ವಿಶ್ವ ಶೂಟಿಂಗ್: ಡಬಲ್ ಟ್ರ್ಯಾಪ್‌ನಲ್ಲಿ ಅಂಕುಲ್ ಮಿತ್ತಲ್‌ಗೆ ಬಂಗಾರ

ಚಾಂಗ್ವನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತದ ಗುರಿಕಾರರ ಪದಕ ಬೇಟೆ ಮುಂದುವರಿದಿದೆ. ಶನಿವಾರ (ಸೆ.೮) ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್‌ನಲ್ಲಿ ಅಂಕುರ್ ಮಿತ್ತಲ್‌ ಚಿನ್ನಕ್ಕೆ ಗುರಿ ಇಟ್ಟರಲ್ಲದೆ, ತಂಡ ವಿಭಾಗದಲ್ಲೂ ಅವರು ಕಂಚಿನ ಪದಕ ಜಯಿಸಿದರು

ವೃತ್ತಿಬದುಕಿನಲ್ಲೇ ಬಹುದೊಡ್ಡ ಗೆಲುವನ್ನು ಅಂಕುತ್ ಮಿತ್ತಲ್ ಕಂಡರು. ವಿಶ್ವಕಪ್‌ನಲ್ಲಿ ಬಹು ಪದಕಗಳ ವಿಜೇತ ಮಿತ್ತಲ್, ಚಿನ್ನದ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ೧೫೦ಕ್ಕೆ ೧೪೦ ಸ್ಕೋರ್ ಮಾಡಿ ಮೊದಲ ಸ್ಥಾನ ಗಳಿಸಿದರು. ಉಳಿದಂತೆ, ಈ ವಿಭಾಗದಲ್ಲಿ ಚೀನಾದ ಯಿಯಾಂಗ್ ಯಾಂಗ್ ಮತ್ತು ಸ್ಲೊವೇಕಿಯಾದ ಹ್ಯುಬರ್ಟ್ ಆಂಡರ್‌ಜೆಜ್ ಜಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

೨೬ರ ಹರೆಯದ ಮಿತ್ತಲ್, ಚೀನೀ ಶೂಟರ್ ಒಡ್ಡಿದ ಪ್ರಬಲ ಪೈಪೋಟಿಯನ್ನು ೪-೩ರಿಂದ ಹಿಮ್ಮೆಟ್ಟಿಸಿದರು. ಸ್ಲೊವೇಕಿಯಾದ ಹ್ಯುಬರ್ಟ್ ಎರಡನೇ ಕ್ಲೇ ಕೋರ್ಟ್ ಶೂಟ್ ಆಫ್‌ನಲ್ಲಿ ಗುರಿ ತಪ್ಪಲಾಗಿ ಕಂಚಿನ ಪದಕಕ್ಕೆ ತೃಪ್ತರಾದರು. ಇದಕ್ಕೂ ಮುನ್ನ ಮಿತ್ತಲ್, ಪುರುಷರ ತಂಡ ವಿಭಾಗದಲ್ಲಿ ಸಹಶೂಟರ್‌ಗಳಾದ ಮೊಹಮದ್ ಅಸಬ್ ಹಾಗೂ ಶಾರ್ದೂಲ್ ವಿಹಾನ್ ಜೊತೆಗೂಡಿ ಕಂಚು ಗೆದ್ದರು.

ಭಾರತದ ತ್ರಿವಳಿ ಗುರಿಕಾರರ ತಂಡವು ೪೦೯ ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಚೀನಾ ೪೧೦ ಪಾಯಿಂಟ್ಸ್‌ಗಳೊಂದಿಗೆ ಚಿನ್ನದ ಪದಕ ಜಯಿಸಿದರೆ, ಇಟಲಿ ತಂಡ ೪೧೧ ಅಂಕ ಗಳಿಸಿ ಬೆಳ್ಳಿ ಪದಕ ಪಡೆಯಿತು. ದಿನದ ಬೇರೆ ಸ್ಪರ್ಧೆಗಳ ಪೈಕಿ ಭಾರತದ ಇಬ್ಬರು ವನಿತಾ ಶೂಟರ್‌ಗಳು ಕೂದಲೆಳೆಯ ಅಂತರದಿಂದ ಪದಕ ವಂಚಿತರಾದರು. ಸ್ಪರ್ಧಾವಳಿಯ ಏಳನೇ ದಿನದ ಅಂತ್ಯಕ್ಕೆ ಭಾರತ ೨೦ ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಈ ಪೈಕಿ ಏಳು ಚಿನ್ನ, ಏಳು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳು ಸೇರಿವೆ. ಪದಕ ಪಟ್ಟಿಯಲ್ಲಿ ಚೀನಾ ಮತ್ತು ಕೊರಿಯಾ ನಂತರದ ಸ್ಥಾನ ಭಾರತದ್ದಾಗಿದೆ.

ಇದನ್ನೂ ಓದಿ : ವಿಶ್ವ ಶೂಟಿಂಗ್: ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸೌರಭ್ ಚೌಧರಿ

೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ೨೦೨೦ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಅಂಜುಮ್ ಮೌಡ್ಗಿಲ್, ಮಹಿಳೆಯರ ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ೧,೧೭೦ ಸ್ಕೋರ್‌ನೊಂದಿಗೆ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನ ಗಳಿಸಿ ಕೇವಲ ಒಂದು ಸ್ಥಾನದ ಅಂತರದಿಂದ ಫೈನಲ್ ತಪ್ಪಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಮೊದಲ ಎಂಟು ಸ್ಥಾನ ಗಳಿಸಿದವರು ಫೈನಲ್‌ಗೆ ಅರ್ಹತೆ ಪಡೆಯುವ ಹಿನ್ನೆಲೆಯಲ್ಲಿ ಅಂಜುಮ್ ಪದಕ ಸುತ್ತಿಗೆ ತಲುಪಲು ವಿಫಲವಾದರು.

ಇನ್ನು, ಮಹಿಳೆಯರ ೨೫ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಮನು ಭಾಕರ್ ಅರ್ಹತಾ ಸುತ್ತಿನಲ್ಲಿ ೫೮೪ ಪಾಯಿಂಟ್ಸ್ ಗಳಿಸಿ ೧೦ನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು. ಟ್ರ್ಯಾಪ್ ಮಿಶ್ರ ತಂಡದ ಜೂನಿಯರ್ ವಿಭಾಗದಲ್ಲಿ ಮನಿಶಾ ಕೀರ್ ಹಾಗೂ ಮಾನವಾದಿತ್ಯ ಸಿಂಗ್ ರಾಠೋಡ್ ಅರ್ಹತಾ ಸುತ್ತಿನಲ್ಲಿ ೧೩೯ ಸ್ಕೋರ್‌ನೊಂದಿಗೆ ಆರು ತಂಡಗಳ ಫೈನಲ್‌ಗೆ ಪ್ರವೇಶ ಪಡೆದರಾದರೂ, ಅಂತಿಮ ಸುತ್ತಿನಲ್ಲಿ ೨೪ ಪಾಯಿಂಟ್ಸ್ ಪೇರಿಸಿ ಪದಕ ಗಳಿಕೆಯಿಂದ ವಂಚಿತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More