ಅಮೆರಿಕ ಓಪನ್ ಟೆನಿಸ್‌: ಮೊದಲ ಬಾರಿ ಸೆಮಿ ತಲುಪಿ ದಾಖಲೆ ಬರೆದ ಜಪಾನ್ ಜೋಡಿ

ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷ ಮತ್ತು ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಜಪಾನ್‌ ಐತಿಹಾಸಿಕ ಸಾಧನೆ ಮೆರೆದಿದೆ. ಮರಿನ್ ಸಿಲಿಕ್ ವಿರುದ್ಧ ಕೀ ನಿಶಿಕೊರಿ ಗೆಲುವು ಸಾಧಿಸಿ ನಾಲ್ಕರ ಘಟ್ಟ ತಲುಪಿದ ಬಳಿಕ, ಲೆಸಿಯಾ ವಿರುದ್ಧ ನೊವೊಮಿ ಒಸಾಕ ಜಯಿಸಿದರು

ಯುವ ಆಟಗಾರ್ತಿ ನವೊಮಿ ಒಸಾಕ ವೃತ್ತಿಬದುಕಿನ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲೇ ಪ್ರಥಮ ಬಾರಿಗೆ ಸೆಮಿಫೈನಲ್ ತಲುಪಿದ್ದಾರೆ. ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್ ಆಟಗಾರ್ತಿ ಲೆಸಿಯಾ ಸುರೆಂಕೊ ವಿರುದ್ಧ ೬-೧, ೬-೧ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಪಡೆದರು.

ಸಂಪೂರ್ಣ ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಒಸಾಕ, ಕೇವಲ ೫೮ ನಿಮಿಷಗಳಲ್ಲೇ ಜಯದ ನಗೆ ಬೀರಿದರು. ಎರಡೂ ಸೆಟ್‌ಗಳಲ್ಲಿ ಲೆಸಿಯಾ ಗೆಲುವು ಪಡೆದದ್ದು ಕೇವಲ ಒಂದೊಂದು ಗೇಮ್‌ಗಳನ್ನಷ್ಟೆ. “ನನ್ನ ಇಡೀ ದೇಹ ನಡುಗುತ್ತಿತ್ತು. ಆದರೆ, ಚೆನ್ನಾಗಿ ಆಡಿದ್ದು ಈ ಎಲ್ಲ ಒತ್ತಡ ಮತ್ತು ಉದ್ವೇಗವನ್ನು ಮರೆಮಾಚಿ ಸಂತಸ ತಂದುಕೊಟ್ಟಿತು,’’ ಎಂದು ಒಸಾಕ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

೨೦ರ ಹರೆಯದ ಜಪಾನ್ ಆಟಗಾರ್ತಿ ಒಸಾಕ, ಯುಎಸ್ ಓಪನ್‌ ಸೆಮಿಫೈನಲ್‌ ತಲುಪುವ ಮೂಲಕ ಗ್ರಾಂಡ್‌ಸ್ಲಾಮ್ ಸೆಮಿಫೈನಲ್ ತಲುಪಿದ ಜಪಾನ್‌ನ ಎರಡನೇ ಆಟಗಾರ್ತಿ ಎನಿಸಿದರು. ೧೯೯೬ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಕಿಮಿಕೊ ಡೇಟ್ ಅಂತಿಮ ನಾಲ್ಕರ ಘಟ್ಟ ತಲುಪಿದ ಜಪಾನ್‌ನ ಮೊಟ್ಟಮೊದಲ ಮಹಿಳಾ ಟೆನಿಸ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ಮುಂದಿನ ಸುತ್ತಿನಲ್ಲಿ ಒಸಾಕ, ಹಾಲಿ ರನ್ನರ್‌ಅಪ್ ಮ್ಯಾಡಿಸನ್ ಕೀಸ್ ವಿರುದ್ಧ ಕಾದಾಡಲಿದ್ದಾರೆ.

