ನವೀನ್ ಆಲ್ರೌಂಡ್ ಆಟ; ಭರತ್ ಚಿಪ್ಲಿ ಪಡೆಗೆ ಎರಡನೇ ಕೆಪಿಎಲ್ ಟ್ರೋಫಿ

ಅಜೇಯ ಓಟದೊಂದಿಗೆ ಕೆಪಿಎಲ್ ಫೈನಲ್ ತಲುಪಿದ್ದ ಬೆಂಗಳೂರು ಬ್ಲಾಸ್ಟರ್ಸ್ ಬಗ್ಗುಬಡಿದ ಬಿಜಾಪುರ ಬುಲ್ಸ್, ಏಳನೇ ಕೆಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಯಿತು. ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ ಗುರುವಾರ (ಸೆ.೬) ನಡೆದ ಫೈನಲ್‌ನಲ್ಲಿ ರಾಬಿನ್ ಉತ್ತಪ್ಪ ಪಡೆ ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತಿತು

ಈ ಋತುವಿನ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲೇ (ಕೆಪಿಎಲ್) ಅಜೇಯ ಓಟದೊಂದಿಗೆ ಫೈನಲ್‌ ತಲುಪಿದ್ದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅತ್ಯಂತ ಕಳಪೆ ಬ್ಯಾಟಿಂಗ್‌ನಿಂದ ಕಂಗೆಟ್ಟಿತು. ಸ್ಪಿನ್ ಮಾಂತ್ರಿಕ ಕೆ ಪಿ ಅಪ್ಪಣ್ಣ (೧೬ಕ್ಕೆ ೩) ಚಮತ್ಕಾರಿ ಬೌಲಿಂಗ್ ಮಧ್ಯೆ ಭಾವೇಶ್ ಗುಲೆಚಾ (೧೪ಕ್ಕೆ ೨), ಎಂ ಜಿ ನವೀನ್ (೧೯ಕ್ಕೆ ೨) ಮತ್ತು ಕೆ ಸಿ ಕಾರಿಯಪ್ಪ (೧೩ಕ್ಕೆ ೧) ಬ್ಲಾಸ್ಟರ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

೧೦೨ ರನ್ ಗೆಲುವಿನ ಗುರಿ ಬೆನ್ನತ್ತಿದ ಬಿಜಾಪುರ ಬುಲ್ಸ್ ಇನ್ನೂ ಆರು ಓವರ್‌ ಬಾಕಿ ಇರುವಂತೆಯೇ ಅಂದರೆ, ೧೩.೫ ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಮನೋಜ್ ಎಸ್ ಭಾಂಡಗೆ ನಿರ್ವಹಿಸಿದ ಹದಿಮೂರನೇ ಓವರ್‌ನಲ್ಲಿ ಸತತ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ ೨೦ ರನ್ ಚಚ್ಚಿದ ಭರತ್, ತಂಡಕ್ಕೆ ಏಳು ವಿಕೆಟ್ ಜಯ ತಂದಿತ್ತರು. ಇದರೊಂದಿಗೆ ಕೆಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಆದ ಗರಿಮೆಗೆ ಬುಲ್ಸ್ ಭಾಜನವಾಯಿತು.

ಉತ್ತಪ್ಪ ಪಡೆಯನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಬಿಜಾಪುರ ಬುಲ್ಸ್ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಆರಂಭಿಕ ಎಂ ಜಿ ನವೀನ್ (೨೮) ಮತ್ತು ನಾಯಕ ಭರತ್ ಚಿಪ್ಲಿ (೧೯) ಮೊದಲ ವಿಕೆಟ್‌ಗೆ ೪೭ ರನ್ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿತು. ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಶ್ರೇಯಸ್ ಗೋಪಾಲ್, ಚಿಪ್ಲಿಯನ್ನು ಬೌಲ್ಡ್ ಮಾಡಿ ತಿರುಗೇಟು ನೀಡಲು ಯತ್ನಿಸಿದರು.

