ವಿದಾಯದ ಪಂದ್ಯದಲ್ಲಿ ಅಲಸ್ಟೇರ್ ಕುಕ್‌ಗೆ ಸಿಗುವುದೇ ಗೆಲುವಿನ ಬೀಳ್ಕೊಡುಗೆ?

ಇಂಗ್ಲೆಂಡ್ ಕ್ರಿಕೆಟ್‌ನ ಸರ್ವಾಧಿಕ ಸ್ಕೋರರ್ ಅಲಸ್ಟೇರ್ ಕುಕ್ ವಿದಾಯದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಭಾರತ ವಿರುದ್ಧದ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲೂ ನಿರೀಕ್ಷಿತ ಬ್ಯಾಟಿಂಗ್ ನಡೆಸಲಾಗದ ಕುಕ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದು, ಜಯದ ಬೀಳ್ಕೊಡುಗೆ ಸಿಗುವುದೇ?

ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಚರಿತ್ರಾರ್ಹ ಗೆಲುವಿನ ಗುರಿ ಹೊತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ಮಿಶ್ರಫಲ ಅನುಭವಿಸಿದೆ. ಚುಟುಕು ಸರಣಿಯನ್ನು ೨-೧ರಿಂದ ಗೆದ್ದ ಕೊಹ್ಲಿ ಪಡೆ, ತದನಂತರದ ಏಕದಿನ ಪಂದ್ಯ ಸರಣಿಯನ್ನು ೧-೨ರಿಂದ ಸೋತಿತು. ಬಳಿಕ ಐದು ಟೆಸ್ಟ್ ಪಂದ್ಯ ಸರಣಿಯನ್ನು ೧-೩ರಿಂದ ಕೈಚೆಲ್ಲಿರುವ ಅದೀಗ ಕಟ್ಟಕಡೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ರವಾಸವನ್ನು ಜಯದೊಂದಿಗೆ ಮುಕ್ತಾಯಗೊಳಿಸಲು ಸಜ್ಜಾಗಿದೆ.

ಶುಕ್ರವಾರ (ಸೆ. ೭) ಕೆನ್ನಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಕೊನೆಯ ಟೆಸ್ಟ್‌ ಪಂದ್ಯಅಲಸ್ಟೇರ್ ಕುಕ್ ಅವರಿಗೆ ಜಯದ ಬೀಳ್ಕೊಡುಗೆ ನೀಡಲು ಇಂಗ್ಲೆಂಡ್ ತಂಡವು ಕಾರ್ಯತಂತ್ರ ರೂಪಿಸಿದೆ. ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿರುವ ಇಂಗ್ಲೆಂಡ್, ಸಹಜವಾಗಿಯೇ ಒತ್ತಡರಹಿತ ಆಟವಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಅಂದಹಾಗೆ, ಇದುವರೆಗೆ ಅವಕಾಶ ಸಿಗದೆ ಬೆಂಚ್‌ ಕಾದ ಪೃಥ್ವಿ ಶಾ ಮತ್ತು ಕನ್ನಡಿಗ ಕರುಣ್ ನಾಯರ್‌ರಂಥ ಪ್ರತಿಭೆಗಳನ್ನು ಕಣಕ್ಕಿಳಿಸಲು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಚಿಂತಿಸಿದೆ. ಕರುಣ್ ನಾಯರ್ ಅವರಿಗೆ ಈ ಬಾರಿ ಅವಕಾಶ ಸಿಗುವ ಸಂಭವವಿದೆ. ಕಳೆದ ನಾಲ್ಕು ಟೆಸ್ಟ್‌ಗಳಲ್ಲಿಯೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಿರಲಿಲ್ಲ. 2016ರಲ್ಲಿ ಚೆನ್ನೈನಲ್ಲಿ ಇದೇ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದ ಕರುಣ್‌, ನಂತರದ ಐದು ಟೆಸ್ಟ್‌ಗಳಲ್ಲಿ ನಿರೀಕ್ಷಿತ ಮಟ್ಟದ ಆಟವಾಡದ ಕಾರಣ 2017ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಪಂದ್ಯದ ನಂತರ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಇನ್ನು, 19 ವರ್ಷದೊಳಗಿನವರ ವಿಶ್ವಕಪ್ ವಿಜೇತ, ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್ ಆರಂಭವಾಗುವ ಮುನ್ನ ಮುರಳ ವಿಜಯ್ ಮತ್ತು ಕುಲದೀಪ್ ಯಾದವ್ ಅವರನ್ನು ಕೈಬಿಡಲಾಗಿತ್ತು.  ಅವರ ಬದಲಿಗೆ ಪೃಥ್ವಿ ಮತ್ತು ಹನುಮವಿಹಾರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಪಂದ್ಯದಲ್ಲಿ ಶಿಖರ್ ಧವನ್ ಅವರಿಗೆ ವಿಶ್ರಾಂತಿ ನೀಡಿ ಪೃಥ್ವಿಗೆ ಇನಿಂಗ್ಸ್‌ ಆರಂಭಿಸುವ ಹೊಣೆ ನೀಡುವ ಸಾಧ್ಯತೆ ಹೆಚ್ಚಿದೆ.

