ಕುಕ್ ಬ್ಯಾಟಿಂಗ್ ಸೊಗಸಿನ ಬಳಿಕ ಬುಮ್ರಾ, ಇಶಾಂತ್ ದಾಳಿಗೆ ಸೊರಗಿದ ಇಂಗ್ಲೆಂಡ್

ವಿದಾಯದ ಪಂದ್ಯದಲ್ಲಿ ಅಲಸ್ಟೇರ್ ಕುಕ್ (೭೧) ಮನೋಜ್ಞ ಬ್ಯಾಟಿಂಗ್‌ನಿಂದ ಕೆನ್ನಿಂಗ್ಟನ್ ಓವಲ್‌ನಲ್ಲಿದ್ದ ಪ್ರತಿಯೊಬ್ಬರನ್ನೂ ಮುದಗೊಳಿಸಿದರು. ಆದರೆ, ದಿನದ ಬಹುಪಾಲು ಮೇಲುಗೈ ಮೆರೆದಿದ್ದ ಇಂಗ್ಲೆಂಡ್, ಬುಮ್ರಾ ಮತ್ತು ಇಶಾಂತ್ ದಾಳಿಯ ಜೊತೆಗೆ ರವೀಂದ್ರ ಜಡೇಜಾ ಸ್ಪಿನ್‌ನಲ್ಲಿ ಸೊರಗಿತು

ಟೆಸ್ಟ್‌ ಕ್ರಿಕೆಟ್‌ನ ಸೊಗಸುತನ ಮತ್ತೊಮ್ಮೆ ಅನಾವರಣಗೊಂಡದ್ದು ಕೆನ್ನಿಂಗ್ಟನ್ ಓವಲ್‌ನಲ್ಲಿ. ದಿನದಾಟದ ಕೊನೆಯ ಅವಧಿಯಲ್ಲಿ ವಿಚಿತ್ರ ತಿರುವು ಸಿಕ್ಕಿದ್ದು ಆತಿಥೇಯರನ್ನು ದಿಗ್ಭ್ರಮೆಗೊಳಿಸಿತು. ಒಂದು ಹಂತದಲ್ಲಿ ಬೃಹತ್ ಮೊತ್ತದ ಸುಳಿವು ನೀಡಿದ್ದ ಇಂಗ್ಲೆಂಡ್, ಕೊನೇ ಅವಧಿಯಲ್ಲಿ ೬ ವಿಕೆಟ್ ಕಳೆದುಕೊಂಡು ತಲ್ಲಣಿಸಿತು.

ಅಮೋಘ ಆರಂಭ ಕಂಡ ಇಂಗ್ಲೆಂಡ್, ಕೀಟನ್ ಜೆನ್ನಿಂಗ್ಸ್ (೨೩: ೭೫ ಎಸೆತ, ೨ ಬೌಂಡರಿ) ವಿಕೆಟ್ ಬಲುಬೇಗ ಕಳೆದುಕೊಂಡರೂ, ಮಾಜಿ ನಾಯಕ ಅಲಸ್ಟೇರ್ ಕುಕ್‌ (71: 190 ಎಸೆತ, 8 ಬೌಂಡರಿ) ಮತ್ತು ಮೊಯೀನ್ ಅಲಿ (೫೦: ೧೭೦ ಎಸೆತ, ೪ ಬೌಂಡರಿ) ಜೊತೆಯಾಟದಲ್ಲಿ ಚೇತರಿಕೆ ಕಂಡಿತು. ಆದರೆ, ದಿನದ ಕೊನೆಯ ಅವಧಿಯಲ್ಲಿ ಭಾರತ ತಂಡದ ಬೌಲರ್‌ಗಳು ನೀಡಿದ ತಿರುಗೇಟು ಆಂಗ್ಲರಿಗೆ ಮುಳುವಾಯಿತು.

ಇಷ್ಟಾದರೂ, ಕುಕ್ ದಾಖಲಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್‌ ತಂಡ ಭಾರತದ ಎದುರಿನ ಐದನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ದಿನಾಂತ್ಯಕ್ಕೆ ೯೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೯೮ ರನ್ ಗಳಿಸಿತ್ತು. ಜೋಸ್ ಬಟ್ಲರ್ (೧೧) ಮತ್ತು ಅದಿಲ್ ರಶೀದ್ (೪) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅರ್ಧಶತಕದ ಜೊತೆಯಾಟ

ಕೊನೆಯ ಪಂದ್ಯದಲ್ಲೂ ಟಾಸ್ ಗೆಲ್ಲುವ ಮೂಲಕ ೨೦ ವರ್ಷಗಳಲ್ಲೇ ಅಪರೂಪದ ದಾಖಲೆ ಬರೆದ ಜೋ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕಳೆದ ನಾಲ್ಕೂ ಪಂದ್ಯಗಳಲ್ಲಿ ಅಸ್ಥಿರ ಆಟದಿಂದ ಕಂಗೆಟ್ಟಿದ್ದ ಕುಕ್, ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ಕೀಟನ್‌ ಜೆನಿಂಗ್ಸ್‌ ಜೊತೆಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಭಾರತದ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 60 ರನ್‌ ಸೇರಿಸಿತು.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು 24ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೇರ್ಪಡಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿಯೇ ಜೆನಿಂಗ್ಸ್‌ ವಿಕೆಟ್‌ ಉರುಳಿಸುವಲ್ಲಿ ಜಡೇಜಾ ಯಶಸ್ವಿಯಾದರು. ಜೆನಿಂಗ್ಸ್‌ ಬ್ಯಾಟಿನ ಅಂಚಿಗೆ ತಾಗಿದ ಚೆಂಡು ಸ್ಲಿಪ್‌ನಲ್ಲಿದ್ದ ರಾಹುಲ್‌ ಕೈಸೇರಿತು.