ಆದರೆ, ಅದಾಗಲೇ ಬುಲ್ಸ್ ಜಯದತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಏತನ್ಮಧ್ಯೆ, ಎಂ ಜಿ ನವೀನ್ (೪೩: ೩೧ ಎಸೆತ, ೫ ಬೌಂಡರಿ, ೨ ಸಿಕ್ಸರ್) ಕೇವಲ ೭ ರನ್ ಅಂತರದಲ್ಲಿ ಅರ್ಧಶತಕ ವಂಚಿತವಾದ ನಂತರ, ಕೆ ಎಲ್ ಶ್ರೀಜಿತ್ (೭) ಕೌಶಿಕ್ ಬೌಲಿಂಗ್‌ನಲ್ಲಿ ಮಿತ್ರಕಾಂತ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ಕೌನೇನ್ ಅಬ್ಬಾಸ್ ಮತ್ತು ಕೆ ಎನ್ ಭರತ್ (೨೧: ೭ ಎಸೆತ, ೩ ಬೌಂಡರಿ, ೧ ಸಿಕ್ಸರ್) ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭರತ್ ಚಿಪ್ಲಿ, ರಾಬಿನ್ ಉತ್ತಪ್ಪ ಪಡೆಯನ್ನು ಮೊದಲು ಬ್ಯಾಟ್ ಮಾಡುವಂತೆ ಕೋರಿತು. ಪಿಚ್‌ನ ಸ್ಥಿತಿಗತಿಯನ್ನು ಚೆನ್ನಾಗಿ ಅವಲೋಕಿಸಿದ್ದ ಚಿಪ್ಲಿ ನಿರ್ಣಯ ಸರಿಯಾಗಿಯೇ ಇತ್ತು. ಅದಕ್ಕೆ ತಕ್ಕಂತೆ ಶುರುವಿನಿಂದಲೇ ಬೆಂಗಳೂರು ಬ್ಲಾಸ್ಟರ್ಸ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಇದನ್ನೂ ಓದಿ : ವಿಶ್ವ ಶೂಟಿಂಗ್: ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸೌರಭ್ ಚೌಧರಿ

ಮೊದಲ ಓವರ್‌ನಲ್ಲೇ ಬೆಂಗಳೂರು ಬ್ಲಾಸ್ಟರ್ಸ್ ಎಡವಿತು. ನಾಲ್ಕನೇ ಎಸೆತದಲ್ಲಿ ಚೇತನ್ ವಿಲಿಯಮ್ (೧) ಅವರನ್ನು ಭರತ್ ಚಿಪ್ಲಿ ರನೌಟ್ ಮಾಡಿದರೆ, ಬಳಿಕ ಬಂದ ರಾಬಿನ್ ಉತ್ತಪ್ಪ (೯: ೭ ಎಸೆತ, ೨ ಬೌಂಡರಿ) ಎಂಜಿ ನವೀನ್ ಬೌಲಿಂಗ್‌ನಲ್ಲಿ ಕೆ ಎಲ್ ಶ್ರಿಜಿತ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಉತ್ತಪ್ಪ ನಂತರದಲ್ಲಿ ಬ್ಲಾಸ್ಟರ್ಸ್ ಆರಂಭಿಕ ಕೆ ಬಿ ಪವನ್ (೨೨) ಅವರನ್ನೂ ಕಳೆದುಕೊಂಡಿತು. ಆನಂತರದಲ್ಲಿ ಪವನ್ ದೇಶಪಾಂಡೆ (೯), ಶ್ರೇಯಸ್ ಗೋಪಾಲ್ (೮) ಕೂಡಾ ಎರಡಂಕಿ ದಾಟದೆ ಪೆವಿಲಿಯನ್ ಸೇರಿಕೊಂಡರು.

ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಬೆಂಗಳೂರು ಬ್ಲಾಸ್ಟರ್ಸ್‌ಗೆ ಯಾವುದೇ ಹಂತದಲ್ಲೂ ಉತ್ತಮ ಜತೆಯಾಟ ಸಿಗಲೇ ಇಲ್ಲ. ಮನೋಜ್ ಎಸ್ ಭಾಂಡಗೆ (೧೮) ಮತ್ತು ಅರ್ಷದೀಪ್ ಬ್ರಾರ್ (೧೪) ಮಧ್ಯಮ ಕ್ರಮಾಂಕದಲ್ಲಿ ತುಸು ಭರವಸೆ ನೀಡಿದರಾದರೂ, ಅವರೂ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆನಂತರದಲ್ಲಿ ಆಡಿದವರಾರೂ ಎರಡಂಕಿ ದಾಟಲಿಲ್ಲ.

