ಅಮೆರಿಕ ಓಪನ್ ಟೆನಿಸ್| ಡಾಮಿನಿಕ್ ವಿರುದ್ಧ ಅಬ್ಬರಿಸಿದ ರಾಫಾ ಸೆಮಿಫೈನಲ್‌ಗೆ

ಬರೋಬ್ಬರಿ ೪.೪೯ ನಿಮಿಷಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ರಾಫೆಲ್ ನಡಾಲ್ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಧಾವಿಸಿದರು. ಡಾಮಿನಿಕ್ ಥೀಮ್ ಒಡ್ಡಿದ ಪ್ರಬಲ ಪ್ರತಿರೋಧವನ್ನು ಆಕ್ರಮಣಕಾರಿ ಆಟದಿಂದ ನಡಾಲ್ ೦-೬, ೬-೪, ೭-೫, ೬-೭, ೭-೬ ಸೆಟ್‌ಗಳಲ್ಲಿ ಹತ್ತಿಕ್ಕಿದರು

ಯುಸ್ ಓಪನ್ ಇತಿಹಾಸದಲ್ಲೇ ರಾಫೆಲ್ ನಡಾಲ್ ಈ ಪರಿ ದೊಡ್ಡದಾದ ಸುದೀರ್ಘ ಆಟವಾಡಿರಲಿಲ್ಲ. ನಡಾಲ್ ಅವರಲ್ಲಿನ ಟೆನಿಸ್‌ ಅನ್ನು ಇನ್ನೊಮ್ಮೆ ಬಡಿದೆಬ್ಬಿಸಿದ್ದು ಡಾಮಿನಿಕ್ ಥೀಮ್. ವಿಶ್ವದ ೯ನೇ ಶ್ರೇಯಾಂಕಿತ ಆಟಗಾರನ ಪ್ರಬಲ ಹೋರಾಟವನ್ನು ಹಾಲಿ ಚಾಂಪಿಯನ್ ನಡಾಲ್ ಕೊನೆಗೂ ಹತ್ತಿಕ್ಕಿ ಯುಎಸ್ ಓಪನ್‌ನಲ್ಲಿ ನಾಲ್ಕರ ಘಟ್ಟಕ್ಕೆ ಧಾವಿಸಿದರು.

“ವಾತಾವರಣ ಕ್ಲಿಷ್ಟಕರವಾಗಿತ್ತು. ನಿಜವಾಗಿಯೂ ಇದೊಂದು ಶ್ರೇಷ್ಠ ಪಂದ್ಯ. ನನ್ನ ಮಟ್ಟಿಗಂತೂ ಆರಂಭದಲ್ಲೇ ಅವಘಡ ಎದುರಾಯಿತು. ಮೊದಲ ಸೆಟ್‌ನಲ್ಲಿ ಸೋಲನುಭವಿಸಿದ ನಂತರ ಎರಡನೇ ಸೆಟ್‌ನಲ್ಲಿ ಗೆಲ್ಲದೆ ಹೋದರೆ, ನನಗೆ ಉಳಿಗಾಲವಿಲ್ಲ ಎಂಬುದು ಮನವರಿಕೆಯಾಗಿತ್ತು. ಅದಕ್ಕೆ ತಕ್ಕಂತೆ ಸೆಣಸಿ ಪಂದ್ಯವನ್ನು ಜೀವಂತವಾಗಿಟ್ಟೆ,’’ ಎಂದು ಆಸ್ಟ್ರಿಯಾ ಆಟಗಾರ ಡಾಮಿನಿಕ್ ಥೀಮ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ನಡಾಲ್ ತಿಳಿಸಿದರು.

ಮೊದಲ ನಾಲ್ಕು ತಾಸುಗಳಲ್ಲಿ ಇಬ್ಬರೂ ಬಡಪೆಟ್ಟಿಗೆ ಮಣಿಯುವಂತೆ ಕಾಣಲಿಲ್ಲ. ಆದರೆ, ಇಬ್ಬರ ನಡುವಿನ ವ್ಯತ್ಯಾಸ ಗೊತ್ತಾದದ್ದು ಐದನೇ ಸೆಟ್‌ನಲ್ಲಿ. ಈ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ವಶಕ್ಕೆ ಪಡೆದ ನಡಾಲ್, ವೃತ್ತಿಬದುಕಿನಲ್ಲಿ ಥೀಮ್ ವಿರುದ್ಧ ಮತ್ತೊಮ್ಮೆ ಗೆಲುವು ಸಾಧಿಸಿದರು. “ಥೀಮ್ ಅದ್ವಿತೀಯ ಹೋರಾಟಗಾರ. ಪ್ರತೀ ಪ್ರವಾಸದಲ್ಲೂ ಆತ ನನ್ನ ಆತ್ಮೀಯ ಗೆಳೆಯ. ಅಪ್ರತಿಮ ಹೋರಾಟದ ಮಧ್ಯೆಯೂ ಆತ ವೀರೋಚಿತ ಸೋಲನುಭವಿಸಿದ. ಆತನ ಸೋಲಿಗಾಗಿ ವಿಷಾದವಾಗುತ್ತಿದೆ,’’ ಎಂತಲೂ ನಡಾಲ್ ನುಡಿದರು.

