ಸಿಡ್ನಿ ಟೆಸ್ಟ್ ಪ್ರಕರಣ; ನಿಷೇಧ ಹೇರದೆ ಕ್ಷಮಿಸಿ ಎಂದಿದ್ದರಂತೆ ಕೊಹ್ಲಿ!

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಭಾರತ ತಂಡ ಕೈಗೊಳ್ಳಲಿರುವ ಮತ್ತೊಂದು ಮಹತ್ವಪೂರ್ಣ ವಿದೇಶಿ ಪ್ರವಾಸ ಆಸ್ಟ್ರೇಲಿಯಾ. ಆದರೆ, 2012ರ ಸಿಡ್ನಿ ಟೆಸ್ಟ್‌ ವೇಳೆ ಆಸೀಸ್ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿ ಸುದ್ದಿಯಾಗಿದ್ದ ಕೊಹ್ಲಿ, ಈಗ ಕ್ಷಮೆ ಯಾಚಿಸಿದ್ದಾರೆ!

ಇಂಡೋ-ಆಸೀಸ್ ಕ್ರಿಕೆಟ್ ಸರಣಿ ಎಂದರೆ ಅದು ಉದ್ವೇಗದ ಹಾಗೂ ಉದ್ರೇಕದ ಗೂಡು. ಸಚಿನ್/ಮೆಗ್ರಾತ್ - ಸಚಿನ್ / ಶೇನ್ ವಾರ್ನ್ ನಡುವಣದ ಕಾದಾಟವೆಂದೇ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯನ್ನು ವ್ಯಾಖ್ಯಾನಿಸಲಾಗುತ್ತಿತ್ತು. ಸದ್ಯ, ಆ ಪರಿಯ ಕಾವು ಈಗ ಕಾಣಿಸದೆ ಹೋದರೂ, ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಕಾಲಿಟ್ಟ ಮೇಲೆ ಬೇರೆಯದೇ ಚಿತ್ರಣವಿದೆ.

ಆರು ವರ್ಷಗಳ ಹಿಂದೆ ಭಾರತ ತಂಡ ಕೈಗೊಂಡಿದ್ದ ಆಸ್ಟ್ರೇಲಿಯಾ ಪ್ರವಾಸ ಕೊಹ್ಲಿ ದಿಸೆಯಲ್ಲೇ ವಿವಾದಗ್ರಸ್ತವಾಗಿತ್ತು. ಮುಖ್ಯವಾಗಿ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಗಳು ಅವರನ್ನು ಕಿಚಾಯಿಸಿದ ಪರಿಯಿಂದ ರೋಸಿ ಹೋದ ಕೊಹ್ಲಿ ಒಂದು ಹಂತದಲ್ಲಿ ಸಹನೆ ಕಳೆದುಕೊಂಡು ಮಧ್ಯದ ಬೆರಳನ್ನು ತೋರಿ ತಿರುಗೇಟು ನೀಡಿದ್ದರು.

ಆದರೆ, ಅವರ ಈ ವರ್ತನೆ ತದನಂತರದಲ್ಲಿ ಟೀಕೆಗೂ ಗುರಿಯಾಗಿತ್ತು. ಕೊಹ್ಲಿ ಸಹನೆ ಕಳೆದುಕೊಂಡು ಹಾಗೆ ವರ್ತಿಸಬಾರದಿತ್ತು ಎಂಬ ಮಾತೂ ಕೇಳಿಬಂದಿತ್ತು. ಪಂದ್ಯ ರೆಫರಿ ರಂಜನ್ ಮದುಗಲ್ಲೆ, ಕೊಹ್ಲಿಯನ್ನು ಕೊಠಡಿಗೆ ಕರೆದು ಸ್ಪಷ್ಟನೆ ನೀಡುವಂತೆ ಕೋರಿದ್ದರು ಕೂಡಾ. ಈ ಪ್ರಕರಣದ ಕುರಿತು ಕೊಹ್ಲಿ ಈಗ ವಿಸ್ಡನ್ ಕ್ರಿಕೆಟ್‌ ಜತೆಗಿನ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ.

“೨೦೧೨ರ ಆಸ್ಟ್ರೇಲಿಯಾ ಪ್ರವಾಸದ ಘಟನೆಗಳಲ್ಲಿ ಕಾಡಿದ್ದು ಹಾಗೂ ಈಗಲೂ ಚೆನ್ನಾಗಿ ನೆನಪಿರುವುದು ಸಿಡ್ನಿ ಪ್ರಕರಣ. ಸಿಡ್ನಿಯ ಕ್ರಿಕೆಟ್ ಅಭಿಮಾನಿಗಳಿಂದ ನಾನು ಅನುಭವಿಸಿದ ಕಿರಿಕಿರಿ ಹಾಗೂ ಅದರಿಂದ ನಾನು ಸಹನೆ ಕಳೆದುಕೊಂಡು ನನ್ನ ಮಧ್ಯದ ಬೆರಳನ್ನು ಅವರತ್ತ ತೋರಿದ್ದು ಚೆನ್ನಾಗಿ ನೆನಪಿದೆ. ಈ ಘಟನೆಯಿಂದ ರೆಫರಿ ರಂಜನ್ ಮದುಗಲ್ಲೆ, ಮರು ದಿನ ತಮ್ಮ ಕೊಠಡಿಗೆ ಕರೆದು, ‘ಬೌಂಡರಿ ಬಳಿ ನಿನ್ನೆ ಆಗಿದ್ದಾದರೂ ಏನು?’ ಎಂದು ಅವರು ನನ್ನನ್ನು ಪ್ರಶ್ನಿಸಿದರು.

