ಚಹಾ ಮಾರಿ ಹೊಟ್ಟೆ ಹೊರೆಯುತ್ತಿರುವ ಏಷ್ಯಾಡ್ ಪದಕ ವಿಜೇತ ಹರೀಶ್!

ಇಂಡೋನೇಷ್ಯಾದಲ್ಲಿ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಏಷ್ಯಾ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಪ್ರತಿಭಾನ್ವಿತ ಕ್ರೀಡಾಪಟು ಹರೀಶ್ ಕುಮಾರ್ ಕುಟುಂಬದ ಪಾಲನೆಗೆ ಟೀ ಮಾರುತ್ತಿದ್ದಾರೆಂಬ ಸಂಗತಿಯನ್ನು ಎಎನ್ಐ ವರದಿ ಮಾಡಿದೆ. ಸೆಪಕ್‌ಟಕ್ರಾದಲ್ಲಿ ಹರೀಶ್ ಕಂಚು ಗೆದ್ದು ಗಮನ ಸೆಳೆದಿದ್ದರು

ಭಾರತ ಸೆಪೆಕ್ ಟಕ್ರಾ ತಂಡದ ಸದಸ್ಯ ಹರೀಶ್ ಕುಮಾರ್ ಏಷ್ಯಾಡ್‌ನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧಕ ಎನಿಸಿಕೊಂಡರೂ, ಅವರ ಹಾಗೂ ಅವರ ಕುಟುಂಬ ಪಡುತ್ತಿರುವ ಬದುಕಿನ ಬವಣೆ ಭಾರತದ ಮಾಧ್ಯಮಗಳಲ್ಲಿ ಜಗಜ್ಜಾಹೀರಾಗಿದೆ. ಜೀವನ ನಿರ್ವಹಣೆಗಾಗಿ ಅವರು ತನ್ನಪ್ಪನ ಚಹಾ ಅಂಗಡಿಯಲ್ಲಿ ದುಡಿಯುತ್ತಿರುವ ಸಂಗತಿ ಪ್ರತಿಭಾನ್ವಿತ ಕ್ರೀಡಾಪಟುವಿನ ನೋವಿನ ಕತೆಗೆ ಕನ್ನಡಿ ಹಿಡಿದಿದೆ.

“ನಮ್ಮ ಕುಟುಂಬದಲ್ಲಿ ಅನೇಕರಿದ್ದಾರೆ. ಆದರೆ, ಆದಾಯ ಮಾತ್ರ ಅಲ್ಪ. ನನ್ನ ತಂದೆಯ ಚಹಾ ಅಂಗಡಿಯಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ನನ್ನಿಂದಾದಷ್ಟು ಮನೆಗೆ ನೆರವಾಗುತ್ತಿದ್ದೇನೆ. ಪ್ರತೀ ದಿನ ೨ರಿಂದ ೬ ಗಂಟೆಯವರೆಗೆ ನನ್ನ ಅಭ್ಯಾಸಕ್ಕೆ ಸಮಯವನ್ನು ಸಮರ್ಪಿಸುತ್ತಿದ್ದೇನೆ. ಯಾವುದಾದರೂ ಒಂದು ಒಳ್ಳೆಯ ಹುದ್ದೆಗೆ ಸೇರಿ ನನ್ನ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂಬುದೇ ನನ್ನ ಗುರಿಯಾಗಿದೆ,’’ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.

“೨೦೧೧ರಿಂದ ನಾನು ಈ ಕ್ರೀಡೆಯನ್ನು ಆಡುತ್ತಿದ್ದೇನೆ. ನಾನು ಈ ಕ್ರೀಡೆಗೆ ಕಾಲಿಡಲು ಪ್ರಮುಖ ಕಾರಣ ನನ್ನ ಕೋಚ್ ಹೇಮ್‌ರಾಜ್. ಮೊದಲಿಗೆ ಟೈರ್‌ನೊಂದಿಗೆ ಆಡುತ್ತಿದ್ದೆ. ಇದನ್ನು ಕಂಡ ಹೇಮ್‌ರಾಜ್ ನನ್ನನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಪರಿಚಯಿಸಿದರು. ಅಲ್ಲಿಂದಾಚೆಗೆ ಕ್ರೀಡಾ ಕಿಟ್‌ ಮತ್ತು ತಿಂಗಳಿಗೆ ಒಂದಿಷ್ಟು ಮೊತ್ತವನ್ನು ಪಡೆಯುವಂತಾಯಿತು. ಪ್ರತೀ ದಿನ ನಾನು ಅಭ್ಯಾಸ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ನನ್ನ ದೇಶಕ್ಕೆ ಗೆದ್ದುತರುವ ಸಂಕಲ್ಪ ತೊಟ್ಟಿದ್ದೇನೆ,’’ ಎಂದು ಸೆಪಕ್ ಟಕ್ರಾ ಕ್ರೀಡೆಯ ಆರಂಭದ ಕ್ಷಣಗಳನ್ನು ಹರೀಶ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : ಏಷ್ಯಾಡ್‌ನಲ್ಲಿ ಚೊಚ್ಚಲ ಕಂಚು ಗೆದ್ದು ಐತಿಹಾಸಿಕ ಸಾಧನೆಗೈದ ಇಂಡಿಯಾದ ಸೆಪಕ್ ಟಕ್ರಾ ತಂಡ

