ಅಮೆರಿಕ ಓಪನ್ | ನಡಾಲ್ ನಿವೃತ್ತಿ; ಪ್ರಶಸ್ತಿಗಾಗಿ ಪೊಟ್ರೊ, ಜೊಕೊ ಜಟಾಪಟಿ 

ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.೧ ಟೆನಿಸಿಗ ರಾಫೆಲ್ ನಡಾಲ್ ಯುಎಸ್ ಓಪನ್ ಅಭಿಯಾನಕ್ಕೆ ತೆರೆಬಿದ್ದಿದೆ. ಶನಿವಾರ (ಸೆ. ೮) ನಡೆದ ಸೆಮಿಫೈನಲ್‌ನಲ್ಲಿ ಅವರು ಗಾಯಗೊಂಡು ಹಿಂದೆ ಸರಿದರು. ಮತ್ತೊಂದು ಪಂದ್ಯದಲ್ಲಿ ನಿಶಿಕೊರಿ ಮಣಿಸಿದ ಜೊಕೊವಿಚ್ ಫೈನಲ್ ತಲುಪಿದರು

ವರ್ಷದ ಕೊನೆಯ ಗ್ರಾಂಡ್‌ಸ್ಲಾಮ್ ಗೆಲ್ಲುವ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಬಯಕೆಗೆ ಗಾಯದ ಬರೆ ಬಿದ್ದಿದೆ. ಅರ್ಜೆಂಟೀನಾ ಆಟಗಾರ ಡೆಲ್ ಪೊಟ್ರೊ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಎರಡೂ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದ ನಡಾಲ್, ಆನಂತರ ಪಂದ್ಯದಿಂದ ನಿವೃತ್ತಿ ಪಡೆದರು. ಇದರೊಂದಿಗೆ ಪೊಟ್ರೊ ಫೈನಲ್ ಹಾದಿ ಸುಗಮವಾಯಿತಲ್ಲದೆ, ಅವರು ಪ್ರಶಸ್ತಿಗಾಗಿ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಸೆಣಸಲು ಅರ್ಹತೆ ಪಡೆದರು.

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ೨೦೧೪ರ ಯುಎಸ್ ಓಪನ್ ಫೈನಲ್‌ನಲ್ಲಿ ಮರಿನ್ ಸಿಲಿಕ್ ವಿರುದ್ಧ ಸೋತು ರನ್ನರ್‌ಅಪ್ ಆಗಿದ್ದ ಜಪಾನ್ ಆಟಗಾರ ಕೀ ನಿಶಿಕೊರಿ ವಿರುದ್ಧ ಜೊಕೊವಿಚ್6-3, 6-4, 6-2 ಮೂರು ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಧಾವಿಸಿದರು.

ಅಂದಹಾಗೆ, ನಡಾಲ್ ವಿರುದ್ಧ ೭-೬ (೭/೩) ಮತ್ತು ೬-೨ ಸೆಟ್ ಮುನ್ನಡೆ ಸಾಧಿಸಿ ಮೂರನೇ ಸೆಟ್‌ಗೆ ತೆರಳುವ ಹೊತ್ತಿನಲ್ಲಿ ನಡಾಲ್ ಪಂದ್ಯಕ್ಕೆ ಬೆನ್ನು ತೋರಿದರು. ನಡಾಲ್ ನಿವೃತ್ತಿಯಿಂದಾಗಿ ಪೊಟ್ರೊ ೯ ವರ್ಷಗಳ ಬಳಿಕ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದರು. ಬಲಮೊಣಕಾಲಿನ ತೀವ್ರ ಸೆಳೆತದಿಂದಾಗಿ ೩೨ರ ಹರೆಯದ ನಡಾಲ್, ಎರಡು ಬಾರಿ ವೈದ್ಯರ ನೆರವು ಪಡೆದರಾದರೂ, ಆಟದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. “ಆಟವಾಡಲು ಸಾಧ್ಯವೇ ಇಲ್ಲ ಎಂದಾಗ ನಾನು ಅನಿವಾರ್ಯವಾಗಿ ನಿವೃತ್ತಿ ಪಡೆದೆ. ಸಾಮಾನ್ಯವಾಗಿ ನಾನು ನಿವೃತ್ತಿ ಪಡೆಯುವುದನ್ನು ದ್ವೇಷಿಸುತ್ತೇನೆ,’’ ಎಂದು ನಡಾಲ್ ತಿಳಿಸಿದರು.