ನಾನೆಂದೆ, ‘ಅಂಥದ್ದೇನಿಲ್ಲ, ಇದೊಂದು ಸಣ್ಣ ಕುಚೋದ್ಯವಷ್ಟೆ,’ ಎಂದು. ಅದಕ್ಕೆ ಅವರು ನನ್ನತ್ತ ದಿನಪತ್ರಿಕೆಯೊಂದನ್ನು ಎಸೆದರು. ತೆರೆದು ನೋಡಿದಾಗ ಮುಖಪುಟದಲ್ಲಿ ನನ್ನ ದೊಡ್ಡದಾದ ಫೋಟೋ ಪ್ರಕಟಿಸಿ ಘಟನಾವಳಿಯನ್ನು ವರದಿ ಮಾಡಲಾಗಿತ್ತು. ಅದನ್ನು ನಾನು ನೋಡುತ್ತಲೇ, “ನನ್ನಿಂದ ತಪ್ಪಾಯ್ತು. ಈ ಪ್ರಕರಣ ಮುಂದಿಟ್ಟುಕೊಂಡು ನನ್ನನ್ನು ನಿಷೇಧಿಸಬೇಡಿ!’ ಎಂದು ಗೋಗರೆದಿದ್ದೆ. ರಂಜನ್ ಇಂಥದ್ದೆನ್ನಲ್ಲಾ ನಿಭಾಯಿಸಿದವರು. ಮೇಲಾಗಿ ಅವರೊಬ್ಬ ಒಳ್ಳೆಯ ಮನುಷ್ಯ. ನನ್ನಂಥ ಯುವ ಆಟಗಾರರಲ್ಲಿ ಇದು ಸಹಜ ಎಂದುಕೊಂಡು ಘಟನೆಯನ್ನು ದೊಡ್ಡದಾಗಿ ಮಾಡಲಿಲ್ಲ,’’ ಎಂದು ಕೊಹ್ಲಿ ೨೦೧೨ರ ಸಿಡ್ನಿ ಟೆಸ್ಟ್ ಘಟನೆ ಮತ್ತು ಅದರಾಚೆಗಿನ ಘಟನಾವಳಿಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮೊಟ್ಟ ಮೊದಲ ಸೋಲಿನ ಬರೆ ಎಳೆದ ಇಂಗ್ಲೆಂಡ್

ಇನ್ನು, ತನ್ನ ವೃತ್ತಿಬದುಕಿನ ಈ ಅಭೂತಪೂರ್ವ ಯಶಸ್ಸಿಗೆ ಪ್ರಮುಖ ಕಾರಣ ಎಳೆಯ ಕಾಲದ ಕೋಚ್ ರಾಜ್‌ಕುಮಾರ್ ಶರ್ಮಾ ಪ್ರಮುಖ ಕಾರಣ ಎಂದು ಕೊಹ್ಲಿ ಮತ್ತೊಮ್ಮೆ ಶರ್ಮಾ ಅವರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. “ನನ್ನ ನನ್ನ ಕುಟುಂಬದ ಬಳಿಕ ನನ್ನನ್ನು ಆಳವಾಗಿ ಅರಿತುಕೊಂಡವರೆಂದರೆ ಅದು, ಕೋಚ್ ರಾಜ್‌ಕುಮಾರ್ ಶರ್ಮಾ. ನನ್ನ ಜೀವಿತದ ಪ್ರಮುಖ ಘಟ್ಟಗಳ ಬಗೆಗೆ ಹಲವು ವರ್ಷಗಳಿಂದ ಚರ್ಚಿಸುತ್ತಾ ಬಂದಿದ್ದೇನೆ. ನಾನು ಮಾತ್ರವಲ್ಲ, ನನ್ನ ಕುಟುಂಬವೂ ಅವರ ಸಲಹೆಗಳನ್ನು ಸ್ವೀಕರಿಸುತ್ತಾ ಬಂದಿದೆ. ಕೆಲವೊಮ್ಮೆ ನಾನು ಸರಿಹಾದಿಯಲ್ಲಿ ಸಾಗುತ್ತಿಲ್ಲ ಎಂಬ ದಿಗಿಲು ನನ್ನ ಕುಟುಂಬವನ್ನು ಕಾಡಿದ್ದಿದೆ.

ಆದರೆ, ನನ್ನ ಕೋಚ್ ಶರ್ಮಾ ಮಾತ್ರ ನನ್ನನ್ನು ಅಪಾರವಾಗಿ ಬೆಂಬಲಿಸಿದರು. ನಾನೇನಾದರೂ ತಪ್ಪು ಮಾಡಿದ್ದೇನೆ ಎಂದಾಗ ಎಚ್ಚರಿಸಿದ್ದಾರೆ. ನಾನು ಈಗಲೂ ಹೆದರುವ ಏಕೈಕ ವ್ಯಕ್ತಿ ಎಂದರೆ ಅದು ಶರ್ಮಾ. ಒಂಬತ್ತನೇ ವಯಸ್ಸಿನಲ್ಲೇ ನಾನು ಅವರ ಅಕಾಡೆಮಿ ಸೇರಿದೆ. ಈಗಲೂ ಕ್ರಿಕೆಟ್ ಕುರಿತು ಅವರೊಂದಿಗೆ ನಾನು ಚರ್ಚಿಸುತ್ತಲೇ ಇರುತ್ತೇನೆ, ಒಟ್ಟಾರೆ, ನನ್ನ ಬೆಳವಣಿಗೆಯಲ್ಲಿ ಅವರ ಕೊಡುಗೆ ಅನನ್ಯ,’’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More