ಇದನ್ನೂ ಓದಿ : ಅಮೆರಿಕ ಓಪನ್ ಟೆನಿಸ್: ನಿಶಿಕೊರಿ ಹಾಗೂ ಜೊಕೊವಿಚ್ ಸೆಮಿಫೈನಲ್‌ಗೆ

ಮ್ಯಾಡಿಸನ್ ಕೀಸ್ ಗೆಲುವು

ಕಳೆದ ಬಾರಿಯ ರನ್ನರ್‌ಅಪ್ ಅಮೆರಿಕದ ಮ್ಯಾಡಿಸನ್ ಕೀಸ್ ಸತತ ಎರಡನೇ ವರ್ಷವೂ ಫೈನಲ್ ತಲುಪುವ ಹಾದಿಯಲ್ಲಿ ಸಾಗಿದ್ದಾರೆ. ಕಳೆದ ಸಾಲಿನಲ್ಲಿ ಸಹ ಆಟಗಾರ್ತಿ ಸ್ಲೊವಾವಿ ಸ್ಟೀಫನ್ಸ್ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತವಾಗಿದ್ದ ಮ್ಯಾಡಿಸನ್, ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸ್ಪೇನ್ ಆಟಗಾರ್ತಿ ಕಾರ್ಲಾ ಸ್ವಾರೆಜ್ ನವಾರೊ ವಿರುದ್ಧ ೬-೪, ೬-೩ ನೇರ ಸೆಟ್‌ಗಳಲ್ಲಿ ಜಯಿಸಿದರು.

ಗಾಯದ ಸಮಸ್ಯೆಯಿಂದಾಗಿ ಡಬ್ಲ್ಯೂಟಿಎ ಟೂರ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ೨೩ರ ಹರೆಯದ ಕೀಸ್, ಪ್ರಮುಖ ಘಟ್ಟಗಳಲ್ಲಿ ಎಡವುತ್ತಿದ್ದಾರೆ. ನಾಲ್ಕು ಗ್ರಾಂಡ್‌ಸ್ಲಾಮ್‌ಗಳ ಪೈಕಿ ಮೂರರಲ್ಲಿ ಈಗಾಗಲೇ ಕ್ವಾರ್ಟರ್‌ಫೈನಲ್ ತಲುಪಿದ್ದ ಕೀಸ್, ಒಂದರಲ್ಲೂ ಪ್ರಶಸ್ತಿ ಗೆಲ್ಲಲಾಗಿಲ್ಲ. ಅವರ ಶ್ರೇಷ್ಠ ಸಾಧನೆ ಎಂದರೆ, ಕಳೆದ ಸಾಲಿನ ಇದೇ ಯುಎಸ್ ಓಪನ್‌ನಲ್ಲಿ ರನ್ನರ್‌ಅಪ್ ಎನಿಸಿಕೊಂಡದ್ದು.

ಇನ್ನು, ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಮರಿಯಾ ಶರಪೋವಾ ಅವರ ಯುಎಸ್ ಓಪನ್‌ನ ಜೈತ್ರಯಾತ್ರೆಗೆ ತಡೆಯೊಡ್ಡಿದ್ದ ೩೦ರ ಹರೆಯದ ಕಾರ್ಲಾ, ಮ್ಯಾಡಿಸನ್ ಕೀಸ್ ಎದುರು ಕೊಂಚ ಪ್ರತಿರೋಧ ತೋರಿದರಾದರೂ, ಆಕೆಯನ್ನು ಮಣಿಸುವಲ್ಲಿ ವಿಫಲವಾದರು. ಕೆಲವೊಂದು ಡಬಲ್ ಫಾಲ್ಟ್‌ ಮತ್ತು ಅನಗತ್ಯ ತಪ್ಪು ಹೊಡೆತಗಳಿಂದ ಕೊಂಚ ತಡವರಿಸಿದರಾದರೂ, ತವರು ಅಭಿಮಾನಿಗಳ ಬೆಂಬಲದಲ್ಲಿ ಕೀಸ್, ಸ್ಪೇನ್ ಆಟಗಾರ್ತಿಯ ಸವಾಲಿಗೆ ತೆರೆ ಎಳೆದರು.

ಏಷ್ಯಾ ಕಪ್: ಹ್ಯಾಟ್ರಿಕ್ ಕನವರಿಕೆಯಲ್ಲಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ 
ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ
ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
Editor’s Pick More