ಸಾರ್ವಕಾಲಿಕ ದಾಖಲೆ ಸನಿಹ ಸಾಗಿದ ಸೆರೆನಾಗೆ ಫೈನಲ್‌ನಲ್ಲಿ ಒಸಾಕ ಸವಾಲು

ಸೆರೆನಾ ವಿಲಿಯಮ್ಸ್, ವನಿತೆಯರ ಗ್ರಾಂಡ್‌ಸ್ಲಾಮ್ ಟೆನಿಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಸನಿಹ ಸಾಗಿದ್ದಾರೆ. ಯುಎಸ್ ಓಪನ್ ಫೈನಲ್ ತಲುಪಿರುವ ಆಕೆ, ಶನಿವಾರ (ಸೆ.೮) ನಡೆಯಲಿರುವ ಫೈನಲ್‌ನಲ್ಲಿ ನವೊಮಿ ಒಸಾಕ ವಿರುದ್ಧ ಗೆದ್ದರೆ ಮಾರ್ಗರೆಟ್ ಕೋರ್ಟ್ (೨೪) ದಾಖಲೆಯನ್ನು ಸರಿಗಟ್ಟಲಿದ್ದಾರೆ

ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಪ್ರಶಸ್ತಿ ಸನಿಹ ಬಂದುನಿಂತಿದ್ದಾರೆ. ಅಪ್ರತಿಮ ಆಟಗಾರ್ತಿ ಸೆರೆನಾ, ಮಾಜಿ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ಸಾರ್ವಕಾಲಿಕ ೨೪ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ದಾಖಲೆಯನ್ನು ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲೇ ನಿರ್ಮಿಸುವ ಸಾಧ್ಯತೆ ಇತ್ತಾದರೂ, ಏಂಜಲಿಕ್ ಕೆರ್ಬರ್ ಆ ಅವಕಾಶವನ್ನು ಕಸಿದಿದ್ದರು. ಈ ಬಾರಿ ಆಕೆಯ ಸಾರ್ವಕಾಲಿಕ ದಾಖಲೆ ಸರಿಗಟ್ಟುವ ತವಕದೆದುರು ನಿಂತಿರುವುದು ಜಪಾನ್‌ನ ನವೊಮಿ ಒಸಾಕ.

ಅಂದಹಾಗೆ, ಶುಕ್ರವಾರ (ಸೆ. ೭) ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್‌ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಸೆರೆನಾ, ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೊವಾ ವಿರುದ್ಧ ಕೇವಲ ೬೬ ನಿಮಿಷಗಳಲ್ಲೇ ಗೆಲುವಿನ ನಗೆಬೀರಿದರು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಸೆರೆನಾ, ೬-೩, ೬-೦ ನೇರ ಸೆಟ್‌ಗಳಲ್ಲಿ ಜಯಿಸಿದ ಸೆರೆನಾ, ಫೈನಲ್‌ಗೆ ಸುನಾಯಾಸ ಪ್ರವೇಶ ಪಡೆದರು.

೩೬ರ ಹರೆಯದ ಸೆರೆನಾ, ಈ ಗೆಲುವಿನೊಂದಿಗೆ ಯುಎಸ್ ಓಪನ್‌ ಫೈನಲ್‌ಗೆ ೯ನೇ ಬಾರಿ ಪ್ರವೇಶಿಸಿದಂತಾಗಿದೆ. “ನಿಜವಾಗಿಯೂ ಇದನ್ನು ನಾನು ನಂಬಲಾಗುತ್ತಿಲ್ಲ. ಒಂದು ವರ್ಷದ ಹಿಂದೆ ನಾನು ನನ್ನ ಮೊದಲ ಮಗುವಿನ ಜನನದ ವೇಳೆ ಅಕ್ಷರಶಃ ಸತ್ತು ಬದುಕಿದ್ದೆ. ಮುಂದಿನ ಪಂದ್ಯದಲ್ಲಿ ಏನಾಗುತ್ತದೋ ಎಂಬುದರ ಬಗ್ಗೆ ನನಗೇನೂ ಚಿಂತೆಯಿಲ್ಲ. ಏಕೆಂದರೆ, ಈಗಾಗಲೇ ನಾನು ಗೆಲುವು ಸಾಧಿಸಿಯಾಗಿದೆ,’’ ಎಂದು ಸೆರೆನಾ ಸೆಮಿಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಸೆರೆನಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುದ್ದಿಟ್ಟ ಏಂಜಲಿಕ್ ಕೆರ್ಬರ್

