ವಿಡಿಯೋ | ಏಷ್ಯನ್ ಗೇಮ್ಸ್‌ನಲ್ಲಿ ಮಿಂಚು ಹರಿಸಿದ ಕೊಡಗಿನ ಕ್ರೀಡಾ ತಾರೆಯರು

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕ್ರೀಡಾಕೂಟದಲ್ಲಿನ ಸಾಧನೆಯಲ್ಲಿ ಕೊಡಗಿನ ಕ್ರೀಡಾಕಲಿಗಳ ಕೊಡುಗೆಯೂ ಇದೆ. ರಾಜ್ಯದ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸಾವಿರಾರು ಕ್ರೀಡಾಪಟುಗಳು ಗಮನ ಸೆಳೆದಿದ್ದು, ಹಲವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ

ಹದಿನೆಂಟನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. 15 ಚಿನ್ನ, 24 ಬೆಳ್ಳಿ, 30 ಕಂಚು ಸೇರಿದಂತೆ ಒಟ್ಟು 69 ಪದಕ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. 2010ರಲ್ಲಿ ಒಟ್ಟು 65 ಪದಕ ಗಳಿಸಿದ್ದು ಈ ಹಿಂದಿನ ಸಾಧನೆಯಾಗಿತ್ತು. 1951ರಲ್ಲಿ 15 ಚಿನ್ನದ ಪದಕ ಗಳಿಸಿದ್ದ ಸಾಧನೆಯ ಬಳಿಕ ಭಾರತಕ್ಕೆ ಮತ್ತೆ ಇಷ್ಟು ಚಿನ್ನದ ಪದಕ ದೊರೆತಿರಲಿಲ್ಲ. 67 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇಶ ಮತ್ತೊಮ್ಮೆ 15 ಚಿನ್ನದ ಪದಕಕ್ಕೆ ಕೊರಳೊಡ್ಡಿರುವುದು ಗಮನಾರ್ಹ. 45 ರಾಷ್ಟ್ರಗಳ 11,720 ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟ ಭಾರತ ಮಾತ್ರವಲ್ಲದೆ ಕರ್ನಾಟಕದ ಕೊಡಗು ಜಿಲ್ಲೆಗೂ ಸ್ಮರಣೀಯ.

ಭೂಕುಸಿತದಿಂದ ಕೊಡಗು ತತ್ತರಿಸಿದೆಯಾದರೂ ಕ್ರೀಡಾ ಜಿಲ್ಲೆ ಎಂಬ ಹೆಸರನ್ನು ಹೊಂದಿರುವ ಈ ಮಣ್ಣಿನ ಕ್ರೀಡಾಕಲಿಗಳು ನೋವಿನ ನಡುವೆಯೂ ಕೊಡಗಿನ ಹಿರಿಮೆ ಎತ್ತಿಹಿಡಿದಿದ್ದಾರೆ. ಇಂಡೋನೇಷ್ಯಾದ ಜಕಾರ್ತದಲ್ಲಿ 15 ದಿನಗಳ ಕಾಲ ಜರುಗಿದ ಏಷ್ಯನ್ ಗೇಮ್ಸ್‌ನಲ್ಲಿ ಕೊಡಗಿನ ಒಟ್ಟು ಏಳು ಮಂದಿ ದೇಶವನ್ನು ಪ್ರತಿನಿಧಿಸಿದ್ದರು. ಈ ಏಳು ಮಂದಿಯ ಪೈಕಿ ಆರು ಕ್ರೀಡಾಪಟುಗಳು ದೇಶಕ್ಕೆ ಪದಕ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬರು ಪದಕ ಪಡೆಯುವಲ್ಲಿ ವಂಚಿತರಾದರೂ ಈ ಕ್ರೀಡೆಯಲ್ಲಿ ದೇಶ ಈತನಕ ಮಾಡಿರದಿದ್ದ ಸಾಧನೆ ತೋರುವಲ್ಲಿ ಶ್ರಮ ವಹಿಸಿದ್ದಾರೆ.

ಅದರಲ್ಲೂ, ಇಬ್ಬರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೆ, ಮತ್ತೊಬ್ಬರು ಬೆಳ್ಳಿ ಹಾಗೂ ಇನ್ನೋರ್ವ ಕ್ರೀಡಾಪಟು ಈತನಕ ರಾಜ್ಯ ಅಥವಾ ಜಿಲ್ಲೆಯಲ್ಲಿ ಯಾರೂ ಸಾಧನೆ ಮಾಡಿರದಿದ್ದ ಸಾಹಸಮಯ ಕ್ರೀಡೆಯಾದ ‘ಸೈಲಿಂಗ್’ನಲ್ಲಿ ದೇಶಕ್ಕೆ ಕಂಚಿನ ಪದಕ ಗಳಿಸಿಕೊಟ್ಟಿರುವುದು ಗಮನಾರ್ಹ.