ಇದನ್ನೂ ಓದಿ : ಪೊಟ್ರೊ ಸವಾಲು ಮೆಟ್ಟಿದ ನಡಾಲ್ ಸೆಮಿಗೆ; ಜೊಕೊ ಜೊತೆ ಸೆಣಸಾಟ

ಪೊಟ್ರೊ-ಜೊಕೊ ಸೆಣಸಾಟ

೨೯ರ ಹರೆಯದ ಪೊಟ್ರೊ ೨೦೦೯ರಲ್ಲಿ ಇದೇ ಫ್ಲಶಿಂಗ್ ಮೆಡೋಸ್‌ನಲ್ಲಿ ರೋಜರ್ ಫೆಡರರ್ ಅವರ ೪೧ ಪಂದ್ಯಗಳ ಗೆಲುವಿನ ಅಭಿಯಾನಕ್ಕೆ ತೆರೆ ಎಳೆದು ಮೊದಲ ಬಾರಿಗೆ ಗ್ರಾಂಡ್‌ಸ್ಲಾಮ್ ಗೆದ್ದ ಸಾಧನೆ ಮಾಡಿದ್ದರು. “ರಾಫಾನಂಥ ಪ್ರಚಂಡ ಆಟಗಾರನ ಎದುರು ಸೆಣಸುವ ಪ್ರತೀಕ್ಷಣವೂ ರೋಚಕವಾದುದು. ಗಾಯದಿಂದಾಗಿ ಪಂದ್ಯದಲ್ಲಿ ಆಡದ ಅವರ ಸ್ಥಿತಿ ನೆನೆದು ನನಗೆ ಖೇದವಾಗುತ್ತಿದೆ. ಅಂದಹಾಗೆ, ಪಂದ್ಯಕ್ಕೆ ತಿರುವು ನೀಡಿದ್ದೇ ಮೊದಲ ಸೆಟ್ ಎಂದು ನಾನು ಭಾವಿಸುತ್ತೇನೆ,’’ ಎಂದು ಪೊಟ್ರೊ ಭಾವಿಸಿದರು.

ಇನ್ನು, ದಿಟ್ಟ ಆಟದೊಂದಿಗೆ ಸೆಮಿಫೈನಲ್ ತಲುಪಿದ್ದ ಕೀ ನಿಶಿಕೊರಿ ಹೋರಾಟಕ್ಕೆ ೧೩ ಗ್ರಾಂಡ್‌ಸ್ಲಾಮ್‌ಗಳ ವಿಜೇತ ನೊವಾಕ್ ಜೊಕೊವಿಚ್ ತೆರೆ ಎಳೆದರು. ವಿಶ್ವದ ೨೧ನೇ ಶ್ರೇಯಾಂಕಿತ ನಿಶಿಕೊರಿ ವಿರುದ್ಧ ಆಕರ್ಷಕ ಪ್ರದರ್ಶನ ನೀಡಿದ ನೊವಾಕ್ ನೇರ ಸೆಟ್‌ಗಳಲ್ಲೇ ಜಯಶಾಲಿಯಾದರು.

೩೧ರ ಹರೆಯದ ನೊವಾಕ್, ವರ್ಷದಲ್ಲಿ ಎರಡನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಇದೇ ಜುಲೈ ತಿಂಗಳಿನಲ್ಲಿ ವಿಂಬಲ್ಡನ್ ಚಾಂಪಿಯನ್ ಆದ ನೊವಾಕ್, ೨೦೧೬ರ ಫ್ರೆಂಚ್ ಓಪನ್ ಬಳಿಕ ಮೊಟ್ಟಮೊದಲ ಗ್ರಾಂಡ್‌ಸ್ಲಾಮ್ ಜಯಿಸಿದ್ದರು. ಭಾನುವಾರ (ಸೆ ೯) ನಡೆಯಲಿರುವ ಫೈನಲ್‌ನಲ್ಲಿ ಡೆಲ್ ಪೊಟ್ರೊ ವಿರುದ್ಧ ಜೊಕೊವಿಚ್ ಗೆಲುವು ಸಾಧಿಸಿದ್ದೇ ಆದರೆ, ಗರಿಷ್ಠ ಗ್ರಾಂಡ್‌ಸ್ಲಾಮ್ ಗೆದ್ದ ಸಾರ್ವಕಾಲಿಕ ಆಟಗಾರರಲ್ಲಿ ಪೀಟ್ ಸಾಂಪ್ರಾಸ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ರೋಜರ್ ಫೆಡರರ್ ೨೦ ಗ್ರಾಂಡ್‌ಸ್ಲಾಮ್ ಗೆದ್ದಿದ್ದರೆ, ನಡಾಲ್ ೧೭ ಗ್ರಾಂಡ್‌ಸ್ಲಾಮ್ ಜಯಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More