ಸ್ಪಿನ್ನರ್‌ಗಳ ನೆರವಿನಲ್ಲಿ ಭಾರತ ಬ್ಲೂ ತಂಡದ ಮಡಿಲಿಗೆ ದುಲೀಪ್ ಟ್ರೋಫಿ

ಸೌರಭ್ ಕುಮಾರ್ (೫೧ಕ್ಕೆ ೫) ಮತ್ತು ದೀಪಕ್ ಹೂಡಾ (೫೬ಕ್ಕೆ ೫) ಚಮತ್ಕಾರಿ ಸ್ಪಿನ್ ಬೌಲಿಂಗ್‌ ನೆರವಿನಲ್ಲಿ ಭಾರತ ಬ್ಲೂ ತಂಡ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ (ಸೆ.೭) ಕೇವಲ ೩೭ ನಿಮಿಷಗಳಲ್ಲೇ ಇಂಡಿಯಾ ರೆಡ್‌ ೧೮೭ ರನ್ ಮತ್ತು ಇನ್ನಿಂಗ್ಸ್ ಸೋಲುಂಡಿತು

ಇಬ್ಬರು ಚಮತ್ಕಾರಿ ಸ್ಪಿನ್ನರ್‌ಗಳು ಹೆಣೆದ ಸ್ಪಿನ್ ಬಲೆಯಲ್ಲಿ ಸಿಲುಕಿದ ಇಂಡಿಯಾ ಬ್ಲೂ ತಂಡ, ಈ ಸಾಲಿನ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಸೋಲನುಭವಿಸಿತು. ದಿಂಡಿಗಲ್‌ನ ಎನ್‌ಪಿಆರ್ ಕಾಲೇಜಿನಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಬ್ಲೂ ಭಾರಿ ಗೆಲುವಿನೊಂದಿಗೆ ನಗೆ ಬೀರಿತು.

ದಿನದಾಟದ ಮೊದಲಲ್ಲಿ ಸೌರಭ್, ಇಂಡಿಯಾ ರೆಡ್‌ನ ಪತನಕ್ಕೆ ನಾಂದಿ ಹಾಡಿದರು. ಮೊದಲ ಎಸೆತದಲ್ಲೇ ರಾತ್ರಿ ಕಾವಲುಗಾರ ಇಶಾನ್ ಕಿಶಾನ್ (೩೦) ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಸೌರಭ್, ಇಂಡಿಯಾ ರೆಡ್‌ಗೆ ಆಘಾತ ನೀಡಿದರು. ಶಾರ್ಟ್‌ ಲೆಗ್‌ನಲ್ಲಿದ್ದ ಅನ್ಮೋಲ್‌ಪ್ರೀತ್ ಸಿಂಗ್‌ಗೆ ಕ್ಯಾಚಿತ್ತ ಇಶಾನ್, ಕ್ರೀಸ್ ತೊರೆದಾಗ ಇಂಡಿಯಾ ರೆಡ್ ೧೩೪ ರನ್‌ಗಳಿಗೆ ೬ನೇ ವಿಕೆಟ್ ಕಳೆದುಕೊಂಡಿತು.

ಆನಂತರದಲ್ಲಿ ಸೌರಭ್ ಮತ್ತು ದೀಪಕ್ ಇಂಡಿಯಾ ರೆಡ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ದುಃಸ್ವಪ್ನವಾದರು. ಕೇವಲ ೧೦.೫ ಓವರ್‌ಗಳಲ್ಲೇ ತಂಡದ ಇನ್ನುಳಿದ ಆಟಗಾರರನ್ನು ಔಟ್ ಮಾಡಿದ ಈ ಸ್ಪಿನ್‌ದ್ವಯರು, ಒಂದು ದಿನ ಬಾಕಿ ಇರುವಂತೆಯೇ ವಿಜಯ ಪತಾಕೆ ಹಾರಿಸಿದರು. ೩೮.೫ ಓವರ್‌ಗಳಲ್ಲಿ ಇಂಡಿಯಾ ರೆಡ್ ತನ್ನ ಎರಡನೇ ಇನ್ನಿಂಗ್ಸ್ ಹೋರಾಟ ಮುಗಿಸಿತು.