ಸ್ಪರ್ಧಿಗಳು

ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ, ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ, ಅಥ್ಲೆಟಿಕ್ಸ್‌ನಲ್ಲಿ ಮಾಚೆಟ್ಟಿರ ಆರ್ ಪೂವಮ್ಮ, ಕಾರೆಕೊಪ್ಪದ ಜೀವನ್, ಸ್ಕ್ವಾಷ್‍ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ, ಹಾಕಿಯಲ್ಲಿ ಏಷ್ಯಾದ ವೇಗದ ಆಟಗಾರ ಖ್ಯಾತಿಯ ಎಸ್ ವಿ ಸುನಿಲ್ ಹಾಗೂ ಇದೇ ಪ್ರಥಮ ಬಾರಿಗೆ ಸೈಲಿಂಗ್‍ನಲ್ಲಿ ಹಾತೂರಿನವರಾದ ಕೇಳಪಂಡ ಪಾರ್ಥ ಚಂಗಪ್ಪ ಪಾಲ್ಗೊಂಡಿದ್ದರು.

ಸಾಧನೆ

ಟೆನ್ನಿಸ್‍ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಮಾಚೆಟ್ಟಿರ ಆರ್ ಪೂವಮ್ಮ ಅವರದ್ದು ಚಿನ್ನದ ಪದಕದ ಸಾಧನೆಯಾಗಿದೆ. ಪೂವಮ್ಮ 4x400 ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಸ್ಕ್ವಾಷ್‍ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪ ಬೆಳ್ಳಿಯ ಪದಕ ಪಡೆದರೆ, ಸೈಲಿಂಗ್‍ನಲ್ಲಿ ಕೇಳಪಂಡ ಪಾರ್ಥ ಗಣಪತಿ ಕಂಚಿನ ಪದಕ ಗಳಿಸಿದ್ದಾರೆ. ಹಾಕಿಯಲ್ಲಿ ಎಸ್ ವಿ ಸುನಿಲ್ ಕಂಚಿನ ಪದಕ ಸಾಧನೆ ಮಾಡಿದ ತಂಡದ ಆಟಗಾರ. 4x400 ಪುರುಷರ ರಿಲೇ ತಂಡದಲ್ಲಿ ಕಾರೆಕೊಪ್ಪ ಜೀವನ್ ನಿರ್ಣಾಯಕ ಘಟ್ಟದಲ್ಲಿ ಇರದಿದ್ದರೂ ತಂಡದ ಸ್ಪರ್ಧಿಯಾಗಿ ಇವರೂ ಬೆಳ್ಳಿಯ ಪದಕದ ಪಾಲುದಾರರು. ಇನ್ನು, ಬ್ಯಾಡ್‍ಮಿಂಟನ್‍ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಮಾತ್ರ ಪದಕದ ಪಟ್ಟಿಯಲ್ಲಿ ಇಲ್ಲ. ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಈತನಕ ಮಾಡದಿದ್ದ ಸಾಧನೆಯನ್ನು ಇವರು ತೋರಿರುವುದು ಶ್ಲಾಘನೀಯ.

ಚಿನ್ನದ ಪದಕದ ಸಾಧನೆ ಮಾಡಿರುವ ರೋಹನ್ ಬೋಪಣ್ಣ ಅವರು ತಮ್ಮ ಈ ಬಾರಿಯ ಸಾಧನೆಯನ್ನು ಸಂತ್ರಸ್ತರಿಗೆ ಅರ್ಪಿಸಿರುವುದು ವಿಶೇಷ. ಜಿಲ್ಲೆಯಲ್ಲಿ ಈ ಬಾರಿ ಕೈಲು ಮುಹೂರ್ತ ಹಬ್ಬದ ಕ್ರೀಡಾ ಸ್ಪರ್ಧೆ ಮತ್ತಿತರ ಕ್ರೀಡಾಕೂಟಗಳು, ಕಾರ್ಯಕ್ರಮಗಳು ರದ್ದುಗೊಂಡಿವೆ. ಆದರೆ, ಇವರೆಲ್ಲರೂ ತೋರಿರುವ ಸಾಧನೆ ಜಿಲ್ಲೆಯ ಕ್ರೀಡಾಪ್ರೇಮಿಗಳಿಗೆ ಸ್ಮರಣೀಯವಾಗಿದೆ.

