ಅಮೆರಿಕ ಓಪನ್ ಟೆನಿಸ್: ನಿಶಿಕೊರಿ ಹಾಗೂ ಜೊಕೊವಿಚ್ ಸೆಮಿಫೈನಲ್‌ಗೆ

ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಹದಿಮೂರು ಗ್ರಾಂಡ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಚ್ ಮತ್ತು ಜಪಾನ್‌ನ ಯುವ ಆಟಗಾರ ಕೀ ನಿಶಿಕೊರಿ ೪ರ ಘಟ್ಟ ತಲುಪಿದ್ದಾರೆ. ಮರಿನ್ ಸಿಲಿಕ್, ಜಾನ್ ಮಿಲ್ಮನ್ ಹೋರಾಟಕ್ಕೆ ತೆರೆಬಿದ್ದಿದೆ

ವಿಶ್ವದ ಮಾಜಿ ನಂ ೧ ಆಟಗಾರ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಗುರುವಾರ (ಸೆ. ೫) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಹಾಗೂ ವಿಶ್ವದ ೫೫ನೇ ಶ್ರೇಯಾಂಕಿತ ಜಾನ್ ಮಿಲ್ಮನ್ ವಿರುದ್ಧ ೬-೩, ೬-೪, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಹಾಲಿ ವಿಂಬಲ್ಡನ್ ಚಾಂಪಿಯನ್ ಜೊಕೊವಿಚ್ ಅದ್ಭುತ ಪ್ರದರ್ಶನದೊಂದಿಗೆ ಮಿಂಚು ಹರಿಸಿದರಲ್ಲದೆ ಮಿಲ್ಮನ್ ವಿರುದ್ಧದ ಗೆಲುವಿನೊಂದಿಗೆ ಸತತ ಹನ್ನೆರಡನೇ ಬಾರಿಗೆ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮೆರೆದರು. ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಹಾಗೂ ೨೦ ಗ್ರಾಂಡ್‌ಸ್ಲಾಮ್‌ಗಳ ವಿಜೇತ ರೋಜರ್ ಫೆಡರರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಮಿಲ್ಮನ್ ಹೋರಾಟಕ್ಕೆ ಜೊಕೊವಿಚ್ ಅಂತಿಮವಾಗಿ ತೆರೆಎಳೆದರು.

“ಸರಿಸುಮಾರು ಮೂರು ತಾಸುಗಳವರೆಗೆ ನನ್ನನ್ನು ಮಿಲ್ಮನ್ ಬಹುವಾಗಿ ಕಾಡಿದರು. ಅಭೂತಪೂರ್ವ ಪ್ರತಿರೋಧ ತೋರಿದ ಅವರು ಅತ್ಯುತ್ತಮ ಪ್ರತಿಸ್ಪರ್ಧಿ. ಮೊಟ್ಟಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ ತಲುಪುವುದರೊಂದಿಗೆ ಅದೂ ರೋಜರ್ ಫೆಡರರ್ ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ ಮಿಲ್ಮನ್ ಎಂತಹ ಅಪಾಯಕಾರಿ ಎಂಬುದನ್ನು ಮನಗಾಣಿಸಿದ್ದಾರೆ,’’ ಎಂದು ಪಂದ್ಯದ ಬಳಿಕ ಜೊಕೊವಿಚ್ ಪ್ರತಿಕ್ರಿಯಿಸಿದರು.