೩೨ರ ಹರೆಯದ ಹಾಗೂ ಹದಿನೇಳು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ನಡಾಲ್, ಶುಕ್ರವಾರ (ಸೆ ೭) ನಡೆಯಲಿರುವ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ಜುವಾನ್ ಡೆಲ್ ಪೊಟ್ರೊ ವಿರುದ್ಧ ಕಾದಾಡಲಿದ್ದಾರೆ. ೨೦೦೯ರ ಯುಎಸ್ ಓಪನ್ ಚಾಂಪಿಯನ್‌ ಪೊಟ್ರೊ ಕೂಡಾ ಅಪಾಯಕಾರಿ ಆಟಗಾರನಾಗಿದ್ದು, ಅವರ ವಿರುದ್ಧ ನಡಾಲ್ ಮತ್ತೊಮ್ಮೆ ಸುದೀರ್ಘ ಹೋರಾಟ ನಡೆಸಬೇಕಾದ ಸಾಧ್ಯತೆ ಇದೆ.

ಇದನ್ನೂ ಓದಿ : ಕ್ಲೇ ಕೋರ್ಟ್ ಕಿಂಗ್‌ಗೆ ಸಾಟಿಯಾಗದ ಥೀಮ್; ಮತ್ತೊಮ್ಮೆ ಪಾರಮ್ಯ ಮೆರೆದ ನಡಾಲ್

ಪೊಟ್ರೊ, ಜೊಕೊವಿಚ್ ಗೆಲುವು

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಜುವಾನ್ ಡೆಲ್ ಪೊಟ್ರೊ, ಅಮೆರಿಕದ ಜಾನ್ ಇಸ್ನೆರ್ ಎದುರಿನ ಸುದೀರ್ಘ ಕಾದಾಟಕ್ಕೆ ತೆರೆ ಎಳೆದರು. ದಿಟ್ಟ ಪೈಪೋಟಿ ನೀಡಿದ ಇಸ್ನೆರ್ ವಿರುದ್ಧ ಪೊಟ್ರೊ ೬-೭ (೫-೭), ೬-೩, ೭-೬ (೭/೪), ೬-೨ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ಬಿಸಿಲ ಝಳದಿಂದಾಗಿ ಇಬ್ಬರೂ ಸಾಕಷ್ಟು ಬಸವಳಿದರು. ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಇಬ್ಬರೂ ತಲಾ ೧೦ ನಿಮಿಷಗಳ ಕಾಲ ಬಿಡುವು ಪಡೆದದ್ದು ಕೂಡಾ ಪ್ರತಿಕೂಲ ವಾತಾವರಣಕ್ಕೆ ಪೂರಕವಾಗಿತ್ತು. “ನನಗಂತೂ ಭರ್ಜರಿ ಸ್ನಾನವಾಯಿತು! ಕ್ರೇಪ್ ಬ್ಯಾಂಡೇಜ್‌ನಿಂದ ಕಟ್ಟಲ್ಪಟ್ಟಿದ್ದ ನನ್ನ ಮೊಣಕಾಲುಗಳನ್ನು ಟೇಬಲ್‌ಗಳ ಮೇಲೆ ಚಾಚುತ್ತಿದ್ದಂತೆ ಮತ್ತೆ ಎದ್ದು ಅಂಗಣಕ್ಕಿಳಿಯಲೇ ಮನಸ್ಸಾಗಲಿಲ್ಲ,’’ ಎಂದು ಪೊಟ್ರೊ ಬಿಸಿಲ ಧಗೆಯಲ್ಲಿ ಅನುಭವಿಸಿದ ಯಾತನೆಯನ್ನು ಬಣ್ಣಿಸಿದರು.

ಅಂದಹಾಗೆ, ವಿಶ್ವದ ೧೧ನೇ ಶ್ರೇಯಾಂಕಿತ ಆಟಗಾರ ಇಸ್ನೆರ್ ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಜಯಿಸಿದರಾದರೂ, ತದನಂತರದ ಮೂರೂ ಸೆಟ್‌ಗಳಲ್ಲಿ ಪೊಟ್ರೊ ಪ್ರತಿರೋಧವನ್ನು ಹತ್ತಿಕ್ಕಲಾಗದೆ ಸೋಲಪ್ಪಿದರು. ವಾಸ್ತವವಾಗಿ ಮೊದಲ ಸೆಟ್‌ನಲ್ಲೇ ಪೊಟ್ರೊ ಗೆಲುವು ಸಾಧಿಸಬಹುದಿತ್ತಾದರೂ, ಸ್ವಪ್ರಮಾದದಿಂದ ಹಿನ್ನಡೆ ಅನುಭವಿಸಿದರು. ಅದರೆ, ನಂತರದಲ್ಲಿ ಎಚ್ಚೆತ್ತುಕೊಂಡ ಅರ್ಜೆಂಟೀನಾ ಆಟಗಾರ ಮತ್ತೊಮ್ಮೆ ಫ್ಲಶಿಂಗ್ ಮೆಡೋಸ್‌ನಲ್ಲಿ ಜಯದ ನಗೆಬೀರಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More