ಇದನ್ನೂ ಓದಿ : ಆ್ಯಶಸ್: ಇಂಗ್ಲೆಂಡ್‌ಗೆ ಮಹತ್ವದ ಮುನ್ನಡೆ ತಂದಿತ್ತ ಕುಕ್ ಅಜೇಯ ದ್ವಿಶತಕ

ಅಲಿ-ಕುಕ್ ಕಾಟ

ಜೆನ್ನಿಂಗ್ಸ್ ನಿರ್ಗಮನದ ನಂತರದಲ್ಲಿ ಕುಕ್‌ ಮತ್ತು ಮೊಯಿನ್‌ ಅಲಿ ಎಚ್ಚರಿಕೆ ಹಾಗೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ವಹಿಸಿದ ಜಾಗ್ರತೆಯಿಂದ 46ನೇ ಓವರ್‌ನಲ್ಲಿ ತಂಡ 100ರ ಗಡಿ ಮುಟ್ಟಿತು. 139ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ ಕುಕ್‌, ನಂತರವೂ ಬೌಂಡರಿಗಳನ್ನು ಬಾರಿಸುತ್ತ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಸೊಗಸಾಗಿ ಬ್ಯಾಟ್ ಮಾಡುತ್ತಿದ್ದ ಕುಕ್ 64ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಮಧ್ಯಮ ವೇಗಿ ಜಸ್ಪ್ರೀತ್ ಬುಮ್ರಾ ಬೌಲ್ಡ್ ಮಾಡುತ್ತಲೇ ಕುಕ್ ನಿರಾಸೆಯ ಅಸಹನೆಯಿಂದ ಕ್ರೀಸ್ ತೊರೆದರು. ಕುಕ್ ನಿರ್ಗಮನದೊಂದಿಗೆ 73 ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟವೂ ಕಡಿದುಬಿತ್ತು.

ರೂಟ್-ಜಾನಿ ಶೂನ್ಯ ಸಾಧನೆ!

ಕುಕ್ ನಿರ್ಗಮನದ ನಂತರದಲ್ಲಿ ಇಂಗ್ಲೆಂಡ್ ೨ ವಿಕೆಟ್‌ಗೆ ೧೩೩ ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ನಾಯಕ ಜೋ ರೂಟ್ (೦) ಮತ್ತು ಜಾನಿ ಬೇರ್‌ಸ್ಟೋ (೦) ಶೂನ್ಯ ಸಾಧನೆಯೊಂದಿಗೆ ಪೆವಿಲಿಯನ್‌ ಸೇರಿಕೊಂಡದ್ದು ಇಂಗ್ಲೆಂಡ್‌ ಇನ್ನಿಂಗ್ಸ್‌ಗೆ ಬಲವಾದ ಪ್ರಹಾರ ನೀಡಿತು. ಜೋ ರೂಟ್ ಅವರನ್ನು ಬುಮ್ರಾ ಎಲ್‌ಬಿ ಬಲೆಗೆ ಕೆಡವಿದರೆ, ಇಶಾಂತ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ರಿಷಭ್ ಪಂತ್‌ಗೆ ಜಾನಿ ಕ್ಯಾಚಿತ್ತು ನಿರ್ಗಮಿಸಿದರು.

ಇದೂ ಸಾಲದೆಂಬಂತೆ, ಬೆನ್ ಸ್ಟೋಕ್ಸ್ (೧೧) ಅವರನ್ನು ರವೀಂದ್ರ ಜಡೇಜಾ ಎಲ್‌ಬಿ ಬಲೆಗೆ ಕೆಡವಿದರೆ, ಸ್ಯಾಮ್ ಕರನ್ (೦) ಇಶಾಂತ್ ಬೌಲಿಂಗ್‌ನಲ್ಲಿ ಪಂತ್‌ಗೆ ಕ್ಯಾಚಿತ್ತಾಗ ಭಾರತದ ಕೈ ಮೇಲಾಯಿತು. ಒಟ್ಟಾರೆ, ಸಾಕಷ್ಟು ಪ್ರಭುತ್ವ ಮೆರೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ದಿಢೀರ್ ಕುಸಿತ ಕಂಡದ್ದು ಮೊದಲ ದಿನದಾಟದ ಪ್ರಮುಖ ವೈಶಿ‍ಷ್ಟ್ಯ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೯೦ ಓವರ್‌ಗಳಲ್ಲಿ ೧೯೮/೭ (ಅಲಸ್ಟೇರ್ ಕುಕ್ ೭೧, ಜೆನ್ನಿಂಗ್ಸ್ ೨೩, ಮೊಯೀನ್ ಅಲಿ ೫೦; ಇಶಾಂತ್ ಶರ್ಮಾ ೨೮ಕ್ಕೆ ೩, ಜಸ್ಪ್ರೀತ್ ಬುಮ್ರಾ ೪೧ಕ್ಕೆ ೨, ರವೀಂದ್ರ ಜಡೇಜಾ ೫೭ಕ್ಕೆ ೨)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More