ಅಮೆರಿಕ ಓಪನ್ ಟೆನಿಸ್: ಪ್ರೀಕ್ವಾರ್ಟರ್‌ನಲ್ಲೇ ಮುಗ್ಗರಿಸಿದ ಫೆಡರರ್

೨೦ ಗ್ರಾಂಡ್‌ಸ್ಲಾಮ್ ವಿಜೇತ ರೋಜರ್ ಫೆಡರರ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ವಿಶ್ವದ ೫೩ನೇ ಶ್ರೇಯಾಂಕಿತ ಜಾನ್ ಮಿಲ್ಮನ್ ೨ನೇ ಶ್ರೇಯಾಂಕಿತ ಫೆಡರರ್ ವಿರುದ್ಧ ೩-೬, ೭-೫, ೭-೬, ೭-೬ ಸೆಟ್‌ ಗೆಲುವು ಸಾಧಿಸಿದರು. ಫೆಡರರ್‌ ವೃತ್ತಿಬದುಕಿನ ಹೀನಾಯ ಸೋಲಿದು 

ಸರಿಸುಮಾರು ಒಂದೂವರೆ ದಶಕದ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ವಿಶ್ವದ ೫೦ ಶ್ರೇಯಾಂಕಿತರ ಒಳಗಿನ ಆಟಗಾರರಿಗೆ ಫೆಡರರ್ ಮಣಿದಿದ್ದಾರೆ. ಮಂಗಳವಾರ (ಸೆ ೪) ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಫೆಡರರ್ ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದರೂ, ಬಳಿಕ ಮೂರೂ ಸೆಟ್‌ಗಳಲ್ಲಿ ದಿಟ್ಟ ಹೋರಾಟದ ಮಧ್ಯೆಯೂ ಸೋಲನುಭವಿಸಿದರು.

ಫೆಡರರ್ ಸೋಲಿಗೆ ಪ್ರಮುಖ ಕಾರಣ ಅವರ ಸರ್ವ್. ಹಿಂದೆಂದೂ ಕಾಣದ ಕಳಪೆ ಸರ್ವ್‌ಗೆ ಫೆಡರರ್ ಬೆಲೆ ತೆತ್ತರು. ಆಸ್ಟ್ರೇಲಿಯಾ ಆಟಗಾರ ಜಾನ್ ಮಿಲ್ಮನ್ ಆಕರ್ಷಕ ಅಟದೊಂದಿಗೆ ಜಯಭೇರಿ ಬಾರಿಸಿದರು. ಅಂದಹಾಗೆ, ಫೆಡರರ್ ಮತ್ತು ಮಿಲ್ಮನ್ ನಡುವಣದ ನಾಲ್ಕನೇ ಸುತ್ತಿನ ಪಂದ್ಯ ನಾಲ್ಕು ಸೆಟ್‌ಗಳ ಸುದೀರ್ಘ ಹಣಾಹಣಿಯಲ್ಲಿ ಮುಕ್ತಾಯ ಕಂಡಿತು.

ಯುಎಸ್ ಓಪನ್‌ನಲ್ಲಿ ಇದುವರೆಗೆ ೧೪ ಬಾರಿ ಸ್ಪರ್ಧಿಸಿರುವ ಫೆಡರರ್ ಕ್ವಾರ್ಟರ್‌ಫೈನಲ್‌ಗೂ ಮುನ್ನ ಹೀಗೆ ಹೊರಬಿದ್ದಿರುವುದು ಎರಡನೇ ಬಾರಿ. ಯುಎಸ್ ಓಪನ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಫೆಡರರ್, ಆರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿದ್ದರು.

ಮಿಲ್ಮನ್ ವಿರುದ್ಧ ಸೋಲದೆ ಹೋಗಿದ್ದರೆ ಫೆಡರರ್, ಕ್ವಾರ್ಟರ್‌ಫೈನಲ್‌ನಲ್ಲಿ ಹದಿಮೂರು ಗ್ರಾಂಡ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಚ್ ವಿರುದ್ಧ ಸ್ಪರ್ಧಿಸಬೇಕಿರುತ್ತಿತ್ತು. ಸದ್ಯ, ಜೊಕೊವಿಚ್ ವಿರುದ್ಧ ಮಿಲ್ಮನ್ ಹೋರಾಡಲಿದ್ದಾರೆ. ವೃತ್ತಿಬದುಕಿನಲ್ಲಿ ಒಮ್ಮೆಯೂ ಗ್ರಾಂಡ್‌ಸ್ಲಾಮ್ ಕ್ವಾರ್ಟರ್‌ಫೈನಲ್ ತಲುಪಿರದ ಮಿಲ್ಮನ್, ಮೂರನೇ ಸುತ್ತಿಗೇ ನಿರ್ಗಮಿಸುತ್ತಿದ್ದರು. ವಿಶ್ವ ಆರನೇ ಶ್ರೇಯಾಂಕಿತ ಜೊಕೊವಿಚ್ ವಿರುದ್ಧ ಮಿಲ್ಮನ್ ಕಾದಾಡಲಿದ್ದಾರೆ.