ಸಿಲಿಕ್ ವಿರುದ್ಧ ಸ್ಮರಣೀಯ ಗೆಲುವು

ಇದನ್ನೂ ಓದಿ : ಅಮೆರಿಕ ಓಪನ್ ಟೆನಿಸ್| ಡಾಮಿನಿಕ್ ವಿರುದ್ಧ ಅಬ್ಬರಿಸಿದ ರಾಫಾ ಸೆಮಿಫೈನಲ್‌ಗೆ

ನಾಲ್ಕು ವರ್ಷಗಳ ಹಿಂದೆ ಇದೇ ಫ್ಲಶಿಂಗ್ ಮೆಡೋಸ್‌ನಲ್ಲಿ ಚೊಚ್ಚಲ ಗ್ರಾಂಡ್‌ಸ್ಲಾಮ್‌ಗಾಗಿ ನಡೆದಿದ್ದ ಹೋರಾಟದಲ್ಲಿ ಕೀ ನಿಶಿಕೊರಿಯನ್ನು ಮಣಿಸಿ ಚಾಂಪಿಯನ್ ಆಗಿದ್ದ ಕ್ರೊವೇಷ್ಯಾ ಟೆನಿಸಿಗ ಮರಿನ್ ಸಿಲಿಕ್‌ ಎದುರು ನಿಶಿಕೊರಿ ಸ್ಮರಣೀಯ ಜಯ ಪಡೆದರು. ಗುರುವಾರ (ಸೆ. ೬) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನಿಶಿಕೊರಿ ೨-೬, ೬-೫, ೭-೬ (೭/೫), ೪-೬, ೬-೪ ಸೆಟ್‌ಗಳಲ್ಲಿ ಗೆಲುವು ಪಡೆದರು.

ನ್ಯೂಯಾರ್ಕ್‌ನಲ್ಲಿನ ಬಿಸಿ ತಾಪಮಾನದಿಂದ ಕೂಡಿದ ಪಂದ್ಯದಲ್ಲಿ ನಿಶಿಕೊರಿ ಎದುರು ಸಿಲಿಕ್ ನಿರೀಕ್ಷೆಯಂತೆಯೇ ಆಕ್ರಮಣಕಾರಿ ಆಟದೊಂದಿಗೆ ವಿಜೃಂಭಿಸಿದರಾದರೂ, ಕ್ರಮೇಣ ವಿಶ್ವದ ೨೧ನೇ ಶ್ರೇಯಾಂಕಿತ ಆಟಗಾರನ ವಿರುದ್ಧ ೧-೨ ಹಿನ್ನಡೆ ಅನುಭವಿಸಿದರು. ಆದಾಗ್ಯೂ ಪಂದ್ಯದಲ್ಲಿ ಹಿಡಿತ ಸಾಧಿಸಿದ ನಿಶಿಕೊರಿ, ನಿರ್ಣಾಯಕ ಘಟ್ಟದ ಐದನೇ ಸೆಟ್‌ನಲ್ಲಿ ಮತ್ತೊಮ್ಮೆ ಎಡವಿದರು. ಮುಂದಿನ ಸುತ್ತಿನಲ್ಲಿ ೨೮ರ ಹರೆಯದ ನಿಶಿಕೊರಿ, ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಕಾದಾಡಲಿದ್ದಾರೆ.

ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಬ್ಬರೂ ಆಟಗಾರರು ಬಿಸಿಲ ಝಳಕ್ಕೆ ಲಯ ತಪ್ಪಿದರು. ಆದರೆ, ಜಪಾನ್ ಆಟಗಾರನಿಗಿಂತ ೨೦೧೪ರ ಯುಎಸ್ ಓಪನ್ ಚಾಂಪಿಯನ್ ಸಿಲಿಕ್ ಮಾತ್ರ ಭಾರೀ ಪ್ರಮಾದವೆಸಗಿದರು. ೭೦ ಅನಗತ್ಯ ತಪ್ಪು ಹೊಡೆತಗಳಿಂದ ಕೂಡಿದ್ದ ಸಿಲಿಕ್ ರ್ಯಾಕೆಟ್‌ನಿಂದ ೫೭ ವಿನ್ನರ್‌ಗಳು ಸಿಡಿದವು. ನಿಶಿಕೊರಿಯಿಂದ ೪೫ ಅನಗತ್ಯ ಹೊಡೆತಗಳು ದಾಖಲಾದರೆ, ೨೯ ವಿನ್ನರ್‌ಗಳು ಸಿಡಿದವು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More