ಬಟ್ಲರ್ ಬೊಂಬಾಟ್ ಬ್ಯಾಟಿಂಗ್ ಬಳಿಕ ಜಿಮ್ಮಿ ಬಿರುದಾಳಿಗೆ ನಲುಗಿದ ಕೊಹ್ಲಿ ಪಡೆ

ಬರ್ತ್ ಡೇ ಬಾಯ್ ಜೋಸ್ ಬಟ್ಲರ್ (೮೯) ತನ್ನ ೨೮ನೇ ವಸಂತವನ್ನು ಭರ್ಜರಿಯಾಗಿ ಬರಮಾಡಿಕೊಂಡರು. ತದನಂತರ ವೇಗಿ ಜೇಮ್ಸ್ ಆ್ಯಂಡರ್ಸನ್ (೨೦ಕ್ಕೆ) ಮಿಂಚಿನ ದಾಳಿ ಭಾರತವನ್ನು ಕಂಗೆಡಿಸಿತು. ಎರಡನೇ ದಿನಾಂತ್ಯಕ್ಕೆ ೧೭೪ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡ ಕೊಹ್ಲಿ ಪಡೆ ಹಿನ್ನಡೆ ಅನುಭವಿಸಿತು

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಇಂಡೋ-ಆಂಗ್ಲೋ ನಡುವಣದ ಐದನೇ ಟೆಸ್ಟ್ ಪಂದ್ಯ ಅತ್ಯಂತ ನಾಟಕೀಯ ತಿರುವು ಪಡೆದುಕೊಂಡಿದೆ. ಪಂದ್ಯದ ಮೊದಲ ದಿನ ಭಾರತ ಮೇಲುಗೈ ಸಾಧಿಸಿದಂತೆ ಕಂಡುಬಂದರೂ, ಎರಡನೇ ದಿನದಾಂತ್ಯಕ್ಕೆ ಆತಿಥೇಯ ಆಂಗ್ಲರು ಸಂಪೂರ್ಣ ಹಿಡಿತ ಸಾಧಿಸಿದ್ದು ಇದಕ್ಕೆ ಸಾಕ್ಷಿ.

ಮೊದಲ ದಿನದಾಟದ ಆರಂಭಿಕ ಮತ್ತು ಎರಡನೇ ಅವಧಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ ಇಂಗ್ಲೆಂಡ್, ಆಟದ ಕೊನೇ ಅವಧಿಯಲ್ಲಿ ಆರು ವಿಕೆಟ್ ಕಳೆದುಕೊಂಡು ತತ್ತರಿಸಿತು. ಇನ್ನೇನು ಇಂಗ್ಲೆಂಡ್ ಇನ್ನಿಂಗ್ಸ್ ತಳಕಚ್ಚಿತು ಎಂಬ ಸ್ಥಿತಿಯಲ್ಲಿದ್ದಾಗ ಆಸರೆಯಾದ ಜೋಸ್ ಬಟ್ಲರ್ ಅಪೂರ್ವ ಬ್ಯಾಟಿಂಗ್ ತಂಡದ ಇನ್ನಿಂಗ್ಸ್‌ಗೆ ನವಚೈತನ್ಯ ನೀಡಿತು.

೩೩೨ ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್ ಆನಂತರದಲ್ಲಿ ಬೌಲಿಂಗ್‌ನಲ್ಲೂ ಮಿಂಚು ಹರಿಸಿತು. ವೇಗಿ ಜೇಮ್ಸ್ ಆ್ಯಂಡರ್ಸನ್ (೨೦ಕ್ಕೆ ೨), ಬೆನ್ ಸ್ಟೋಕ್ಸ್ (೪೪ಕ್ಕೆ ೨) ಜತೆಗೆ ಸ್ಟುವರ್ಟ್ ಬ್ರಾಡ್ ಮತ್ತು ಸ್ಯಾಮ್ ಕರನ್ ಗಳಿಸಿದ ತಲಾ ಒಂದು ವಿಕೆಟ್ ನೆರವಿನಿಂದ ಇಂಗ್ಲೆಂಡ್ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಿತು. ೫೧ ಓವರ್‌ಗಳಲ್ಲಿ ೧೭೪ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡಿರುವ ಭಾರತ ಇನ್ನಿಂಗ್ಸ್ ಹಿನ್ನಡೆಯ ಭೀತಿಗೆ ಸಿಲುಕಿದೆ.

