ಜಾನ್ ಹೊಲಾಂಡ್ ದಾಳಿಗೆ ನಲುಗಿದ ಆತಿಥೇಯರಿಗೆ ಆಘಾತಕಾರಿ ಸೋಲು

ಮಹಾನ್ ತಿರುವಿನಿಂದ ಕೂಡಿದ್ದ ಬೆಂಗಳೂರಿನ ಚಿನ್ನಸ್ವಾಮಿ ಪಿಚ್‌ನಲ್ಲಿ ಜಾನ್ ಹೊಲಾಂಡ್ (81ಕ್ಕೆ ೬) ಮಿಂಚಿನ ಬೌಲಿಂಗ್‌ಗೆ ಭಾರತ ಎ ತಂಡ ದಂಗಾಯಿತು. ಬುಧವಾರ (ಸೆ. ೫) ಮುಕ್ತಾಯ ಕಂಡ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎ ತಂಡ ೯೮ ರನ್ ಗೆಲುವಿನೊಂದಿಗೆ ಸರಣಿಯಲ್ಲಿ ಮುನ್ನಡೆ ಗಳಿಸಿತು

ಇಡೀ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳಿಸಿದ ಜಾನ್ ಹೊಲಾಂಡ್, ೬೮ ರನ್‌ಗಳಿಗೆ ೮ ವಿಕೆಟ್ ಪಡೆದಿದ್ದ ಈ ಹಿಂದಿನ ದಾಖಲೆಯನ್ನು ಹತ್ತಿಕ್ಕಿದರು. ಒಂದು ಹಂತದಲ್ಲಿ ಸೋಲಿನತ್ತ ಮುಖ ಮಾಡಿದ್ದ ಪ್ರವಾಸಿ ಆಸ್ಟ್ರೇಲಿಯಾ ಎ ತಂಡ ಪುಟಿದೆದ್ದ ಪರಿಯೇ ರೋಚಕವಾಗಿತ್ತು. ಈ ರೋಚಕ ಗೆಲುವಿಗೆ ಹೊಲಾಂಡ್ ಸ್ಪಿನ್ ಚಮತ್ಕಾರವೇ ಪ್ರಮುಖ ಕಾರಣವೆನಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಹೈದರಾಬಾದ್ ವೇಗಿ ಮೊಹಮದ್ ಸಿರಾಜ್ (೫೯ಕ್ಕೆ ೮) ಜೀವಮಾನ ಶ್ರೇಷ್ಠ ಬೌಲಿಂಗ್‌ನಿಂದಾಗಿ ೭೫.೩ ಓವರ್‌ಗಳಲ್ಲಿ ೨೪೩ ರನ್‌ಗಳಿಗೆ ಆಸ್ಟ್ರೇಲಿಯಾ ಎ ತಂಡ ಸರ್ವಪತನ ಕಂಡಿತ್ತು. ಆರಂಭಿಕ ಉಸ್ಮಾನ್ ಖವಾಜ (೧೨೭: ೨೨೮ ಎಸೆತ, ೨೦ ಬೌಂಡರಿ) ಮಾರ್ನುಸ್ (೬೦: ೧೦೫ ಎಸೆತ, ೧೧ ಬೌಂಡರಿ) ದಾಖಲಿಸಿದ ಅರ್ಧಶತಕ ತಂಡದ ಕೈಹಿಡಿದಿತ್ತು.

ಆಸೀಸ್ ಎ ತಂಡದ ಇನ್ನಿಂಗ್ಸ್‌ಗೆ ಪ್ರತಿಯಾಗಿ ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತ ಎ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೮೩.೧ ಓವರ್‌ಗಳಲ್ಲಿ ೧೦ ವಿಕೆಟ್ ಕಳೆದುಕೊಂಡು ೨೭೪ ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಂಕಿತ್ ಬಾವ್ನೆ (೯೧: ೧೫೯ ಎಸೆತ, ೬ ಬೌಂಡರಿ, ೩ ಸಿಕ್ಸರ್) ಅರ್ಧಶತಕ ತಂಡಕ್ಕೆ ನೆರವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್ ನೆಸೆರ್ (೬೧ಕ್ಕೆ ೪) ಮತ್ತು ಜಾನ್ ಹೊಲಾಂಡ್ (೮೯ಕ್ಕೆ ೩) ಕರಾರುವಾಕ್ ಬೌಲಿಂಗ್‌ನಿಂದ ಭಾರತದ ಇನ್ನಿಂಗ್ಸ್‌ ಅನ್ನು ಸಾಧ್ಯವಾದಷ್ಟೂ ನಿಯಂತ್ರಿಸಿದ್ದರು.