ಒಸಾಕ ಹೊಸ ಮೈಲುಗಲ್ಲು

ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕ ವೃತ್ತಿಬದುಕಿನಲ್ಲಿ ಹೊಸದೊಂದು ಮೈಲುಗಲ್ಲು ಸ್ಥಾಪಿಸಿದರು. ವನಿತೆಯರ ಎರಡನೇ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಹಾಲಿ ರನ್ನರ್‌ಅಪ್ ಮ್ಯಾಡಿಸನ್ ಕೀಸ್ ವಿರುದ್ಧ ೬-೨, ೬-೪ ನೇರ ಸೆಟ್ ಗೆಲುವು ಪಡೆದ ಒಸಾಕ, ಮೊಟ್ಟಮೊದಲ ಬಾರಿಗೆ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯೊಂದರ ಫೈನಲ್‌ಗೆ ಅರ್ಹತೆ ಪಡೆದರು.

ವಿಶ್ವದ ೨೦ನೇ ಶ್ರೇಯಾಂಕಿತೆ ಒಸಾಕ, ೧೩ ಬ್ರೇಕ್ ಪಾಯಿಂಟ್ಸ್‌ಗಳನ್ನು ಕಲೆಹಾಕಿದ್ದಲ್ಲದೆ, ಅಮೆರಿಕ ಆಟಗಾರ್ತಿ ಮ್ಯಾಡಿಸನ್ ಕೀಸ್ ಎದುರು ಚಿಕಿತ್ಸಾತ್ಮಕ ಆಟವಾಡಿ ಜಯಶಾಲಿಯಾದರು. ೧೪ನೇ ಶ್ರೇಯಾಂಕಿತೆ ಕೀಸ್, ಸತತ ಎರಡನೇ ಬಾರಿಗೆ ನ್ಯೂಯಾರ್ಕ್‌ನಲ್ಲಿ ಫೈನಲ್ ತಲುಪುವ ಗುರಿ ಹೊತ್ತಿದ್ದರಾದರೂ, ಒಸಾಕ ಪ್ರತಿರೋಧವನ್ನು ಹತ್ತಿಕ್ಕಲಾಗಲಿಲ್ಲ. ಪ್ರಚಂಡ ಫಾರ್ಮ್‌ನಲ್ಲಿದ್ದ ಒಸಾಕ, ಅದ್ಭುತ ಗೆಲುವಿನೊಂದಿಗೆ ಸೆರೆನಾ ವಿಲಿಯಮ್ಸ್ ವಿರುದ್ಧ ಸೆಣಸುವ ಅರ್ಹತೆ ಗಳಿಸಿದರು.

ಚೊಚ್ಚಲ ಗ್ರಾಂಡ್‌ಸ್ಲಾಮ್ ಫೈನಲ್ ಆಡುತ್ತಿರುವ ಒಸಾಕಗೆ ಸೆರೆನಾ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಏಕೆಂದರೆ, ಒಸಾಕಗಿಂತ ಹದಿನಾರು ವರ್ಷಗಳ ಅನುಭವ ಹೊಂದಿರುವ ಸೆರೆನಾ, ಜಪಾನ್ ಆಟಗಾರ್ತಿಯ ಕನಸನ್ನು ನುಚ್ಚುನೂರಾಗಿಸಲು ಸಜ್ಜಾಗಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More