ಅಮ್ಮನ ಅಳಲು!

ಹರೀಶ್ ಅವರ ತಾಯಿ ಇಂದಿರಾ ದೇವಿ ತನ್ನೆಲ್ಲಾ ಕಷ್ಟ-ಕಾರ್ಪಣ್ಯಗಳ ನಡುವೆಯೂ ಮಗನ ಕ್ರೀಡಾಬದುಕಿಗೆ ನೆರವಾದ ಬಗ್ಗೆ ಹೇಳಿಕೊಂಡಿದ್ದಾರೆ. ಆಕೆ ಹೇಳುತ್ತಾರೆ: “ಕಡು ಕಷ್ಟ ಕೋಟಲೆಗಳಲ್ಲಿ ನನ್ನ ಮಕ್ಕಳನ್ನು ಬೆಳೆಸಿದೆ. ನನ್ನ ಗಂಡ ಓರ್ವ ಆಟೋ ಚಾಲಕ. ಮತ್ತು ನಮಗಿರುವುದು ಒಂದೇ ಒಂದು ಪುಟ್ಟದಾದ ಚಹಾ ಅಂಗಡಿ. ನನ್ನ ಮಗ ತನ್ನ ಅಪ್ಪನ ಶ್ರಮವನ್ನು ಕಡಿಮೆ ಮಾಡಲು ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ನನ್ನ ಕಂದನಿಗೆ ಊಟ ಮತ್ತು ವಸತಿ ನೀಡುತ್ತಿರುವ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಮಗನ ಕ್ರೀಡಾಸಾಧನೆಗೆ ನೆರವಾದ ಕೋಚ್ ಹೇಮ್‌ರಾಜ್ ಅವರ ಸಹಾಯವನ್ನೂ ನಾನು ಮರೆಯುವಂತಿಲ್ಲ,’’ ಎಂದು.

ಇನ್ನು, ಹರೀಶ್ ಸೋದರ ಧವನ್ ಕೂಡ ಸರ್ಕಾರದ ನೆರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. “ನಾವು ಬಾಡಿಗೆ ಕಟ್ಟಲಾಗದೆ ಹೋದಾಗ ಕಾಲಾವಕಾಶವನ್ನು ನೀಡಲಾಗಿದೆ. ಕೋಚ್ ಹೇಮ್‌ರಾಜ್ ನನ್ನ ಸೋದರನಿಗೆ ತರಬೇತಿ ನೀಡಿ ಸಾಯ್ ಕೇಂದ್ರಕ್ಕೆ ಸೇರಿಸಿದರು. ನನ್ನ ಸೋದರನಿಗೆ ಸರ್ಕಾರ ಉದ್ಯೋಗ ನೀಡಿದರೆ ಅದು ನಮ್ಮ ಕುಟುಂಬವನ್ನು ಪೊರೆಯುತ್ತದೆ,’’ ಎಂದು ಧವನ್ ಯಾಚಿಸಿದ್ದಾರೆ.

ಅಂದಹಾಗೆ, ಇಂಡೋನೇಷ್ಯಾದಲ್ಲಿನ ಹದಿನೆಂಟನೇ ಏಷ್ಯಾಡ್‌ನಲ್ಲಿ ಭಾರತ ೬೯ ಪದಕಗಳನ್ನು ಜಯಿಸುವ ಮೂಲಕ ಇತಿಹಾಸ ಬರೆದಿತ್ತು. ಈ ಪದಕ ಸಾಧನೆಯಲ್ಲಿ ಸೆಪಕ್ ಟಕ್ರಾದಲ್ಲಿ ಬಂದ ಕಂಚಿನ ಪದಕವೂ ಸೇರ್ಪಡೆಯಾಗಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More