ಇದನ್ನೂ ಓದಿ : ಸಿಡ್ನಿ ಟೆಸ್ಟ್ ಪ್ರಕರಣ; ನಿಷೇಧ ಹೇರದೆ ಕ್ಷಮಿಸಿ ಎಂದಿದ್ದರಂತೆ ಕೊಹ್ಲಿ!

ಪಂದ್ಯದ ಕೊನೆಯ ಹಾಗೂ ನಾಲ್ಕನೇ ದಿನವಾದ ಬುಧವಾರ (ಸೆ. ೫) ೨ ವಿಕೆಟ್‌ಗೆ ೬೩ ರನ್‌ಗಳೊಂದಿಗೆ ಇನ್ನಿಂಗ್ಸ್ ಮುಂದುವರೆಸಿದ ಭಾರತ, ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ೨೫ ರನ್‌ ಗಳಿಸಿದ್ದ ಕ್ರೀಸ್‌ನಲ್ಲಿದ್ದ ಮಯಾಂಕ್ ಅಗರ್ವಾಲ್ (೮೦) ಅರ್ಧಶತಕದ ಹೋರಾಟ ನಡೆಸಿದ್ದು ಒಂದೆಡೆಯಾದರೆ, ನಾಯಕ ಶ್ರೇಯಸ್ ಅಯ್ಯರ್ (೨೮) ಹಾಗೂ ಅಂಕಿತ್ ಬಾವ್ನೆ (೨೫) ಎರಡಂಕಿ ದಾಟಿದ್ದು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲಿಲ್ಲ.

ಇಷ್ಟಾದರೂ, ೩೧ ರನ್ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಎ ತಂಡ ಜಾನ್ ಹೊಲಾಂಡ್ ಮೊನಚಾದ ಬೌಲಿಂಗ್ ನೆರವಿನಲ್ಲಿ ಮಿಂಚು ಹರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಂಚ ಬ್ಯಾಟಿಂಗ್ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯಾ ಎ ತಂಡ, ಎರಡನೇ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ (೮೭), ಅವರ ಅರ್ಧಶತಕದ ನೆರವಿನೊಂದಿಗೆ ೮೩.೫ ಓವರ್‌ಗಳಲ್ಲಿ ೨೯೨ ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ೮ ವಿಕೆಟ್ ಗಳಿಸಿದ್ದ ಮೊಹಮದ್ ಸಿರಾಜ್, ೭೭ ರನ್‌ಗಳಿಗೆ ೩ ವಿಕೆಟ್ ಪಡೆದರೆ, ಕನ್ನಡಿಗ ಕೆ ಗೌತಮ್ (೫೩ಕ್ಕೆ ೨), ಕುಲದೀಪ್ ಯಾದವ್ (೫೧ಕ್ಕೆ ೨) ತಲಾ ಎರಡೆರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಎ ಮೊದಲ ಇನ್ನಿಂಗ್ಸ್: ೭೫.೩ ಓವರ್‌ಗಳಲ್ಲಿ ೨೪೩/೧೦ (ಉಸ್ಮಾನ್ ಖವಾಜ ೧೨೭, ಮಾರ್ನುಸ್ ಲಬುಶುಗ್ನೆ ೬೦; ಮೊಹಮದ್ ಸಿರಾಜ್ ೫೯ಕ್ಕೆ ೮); ಭಾರತ ಎ ಮೊದಲ ಇನ್ನಿಂಗ್ಸ್: ೮೩. ೧ ಓವರ್‌ಗಳಲ್ಲಿ ೨೭೪/೧೦ (ಅಂಕಿತ್ ಬಾವ್ನೆ ೯೧; ಮಿಚೆಲ್ ನೆಸೆರ್ ೬೧ಕ್ಕೆ ೪); ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: ೮೩.೫ ಓವರ್‌ಗಳಲ್ಲಿ ೨೯೨/೧೦ (ಟ್ರಾವಿಸ್ ಹೆಡ್ ೮೭; ಮೊಹಮದ್ ಸಿರಾಜ್ ೭೭ಕ್ಕೆ ೩); ಭಾರತ ಎ ಎರಡನೇ ಇನ್ನಿಂಗ್ಸ್: ೫೯.೩ ಓವರ್‌ಗಳಲ್ಲಿ ೧೬೩/೧೦ (ಮಯಾಂಕ್ ಅಗರ್ವಾಲ್ ೮೦; ಜಾನ್ ಹೊಲಾಂಡ್ ೮೧ಕ್ಕೆ ೬); ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ ೯೮ ರನ್ ಗೆಲುವು

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More