ಬಟ್ಲರ್ ಮನೋಜ್ಞ ಆಟ

ಇದನ್ನೂ ಓದಿ : ಬ್ಯಾಟ್‌ನಲ್ಲಿನ ಅಶ್ಲೀಲ ಬರಹಕ್ಕೆ ಬೆಲೆ ತೆರಲಿದ್ದಾರೆಯೇ ಜೋಸ್ ಬಟ್ಲರ್?

೧೯೮ ರನ್‌ಗಳಿಗೆ ೭ ವಿಕೆಟ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಜೋಸ್ ಬಟ್ಲರ್ ಅವರ ಸೊಗಸಾದ ಬ್ಯಾಟಿಂಗ್‌ನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅದಿಲ್ ರಶೀದ್ (೧೫) ಬಟ್ಲರ್‌ಗೆ ಹೆಚ್ಚು ಬೆಂಬಲಕಾರಿ ಆಟವಾಡಲಾಗದೆ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದು ಕ್ರೀಸ್ ತೊರೆದರು. ಆದರೆ, ನಂತರ ಆಡಲಿಳಿದ ಸ್ಟುವರ್ಟ್ ಬ್ರಾಡ್ (೩೮: ೫೯ ಎಸೆತ, ೩ ಬೌಂಡರಿ) ಅವರಿಗೆ ಅಮೋಘ ಸಾಥ್ ನೀಡಿದರು.

ಬಲು ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಭಾರತದ ಬೌಲರ್‌ಗಳನ್ನು ದಯನೀಯವಾಗಿ ದಂಡಿಸಿದರು. ಬರ್ತ್ ಡೇ ಬಾಯ್ ಬಟ್ಲರ್ ಅಂತೂ ಮನಮೋಹಕ ಬ್ಯಾಟಿಂಗ್‌ನಿಂದ ಅರ್ಧಶತಕ ಪೂರೈಸಿದರಲ್ಲದೆ, ನಿರ್ಣಾಯಕ ಘಟ್ಟದಲ್ಲಿ ತಂಡದ ಮೊತ್ತವನ್ನು ಗಣನೀಯವಾಗಿ ಹಿಗ್ಗಿಸಿದರು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಹಾನೆಗೆ ಕ್ಯಾಚಿತ್ತ ಕೇವಲ ೧೧ ರನ್‌ಗಳಿಂದ ಬಟ್ಲರ್ ಶತಕ ವಂಚಿತವಾದರು.

ಭಾರತ ತಂಡದ ಕುಸಿತ

ಇಂಗ್ಲೆಂಡ್ ಇನ್ನಿಂಗ್ಸ್‌ ನಂತರದಲ್ಲಿ ಬ್ಯಾಟಿಂಗ್‌ಗಿಳಿದ ಭಾರತ ಶುರುವಿನಲ್ಲಿಯೇ ಪೆಟ್ಟು ತಿಂದಿತು. ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಶಿಖರ್ ಧವನ್ (೩) ಅವರನ್ನು ಸ್ಟುವರ್ಟ್ ಬ್ರಾಡ್ ಎಲ್‌ಬಿ ಬಲೆಗೆ ಕೆಡವಿ ಆಘಾತ ನೀಡಿದರು. ಧವನ್ ನಿರ್ಗಮನದ ನಂತರದಲ್ಲಿ ಬಂದ ಚೇತೇಶ್ವರ ಪೂಜಾರ ಮತ್ತು ಆರಂಭಿಕ ಕೆ ಎಲ್ ರಾಹುಲ್ ಭಾರತದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದರು.

