ್ಯಾಡ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಹೀನಾ ಸಿಧು

ವನಿತೆಯರ ಶೂಟಿಂಗ್ ವಿಭಾಗದಲ್ಲಿ ಯುವ ಮಹಿಳಾ ಶೂಟರ್ ಮನು ಭಾಕರ್ ಮತ್ತು ಹೀನಾ ಸಿಧು ನಿರಾಸೆ ಅನುಭವಿಸಿದರು. ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಪದಕ ಗೆದ್ದಿದ್ದರೆ, ನಿರಾಯಾಸವಾಗಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದಿತ್ತಾದರೂ, ಹೀನಾ ಸಿಧು ಮತ್ತು ಮನು ಭಾಕರ್ ಈ ಅವಕಾಶವನ್ನು ಕೈಚೆಲ್ಲಿದರು. ಭಾಕರ್ ೫೭೪ ಪಾಯಿಂಟ್ಸ್‌ಗಳೊಂದಿಗೆ ೧೩ನೇ ಸ್ಥಾನ ಗಳಿಸಿದರೆ, ಹೀನಾ ಸಿಧು ೫೭೧ ಸ್ಕೋರ್‌ನೊಂದಿಗೆ ೨೯ನೇ ಸ್ಥಾನ ಪಡೆದರು.

ಇನ್ನು, ತಂಡ ವಿಭಾಗದಲ್ಲಿ ಮನು ಭಾಕರ್, ಹೀನಾ ಸಿಧು ಮತ್ತು ಶ್ವೇತಾ ಸಿಂಗ್ ಜಂಟಿಯಾಗಿ ೧೭೧೩ ಪಾಯಿಂಟ್ಸ್‌ಗಳನ್ನಷ್ಟೇ ಗಳಿಸಿದರು. ಅಂದಹಾಗೆ ಸೋಮವಾರ (ಸೆ ೩) ಅಂಜುಮ್ ಮೌಡ್ಗಿಲ್ ಹಾಗೂ ಅಪೂರ್ವಿ ಚಾಂಡೀಲಾ ಇದೇ ವನಿತೆಯರ ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ ಮತ್ತು ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ ಭಾರತದ ಪ್ರಥಮ ಶೂಟರ್‌ಗಳೆನಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More