ಅಮೆರಿಕ ಓಪನ್ ಟೆನಿಸ್| ಸೆಮಿಫೈನಲ್‌ಗೆ ಸೆರೆನಾ, ಮುಗ್ಗರಿಸಿದ ಸ್ಟೀಫನ್ಸ್ 

ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಗೆಲುವಿನ ಓಟ ಮುಂದುವರೆದಿದೆ. ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ೬-೪, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಧಾವಿಸಿದರು

ವನಿತಾ ಗ್ರಾಂಡ್‌ಸ್ಲಾಮ್ ಇತಿಹಾಸದಲ್ಲೇ ಅತಿಹೆಚ್ಚು ಪ್ರಶಸ್ತಿ ಜಯಿಸಿರುವ ಮಾರ್ಗರೆಟ್ ಕೋರ್ಟ್ ಸಾರ್ವಕಾಲಿಕ ೨೪ ಪ್ರಸ್ತಿಗಳ ದಾಖಲೆ ಸರಿಗಟ್ಟುವ ಸನಿಹಕ್ಕೆ ಸೆರೆನಾ ವಿಲಿಯಮ್ಸ್ ಸಾಗಿದ್ದಾರೆ. ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೆರೆನಾ ಸೆಮಿಫೈನಲ್ ತಲುಪಿದ್ದಾರೆ. ವಿಶ್ವದ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ೬-೪, ೬-೩ ನೇರ ಸೆಟ್‌ಗಳಲ್ಲಿ ಸೆರೆನಾ ಜಯ ಸಾಧಿಸಿದರು.

೨೦೧೬ರ ಇದೇ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಪ್ಲಿಸ್ಕೋವಾ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಸೆರೆನಾ, ಆ ಸೋಲಿಗೆ ದಿಟ್ಟ ಉತ್ತರ ನೀಡಿದ್ದಾರೆ. ಅಂದಹಾಗೆ, ಮೊದಲ ಸೆಟ್‌ನಲ್ಲಿ ೨-೧ ಮುನ್ನಡೆ ಸಾಧಿಸಿದ ಸೆರೆನಾ, ಬಳಿಕ ೩-೧ ಮೇಲುಗೈ ಸಾಧಿಸಿದರು. ಇತ್ತ, ಮೂರು ಬ್ರೇಕ್ ಪಾಯಿಂಟ್ಸ್‌ಗಳ ಪೈಕಿ ಒಂದರಲ್ಲೂ ಮುನ್ನಡೆ ಕಾಣಲು ವಿಫಲವಾದ ಪ್ಲಿಸ್ಕೋವಾ, ನಿರ್ಣಾಯಕ ಪಾಯಿಂಟ್ಸ್‌ಗಳನ್ನು ಕೈಚೆಲ್ಲಿ ಕೇವಲ ೨ ಗೇಮ್‌ಗಳ ಅಂತರದಲ್ಲಿ ಮೊದಲ ಸೆಟ್ ಬಿಟ್ಟುಕೊಟ್ಟರು.

ಇನ್ನು, ಎರಡನೇ ಸೆಟ್‌ನಲ್ಲಿ ೪-೦ ಪ್ರಭುತ್ವ ಮೆರೆದ ಸೆರೆನಾ, ಕೊನೆ ಕೊನೆಗೆ ಅಮೋಘ ಮುನ್ನಡೆ ಪಡೆದರು. ಪ್ಲಿಸ್ಕೋವಾ ಮೂರು ಏಸ್‌ಗಳನ್ನು ಸಿಡಿಸಿದರೆ, ಸೆರೆನಾ ೧೩ರಲ್ಲಿ ವಿಜೃಂಭಿಸಿದರು. ಅಂತೆಯೇ, ಸೆರೆನಾ ೩೫ ವಿನ್ನರ್‌ಗಳೊಂದಿಗೆ ಮುನ್ನಡೆದರೆ, ೧೨ ವಿನ್ನರ್‌ಗಳು ಪ್ಲಿಸ್ಕೋವಾ ರ್ಯಾಕೆಟ್‌ನಿಂದ ಚಿಮ್ಮಿದವು. ೩೬ರ ಹರೆಯದ ಸೆರೆನಾ, ಮೊದಲ ಮಗುವಿನ ಜನನದಿಂದಾಗಿ ಕಳೆದ ವರ್ಷದ ಯುಎಸ್ ಓಪನ್‌ನಲ್ಲಿ ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ : ವೃತ್ತಿಬದುಕಿನಲ್ಲೇ ಅತಿ ಹೀನಾಯ ಸೋಲು ಕಂಡ ಸೆರೆನಾ ವಿಲಿಯಮ್ಸ್

ಹಾಲಿ ಚಾಂಪಿಯನ್ಸ್ ಸ್ಟೀಫನ್ಸ್‌ಗೆ ಆಘಾತ

ಹಾಲಿ ಚಾಂಪಿಯನ್ ಸ್ಲೊವಾನಿ ಸ್ಟೀಫನ್ಸ್ ಹೋರಾಟಕ್ಕೆ ತೆರೆಬಿದ್ದಿದೆ. ವಿಶ್ವದ ಹದಿನೆಂಟನೇ ಶ್ರೇಯಾಂಕಿತ ಆಟಗಾರ್ತಿ ಅನಸ್ಟಾಸಿಯಾ ಸೆವಾಸ್ಟೊವಾ ವಿರುದ್ಧ ೨-೬, ೩-೬ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಲಾಟ್ವಿಯಾ ಆಟಗಾರ್ತಿಯ ಆಕ್ರಮಣಕಾರಿ ಆಟಕ್ಕೆ ಬೆಚ್ಚಿದ ಸ್ಟೀಫನ್ಸ್, ಈ ಬಾರಿ ಸೆಮಿಫೈನಲ್ ತಲುಪಲೂ ಸಾಧ್ಯವಾಗದೆ ಪರಾಜಿತರಾದರು.

ಅನಸ್ಟಾಸಿಯಾ ವಿರುದ್ಧ ಗೆಲುವು ಸಾಧಿಸಲು ಪ್ರಬಲ ಪೈಪೋಟಿ ನಡೆಸಿದ ಸ್ಟೀಫನ್ಸ್ ಕೊನೆಗೂ ಆಕೆಯನ್ನು ಮಣಿಸಲಾಗಲಿಲ್ಲ. ಚೆಂಡಿನ ಗತಿಯನ್ನು ಸರಿಯಾಗಿ ಗ್ರಹಿಸುವಲ್ಲಿ ದೃಷ್ಟಿ ಸಮಸ್ಯೆಯಿಂದಲೂ ಕೊಂಚ ಹಿನ್ನಡೆ ಅನುಭವಿಸಿದ ಸ್ಟೀಫನ್ಸ್, ಅಂತಿಮವಾಗಿ ಈ ಬಾರಿಯ ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್‌ನಲ್ಲಿನ ಹೋರಾಟವನ್ನು ಸೋಲಿನೊಂದಿಗೆ ಮುಗಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More