ಇಂಗ್ಲೆಂಡ್ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ ಈ ಜೋಡಿ ಅಪಾಯಕಾರಿ ಆಗುವ ಸುಳಿವು ನೀಡಿತು. ಈ ಜೋಡಿಯನ್ನು ಬೇರ್ಪಡಿಸದೆ ಗತ್ಯಂತರವಿಲ್ಲ ಎಂದುಕೊಂಡ ಇಂಗ್ಲೆಂಡ್ ಕಪ್ತಾನ ಜೋ ರೂಟ್, ೨೩ನೇ ಓವರ್‌ನಲ್ಲಿ ಸ್ಯಾಮ್ ಕರನ್ ಅವರ ಕೈಗೆ ಚೆಂಡಿತ್ತು ಯಶ ಕಂಡರು. ಯುವ ಅಲ್ರೌಂಡರ್ ಸ್ಯಾಮ್, ಓವರ್‌ನ ಮೊದಲ ಎಸೆತದಲ್ಲೇ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಭಾರತಕ್ಕೆ ಎರಡನೇ ಪೆಟ್ಟು ನೀಡಿದರು.

ರಾಹುಲ್ (೩೭: ೫೩ ಎಸೆತ, ೪ ಬೌಂಡರಿ) ಮತ್ತು ಪೂಜಾರ (೩೭: ೧೦೧ ಎಸೆತ, ೫ ಬೌಂಡರಿ) ಜೋಡಿ ಎರಡನೇ ವಿಕೆಟ್‌ಗೆ ೬೪ ರನ್ ಜತೆಯಾಟವಾಡಿತು. ರಾಹುಲ್ ನಿರ್ಗಮನದ ನಂತರ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ (೪೯: ೭೦ ಎಸೆತ, ೬ ಬೌಂಡರಿ) ಕೂಡ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡುವ ಕುರುಹು ನೀಡಿದರು. ಆದರೆ, ಅವರಿಗೆ ಮತ್ತೊಂದು ಬದಿಯಲ್ಲಿದ್ದ ಪೂಜಾರ ಪೂರ್ಣ ಪ್ರಮಾಣದಲ್ಲಿ ಸಾಥ್ ನೀಡಲಿಲ್ಲ. ಟೆಸ್ಟ್ ತಜ್ಞ ಪೂಜಾರ ಅವರನ್ನು ಜೇಮ್ಸ್ ಬಲಿಪಡೆದರಲ್ಲದೆ, ಅಜಿಂಕ್ಯ ರಹಾನೆಗೂ (೦) ಪೆವಿಲಿಯನ್ ದಾರಿ ತೋರಿದರು. ಆನಂತರದಲ್ಲಿ ಅರ್ಧಶತಕದ ಹೊಸ್ತಿಲಲ್ಲಿದ್ದ ವಿರಾಟ್ ಕೊಹ್ಲಿ ರಿಷಭ್ ಪಂತ್ (೫) ಬೆನ್ ಸ್ಟೋಕ್ಸ್‌ಗೆ ಬಲಿಯಾದದ್ದು ಭಾರತದ ಇನ್ನಿಂಗ್ಸ್‌ಗೆ ಬಲವಾದ ಪ್ರಹಾರ ನೀಡಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ೩೩೨/೧೦ (ಅಲಸ್ಟೇರ್ ಕುಕ್ ೭೧, ಮೊಯೀನ್ ಅಲಿ ೫೦, ಜೋಸ್ ಬಟ್ಲರ್ ೮೯, ಸ್ಟುವರ್ಟ್ ಬ್ರಾಡ್ ೩೮; ರವೀಂದ್ರ ಜಡೇಜಾ ೭೯ಕ್ಕೆ ೪); ಭಾರತ ಮೊದಲ ಇನ್ನಿಂಗ್ಸ್: ೫೧ ಓವರ್‌ಗಳಲ್ಲಿ ೧೭೪/೬ (ಕೆ ಎಲ್ ರಾಹುಲ್ ೩೭, ಚೇತೇಶ್ವರ ಪೂಜಾರ ೩೭, ವಿರಾಟ್ ಕೊಹ್ಲಿ ೪೯, ಹನುಮ ವಿಹಾರಿ ೨೫ ಬ್ಯಾಟಿಂಗ್; ರವೀಂದ್ರ ಜಡೇಜಾ ೮ ಬ್ಯಾಟಿಂಗ್; ಜೇಮ್ಸ್ ಆ್ಯಂಡರ್ಸನ್ ೨೦ಕ್ಕೆ ೨, ಬೆನ್ ಸ್ಟೋಕ್ಸ್ ೪೪ಕ್ಕೆ ೨).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More