“ಕೊಡಗು ಕ್ರೀಡೆಗೆ ಹೆಸರಾದ ಜಿಲ್ಲೆಯಾಗಿದ್ದು, ಈ ಬಾರಿ ಕೊಡಗಿನ ಸ್ಪರ್ಧಿಗಳು ಮಾಡಿರುವ ಸಾಧನೆ ಗಮನಾರ್ಹ. ಇವರಿಗೆ ಇನ್ನಷ್ಟು ಉತ್ತೇಜನ ನೀಡುವಂತಾಗಬೇಕು,” ಎಂದು ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಹೇಳಿದರು.

“ಕೊಡವ ಜನಾಂಗದ ಜನಸಂಖ್ಯೆ ಅತ್ಯಂತ ಕಡಿಮೆ. ಆದರೆ, ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದ ಐವರು ಆಟಗಾರರು ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವುದು, ಪದಕದ ಸಾಧನೆ ಮಾಡಿರುವದು ಕ್ರೀಡಾ ಪರಂಪರೆಗೆ ಸಂದ ಗೌರವ,” ಎನ್ನುತ್ತಾರೆ ಕ್ರೀಡಾಪ್ರೇಮಿ ಮಂಡೇಪಂಡ ರತನ್ ಕುಟ್ಟಯ್ಯ.

ಜಿಲ್ಲೆಯ ಹಿರಿಮೆಗೆ ಹೊಸ ಪ್ರತಿಭೆ ಸೇರ್ಪಡೆ

ಹಾಕಿ, ಬಾಕ್ಸಿಂಗ್, ಕ್ರಿಕೆಟ್, ಬ್ಯಾಡ್‍ಮಿಂಟನ್, ಬಾಸ್ಕೆಟ್‍ಬಾಲ್, ಥ್ರೋಬಾಲ್, ಅಥ್ಲೆಟಿಕ್ಸ್, ಟೆನ್ನಿಸ್, ಸ್ಕ್ವಾಷ್, ಗಾಲ್ಫ್, ಈಕ್ವೆಸ್ಟೇರಿಯನ್ ಸೇರಿದಂತೆ ಬಹುತೇಕ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾಪಟುಗಳು ಗುರುತಿಸಿಕೊಂಡಿದ್ದಾರೆ. ಹತ್ತು ಹಲವಾರು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಪದಕ ತಂದುಕೊಟ್ಟಿದ್ದಾರೆ. ಈ ಸಾಧನೆಗಳ ಪಟ್ಟಿಗೆ ಇದೀಗ ಹೊಸತೊಂದು ಕ್ರೀಡೆ ಸೇರ್ಪಡೆ ಆಗುವುರೊಂದಿಗೆ ಕೊಡಗಿನ ಮತ್ತೊಬ್ಬ ಯುವ ಪ್ರತಿಭೆ ಬೆಳಕಿಗೆ ಬಂದಿದ್ದಾರೆ. ಸೈಲಿಂಗ್ ಎನ್ನುವುದು ಅತ್ಯಂತ ಸಾಹಸಮಯ ಕ್ರೀಡೆಯಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಹೆಚ್ಚು ಪದಕ ಈ ತನಕ ಬಂದಿಲ್ಲ. ಇದೀಗ ಮೂಲತಃ ಹಾತೂರಿನವರಾದ, ಈ ಕ್ರೀಡೆಗಾಗಿ ತರಬೇತಿ ಪಡೆಯಲೆಂದೇ ಚೆನ್ನೈನಲ್ಲಿ ನೆಲೆಸಿರುವ ಕೇಳಪಂಡ ಪಾರ್ಥ ಗಣಪತಿ ಈ ಬಾರಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಈ ಯುವ ಸ್ಪರ್ಧಿ ಕೇಳಪಂಡ ದಿ.ಚಂಗಪ್ಪ ಹಾಗೂ ರೇಷ್ಮ (ತಾಮನೆ- ಅಲ್ಲಾರಂಡ) ದಂಪತಿಯ ಪುತ್ರ. ಇವರು 2018ರ ಜೂನ್‍ನಲ್ಲಿ ಜಕಾರ್ತದಲ್ಲೇ ನಡೆದ ಏಷ್ಯನ್ ಸೈಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಪುತ್ರನ ಸಾಧನೆ ಬಗ್ಗೆ ತಾಯಿ ರೇಷ್ಮಾ ಹರ್ಷ ವ್ಯಕ್ತಪಡಿಸಿದ್ದಾರೆ.