ಯುಎಸ್ ಓಪನ್‌ನಲ್ಲಿ ಇದುವರೆಗೆ ೨೮-೦ ಮುನ್ನಡೆ ಕಾಯ್ದುಕೊಂಡಿದ್ದ ಫೆಡರರ್, ಮಿಲ್ಮನ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಅದಕ್ಕೆ ತಕ್ಕಂತೆ ಮೊದಲ ಸೆಟ್‌ ಅನ್ನು ಗೆದ್ದ ಫೆಡರರ್, ಭರ್ಜರಿ ಆರಂಭವನ್ನೇ ಕಂಡರು. ಆದರೆ, ಆಸೀಸ್ ಆಟಗಾರ ಆನಂತರದಲ್ಲಿ ಫೆಡರರ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿದರು. ಮುಖ್ಯವಾಗಿ ಕೊನೆಯ ಎರಡು ಸೆಟ್‌ಗಳನ್ನಂತೂ ಟೈಬ್ರೇಕರ್‌ನಲ್ಲಿ ಗೆದ್ದ ಮಿಲ್ಮನ್ ವೃತ್ತಿಬದುಕಿನಲ್ಲೇ ಬಹುದೊಡ್ಡ ಗೆಲುವು ಸಾಧಿಸಿದರು.

ಇದನ್ನೂ ಓದಿ : ಅಮೆರಿಕ ಓಪನ್ ಟೆನಿಸ್: ಪ್ರೀಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದ ಶರಪೋವಾ

ಜೊಕೊವಿಚ್ ಗೆಲುವು

ಹಾಲಿ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ ಇದೀಗ ಯುಎಸ್ ಓಪನ್‌ ಪಂದ್ಯಾವಳಿಯ ಮತ್ತೊಂದು ಸೆಮಿಫೈನಲ್‌ಗೆ ಸಜ್ಜಾಗಿದ್ದಾರೆ. ಪುರುಷರ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಪೋರ್ಚುಗಲ್‌ನ ಜೊವೊ ಸೌಸಾ ವಿರುದ್ಧ ೬-೩, ೬-೪, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದರು. ೬೮ನೇ ಶ್ರೇಯಾಂಕಿತ ಆಟಗಾರ ಸರ್ಬಿಯಾ ಆಟಗಾರ ಜೊಕೊವಿಚ್‌ಗೆ ಯಾವ ಹಂತದಲ್ಲೂ ಸರಿಸಾಟಿಯಾಗಲಿಲ್ಲ.

“ಹತ್ತು ವರ್ಷಗಳ ಹಿಂದಿನಂತೆ ನಾನಿನ್ನೂ ೨೧ರ ಹದಿಹರೆಯದವನಾಗಿ ಉಳಿದಿಲ್ಲ. ಅಂತೆಯೇ, ತೀರಾ ಮುದುಕನಾಗಿಬಿಟ್ಟೆ ಎಂಬ ದಿಗಿಲೂ ನನಗಿಲ್ಲ. ಆದರೆ ಈ ನಡುವಿನ ಕಾಲಘಟ್ಟದಲ್ಲಿ ಜೈವಿಕ ಏರು-ಪೇರು ನಿಮ್ಮನ್ನು ಸುಸ್ಥಿರ ಆಟಕ್ಕೆ ಅನುವು ಮಾಡಿಕೊಡುವುದಿಲ್ಲ. ಕೆಲವೊಮ್ಮೆ ನೀವು ಉಳಿವಿಗಾಗಿ ಹೋರಾಡಬೇಕಾಗುತ್ತದೆ,’’ ಎಂದು ಪಂದ್ಯದ ಬಳಿಕ ಜೊಕೊವಿಚ್ ತಿಳಿಸಿದರು.

ನಿಶಿಕೊರಿ, ಸಿಲಿಕ್ ಸೆಣಸಾಟ

ಪುರುಷರ ಇನ್ನೆರಡು ಪ್ರತ್ಯೇಕ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಕ್ರೊವೇಷ್ಯಾ ಆಟಗಾರ ಮರಿನ್ ಸಿಲಿಕ್ ಮತ್ತು ಜಪಾನ್ ಟೆನಿಸಿಗ ಕೀ ನಿಶಿಕೊರಿ ಕ್ವಾರ್ಟರ್‌ಫೈನಲ್ ತಲುಪಿದರು. ನಾಲ್ಕು ವರ್ಷಗಳ ಹಿಂದೆ ಇದೇ ನಿಶಿಕೊರಿ ವಿರುದ್ಧ ಗೆಲುವು ಸಾಧಿಸಿ ಚೊಚ್ಚಲ ಯುಎಸ್ ಓಪನ್ ಜಯಿಸಿದ್ದ ಸಿಲಿಕ್ ವೃತ್ತಿಬದುಕಿನಲ್ಲಿ ಎರಡನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ತುಡಿತದಲ್ಲಿದ್ದಾರೆ.

ಅಂದಹಾಗೆ, ಸಿಲಿಕ್ ವಿಶ್ವದ ೧೦ನೇ ಶ್ರೇಯಾಂಕಿತ ಆಟಗಾರ ಡೇವಿಡ್ ಗಫಿನ್ ವಿರುದ್ಧ ೭-೬ (೬), ೬-೨, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರೆ, ಜಪಾನ್‌ನ ನಂ ೧ ಆಟಗಾರ ನಿಶಿಕೊರಿ, ಫಿಲಿಪ್ ಕೊಹ್ಲ್‌ಶ್ರೀಬರ್ ವಿರುದ್ಧ ೬-೩, ೬-೨, ೭-೫ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್ ತಲುಪಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More