ಇದನ್ನೂ ಓದಿ : ಭಾರತ ಎ ತಂಡಕ್ಕೆ ಚತುಷ್ಕೋನ ಸರಣಿ ತಂದಿತ್ತ ಅಜೇಯ ಮನೀಶ್‌ ಪಾಂಡೆ

“ಪಂದ್ಯಾವಳಿಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಮೊದಲ ಬ್ಯಾಟಿಂಗ್‌ಗಷ್ಟೇ ಈ ಪಿಚ್ ಯೋಗ್ಯವಾಗಿತ್ತು. ನಾವು ಬ್ಯಾಟ್ ಮಾಡುವಾಗಲಂತೂ ಖಂಡಿತ ಪರಿಸ್ಥಿತಿ ಪೂರಕವಾಗಿರಲಿಲ್ಲ. ಈ ಮಧ್ಯೆ, ನಮ್ಮ ತಂಡದಲ್ಲಿ ಪರಿಣಾಮಕಾರಿಯಾದ ಎಡಗೈ ಸ್ಪಿನ್ನರ್ ಇರಲಿಲ್ಲ. ಶಾಬಾಜ್ ನದೀಮ್ ಭಾರತ ಎ ತಂಡದಲ್ಲಿರುವ ಕಾರಣ ಅವರ ಸೇವೆ ನಮಗೆ ಸಿಗಲಿಲ್ಲ. ಲೀಗ್ ಹಂತದಲ್ಲಿ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದ ಅವರ ಸೇವೆ ನಿರ್ಣಾಯಕ ಘಟ್ಟದಲ್ಲಿ ಸಿಗದೆ ಹೋದದ್ದು ನಮ್ಮನ್ನು ಬಹುವಾಗಿ ಬಾಧಿಸಿತು,’’ ಎಂದು ಇಂಡಿಯಾ ರೆಡ್ ತಂಡದ ನಾಯಕ ಅಭಿನವ್ ಮುಕುಂದ್ ಅಭಿಪ್ರಾಯಪಟ್ಟರು.

ಇನ್ನು, ಇಂಡಿಯಾ ಬ್ಲೂ ತಂಡದ ನಾಯಕ ಫೈಜ್ ಫಜಲ್ ಮಾತನಾಡಿ, “ಮೊದಲ ಇನ್ನಿಂಗ್ಸ್‌ನಲ್ಲಿ ೫೦೦ ಇಲ್ಲವೇ ಅದಕ್ಕೂ ಹೆಚ್ಚಿನ ಮೊತ್ತ ಗಳಿಸಿದ ತಂಡ ಸಹಜವಾಗಿಯೇ ಮೇಲುಗೈ ಸಾಧಿಸುತ್ತದೆ. ನಮ್ಮ ಬ್ಯಾಟ್ಸ್‌ಮನ್‌ಗಳ ಮನೋಜ್ಞ ಆಟದಿಂದಾಗಿ ೫೪೧ ರನ್ ಗಳಿಸಿದ ನಾವು ಜಯದ ವಿಶ್ವಾಸದಲ್ಲಿದ್ದೆವು. ಈ ಮೊತ್ತವನ್ನು ಭೇದಿಸುವುದು ಇಂಡಿಯಾ ರೆಡ್‌ಗೆ ದುಃಸಾಧ್ಯವೆಂದು ನಾವು ಚೆನ್ನಾಗಿ ಅರಿತಿದ್ದೆವು. ಮೇಲಾಗಿ, ನಮ್ಮ ಬೌಲರ್‌ಗಳು ಕೂಡ ಅದರಲ್ಲೂ ಸ್ಪಿನ್‌ದ್ವಯರು ತೋರಿದ ಅದ್ಭುತ ಕೈಚಳಕ ತಂಡದ ಇನ್ನಿಂಗ್ಸ್ ಗೆಲುವಿಗೆ ನೆರವಾಯಿತು,’’ ಎಂದರು.

ಸಂಕ್ಷಿಪ್ತ ಸ್ಕೋರ್

ಇಂಡಿಯಾ ಬ್ಲೂ ಮೊದಲ ಇನ್ನಿಂಗ್ಸ್: ೫೪೧ (ನಿಖಿಲ್ ಗಂಗ್ಟಾ ೧೩೦, ಅನ್ಮೋಲ್‌ಪ್ರೀತ್ ಸಿಂಗ್ ೯೬; ಪರ್ವೇಜ್ ರಸೂಲ್ ೧೫೦ಕ್ಕೆ ೪); ಇಂಡಿಯಾ ರೆಡ್ ಮೊದಲ ಇನ್ನಿಂಗ್ಸ್: ೬೯.೧ ಓವರ್‌ಗಳಲ್ಲಿ ೧೮೨ ಇಂಡಿಯಾ ರೆಡ್ ದ್ವಿತೀಯ ಇನ್ನಿಂಗ್ಸ್ (ಫಾಲೋ ಆನ್): ೩೮.೪ ಓವರ್‌ಗಳಲ್ಲಿ ೧೭೨ (ಅಭಿನವ್ ೪೬; ಸೌರಭ್ ಕುಮಾರ್ ೫೧ಕ್ಕೆ ೫; ದೀಪಕ್ ಹೂಡಾ ೫೬ಕ್ಕೆ ೫) ಫಲಿತಾಂಶ: ಇಂಡಿಯಾ ಬ್ಲೂ ತಂಡಕ್ಕೆ ಇನ್ನಿಂಗ್ಸ್ ಮತ್ತು ೧೮೭ ರನ್ ಗೆಲುವು

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More