ದುರಂತಕ್ಕೆ ಕಂಬನಿ

ಚಿನ್ನದ ಪದಕಗಳಿಸಿರುವ ರೋಹನ್ ಬೋಪಣ್ಣ ಅವರು ಜಿಲ್ಲೆಯ ಮಾದಾಪುರಕ್ಕೆ ಸೇರಿದವರು. ಮಾದಾಪುರದ ಸುತ್ತಮುತ್ತ ಸೇರಿದಂತೆ ಈ ಬಾರಿ ಕೊಡಗಿನಲ್ಲಿ ಸಂಭವಿಸಿರುವ ದುರಂತಕ್ಕೆ ಕಂಬನಿ ಮಿಡಿದಿರುವ ಅವರು, ತಾವು ಗಳಿಸಿದ ಪದಕದ ಸಾಧನೆಯನ್ನು ಸಂತ್ರಸ್ತರಿಗೆ ಅರ್ಪಿಸಿದ್ದಾರೆ. ರೋಹನ್ ಅವರ ತಂದೆ ಬೋಪಣ್ಣ ಅವರೂ ಪುತ್ರನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರಾದರೂ ದುರಂತದಿಂದ ಸಂತ್ರಸ್ತರಾಗಿರುವವರಿಗೆ ಸ್ಪಂದಿಸಲು ರೋಹನ್ ಮುಂದೆ ಬಂದಿದ್ದಾರೆ. ಜಕಾರ್ತದಲ್ಲಿದ್ದರೂ ಬೆಂಗಳೂರಿನಿಂದ ಸ್ನೇಹಿತನ ಮೂಲಕ ಹಲವು ಸಾಮಗ್ರಿಗಳನ್ನು ಜಿಲ್ಲೆಗೆ ರವಾನಿಸಿ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಪ್ರಯತ್ನ ಮಾಡಿರುವದಾಗಿ ಅವರು ಹೇಳಿದರು.

ಇದನ್ನೂ ಓದಿ : ಉಪ್ಪಿನಕಾಯಿ ಜೊತೆ ಅಕ್ಕಿ ಗಂಜಿ ಕುಡಿಯುವಂತೆ ಒತ್ತಾಯಿಸಿದ್ದರೆಂದ ಪಿ ಟಿ ಉಷಾ!

ಪೂವಮ್ಮ ತಾಯಿಯ ನೋವು

ಚಿನ್ನದ ಪದಕ ಗಳಿಸಿರುವ ಎಂ ಆರ್ ಪೂವಮ್ಮ ಅವರ ತಾಯಿ ಜಾಜಿ ಅವರ ತವರುಮನೆ ಕನ್ನಿಕಂಡ. ಅವರು ಕೂಡ ಈ ಬಾರಿ ದುರಂತ ಸಂಭವಿಸಿರುವ ಮುಕ್ಕೋಡ್ಲು ಗ್ರಾಮಕ್ಕೆ ಸೇರಿದವರು. ಜಿಲ್ಲೆಯ ಅನಾಹುತದ ಬಗ್ಗೆ ಅವರೂ ಕಂಬನಿ ಮಿಡಿದಿದ್ದಾರೆ. "ಮಗಳು ಕಳೆದ ಹದಿನಾರು ವರ್ಷಗಳಿಂದ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸಾಧನೆ ತೋರುತ್ತಿದ್ದಾಳೆ. ಆದರೆ, ಸರಕಾರಗಳು ಹೆಚ್ಚು ಉತ್ತೇಜನ ನೀಡುತ್ತಿಲ್ಲ. ಪೂವಮ್ಮಳೊಂದಿಗೆ ಸಾಧನೆ ಮಾಡಿರುವ ಇತರ ರಾಜ್ಯದ ಸ್ಪರ್ಧಿಗಳಿಗೆ ಅಲ್ಲಿನ ಸರಕಾರ ಭಾರಿ ಕೊಡುಗೆಯನ್ನೇ ನೀಡಿವೆ. ಆದರೆ, ಇಲ್ಲಿ ಸೂಕ್ತ ಮಾನ್ಯತೆ ಸಿಗದಿರುವುದು ಸಹಜವಾಗಿ ನೋವು ಉಂಟುಮಾಡುತ್ತದೆ,” ಎನ್ನುತ್ತಾರೆ ಜಾಜಿ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More