ಆರಂಭಿಕರಾದ ಶಿಖರ್ ಧವನ್ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಸತತ ವೈಫಲ್ಯ ಅನುಭವಿಸಿದ್ದಾರೆ. ಇತ್ತ, ಮಧ್ಯಮ ಕ್ರಮಾಂಕದಲ್ಲಿಯೂ ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಎಲ್ಲ ಕಾರಣಗಳಿಂದ ಈ ಕ್ರಮಾಂಕದಲ್ಲಿಯೂ ಕೆಲವೊಂದು ಬದಲಾವಣೆಗಳಾದರೆ ಯಾವುದೇ ಅಚ್ಚರಿಗಳಿಲ್ಲ. ಏತನ್ಮಧ್ಯೆ, ವಿರಾಟ್ ಕೊಹ್ಲಿಯಂತೂ ಅದ್ಭುತ ಫಾರ್ಮ್‌ನಲ್ಲಿರುವುದು ಗಮನಿಸಬೇಕಾದ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿದೆ.

ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ಭಾರತ ಬೌಲಿಂಗ್‌ನಲ್ಲಿ ಅಷ್ಟೇನೂ ಹಿನ್ನಡೆ ಅನುಭವಿಸಿಲ್ಲ. ಅದರಲ್ಲೂ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಆಗಮಿಸಿದಾಗಿನಿಂದ ಬೌಲಿಂಗ್ ಪಡೆ ಇನ್ನಷ್ಟು ಸಶಕ್ತವಾಗಿದೆ. ಪರಿಣಾಮಕಾರಿ ದಾಳಿಕೋರರಿಂದ ಕೂಡಿರುವ ಭಾರತ ತಂಡದ ಬೌಲಿಂಗ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಂಭವಗಳು ತೀರಾ ಕಡಿಮೆ. ಮಧ್ಯಮ ವೇಗಿಗಳಾದ  ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಜತೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಗುವ ಬಗ್ಗೆ ಖಚಿತತೆ ಇಲ್ಲ.

ದಾಖಲೆ ಹೊಸ್ತಿಲಲ್ಲಿ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗಂತೂ ಈ ಬಾರಿಯ ಇಂಗ್ಲೆಂಡ್ ಪ್ರವಾಸ ಸ್ಮರಣೀಯವೆನಿಸಿದೆ. ಕಳೆದ ಬಾರಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದ ಕೊಹ್ಲಿ, ಪ್ರಸಕ್ತ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದಾರೆ. ಇದೇ ವೇಳೆ, ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಮತ್ತೊಂದು ಮಹತ್ವದ ದಾಖಲೆಯನ್ನು ನಿರ್ಮಿಸುವ ಅವಕಾಶ ಒದಗಬಂದಿದೆ. ಈ ಪಂದ್ಯದಲ್ಲೇನಾದರೂ ಅವರು ಶತಕ ದಾಖಲಿಸಿದರೆ, ವೆಸ್ಟ್‌ ಇಂಡೀಸ್‌ನ ಹಿರಿಯ ಆಟಗಾರ ವಿವಿಯನ್ ರಿಚರ್ಡ್ಸ್‌ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ವಿಂಡೀಸ್ ಕ್ರಿಕೆಟಿಗ ರಿಚರ್ಡ್ಸ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 24 ಶತಕಗಳನ್ನು ದಾಖಲಿಸಿದ್ದಾರೆ. ಅವರು 121 ಟೆಸ್ಟ್‌ಗಳಿಂದ 8540 ರನ್‌ಗಳನ್ನು ಗಳಿಸಿದ್ದರೆ, ಕೇವಲ ೭೦ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ 23 ಶತಕ ಸೇರಿದ 6098 ರನ್‌ಗಳನ್ನು ಕಲೆಹಾಕಿದ್ದಾರೆ.

ಸಂಭವನೀಯ ಇಲೆವೆನ್

ಭಾರತ: ಕೆ ಎಲ್ ರಾಹುಲ್ / ಪೃಥ್ವಿ ಶಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ / ಕರುಣ್ ನಾಯರ್, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್: ಅಲಸ್ಟೇರ್ ಕುಕ್, ಕೀಟನ್ ಜೆನ್ನಿಂಗ್ಸ್, ಮೊಯೀನ್ ಅಲಿ, ಜೋ ರೂಟ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಓಲಿವರ್ ಪೋಪ್, ಕ್ರಿಸ್ ವೋಕ್ಸ್.

ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ ೩.೦೦ | ನೇರಪ್ರಸಾರ: ಸೋನಿ ನೆಟ್‌ವರ್ಕ್‌

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More