ಸಂಕ್ಷಿಪ್ತ ಸ್ಕೋರ್

ಬೆಂಗಳೂರು ಬ್ಲಾಸ್ಟರ್ಸ್: ೨೦ ಓವರ್‌ಗಳಲ್ಲಿ ೧೦೧ಕ್ಕೆ ಆಲೌಟ್ (ಕೆ ಬಿ ಪವನ್ ೨೨; ಕೆ ಪಿ ಅಪ್ಪಣ್ಣ ೧೬ಕ್ಕೆ ೩, ಎಂ ಜಿ ನವೀನ್ ೧೯ಕ್ಕೆ ೨, ಭವೇಶ್ ಗುಲೇಚಾ ೧೪ಕ್ಕೆ ೨) ಬಿಜಾಪುರ ಬುಲ್ಸ್: ೧೩.೫ ಓವರ್‌ಗಳಲ್ಲಿ೧೦೬/೩ (ಎಂ ಜಿ ನವೀನ್ ೪೩, ಕೌನೇನ್ ಅಬ್ಬಾಸ್ ೧೫*, ಕೆ ಎನ್ ಭರತ್ ೨೧*; ಶ್ರೇಯಸ್ ಗೋಪಾಲ್ ೧೪ಕ್ಕೆ ೧); ಫಲಿತಾಂಶ: ಬಿಜಾಪುರ ಬುಲ್ಸ್‌ಗೆ ೭ ವಿಕೆಟ್ ಗೆಲುವು

ಕೆಪಿಎಲ್ ವಿಜೇತರ ಪಟ್ಟಿ

  • ೨೦೦೯-೧೦: ಚಾಂಪಿಯನ್: ಪ್ರಾವಿಡೆಂಟ್ ಬೆಂಗಳೂರು (ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ೫ ವಿಕೆಟ್ ಗೆಲುವು)
  • ೨೦೧೦-೧೧: ಚಾಂಪಿಯನ್: ಮಂಗಳೂರು ಯುನೈಟೆಡ್ (ಪ್ರಾವಿಡೆಂಟ್ ಬೆಂಗಳೂರು ವಿರುದ್ಧ ೪೪ ರನ್ ಗೆಲುವು)
  • ೨೦೧೪-೧೫: ಚಾಂಪಿಯನ್: ಮೈಸೂರು ವಾರಿಯರ್ಸ್ (ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ೬ ವಿಕೆಟ್ ಗೆಲುವು)
  • ೨೦೧೫-೧೬: ಚಾಂಪಿಯನ್: ಬಿಜಾಪುರ ಬುಲ್ಸ್ (ಹುಬ್ಬಳ್ಳಿ ಟೈಗರ್ಸ್ ವಿರುದ್ಧ ೭ ವಿಕೆಟ್ ಗೆಲುವು)
  • ೨೦೧೬-೧೭: ಚಾಂಪಿಯನ್: ಬಳ್ಳಾರಿ ಟಸ್ಕರ್ಸ್ (ಹುಬ್ಬಳ್ಳಿ ಟೈಗರ್ಸ್ ವಿರುದ್ಧ ೩೫ ರನ್ ಗೆಲುವು)
  • ೨೦೧೭-೧೮: ಚಾಂಪಿಯನ್: ಬೆಳಗಾವಿ ಪ್ಯಾಂಥರ್ಸ್ (ಬಿಜಾಪುರ ಬುಲ್ಸ್ ವಿರುದ್ಧ ೬ ವಿಕೆಟ್ ಗೆಲುವು)
  • ೨೦೧೮-೧೯: ಚಾಂಪಿಯನ್: ಬಿಜಾಪುರ ಬುಲ್ಸ್ (ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ೭ ವಿಕೆಟ್ ಗೆಲುವು)
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More